ನಮ್ಮದು ಬೆಳೆಯುತ್ತಿರುವ ಆರ್ಥಿಕತೆ – ಉದ್ಯೋಗ ಸೃಷ್ಟಿ ಸಾಧ್ಯವಾಗುತ್ತಿಲ್ಲ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ

ಮೈಸೂರು: ಗರಿಷ್ಠ ಮುಖಬೆಲೆಯ ನೋಟುಗಳ ನಿಷೇಧವನ್ನು ಈ ವೇಳೆ ವಿರೋಧಿಸಿದ ರಾಹುಲ್, ವಿದ್ಯಾರ್ಥಿನಿಯರ ಪ್ರಶ್ನೆಗಳಿಗೆ ಉತ್ತರಿಸಿದರು. ನೋಟು ನಿಷೇಧದ ನಷ್ಟ ಕುರಿತು ವಿವರಿಸಿದ ರಾಹುಲ್ ಗಾಂಧಿ ಕಪ್ಪು ಹಣ ನಿಯಂತ್ರಣವಾಗಲಿಲ್ಲ ಎಂದರು. ನೀರವ್ ಮೋದಿ ಬ್ಯಾಂಕ್​ನಿಂದ 22,000 ಕೋಟಿ ರೂ. ಪಡೆದಿದ್ದಾರೆ. ನಿಮ್ಮಂಥ ಯುವತಿಯರಿಗೆ 22,000 ಕೋಟಿ ರೂ. ಕೊಟ್ಟಿದ್ದರೆ ಹೇಗಿರುತ್ತಿತ್ತು? ಊಹೆ ಮಾಡಿಕೊಳ್ಳಿ ಎಂದು ಅವರು ಪ್ರಶ್ನಿಸಿದರು.

ಮೈಸೂರು ಕರ್ನಾಟಕ ಪ್ರದೇಶದಲ್ಲಿ ರಾಹುಲ್ ಗಾಂಧಿ ಪ್ರವಾಸ ಆರಂಭವಾಗಿದ್ದು, ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನದ ಮುಖಾಂತರ ಆಗಮಿಸಿದರು. ನಂತರ ಚಾಮುಂಡಿ ದರ್ಶನ ಪಡೆದ ಅವರು, ವಿಶೇಷ ಪೂಜೆ ಸಲ್ಲಿಸಿದರು. ಪೂಜೆ ನಂತರ ಮಹಾರಾಣಿ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ರಾಹುಲ್ ಸಂವಾದ ನಡೆಸಿದರು. ಈ ವೇಳೆ ಕಾಲೇಜು ಸುತ್ತಮುತ್ತ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ರಾಹುಲ್ ಅವರೊಂದಿಗೆ ಉತ್ಸಾಹದಿಂದ ವಿದ್ಯಾರ್ಥಿನಿಯರು ಸಂವಾದಕ್ಕೆ ಹಾಜರಾಗಿದ್ದರು.

ಇದಕ್ಕೂ ಮುನ್ನ ಇದೇ ಮೊದಲ ಬಾರಿ ನಾಡ ಅಧಿದೇವತೆ ಚಾಮುಂಡೇಶ್ವರಿ ದರ್ಶನ ಪಡೆದ ಎಐಸಿಸಿ ಅಧ್ಯಕ್ಷರನ್ನು ಡೊಳ್ಳು, ವೀರಗಾಸೆ ಮೂಲಕ ಸ್ವಾಗತಿಸಿದರು. ಈ ವೇಳೆ ರಾಹುಲ್ ಗಾಂಧಿಯವರಿಗೆ ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್, ಕೆಪಿಸಿಸಿ ಕಾರ್ಯದರ್ಶಿ ದಿನೇಶ್ ಗುಂಡೂರಾವ್, ಸಚಿವರಾದ ಮಹದೇವಪ್ಪ, ಡಿಕೆಶಿ ಹಾಗೂ ತನ್ವೀರ್ ಸೇರಿದಂತೆ ಹಲವರು ಸಾಥ್ ನೀಡಿದರು.

