ನಾರಾಯಣಪುರದಿಂದ ಗಾಂಧಿನಗರದವರೆಗೆ ಸಾಗಿ ಬಂದ ಅಪರೂಪದ ನಟ ಸಂಪತ್

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಸ್ನಾತಕೋತ್ತರ ಪದವಿ ಅಧ್ಯಯನಕ್ಕೆ ಕನ್ನಡ ಅಧ್ಯಯನ ಕೇಂದ್ರಕ್ಕೆ ಸೇರಿಕೊಂಡ ಹೊಸದರಲ್ಲಿ ಸಂಪತ್‍ ಕುಮಾರ್ ನಾ. ಹೆಸರು ವಿವಿ ಕ್ಯಾಂಪಸ್‍್ನಲ್ಲಿ ಹರಿದಾಡುತ್ತಿತ್ತು. ನನ್ನ ತಂದೆ ಕೂಡ ವೃತ್ತಿರಂಗಭೂಮಿ ಹಿನ್ನೆಲೆಯವರಾದುದರಿಂದ ನನಗೂ ನಾಟಕದಲ್ಲಿ ಆಸಕ್ತಿ. ಇದೇ ಕಾರಣಕ್ಕೆ ದ್ವಿತೀಯ ಪಿಯುಸಿಗೆ ವಿಜಯ ಸಂಜೆ ಕಾಲೇಜಿಗೆ ಸೇರಿಕೊಂಡ ನಂತರ ರಜೆ ದಿನಗಳಲ್ಲಿ ರವೀಂದ್ರ ಕಲಾಕ್ಷೇತ್ರಕ್ಕೆ ಭೇಟಿ ನೀಡುವುದು ಸಾಮಾನ್ಯ ಸಂಗತಿಯಾಗಿತ್ತು. ಬೆಂಗಳೂರು ವಿವಿಗೆ ಸೇರಿದ ನಂತರ ಕನ್ನಡ ಅಧ್ಯಯನ ಕೇಂದ್ರದಲ್ಲಿ ಗುರುಗಳಾದ ರಾಜಪ್ಪ ದಳವಾಯಿ ಮತ್ತು ಪ್ರದರ್ಶನ ಕಲೆ ವಿಭಾಗದ ಡಾ. ರಾಮಕೃಷ್ಣಯ್ಯ, ಡಾ. ನಾಗೇಶ್ ವಿ ಬೆಟ್ಟಕೋಟೆ, ಪ್ರೊ. ಸುಧೀಂದ್ರ ಶರ್ಮ ಮೊದಲಾದವರು ಹಾಗೂ ರಮೇಶ್ ಪಾಲಸಂದ್ರ, ಗೋವಿಂದರಾಜ ಬೈಚಕುಪ್ಪೆ, ಅಣ್ಣಾಜಿ ಕೃಷ್ಣಾ ರೆಡ್ಡಿ ಮೊದಲಾದವರ ಕಾರಣದಿಂದಾಗಿ ನಾನು ಕೂಡ ಪ್ರದರ್ಶನ ಕಲೆ ವಿಭಾಗಕ್ಕೆ ಆಗಾಗ ಭೇಟಿ ಕೊಡುತ್ತಿದ್ದೆ. ಅದಕ್ಕೂ ಮುನ್ನ ಸಂಪತ್ ಪ್ರದರ್ಶಕ ಕಲೆ ಸ್ನಾತಕೋತ್ತರ ಅಧ್ಯಯನವನ್ನು ಮುಗಿಸಿದ್ದರು.

ಸಂಪತ್ ಕುಮಾರ್ ನಿರ್ದೇಶಿಸಿದ್ದ ಕುವೆಂಪು ಅವರ  ಶ್ಮಶಾನ ಕುರುಕ್ಷೇತ್ರ ನಾಟಕದ ಕುರಿತು ಕ್ಯಾಂಪಸ್‍ನಲ್ಲಿ ಉತ್ತಮ ಮಾತುಗಳು ಕೇಳಿಬರುತ್ತಿದ್ದವು. ಕುವೆಂಪು ಅವರ ಆಶಯವನ್ನು ರಂಗಭೂಮಿಯ ಮೇಲೆ ಯಶಸ್ವಿಯಾಗಿ ತಂದಿದ್ದಾರೆ ಎಂದು ನನ್ನ ಹಿರಿಯ ಸಹಪಾಠಿಗಳು, ಕೆಲವು ಗುರುಗಳು ಪ್ರಶಂಸಿಸುತ್ತಿದ್ದರು. ಆ ಸಮಯದಲ್ಲಿ ಒಮ್ಮೆ ವಿವಿಯ ಗ್ರಂಥಾಲಯಕ್ಕೆ ಹೋಗುತ್ತಿದ್ದಾಗ ಪೇಪರ್ ಏರೋಪ್ಲೇನ್ ಹಿಡಿಯಲು ಯತ್ನಿಸುತ್ತಿದ್ದ ಸಂಪತ್ ಕುಮಾರ್ ನನ್ನ ಕಣ್ಣಿಗೆ ಕಂಡರು. ನಂತರ ಅವರ ಪರಿಚಯವಾಯಿತು.

