ಕನಿಷ್ಠ ಬೆಂಬಲ ಬೆಲೆ ವಿಚಾರದಲ್ಲಿ ರೈತರಿಗೆ ನ್ಯಾಯ ಸಿಗಲಿದೆ: 42ನೇ ಮನ್​​ಕಿ ಬಾತ್​​​ ಅವತರಣಿಕೆಯಲ್ಲಿ ಮೋದಿ ಮಾತು

42ನೇ ಅವತರಣಿಕೆಯ ಮನ್​ಕಿ ಬಾತ್​​ನಲ್ಲಿ ಪ್ರಧಾನಿ ಮಾತು
ರೈತರಿಗೆ ನ್ಯಾಯ ಬೆಲೆ ಒದಿಸಲಾಗುವುದು ಎಂದ ಮೋದಿ
ಮುಸ್ಲಿಂ ಸಮುದಾಯದ ಕೊಡುಗೆ ನೆನೆದ ಪ್ರಧಾನಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಭರವಸೆ ನೀಡೋದು ಹೊಸದಲ್ಲ. ಆದರೆ, ಈ ಬಾರಿ ಅವರು ದೇಶದ ಅನ್ನದಾತರ ಕುರಿತು ಮಹತ್ವದ ಹೇಳಿಕೆಯೊಂದನ್ನ ನೀಡಿದ್ದಾರೆ. 2018ರ ಬಜೆಟ್​ನಲ್ಲಿ ಘೋಷಣೆಯಾಗಿರುವ ನೂತನ ಕನಿಷ್ಠ ಬೆಂಬಲ ಬೆಲೆ ರೈತರಿಗೆ ನ್ಯಾಯ ಬೆಲೆ ಒದಗಿಸುವ ಭರವಸೆ ನೀಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 42ನೇ ಅವತರಣಿಕೆಯ ಮನ್​​ಕಿ ಬಾತ್​​ನಲ್ಲಿ ದೇಶವನ್ನು ಉದ್ದೇಶಿಸಿ  ಮಾತನಾಡಿದ ಅವರು, ತಾಂತ್ರಿಕ ಬೆಂಬಲದಿಂದ ರೈತರ ಉತ್ಪನ್ನಗಳ ಪ್ರಮಾಣದಲ್ಲಿ ಏರಿಕೆಯಾಗಲಿದೆ ಎಂದರು. ರೈತರ ಉತ್ಪಾದನೆಯನ್ನು ಏರಿಸುವ ಸಲುವಾಗಿ ಬಜೆಟ್​ನಲ್ಲಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಹೇಳಿದ ಅವರು, ರೈತರ ಉತ್ಪನ್ನವನ್ನು 1.5 ಪಟ್ಟು ಹೆಚ್ಚಿಸಲು ಯತ್ನಿಸಲಾಗುತ್ತಿದೆ ಎಂದರು. ಕನಿಷ್ಠ ಬೆಂಬಲ ಬೆಲೆಯಿಂದಾಗಿ ರೈತರು ತಮ್ಮ ಉತ್ಪನ್ನಗಳಿಗೆ ನ್ಯಾಯಬೆಲೆ ಪಡೆಯಲು ಅನುಕೂಲವಾಗಲಿದೆ ಎಂದು ಭವಿಷ್ಯ ನುಡಿದರು.

ಎಪಿಎಂಸಿ ಮತ್ತು ಈ ನ್ಯಾಮ್​​ಗಳ ಮೂಲಕ ರೈತರು ಉತ್ಪನ್ನಗಳನ್ನು ಮಾರಾಟ ಮಾಡಬಹುದು. ಇದಕ್ಕಾಗಿ ಅವರು ದೂರ ಪ್ರಯಾಣ ಮಾಡಬೇಕಿಲ್ಲ ಎಂದ ಅವರು, ಇದಕ್ಕಾಗಿ ಗ್ರಾಮೀಣ ಪ್ರದೇಶದಲ್ಲಿ 22,000 ಕೇಂದ್ರಗಳನ್ನು ತೆರೆಯುವ ಮೂಲಕ ಮೂಲಸೌಕರ್ಯ ಒದಗಿಸಲಾಗುತ್ತಿದೆ ಎಂದರು. ಲಾಲ್ ಬಹದ್ದೂರ್ ಶಾಸ್ತ್ರಿ ಮತ್ತು ರಾಮ್ ಮನೋಹರ್ ಲೋಹಿಯಾ ಅವರ ಪ್ರಯತ್ನಗಳಿಂದ ದೇಶದ ರೈತರ ಪರಿಸ್ಥಿತಿ ಸುಧಾರಣೆಯಾಯಿತು ಎಂದು ಹಿರಿಯರ ಕೊಡುಗೆಯನ್ನು ನೆನೆದ ಅವರು, ದೂರದರ್ಶನದ ಕಿಸಾನ್ ವಾಹಿನಿಯೊಂದಿಗೆ ದೇಶದ ಪ್ರತಿಯೊಬ್ಬ ರೈತರೂ ಸಂಪರ್ಕಕ್ಕೆ ಬರಬೇಕು ಎಂದು ಸಲಹೆ ನೀಡಿದರು. ಇನ್ನು 2015 – 16ರ ಅವಧಿಯಲ್ಲಿ ಅತಿಹೆಚ್ಚಿನ ಉತ್ಪನ್ನಗಳನ್ನು ಉತ್ಪಾದಿಸಿ ಮೇಘಾಲಯದ ರೈತರನ್ನು ಅವರು ಅಭಿನಂದಿಸಿದರು.