ನಮ್ಮದು ಬೆಳೆಯುತ್ತಿರುವ ಆರ್ಥಿಕತೆ. ಆದರೆ, ಉದ್ಯೋಗ ಸೃಷ್ಟಿ ಸಾಧ್ಯವಾಗುತ್ತಿಲ್ಲ. ಕೌಶಲ್ಯ ಇರುವವರಿಗೆ ಆರ್ಥಿಕ ಬೆಂಬಲ ಸಿಗುತ್ತಿಲ್ಲ. ಕೇವಲ 15-20 ಜನರಿಗೆ ದೊಡ್ಡ ಪ್ರಮಾಣದ ಹಣ ಹರಿಯುತ್ತಿದೆ ಎಂದು
ಕೇಂದ್ರ ಸರ್ಕಾರದ ವಿರುದ್ಧ ಅವರು ವಾಗ್ದಾಳಿ ನಡೆಸಿದರು. ಗರಿಷ್ಠ ಮುಖಬೆಲೆಯ ನೋಟುಗಳ ನಿಷೇಧ ನಿರ್ಧಾರ ತಪ್ಪು. ನೋಟು ನಿಷೇಧ ಮಾಡಬಾರದಿತ್ತು ಎಂದ ರಾಹುಲ್, ನೋಟು ನಿಷೇಧ, ಜಿಎಸ್​ಟಿ ಜಾರಿಯಿಂದ ದೊಡ್ಡ ಪ್ರಮಾಣದ ನಷ್ಟವಾಗಿದೆ. ಆರ್ಥಿಕತೆ ಕುಸಿದಿದ್ದು, ಉದ್ಯೋಗ ನಷ್ಟವಾಗಿದೆ ಎಂರು. ನೋಟು ನಿಷೇಧ ಕುರಿತು ಆರ್​ಬಿಐ ಗವರ್ನರ್, ಸರ್ಕಾರದ ಮುಖ್ಯ ಸಲಹೆಗಾರರು, ವಿತ್ತ ಸಚಿವರಿಗೆ ಮಾಹಿತಿ ಇರಲಿಲ್ಲ ಎಂದು ಆರೋಪಿಸಿದರು.

ನೀವು ಸರ್ಕಾರದಿಂದ ಯಾವುದೇ ಸೌಲಭ್ಯ‌ ನೀಡುವಾಗ ಯಾಕೆ ತಾರತಮ್ಯ ಮಾಡ್ತೀರಾ? ಎಲ್ಲರೂ ಒಂದೇ ಅಲ್ಲವೇ ಎಂ ವಿದ್ಯಾರ್ಥಿನ ಮಹದೇವಮ್ಮ ಪ್ರಶ್ನೆಗೆ ಸಿಎಂ ಸಿದ್ದರಾಮಯ್ಯ ಉತ್ತರಿಸಬೇಕು ಎಂದು ರಾಹುಲ್ ಗಾಂಧಿ ಅಭಿಪ್ರಾಯಪಟ್ಟರು. ಕನ್ನಡದಲ್ಲಿ ವಿದ್ಯಾರ್ಥಿನಿ ಕೇಳಿದ ಪ್ರಶ್ನೆಯನ್ನು ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್ ಇಂಗ್ಲಿಷ್​ಗೆ ಭಾಷಾಂತರಿಸಿದರು. ಈ ವೇಳೆ ಪ್ರಶ್ನೆ ರಾಜ್ಯಕ್ಕೆ ಸಂಬಂಧಿಸಿದೆಯೋ ಅಥವಾ ರಾಷ್ಟ್ರಕ್ಕೋ ಎಂದು ಮರು ಪ್ರಶ್ನೆ ಹಾಕಿದರು.

ವಿದ್ಯಾರ್ಥಿನಿಯ ಪ್ರಶ್ನೆಗೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ, ಅಸಮಾನತೆಯಿಂದ ಬಳಲುತ್ತಿರುವವರಿಗೆ ಏನು ಮಾಡಬೇಕು? ಮನೆಯಲ್ಲಿ ಒಂದು ಮಗು ಅಪೌಷ್ಠಿಕವಾಗಿದ್ದಾಗ ಆ ಮಗುವಿಗೆ ಏನು ಮಾಡಬೇಕು
ವಿಶೇಷ ಹಾರೈಕೆ ಮಾಡಬೇಕು ಅಲ್ಲವೇ? ಎಂದು ಮರು ಪ್ರಶ್ನೆ ಹಾಕಿದರು. ಅಲ್ಲದೇ, ಅಂತಹ ಕೆಲಸವನ್ನ ನಾವು ಮಾಡುತ್ತಿದ್ದೇವೆ ಎಂಬ ಸಿಎಂ ಉತ್ತರಕ್ಕೆ ವಿದ್ಯಾರ್ಥಿಗಳು ಖುಷಿಯಾದರು. ಅಲ್ಲದೇ, ಸಿದ್ದರಾಮಯ್ಯ ಉತ್ತರಕ್ಕೆ ಕರತಾಡನದ ಸ್ವಾಗತ ಕಂಡಬಂತು. ಜಾತಿ ಆಧಾರದಲ್ಲಿ ಅನುದಾನ ಕುರಿತ ಪ್ರಶ್ನೆಗೆ ಸಿಎಂ ಉತ್ತರಿಸಿದ ಸಿಎಂ, ಜಾತಿ, ಲಿಂಗ ತಾರತಮ್ಯ ನಿವಾರಿಸಬೇಕಿದೆ ಎಂದರು. ತಾರತಮ್ಯ ನಿವಾರಣೆಗಾಗಿ ಜಾತಿ ಆಧಾರದಲ್ಲಿ ಮೀಸಲಾತಿ ನೀಡಲಾಗುತ್ತಿದೆ ಎಂದ ಅವರು, ಮೀಸಲಾತಿ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು. ಈ ನಡುವೆ ಸೆಲ್ಫೀ ಕೇಳಿದ ವಿದ್ಯಾರ್ಥಿನಿಯೊಂದಿಗೆ ರಾಹುಲ್ ಫೋಟೋ ತೆಗೆಸಿಕೊಂಡರು.

ಸಿಂಗಾಪುರದಲ್ಲಿ ಶೇ.7ರಷ್ಟು ಜಿಎಸ್​​​ಟಿ ಇದ್ದರೂ ಉಚಿತ ಆರೋಗ್ಯ ಕೊಡ್ತಾರೆ. ನಮ್ಮಲ್ಲಿ ಶೇ.28ರಷ್ಟು ಜಿಎಸ್​ಟಿ ಇದ್ದರೂ ಚಿಕಿತ್ಸೆ ಉಚಿತ ಯಾಕಿಲ್ಲ ಎಂದ ವಿದ್ಯಾರ್ಥಿನಿ ಆಯೆಷಾ ಪ್ರಶ್ನೆಗೆ ಉತ್ತರಿಸಿದ ನಾನು ಪ್ರಧಾನಿಯಲ್ಲ ಎಂದ ರಾಹುಲ್, ನಿಮ್ಮ ಪ್ರಶ್ನೆಗೆ ಪ್ರಧಾನಿ ನರೇಂದ್ರ ಮೋದಿಯವರು ಉತ್ತರಿಸಬೇಕು. ಅಲ್ಲದೇ, ನಾನು ಜಿಎಸ್​​​ಟಿ ಬೆಂಬಲಿಸಿಲ್ಲ ಎಂದು ಸ್ಪಷ್ಟೀಕರಣ ನೀಡಿದರು. ಆಧುನಿಕ ವಿದ್ಯಾಭ್ಯಾಸದಿಂದ ತಾರತಮ್ಯ ನಿವಾರಿಸಲು ಸಾಧ್ಯ ಎಂದ ಅವರು, ಅಂತಹ ಆಧುನಿಕ ವಿದ್ಯಾಭ್ಯಾಸವನ್ನು ಬಯುತ್ತಿದ್ದೇವೆ ಎಂದರು.

ನೋಟು ನಿಷೇಧ ಕುರಿತು ನಿಮ್ಮ ಅಭಿಪ್ರಾಯವೇನು? ಎಂಬ ಆಯೇಷ ಎಂಬುವವರ ಪ್ರಶ್ನೆಗೆ ಉತ್ತರಿಸಿದ ರಾಹುಲ್, ನೋಟು ನಿಷೇಧ ದೇಶದ ಆರ್ಥಿಕತೆಗೆ ಬಿದ್ದ ದೊಡ್ಡ ಹೊಡೆತ. ಯಾವುದೇ ಆರ್ಥಿಕ ತಜ್ಞರೂ ನೋಟು ನಿಷೇಧವನ್ನು ಒಪ್ಪುವುದಿಲ್ಲ. ಭಾರತದ ಅರ್ಥಿಕತೆಯ ಮೇಲೆ ಇಂತಹ ಒಂದು ಪ್ರಯೋಗವಾಗಬಾರದಿತ್ತು. ಮಾಜಿ ಹಣಕಾಸು ಸಚಿವ ಪಿ ಚಿದಬಂರಂ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸೇರಿದಂತೆ ಎಲ್ಲರೂ ನೋಟು ನಿಷೇಧವನ್ನು ವಿರೋಧಿಸಿದ್ದಾರೆ ಎಂದರು. ಅಲ್ಲದೇ, 90ರಷ್ಟು ಕಪ್ಪುಹಣ ಇರುವುದು ಸ್ವಿಸ್ ಬ್ಯಾಂಕ್, ರಿಯಲ್ ಎಸ್ಟೇಟ್, ಬಂಗಾರ ವ್ಯವಹರಾರದಲ್ಲಿ ಎಂದರು. ಮೋದಿ ಅಧಿಕಾರಕ್ಕೆ ಬಂದರೆ ವಿದೇಶದಿಂದ ಕಪ್ಪು ಹಣ ತರುತ್ತೇನೆ ಎಂದರು. ಅವರು ಕಪ್ಪು ಹಣವನ್ನು ದೇಶಕ್ಕೆ ತಂದರೇ ಎಂದು ಪ್ರಶ್ನಿಸಿದರು.

ಬಿಜೆಪಿ, ಆರ್​ಎಸ್​ಎಸ್​​ನವರದು ಒಂದು ದೇಶ, ಒಂದು ಐಡಿಯಾ. ಕಾಂಗ್ರೆಸ್​ನವರದು ಒಂದು ದೇಶ, ಹಲವು ಐಡಿಯಾ. ದೇಶದಲ್ಲಿ ಎಲ್ಲರಿಗೂ ಅವರದೇ ಚಿಂತನೆಗಳು ಇರುತ್ತವೆ. ಅವುಗಳನ್ನು ನಾವು ಗೌರವಿಸುತ್ತೇವೆ ಎಂದರು.

0

Leave a Reply

Your email address will not be published. Required fields are marked *