ರಾಜಪ್ಪ ದಳವಾಯಿಯವರ ದಾರಾಶಿಕೊ, ಎಚ್ ಎಸ್ ಶಿವಪ್ರಕಾಶ್ ಅವರ ಮಂಟೇಸ್ವಾಮಿ ಕಥಾಪ್ರಸಂಗದಲ್ಲಿ ದಾರಾಶಿಕೊ ಮತ್ತು ಮಂಟೇಸ್ವಾಮಿ ಪಾತ್ರಗಳು ಅವರ ಅಭಿನಯಕ್ಕೆ ಸಾಕ್ಷಿಯಾಗುಳಿದಿವೆ. ಇಂದಿಗೂ ಈ ಪಾತ್ರವನ್ನು ಸಂಪತ್ ಅಭಿನಯಿಸುತ್ತಾರೆ ಎಂದರೆ ಸಭಾಂಗಣ ಕಿಕ್ಕಿರಿದು ತುಂಬುತ್ತದೆ. ದಾರಾಶಿಕೊದಲ್ಲಿ ಸೂಫಿ, ಸಂತ, ರಾಜ, ಅನುವಾದಕನ ಪಾತ್ರವನ್ನು ಲೀಲಾಜಾಲವಾಗಿ ಅಭಿನಯಿಸುವ ಸಂಪತ್, ಮಂಟೇಸ್ವಾಮಿ ಕಥಾಪ್ರಸಂಗದಲ್ಲಿ ಮಂಟೇಸ್ವಾಮಿಯ ಪಾತ್ರಕ್ಕೆ ಪರಕಾಯ ಪ್ರವೇಶವನ್ನೇ ಮಾಡಿಬಿಡುತ್ತಾರೆ.

ಒಳ್ಳೆಯ ಸೆಟ್ ಡಿಸೈನರ್, ಲೈಟಿಂಗ್ ಮತ್ತು ಮೇಕಪ್‍ನಲ್ಲೂ ಆಸಕ್ತಿ ಇರುವ ಸಂಪತ್, ರಾಜಪ್ಪ ದಳವಾಯಿಯವರ ಕುಲಂ ನಾಟಕದಲ್ಲಿ ಕೃಷ್ಣನ ಪಾತ್ರವನ್ನು ವಿಶಿಷ್ಟವಾಗಿ ರಂಗದ ಮೇಲೆ ತಂದವರು. ಕೃಷ್ಣನನ್ನು ಕುಟಿಲ ಕಾರಸ್ಥಾನಿ, ಹೆಂಗೆಳೆಯರ ಹೃದಯ ಕದ್ದ ಚೋರ, ಬೆಣ್ಣೆ ಕಳ್ಳ, ನವಿಲುಗರಿ-ಕೊಳಲು ಹಿಡಿದುಕೊಂಡಿರುವ ಕೃಷ್ಣನನ್ನು ಹೊರತುಪಡಿಸಿ, ಗೊಲ್ಲ ಕೃಷ್ಣನಾಗಿ ರಂಗದ ಮೇಲೆ ತಂದು ತಬ್ಬಿಬ್ಬು ಮೂಡಿಸಿದ್ದರು. ರಾಜಕಾರಣಿಯಾಗಿ ಕೃಷ್ಣ ಹೇಗೆ ಆಟ ಹೂಡುತ್ತಾನೆ? ಎಂಬುದಕ್ಕೆ ಅವರ ಕುಲಂ ರಂಗಕೃತಿಯನ್ನು ನೋಡಿಯೇ ತಿಳಿಯಬೇಕು. ಇದಷ್ಟೇ ಅಲ್ಲದೇ, ಕವಿ, ಸಾಂದರ್ಭಿಕ ಗಾಯಕನಾಗಿ ಕೂಡ ಸಂಪತ್ ಯಶಸ್ವಿಯಾಗಿದ್ದಾರೆ. ಅವರ ಕಿರುಕವಿತೆಗಳು ಪ್ರಕಟವಾದರೆ ಇನ್ನೊಂದು ಮುಖ ಅನಾವರಣವಾಗುತ್ತದೆ. ಷರೀಫರ ಪದಗಳು, ದಾರಾಶಿಕೊ ನಾಟಕದ ರಂಗಗೀತೆಗಳು, ಕುಲಂ ನಾಟಕದ ರಂಗಗೀತೆಗಳನ್ನು ಅವರು ಗುನುಗುತ್ತಿದ್ದರೆ ಕಾಲದ ಪರಿವೆಯೇ ಇರುವುದಿಲ್ಲ.

