ಮುಂದುವರೆದ ಇಂಧನ ಬೆಲೆ ಏರಿಕೆ: ಭಾನುವಾರ ಸಭೆ ನಡೆಸಲಿರುವ ಮೋದಿ

ಮುಂದುವರೆದ ಇಂಧನ ಬೆಲೆ ಏರಿಕೆ
ಸಚಿವ ಸಂಪುಟ ಸಭೆಯಲ್ಲೂ ಸೋತ ಎನ್​ಡಿಎ
ದರ ಇಳಿಕೆ ವಿಚಾರ ಕುರಿತು ಪ್ರತಿಕ್ರಿಯೆಗೆ ನಿರಾಕರಿಸಿದ ಸಚಿವ

ದೆಹಲಿ: ಸತತ ಒಂದು ತಿಂಗಳಿಂದ ಏರುಗತಿಯಲಿದ್ದ ಇಂಧನ ದರದಲ್ಲಿ ಇಂದು ಕೂಡ ಏರಿಕೆ ಕಂಡುಬಂದಿದೆ. ಈ ಮೂಲಕ ಕೇಂದ್ರ ಸರ್ಕಾರ ಬೆಲೆ ಇಳಿಕೆಗೆ ಯಾವುದೇ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ ವಿಫಲವಾದಂತಾಗಿದೆ. ಇನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್, ದರ ನಿಗದಿ ವಿಚಾರದಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದಿದೆ.

ದೇಶಾದ್ಯಂತ ಇಂಧನ ಬೆಲೆ ಏರಿಕೆ ಮತ್ತು ಡಾಲರ್ ಎದುರು ರೂಪಾಯಿ ದರ ಕುಸಿತ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳ ಬೆಲೆಯಲ್ಲಿ ಏರಿಕೆ ಮತ್ತು ಸಾರಿಗೆ ದರದಲ್ಲಿ ಏರಿಕೆಯ ಭಯದಲ್ಲಿ ದೇಶದ ಜನ ದಿನ ನೂಕುವಂತೆ ಪರಿಸ್ಥಿತಿ ನಿರ್ಮಾಣವಾಗಿದೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಸಭೆ ನಡೆದಿದ್ದು, ಮಹತ್ವದ ನಿರ್ಧಾರ ತೆಗೆದುಕೊಳ್ಳುವ ನಿರೀಕ್ಷೆ ಮೂಡಿತ್ತು. ಆದರೆ, ಈ ಕುರಿತು ಪ್ರತಿಕ್ರಿಯಿಸಿರುವ ಇಂಧನ ಸಚಿವ ಧರ್ಮೇಂದ್ರ ಪ್ರಧಾನ್, ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರಗಳನ್ನು ಬಹಿರಂಗ ಪಡಿಸಲು ಸಾಧ್ಯವಿಲ್ಲ ಎಂದು ಪತ್ರಕರ್ತರ ಪ್ರಶ್ನೆಗಳಿಂದ ನುಣುಚಿಕೊಂಡರು. ಗೌರಿ – ಗಣೇಶ ಹಬ್ಬದ ಪ್ರಯುಕ್ತ ದೇಶದ ನಾಗರಿಕರಿಗೆ ಸಿಹಿ ಸುದ್ದಿಯ ನಿರೀಕ್ಷೆ ಈ ಮೂಲಕ ಹುಸಿಯಾದಂತಾಗಿದೆ.

ವಿವಿಧ ರಾಜಧಾನಿಗಳಲ್ಲಿ ಇಂದಿನ ಪೆಟ್ರೋಲ್ ದರ
ನಗರ                       ದರ (ರೂ.ಗಳಲ್ಲಿ)
ದೆಹಲಿ                       80.87
ಕೊಲ್ಕೊತ್ತಾ                83.75
ಮುಂಬೈ                    88.26
ಚೆನ್ನೈ                       84.05
ಹೈದರಾಬಾದ್            85.75

ಭಾರತ್ ಬಂದ್ ಹಿನ್ನೆಲೆಯಲ್ಲಿ ಧರ್ಮೇಂದ್ರ ಪ್ರಧಾನ್, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರೊಂದಿಗೆ ಸತತ ಒಂದು ಗಂಟೆ ಇಂಧನ ದರ ಏರಿಕೆ ಕುರಿತು ಚರ್ಚೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಇಂದಿನ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಹೊರಬೀಳುವ ನಿರೀಕ್ಷೆ ಇತ್ತು. ಆದರೆ, ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಳ್ಳುವ ಬದಲು ಎಥೆನಾಲ್ ಇಂಧನದ ದರ ಏರಿಸುವ ನಿರ್ಧಾರ ಪ್ರಕಟಿಸಿದೆ. ಈ ಮೂಲಕ ದರ ಇಳಿಕೆ ನಿಟ್ಟಿನಲ್ಲಿ ಕೇಂದ್ರ ಯಾವುದೇ ಕ್ರಮ ಕೈಗೊಳ್ಳದೆ ಇಂಧನ ದರ ಏರಿಕೆ ನಿಯಂತ್ರಿಸುವಲ್ಲಿ ಕೈಕಟ್ಟಿಕುಳಿತಿದೆ.

ಇನ್ನು ನ್ಯಾಯಯುತ ಇಂಧನ ಬೆಲೆ ನಿಗದಿ ಕುರಿತು ಸಾರ್ವಜನಿಕರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್, ದರ ನಿಗದಿ ವಿಚಾರ ದೊಡ್ಡ ಆರ್ಥಿಕ ನೀತಿಗೆ ಸಂಬಂಧಿಸಿದ ವಿಷಯ. ಆದ್ದರಿಂದ ಈ ವಿಷಯದಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ಅಭಿಪ್ರಾಯಪಟ್ಟಿದೆ. ಆದರೆ, ದರ ಹೆಚ್ಚಳ ಕುರಿತ ಮನವಿಗಳನ್ನು 4 ವಾರಗಳ ಒಳಗೆ ಪರಿಗಣಿಸಿ ಎಂದು ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ.

ಒಟ್ಟಿನಲ್ಲಿ ದೇಶದ ಜನರ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದಿರುವ ಸಂಗತಿ ಇಂದು ಮತ್ತೊಮ್ಮೆ ಬಹಿರಂಗವಾಗಿದೆ. ಆದರೆ, ಬೆಲೆ ಏರಿಕೆ ತಲೆಬಿಸಿಯಿಂದ ಜನ ನರಳಾಡುವ ಪರಿಸ್ಥಿತಿ ಮಾತ್ರ ಇನ್ನೂ ತಪ್ಪಿಲ್ಲ. ಆದರೆ, ಇದೇ ಭಾನುವಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಆರ್ಥಿಕ ಪರಿಸ್ಥಿತಿ ಕುರಿತು ಪರಿಶೀಲನಾ ಸಭೆ ನಿಗದಿಯಾಗಿದೆ. ಅಂದಿನ ಸಭೆಯಲ್ಲಿ ಯಾವ ನಿರ್ಧಾರ ಕೈಗೊಳ್ಳಲಾಗಿದೆ ಎಂಬ ಕುತೂಹಲ ಸದ್ಯಕ್ಕೆ ಮೂಡಿದೆ.

0

Leave a Reply

Your email address will not be published. Required fields are marked *