ಮುಸ್ಲಿಂ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ, ಜೀವಂತವಾಗಿ ಸುಟ್ಟ ಪ್ರಕರಣ: ವ್ಯಕ್ತಿಯ ಬಂಧನ

ಲವ್ ಜಿಹಾದ್ ಆರೋಪದಡಿ ವ್ಯಕ್ತಿಯ ಅಮಾನುಷ ಹತ್ಯೆ
ಕಣ್ಮುಚ್ಚಿ ಕುಳಿತಿದೆಯಾ ರಾಜಸ್ಥಾನ ಬಿಜೆಪಿ ಸರ್ಕಾರ?
ಕಾನೂನು, ಸುವ್ಯವಸ್ಥೆ ಎಲ್ಲಿ ಎಂಬ ಪ್ರಶ್ನೆಗೆ ಉತ್ತರಿಸುವರಾರು?

ಜೈಪುರ: ರಾಜಸ್ಥಾನದ ರಾಜಸ್​​ಮಂಡ್​​ನಲ್ಲಿ ಕೂಲಿ ಕಾರ್ಮಿಕನೊಬ್ಬನ ಮೇಲೆ ಅಮಾನುಷವಾಗಿ ಹಲ್ಲೆಗೈದು, ಮಚ್ಚಿನಿಂದ ಕೊಚ್ಚಿ ನಂತರ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಹತ್ಯೆಗೈದ ದುರ್ಘಟನೆ ನಡೆದಿದೆ. ಈ ಕುರಿತು ಎಸ್​ಐಟಿ ತನಿಖೆ ನಡೆಸಲಾಗುತ್ತಿದ್ದು, ಹತ್ಯೆಗೈದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಾಜಸ್ಥಾನದಲ್ಲಿ ಅಂತರ್ಜಾಲ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.

ಪಶ್ಚಿಮ ಬಂಗಾಳದ ಕೂಲಿ ಕಾರ್ಮಿಕ ಅಫ್ರಜುಲ್​​ನನ್ನು ರಾಜಸ್ಥಾನದ ಶಂಭು ಲಾಲ್ ಹತ್ಯೆಗೈದಿದ್ದು, ಈ ದೃಶ್ಯದ ವೀಡಿಯೋವನ್ನು ಚಿತ್ರೀಕರಿಸಿದ್ದಾನೆ. ವೀಡಿಯೋದಲ್ಲಿ ಲವ್ ಜಿಹಾದ್ ನಡೆಸುವವರಿಗೆ ಎಚ್ಚರಿಕೆ ನೀಡಿರುವ ಶಂಭು, ಲವ್ ಜಿಹಾದಿಗಳೇ ನಿಮಗೆಲ್ಲ ಇದೇ ಪರಿಸ್ಥಿತಿ ಬರುತ್ತದೆ. ನೀವೆಲ್ಲ ದೇಶ ಬಿಟ್ಟು ತೊಲಗಿ ಎಂದು ಎಚ್ಚರಿಕೆ ನೀಡಿದ್ದಾನೆ. ಅಫ್ರಜುಲ್​​ನನ್ನು ಹತ್ಯೆಗೈದಿರುವ ಈ ವೀಡಿಯೋ ಸಾಮಾಜಿ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ವೀಡಿಯೋ ವೈರಲ್ ಆದ ನಂತರ ಮುಂಜಾಗ್ರತಾ ಕ್ರಮವಾಗಿ ರಾಜಸ್ಥಾನದಲ್ಲಿ ಅಂತರ್ಜಾಲ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.