ಇಂತಹ ವಿಶಿಷ್ಟ, ವಿಭಿನ್ನ ವ್ಯಕ್ತಿತ್ವದ ಸಂಪತ್ ಕೆಲಕಾಲ ಕಿರುತೆರೆಯಲ್ಲೂ ಕಾಣಿಸಿಕೊಂಡರು. ಚಂದನವನಕ್ಕೆ ಅವರ ಪಾದಾರ್ಪಣೆ ತುಸು ತಡವಾಯಿತು ಎನಿಸುತ್ತದೆ. ಆದರೂ ತಾಳ್ಮೆಯಿಂದ ಅವರು ಸಿಕ್ಕ ಎಲ್ಲ ಪಾತ್ರಗಳನ್ನೂ ಲೀಲಾಜಾಲವಾಗಿ ಅಭಿನಯಿಸುತ್ತಾರೆ. ಪೂರ್ಣಚಂದ್ರ ತೇಜಸ್ವಿಯವರ ಸುಮನಾ ಕಿತ್ತೂರು ನಿರ್ದೇಶನದ ಕಿರಗೂರಿನ ಗಯ್ಯಾಳಿಗಳು ಸಿನಿಮಾದ ಕುಳವಾಡಿ ಕರಿಯನ ಪಾತ್ರ, ಕೆಜಿಎಫ್‍್ನ ಚಿಕ್ಕ ಪಾತ್ರವಿರಲಿ, ಮೂಕಹಕ್ಕಿ ಚಿತ್ರದ ಪಾತ್ರವಿರಲಿ ಅವರ ಅಭಿನಯ ಗಮನಸೆಳೆಯುತ್ತದೆ. ಜೊತೆಗೆ, ಪಾತ್ರಕ್ಕೆ ತಕ್ಕ ಸಿದ್ಧತೆಯನ್ನೂ ಅವರು ಮಾಡಿಕೊಳ್ಳುತ್ತಾರೆ. ಅಭಿನಯ ಕಲೆಯನ್ನು ಕರಗತ ಮಾಡಿಕೊಂಡಿರುವ ಅವರು ಕೆಲಕಾಲ ಕಲಬುರ್ಗಿಯ ನಾಟಕ ವಿಭಾಗದಲ್ಲಿ ಅಧ್ಯಾಪಕರಾಗಿ ಕೂಡ ಕೆಲಸ ನಿರ್ವಹಿಸಿದ ಅನುಭವಿ.

ಎಪಿಎಸ್ ಸಂಜೆ ಕಾಲೇಜಿನಲ್ಲಿ ಓದಿಕೊಂಡು, ಬೆಳಗಿನ ಹೊತ್ತು ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂಪತ್, ಅಭಿನಯ ತರಂಗ ಸೇರಿಕೊಂಡು ನಂತರ ರಂಗಭೂಮಿಯಲ್ಲಿ ಸಕ್ರಿಯಯಾಗಿದ್ದಾರೆ. ಇದೀಗ ಕನ್ನಡ ಚಿತ್ರರಂಗದಲ್ಲಿ ಮತ್ತೊಬ್ಬ ಪ್ರತಿಭಾವಂತ ನಟ ಎಂದು ‘ಕವಲುದಾರಿ’ ಚಿತ್ರದ ಮೂಲಕ ಗುರುತಿಸಿಕೊಂಡಿದ್ದಾರೆ. ಮೈಲೂರು ಶ್ರೀನಿವಾಸ್ ಪಾತ್ರ ಅವರ ಪ್ರತಿಭೆಗೆ ಸಾಣೆ ಹಿಡಿದಿದೆ. ಎರಡು ಶೇಡ್‍ಗಳಲ್ಲಿರುವ ಮತ್ತು ಎರಡು ಕಾಲಘಟ್ಟದಲ್ಲಿ ಹಂಚಿಕೊಂಡಿರುವ ಪಾತ್ರವನ್ನು ಸಂಪತ್ ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಅನಂತನಾಗ್‍ರಂತಹ ಪ್ರತಿಭಾವಂತ ನಟರ ಎದುರು ಸಂಪತ್ ನಿರ್ವಹಿಸಿರುವ ಮೈಲೂರು ಶ್ರೀನಿವಾಸ್ ಪಾತ್ರ ಅಭಿನಂದನಾರ್ಹ. ಕತೆ, ಪಾತ್ರಕ್ಕೆ ಅಗತ್ಯವಾದಷ್ಟು ಮಾತ್ರ ನಟನೆಯನ್ನು ಇಲ್ಲಿ ಕಾಣಬಹುದು.

ರಂಗಭೂಮಿಯ ಹಿನ್ನೆಲೆಯ ನಟರು ಬಹುತೇಕ ಸಂದರ್ಭದಲ್ಲಿ ಮೆಲೋಡ್ರಾಮಾಕ್ಕೆ ತಿರುಗಿಬಿಡುತ್ತಾರೆ. ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲ ಭಾರತೀಯ ಚಿತ್ರರಂಗದಲ್ಲಿ ಈ ಸಂಗತಿ ಸರ್ವೇಸಾಮಾನ್ಯವಾಗಿರುತ್ತದೆ. ಕ್ಯಾಮೆರಾ ಕಣ್ಣಿನ ಮುಂದೆ ಅಭಿನಯಿಸುವುದಕ್ಕೂ ರಂಗಭೂಮಿಯಲ್ಲಿ ಅಭಿನಯಿಸುವುದಕ್ಕೂ ವ್ಯತ್ಯಾಸವಿದೆ. ಆದರೆ, ಅನವಶ್ಯಕ ಅಭಿವ್ಯಕ್ತಿ, ಎಕ್ಸಾಗರೇಷನ್ ಇತ್ಯಾದಿಗಳಿಗೆ ಅವಕಾಶವನ್ನೇ ನೀಡದೆ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ಸಂಪತ್ ಕವಲು ದಾರಿ ಚಿತ್ರದಲ್ಲಿ ನಿರ್ವಹಿಸಿದ್ದಾರೆ. ಮೈಲೂರು ಶ್ರೀನಿವಾಸ್ ಪಾತ್ರ ಕನ್ನಡಕ್ಕೆ ಮತ್ತೊಬ್ಬ ವಿಲನ್ ನಟನನ್ನು ಪರಿಚಯಿಸಿದೆ. ಖಳನಾಯಕನ ರೋಷ, ಅಸಹನೆ, ಆವೇಶಗಳನ್ನು ಪಾತ್ರಕ್ಕೆ ಧಾರೆ ಎರೆಯುವ ಮೂಲಕ ಸಂಪತ್ ಮಿಂಚಿದ್ದಾರೆ. ಹಾವಭಾವ, ಕಣ್ಚಲನೆ ಇತ್ಯಾದಿಗಳನ್ನು ಪಾತ್ರಕ್ಕೆ ಅಗತ್ಯವಾದಷ್ಟನ್ನು ಮಾತ್ರ ಬಳಸಿಕೊಂಡಿದ್ದಾರೆ. ಇಂತಹ ನಟನಿಗೆ ಅವಕಾಶ ಮಾಡಿಕೊಟ್ಟ ಮತ್ತು ಸಸ್ಪೆನ್ಸ್ ಚಿತ್ರವನ್ನು ಅಚ್ಚುಕಟ್ಟಾಗಿ ತೆರೆಗೆ ತಂದ ಪಾರ್ವತಮ್ಮ ರಾಜ್‍ಕುಮಾರ್ ಪ್ರೊಡಕ್ಷನ್ಸ್, ನಿರ್ದೇಶಕ ಹೇಮಂತ್ ರಾವ್ ಅಭಿನಂದನಾರ್ಹರು.

ಕನ್ನಡದ ಚಂದನವನದಲ್ಲಿ ಸಂಪತ್ ಅವರ ಪ್ರತಿಭೆಗೆ ಇನ್ನಷ್ಟು ಅವಕಾಶಗಳು ಸಿಗಬೇಕಿದೆ. ಸಂಪತ್ ಅವರಿಗೂ ಕಾಯುವ ತಾಳ್ಮೆ ಇದೆ. ಕನ್ನಡದ ಸಾಹಸಿ ಚಿತ್ರ ನಿರ್ಮಾಪಕರು, ಉತ್ಸಾಹಿ ನಿರ್ದೇಶಕರು ಇವರ ಪ್ರತಿಭೆಗೆ ಇನ್ನಷ್ಟು ಅವಕಾಶಗಳನ್ನು ಕಲ್ಪಿಸಬೇಕಿದೆ.

ಡಾ. ಪ್ರದೀಪ್ ಮಾಲ್ಗುಡಿ, ಹಿರಿಯ ಉಪ ಸಂಪಾದಕ

2+

Leave a Reply

Your email address will not be published. Required fields are marked *