ಮನ್​ ಕಿ ಬಾತ್​ನಲ್ಲಿ ನೈಜ ಘಟನೆಯೊಂದನ್ನು ಪ್ರಸ್ತಾಪಿಸಿದ ಮೋದಿ, 13 ವರ್ಷಗಳ ಹಿಂದೆ ಸೈದುಲ್ ಲಷ್ಕರ್ ತನ್ನ ತಂಗಿಯನ್ನು ಕಳೆದುಕೊಂಡಿದ್ದರು. ವೈದ್ಯಕೀಯ ಚಿಕಿತ್ಸೆ ಸಿಗದೆ ಅವರ ಸೋದರಿ ಸಾವಿಗೀಡಾಗಿದ್ದರು. ಸೈದುಲ್ ಬಡವರು ಚಿಕಿತ್ಸೆ ಸಿಗದೆ ಸಾಯಬಾರದು ಎಂದು ನಿರ್ಧರಿಸಿದರು. ಸೈದುಲ್ ಆಭರಣ ಮಾರಿ, ದೇಣಿಗೆ ಸಂಗ್ರಹಿಸಿ ಆಸ್ಪತ್ರೆ ಕಟ್ಟಿಸಿದರು. ಅವರ ಗ್ರಾಹಕರು ಕೂಡ ಉದಾರವಾಗಿ ದೇಣಿಗೆ ನೀಡಿದರು. 12 ವರ್ಷಗಳ ನಂತರ ಕೊಲ್ಕೊತ್ತಾದಲ್ಲಿ ಸೈದುಲ್ ಆಸ್ಪತ್ರೆ ಕಟ್ಟಿಸಿದ್ದಾರೆ. ಪುನ್ರಿ ಗ್ರಾಮದಲ್ಲಿ 30 ಬೆಡ್​ಗಳ ಸುಸಜ್ಜಿತ ಆಸ್ಪತ್ರೆ ನಿರ್ಮಾಣವಾಗಿದೆ ಎಂದು ಮುಸ್ಲಿಂ ಸಮುದಾಯದ ಕೊಡುಗೆಯನ್ನು ಪ್ರಧಾನಿ ಮೋದಿ ನೆನೆದರು.

2014ರಲ್ಲಿ ನರೇಂದ್ರ ಮೋದಿಯವರು ಅಧಿಕಾರ ಸ್ವೀಕರಿಸಿದ ನಂತರ ದೇಶದಾದ್ಯಂತ ಹೆಚ್ಚುತ್ತಿರುವ ರೈತರ ಆತ್ಮಹತ್ಯೆ ಪ್ರಕರಣಗಳ ಹಿನ್ನೆಲೆಯಲ್ಲಿ, ಅವರ ಮಾತುಗಳು ಮಹತ್ವ ಪಡೆದುಕೊಂಡಿವೆ. ಆದರೆ, ರೈತರಿಗೆ ನ್ಯಾಯ ಬೆಲೆ ಒದಗಿಸುವ ಭರವಸೆ ನಿಜಕ್ಕೂ ಕಾರ್ಯರೂಪಕ್ಕೆ ಬಂದು, ದೇಶದ ಅನ್ನದಾತರ ಮೊಗದಲ್ಲಿ ಮಂದಹಾಸ ಯಾವಾಗ ಮೂಡುತ್ತದೆ ಎಂದು ಕಾದು ನೋಡಬೇಕಿದೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರು ಇನ್ನಷ್ಟು ಇಚ್ಛಾಶಕ್ತಿ ಪ್ರದರ್ಶಿಸುತ್ತಾರಾ? ಎಂಬ ಕುತೂಹಲ ಕೂಡ ಸದ್ಯಕ್ಕೆ ಮೂಡಿದೆ.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *