ಸಿಲಿಕಾನ್ ಸಿಟಿಯನ್ನ ಸುಸ್ತು ಮಾಡ್ತಿದೆ ಮಳೆ ಅಬ್ಬರ – ನೆಲಮಂಗಲದಲ್ಲಿ ನಾನೂರು ಮನೆಗಳಿಗೆ ನೀರು ನುಗ್ಗಿ ಅವಾಂತರ

ಕಳೆದ ರಾತ್ರಿ ಸುರಿದ ಧಾರಾಕಾರ ಮಳೆಗೆ ನೆಲಮಂಗಲ ಪಟ್ಟಣ ಸಂಪೂರ್ಣವಾಗಿ ಜಲಾವೃತವಾಗಿದೆ. ನೆಲಮಂಗಲದ ಅಮಾನಿಕೆರೆಯ ಕೆರೆ ಕೋಡಿ ಹೊಡೆದಿದ್ದರಿಂದ ಜನರ ರಾತ್ರಿಯಿಲ್ಲಾ ನಿದ್ದೆಯಿಲ್ಲದೆ ಜೀವ ಉಳಿಸಿಕೊಳ್ಳಲು ಹೋರಾಟ ನಡೆಸಿದ್ದಾರೆ. ನೆಲಮಂಗಲ ಜಲಪ್ರಳಯದ ಸಂಪೂರ್ಣ ವಿವರ ಇಲ್ಲಿದೆ ನೋಡಿ.

ನೆೆಲಮಂಗಲ, ಬೆಂಗಳೂರಿನಲ್ಲಿ ಮಳೆರಾಯನ ಅಬ್ಬರ 400 ಮನೆಗಳಿಗೆ ನೀರು ನುಗ್ಗಿ ಸೃಷ್ಠಿಯಾಯ್ತು ಅವಾಂತರ ,ಹಲವು ದಿನಗಳಿಂದ ರಾಜ್ಯದಲ್ಲಿ ಸುರಿಯುತ್ತಿರುವ ಮಳೆ ಸಾಕಷ್ಟು ಅವಾಂತರ ಸೃಷ್ಟಿಸಿದೆ. ನೆಲಮಂಗಲದಲ್ಲಿ ಕಳೆದ ರಾತ್ರಿಸುರಿದ ಮಳೆ ಜನಜೀವನ್ನ ಹೈರಾಣಾಗಿಸಿದೆ. ಬಿನ್ನಮಂಗಲ ಕೆರೆಯ ಕೋಡಿ ಒಡೆದ ಪರಿಣಾಮ ಬಿನ್ನಮಂಗಲ, ವಾಜರಹಳ್ಳಿ ಲೇಔಟ್, ಭೈರವೇಶ್ವರ ಲೇಔಟ್, ಜ್ಯೋತಿ ನಗರ, ಗಜಾರಿಯಾ ಲೇಔಟ್ ಎಂಜಿ ರಸ್ತೆಯ 400 ಮನೆಗಳಿಗೆ ನೀರು ನುಗ್ಗಿದೆ. ಸುಮಾರು 4 ಅಡಿಯಷ್ಟು ನೀರು ತುಂಬಿದ್ರಿಂದ ಮನೆಯಲ್ಲಿದ್ದ ಪೀಠೋಪಕರಣಗಳು, ಧವಸ ಧಾನ್ಯಗಳು ನೀರು ಪಾಲಾಗಿದೆ. ಇನ್ನು ಮನೆಗಳಿಗೆ ನೀರು ನುಗ್ಗಿದ್ರಿಂದ ರಾತ್ರಿಯಿಡೀ ಜನರು ಜಾಗರಣೆ ಮಾಡಿದರು. ಬಡಾವಣೆಯ ರಸ್ತೆಗಳಲ್ಲಿ ನದಿಯಂತೆ ನೀರು ಹರಿದಿದ್ದು, ಮನೆ ಮುಂದೆ ನಿಲ್ಲಿಸಿದ ಕಾರು, ಬೈಕ್ ಗಳು ನೀರಿನಲ್ಲಿ ಮುಳುಗಿವೆ.

ಇನ್ನು ರಾಜಕಾಲುವೆ ತುಂಬಿ ಹರಿದಿದ್ದರಿಂದ ಬಿನ್ನಮಂಗಲದ ಮುಕ್ತನಾಥೇಶ್ವರ ದೇವಾಲಯ ಸಂಪೂರ್ಣ ಜಲಾವೃತವಾಗಿತ್ತು. ಇದ್ರಿಂದ ದೇವಸ್ಥಾನದ ಬೆಳಗಿನ ಪೂಜೆಯನ್ನು ಸ್ಥಗಿತಗೊಳಿಸಲಾಗಿತ್ತು. ಜೋಳರ ಕಾಲದ ದೇವಾಲಯ ಇದಾಗಿದ್ದು, ದೇವಾಲಯದಲ್ಲಿ ನೀರು ತುಂಬಿರುವುದು ಭಕ್ತರಲ್ಲಿ ಆತಂಕ ಮೂಡಿಸಿತ್ತು. ಮಳೆ ಹಿನ್ನಲೆ ತಾತ್ಕಾಲಿಕ ದುರಸ್ಥಿ ಕಾರ್ಯವನ್ನು ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ರಾಜಕಾಲುವೆ ಒತ್ತುವರಿ ತೆರವು ಮಾಡಿ ಕೆರೆಯ ಏರಿಯನ್ನೂ ಭದ್ರಪಡಿಸೋದಾಗಿ ಸ್ಥಳೀಯ ಶಾಸಕ ಭರವಸೆ ನೀಡಿದ್ದಾರೆ.

ಇನ್ನು ಮಲ್ಲಾಪುರ ಗ್ರಾಮದಲ್ಲಿ ಎರಡು ಮನೆಗಳು ಕುಸಿದು ಬಿದ್ದ ಪರಿಣಾಮ10 ಕಿಂಟ್ವಾಲ್ ರಾಗಿಗೆ ಹಾನಿಯಾಗಿತ್ತು. ಅಲ್ಲದೆ ಗ್ರಾಮದ 4ಕ್ಕೂ ಹೆಚ್ಚು ಮನೆಗಳು ಬಿರುಕು ಕಾಣಿಸಿಕೊಂಡಿವೆ. ಮಳೆಯಿಂದ ಹಾನಿಗೊಳಗಾದ ಸ್ಥಳಕ್ಕೆ ಭೇಟಿ ನೀಡಿದ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಾಲಯ್ಯ ಪರಿಶೀಲನೆ ನಡೆಸಿದ್ರು. ಹಾನಿಯಾದ ಮನೆಗಳಿಗೆ ತಲಾ ಮೂರು ಸಾವಿರ ಪರಿಹಾರ ಘೋಷಿಸಿದ್ರು.

ಇನ್ನು ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲೂ ವರುಣ ಅಬ್ಬರಿಸಿದ್ದಾನೆ. ಯಶವಂತಪುರ ವಿಧಾನಸಭಾ ಕ್ಷೇತ್ರದ ಉತ್ತರಹಳ್ಳಿ ಹೋಬಳಿಯ ನೆಲೆಗುಳಿ ಗ್ರಾಮದ ಸಿಂಗಯ್ಯನ ಕೆರೆಯ ಕಟ್ಟೆ ಒಡೆದ ಪರಿಣಾಮ ಕನಕಪುರ ಹೆದ್ದಾರಿಗೆ ನೀರು ನುಗ್ಗಿತ್ತು. ರಸ್ತೆಯ ತುಂಬೆಲ್ಲಾ ಭಾರೀ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದ ಹಿನ್ನಲೆ ವಾಹನ ಸವಾರರು ಪರದಾಡುವಂಥ ಪರಿಸ್ಥಿತಿ ನಿರ್ಮಾಣವಾಗಿತ್ತು. ನಂತರ ಜೆಸಿಬಿ ಮೂಲಕ ಬದಲಿ ಕಾಲುವೆಯನ್ನ ತೆಗೆದು, ನೀರನ್ನು ಬೇರೆ ಕಡೆ ಹರಿಯುವಂತೆ ಮಾಡಲಾಯ್ತು.

ಒಂದ್ಕಡೆ ಬಹಳ ವರ್ಷಗಳಿಂದ ಬತ್ತಿಹೋಗಿದ್ದ ಕೆರೆಗಳಲ್ಲಿ ಉಕ್ಕಿ ಹರಿಯುತ್ತಿರೋ ನೀರನ್ನ ಕಂಡು ರೈತರ ಮೊಗದಲ್ಲಿ ಸಂತಸ ಮೂಡಿದ್ರೆ, ಮತ್ತೊಂದ್ಕಡೆ ಮಳೆಯ ಅವಾಂತರದಿಂದ ಸಾರ್ವಜನಿಕರು ಪರದಾಡುವಂತಾಗಿದೆ.

ಸೌಮ್ಯಶ್ರೀ ಮತ್ತು ಗಂಗಾಧರ್ ವಾಗಟ ಸುದ್ದಿಟಿವಿ

0

Leave a Reply

Your email address will not be published. Required fields are marked *