ಕೆಂಪು ಅಂಗಿ ಮತ್ತು ಬಿಳಿ ಪ್ಯಾಂಟ್ ಧರಿಸಿರುವ ಶಂಭುಲಾಲ್, ಅಫ್ರಜುಲ್​​ನನ್ನು ಅಮಾನುಷವಾಗಿ ಥಳಿಸಿದ್ದಾನೆ. ನಿರಂತರವಾಗಿ ಥಳಿಸುವ ವೇಳೆ ಬಲಿಯಾದ ವ್ಯಕ್ತಿ ನೆರವಿಗಾಗಿ ಅಂಗಲಾಚುವ ದೃಶ್ಯ ಮನಕಲಕುವಂತಿದೆ. ಆದರೆ, ಇದಕ್ಕೆ ಮನಸೋಲದ ಶಂಭು ಮಚ್ಚಿನಿಂದ ಹಲ್ಲೆ ನಡೆಸಿ, ಅಷ್ಟಕ್ಕೂ ತೃಪ್ತನಾಗದ ದುಷ್ಕರ್ಮಿ ನೋಡ ನೋಡುತ್ತಿದ್ದಂತೆಯೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ.
ಲವ್ ಜಿಹಾದ್​ಗೆ ಬಲಿಯಾಗಿರುವ ಮಹಿಳೆಯನ್ನು ರಕ್ಷಿಸುವ ಸಲುವಾಗಿ ತಾನು ಹತ್ಯೆಗೈಯುತ್ತಿರುವುದಾಗಿ ವೀಡಿಯೋದಲ್ಲಿ ಶಂಭು ಹೇಳಿಕೊಂಡಿದ್ದಾನೆ.

ಘಟನೆ ಕುರಿತು ಪ್ರತಿಕ್ರಿಯಿಸಿರುವ ಪೊಲೀಸರು ಇದು ಪೂರ್ವನಿಯೋಜಿತ ಕೃತ್ಯ ಎಂದಿದ್ದಾರೆ. ಇಂದು ಮುಂಜಾನೆ ರಾಜಸ್​​ಮಂಡ್​​ಬಳಿ ಅರೆಬೆಂದ ಶವವೊಂದು ಸಿಕ್ಕಿದೆ. ಈ ಶವವನ್ನು 45 ವರ್ಷದ ಅಫ್ರಜುಲ್ ಎಂದು ಗುರುತಿಸಲಾಗಿದೆ. ಈತ ಪಶ್ಚಿಮ ಬಂಗಾಳದಿಂದ ಕೂಲಿ ಮಾಡುವ ಸಲುವಾಗಿ ರಾಜಸ್ಥಾನಕ್ಕೆ ಬಂದಿದ್ದ ಎಂದು ಅವರು ತಿಳಿಸಿದ್ದಾರೆ.

ಘಟನೆ ಸಂಬಂಧ ಪ್ರತಿಕ್ರಿಯಿಸಿರುವ ರಾಜಸ್ಥಾನದ ಗೃಹ ಸಚಿವ ಗುಲಾಬ್ ಚಂದ್ ಕಟಾರಿಯಾ, ವ್ಯಕ್ತಿಯನ್ನು ಕೊಲ್ಲುವ ವೀಡಿಯೋ ಮಾಡಿರುವುದರ ಕುರಿತು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಈ ದೃಶ್ಯವನ್ನು ನೋಡಿದ ಯಾವುದೇ ವ್ಯಕ್ತಿ ಆಘಾತಕ್ಕೊಳಗಾಗುತ್ತಾನೆ.
ಹತ್ಯೆಗೈದಿರುವ ದೃಶ್ಯ ಹೃದಯ ವಿದ್ರಾವಕವಾಗಿದೆ ಎಂದಿರುವ ಅವರು, ಈ ಪ್ರಕರಣದ ಕುರಿತು ಎಸ್​​ಐಟಿ ತನಿಖೆ ನಡೆಸುತ್ತಿದೆ. ಆರೋಪಿಯನ್ನು ಬಂಧಿಸಿದ ನಂತರ ನಿಜ ಸಂಗತಿ ಬಹಿರಂಗವಾಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ರಾಜಸ್ಥಾನದ ರಾಜಸ್​ಮಂಡ್​​ನಲ್ಲಿ ನಡೆದಿರುವ ಅಫ್ರಜುಲ್​ನನ್ನು ಹತ್ಯೆಗೈಯುವ ಮೂಲಕ ಮುಸ್ಲಿಮರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಹಲ್ಲೆ ಮತ್ತು ಹತ್ಯೆ ಪ್ರಕರಣಗಳು ಮುಂದುವರೆದಿವೆ. ವಸುಂಧರಾ ರಾಜೇ ನೇತೃತ್ವದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಇಂಥ ಘಟನೆಗಳು ಸರ್ವೇಸಾಮಾನ್ಯ ಸಂಗತಿಗಗಳಾಗಿವೆ. ಮುಂದೆ ಏನಾಗುತ್ತದೆ ಎಂದು ಕಾದು ನೋಡಬೇಕಿದೆ.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *