ನಿರ್ಗತಿಕರ ಪ್ರಶ್ನೆಗೆ ಕೇಂದ್ರ ಸರ್ಕಾರವೇ ಉತ್ತರಿಸಬೇಕಿದೆ

1000 ಹಾಗೂ 500 ರ ನೋಟುಗಳನ್ನ ಅಮಾನ್ಯೀಕರಣಗೊಳಿಸಿ ನಾಳೆಗೆ ಒಂದು ವರ್ಷವಾಗ್ತಿದೆ. ಕಪ್ಪುಹಣ ಹೊರತರುವ ಹಾಗೂ ಭಯೋತ್ಪಾದನೆ ನಿಯಂತ್ರಿಸುವ ನಿಟ್ಟಿನಲ್ಲಿ ಈ ಕ್ರಮ ಅನಿವಾರ್ಯವಾಗಿತ್ತು. ಹಾಗಾಗಿ, ಜನರು ತೊಂದರೆ ತೆಗೆದುಕೊಳ್ಳಬೇಕಿದೆ ಅಂತ ಕೇಂದ್ರ ಸರ್ಕಾರ ಹೇಳಿತ್ತು. ರಿಸರ್ವ್​ ಬ್ಯಾಂಕ್​ ಆಫ್​ ಇಂಡಿಯಾದ ಮಾಹಿತಿಯಂತೆ ಶೇಕಡಾ 99ರಷ್ಟು 1000 ರೂ. ನೋಟುಗಳು ವಾಪಸ್​​ ಬಂದಿವೆ ಎನ್ನಲಾಗಿದೆ. ಆದರೂ ದೇಶದ ಜಿ.ಡಿ.ಪಿ ಗಣನೀಯ ಕುಸಿತ ಕಂಡಿದೆ.

ಮಾರ್ಚ್​ 2017ರವರೆಗೆ 8,925 ಕೋಟಿಯಷ್ಟು ಸಾವಿರದ ನೋಟುಗಳು ಇನ್ನೂ ಚಲಾವಣೆಯಲ್ಲಿದೆ ಅಂತ ಆರ್​ಬಿಐ ವೆಬ್​​ ಸೈಟ್​​​​​ನಲ್ಲಿ ಮಾಹಿತಿ ಪ್ರಕಟಿಸಿದೆ. ಇದು ಸಾವಿರ ರೂಪಾಯಿ ನೋಟುಗಳು ಬ್ಯಾಂಕ್ ಗೆ ಪೂರ್ಣ ಪ್ರಮಾಣದಲ್ಲಿ ವಾಪಸ್​ ಬರಲಿಲ್ಲ ಅನ್ನೋದನ್ನ ಹೇಳುತ್ತೆ. ಆರ್​ಬಿಐ ಪ್ರಕಾರ 2016 ನವೆಂಬರ್ 8 ರಂದು 15.4 ಲಕ್ಷ ಕೋಟಿ ಹಣವನ್ನ ​ಅಮಾನ್ಯೀಕರಣಗೊಳಿಸಲಾಗಿತ್ತು. ಆದ್ರೆ, ಇದುವರೆಗೂ ಕೇಂದ್ರ ಸರ್ಕಾರ ಮತ್ತು ಆರ್​ಬಿಐ ಎಷ್ಟು ಹಣ ವಾಪಸ್​ ಬಂದಿದೆ ಅಂತ ಹೇಳಿಲ್ಲ.  ಅಮಾನ್ಯೀಕರಣದಿಂದ ದೇಶದ ಜಿಡಿಪಿ ಶೇಕಡಾ 7.9 ರಿಂದ ಶೇಕಡಾ 5.5ಕ್ಕೆ ಇಳಿದಿದೆ. ಏಕಾಏಕಿ ಶೇಕಡಾ 3.5ರಷ್ಟು ಜಿಡಿಪಿ ಇಳಿದಿರೋದು ಅಭಿವೃದ್ಧಿಯನ್ನ ಹಿಮ್ಮುಖವನ್ನಾಗಿಸಿದೆ.

ದೇಶದ ಶೇಕಡಾ 95ರಷ್ಟು ಆರ್ಥಿಕತೆ ಅಸಂಘಟಿತ ವಲಯವನ್ನ ಅವಲಂಬಿಸಿದೆ. ಅದು ನಗದು ವ್ಯವಹಾರದ ಮೇಲೆ ನಿಂತಿದೆ. ಹಾಗಾಗಿ, ರಿಯಲ್​ ಎಸ್ಟೇಟ್​, ಗಾರ್ಮೆಂಟ್ಸ್​, ರೈತರು, ಸಣ್ಣಪುಟ್ಟ ಕೆಲಸ ನಿರ್ವಹಿಸೋರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇನ್ನು ಆಟೋ ಚಾಲಕರು ನೋಟು ಅಮಾನ್ಯೀಕರಣದಿಂದ ಜೀವನ ನಡೆಸೋದೆ ಕಷ್ಟವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸ್ತಿದ್ದಾರೆ. ನೋಟ್​ ಬ್ಯಾನ್​ ವಲಸೆ ಕಾರ್ಮಿಕರ ಮೇಲೆ ದುಷ್ಪರಿಣಾಮ ಬೀರಿದೆ. ಅವರಿಗೆ ನಗರದಲ್ಲೂ ಕೆಲಸವಿಲ್ಲ. ತಮ್ಮ ಊರಿನಲ್ಲೂ ಕೆಲಸವಿಲ್ಲದ ಅತಂತ್ರ ಸ್ಥಿತಿ ಎದುರಿಸುತ್ತಿದ್ದಾರೆ ಅಂತಾರೆ ತಜ್ಞರು.

ನೋಟ್​ ಬ್ಯಾನ್​ ಕೇವಲ ಬಡವರಿಗೆ ಸಂಕಷ್ಟ ತಂದೊಡ್ಡಿದೆ. ಕಪ್ಪು ಹಣ ಇದ್ದವರು ಅಧಿಕಾರಿಗಳ ಸಹಾಯದಿಂದ ಅದನ್ನ ವೈಟ್​ ಮನಿಯಾಗಿ ಪರಿವರ್ತಿಸಿಕೊಂಡಿದ್ದಾರೆ. ಇನ್ನು ಭಯೋತ್ಪಾದನೆಗೆ ಪೂರ್ಣ ಕಡಿವಾಣ ಬಿತ್ತೇ ಎಂಬುದನ್ನು ಕೇಂದ್ರ ಸರ್ಕಾರವೇ ಹೇಳಬೇಕು. ಇದುವರೆಗೂ ಸರ್ಕಾರ ಇದರ ಬಗ್ಗೆ ತುಟಿ ಬಿಚ್ಚದಿರೋದು ಯಕ್ಷ ಪ್ರಶ್ನೆಯಾಗಿದೆ ಅಂತಾರೆ ಜನರು.

ವಿಡಿಯೋ ಜರ್ನಲಿಸ್ಟ್​ ಯೋಗೇಶ್​ ಜೊತೆ ಶಶಿರೇಖಾ ಸುದ್ದಿಟಿವಿ, ಬೆಂಗಳೂರು

0

Leave a Reply

Your email address will not be published. Required fields are marked *