ರಾಮನ ಹೊರತಾಗಿ ಭಾರತದಲ್ಲಿ ಏನನ್ನೂ ಸಾಧಿಸಲಾಗದು: ಸಿಎಂ ಆದಿತ್ಯನಾಥ್

ಉತ್ತರಪ್ರದೇಶ: ರಾಮನ ಹೊರತಾಗಿ ಭಾರತದಲ್ಲಿ ಏನನ್ನೂ ಸಾಧಿಸಲಾಗದು ಎಂದು ಉತ್ತರಪ್ರದೇಶ ಸಿಎಂ ಆದಿತ್ಯನಾಥ್ ಹೇಳಿದ್ದಾರೆ. ರಾಮ ನಮ್ಮ ನಂಬಿಕೆಯ ಪ್ರತಿನಿಧಿ. ಇದು ಎಲ್ಲ ಭಾರತೀಯರ ನಂಬಿಕೆ ಎಂದು ಕೂಡ ಅವರು ಹೇಳಿದ್ದಾರೆ. ರಾಮಮಂದಿರ ವಿವಾದ ಪರಿಹರಿಸಲು ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದು ಆರ್ಟ್ ಆಫ್ ಲಿವಿಂಗ್ ಮುಖ್ಯಸ್ಥ ರವಿಶಂಕರ್ ಗುರೂಜಿ ಹೇಳಿದ ನಂತರ ದೇಶದಾದ್ಯಂತ ಈ ಕುರಿತು ವ್ಯಾಪಕ ಚರ್ಚೆಯಾಗಿತ್ತು. ಸಂಸದ ಅಸಾದುದ್ದೀನ್ ಓವೈಸಿ ಈ ಪ್ರಸ್ತಾವನೆಯನ್ನು ವಿರೋದಿಸಿದ್ದರು. ಆದರೆ, ಬಿಜೆಪಿ ನಾಯಕರು ಓವೈಸಿ ವಿರುದ್ಧ ಕಿಡಿಕಾರಿದ್ದರು.

ನವೆಂಬರ್ 16ರಂದು ಅಯೋಧ್ಯೆಯಲ್ಲಿ ರಾಮ ಜನ್ಮಭೂಮಿ ಮತ್ತು ಬಾಬ್ರಿ ಮಸೀದಿ ಪರ ವಾದಿಗಳೊಂದಿಗೆ ಮಾತುಕತೆ ನಡೆಸುವುದಾಗಿ ರವಿಶಂಕರ್ ಘೋಷಿಸಿದ್ದಾರೆ. ನಾನು ನಾಡಿದ್ದು ಅಯೋಧ್ಯೆಗೆ ತೆರಳುತ್ತಿದ್ದೇನೆ ಎಂದು ನಿನ್ನೆ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ರವಿಶಂಕರ್ ತಿಳಿಸಿದ್ದಾರೆ.

1992ರ ಬಾಬ್ರಿ ಮಸೀದಿ ಧ್ವಂಸ ಕುರಿತು ಸುದೀರ್ಘವಾಗಿ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್​​​ ಇದೇ ಡಿಸೆಂಬರ್ 5ರಂದು ಅಂತಿಮ ಹಂತದ ವಿಚಾರಣೆ ನಡೆಸಲಿದೆ. ಮಧ್ಯಕಾಲೀನ ಸ್ಮಾರಕವಾದ ಬಾಬ್ರಿ ಮಸೀದಿ ಧ್ವಂಸವಾದ 25ನೇ ವರ್ಷದ ಮುನ್ನಾದಿನ ವಿಚಾರಣೆ ನಡೆಯುತ್ತಿರುವುದು ವಿಶೇಷವಾಗಿದೆ.

ಈ ಮಸೀದಿಯನ್ನು ಮೊಘಲ್ ದೊರೆ ಬಾಬರ್ 1528ರಲ್ಲಿ ಕಟ್ಟಿಸಿದ್ದ. ಆದರೆ, ಮೂಲದಲ್ಲಿ ಇದು ರಾಮ ಜನ್ಮ ಭೂಮಿ ಎಂದು ಸಂಘ ಪರಿವಾರದವರು ತಕರಾರು ತೆಗೆದಿದ್ದರು. ಇದಕ್ಕಾಗಿ ರಥ ಯಾತ್ರೆ ನಡೆಸಿದ್ದ ಬಿಜೆಪಿಯ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ, ಮುರಳಿ ಮನೋಹರ್ ಜೋಷಿ ಈಗ ರಾಜಕೀಯದ ತೆರೆಯಿಂದ ಮರೆಗೆ ಸರಿದಿದ್ದಾರೆ. ಇದೇ ಕಾರ್ಯಸೂಚಿಯಡಿ ರಾಜಕೀಯ ನಡೆಸಿದ ಬಿಜೆಪಿ ಇಂದು ಕೇಂದ್ರದಲ್ಲಿ ಅಧಿಕಾರದಲ್ಲಿದೆ.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *