ಬಹುತೇಕರು ಉಲ್ಲೇಖಿಸುತ್ತಿರುವ ಬೊಮ್ಮಾಯಿ ಪ್ರಕರಣ: ನಡೆದದ್ದೇನು?

ಬಹುಮತ ಸಾಬೀತು ವಿಚಾರ ಎದುರಾದ ಸಂದರ್ಭದಲ್ಲೆಲ್ಲ ಕರ್ನಾಟಕದ ಮಾಜಿ ಸಿಎಂ ಎಸ್ ಆರ್ ಬೊಮ್ಮಾಯಿ ಪ್ರಕರಣ ದೇಶಾದ್ಯಂತ ಪ್ರತಿಧ್ವನಿಸುತ್ತದೆ. ಬೊಮ್ಮಾಯಿ ಆಗಸ್ಟ್ 13, 1988ರಿಂದ ಏಪ್ರಿಲ್ 21, 1989ರವರೆಗೆ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದರು. ಭಿನ್ನಮತದ ಕಾರಣಕ್ಕೆ 1989ರಲ್ಲಿ ಸಂವಿಧಾನದ 356ನೇ ವಿಧಿಯನ್ವಯ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತವನ್ನು ಹೇರಲಾಯಿತು. ರಾಜ್ಯಪಾಲ ಪಿ ವೆಂಕಟಸುಬ್ಬಯ್ಯ ಸದನದಲ್ಲಿ ಬಹುಮತ ಸಾಬೀತುಪಡಿಸಲು ಎಸ್ ಆರ್ ಬೊಮ್ಮಾಯಿಯವರಿಗೆ ಅವಕಾಶವನ್ನೇ ನೀಡಿರಲಿಲ್ಲ. ಅದರಲ್ಲೂ ತಮಗೆ ಬಹುಮತ ಇದೆ ಎಂದು ಬೊಮ್ಮಾಯಿಯವರು ಅಂದಿನ ರಾಜ್ಯಪಾಲರಿಗೆ ಪತ್ರವನ್ನು ಕೂಡ ಸಲ್ಲಿಸಿದ್ದರು.

ಬೊಮ್ಮಾಯಿಯವರ ಪ್ರಮಾಣ ಪತ್ರಕ್ಕೆ ಬೆಲೆ ಕೊಡದ ರಾಜ್ಯಾಪಾಲ

ಸದನದಲ್ಲಿ ಬಹುಮತ ಸಾಬೀತುಪಡಿಸುತ್ತೇನೆ ಎಂಬ ಬೊಮ್ಮಾಯಿ ಮನವಿಯನ್ನು ಪುರಸ್ಕರಿಸದ ರಾಜ್ಯಪಾಲ ವೆಂಕಟಸುಬ್ಬಯ್ಯ ಬಲವಂತವಾಗಿ ರಾಷ್ಟ್ರಪತಿ ಆಡಳಿತವನ್ನು ರಾಜ್ಯದ ಮೇಲೆ ಹೇರಿದರು. ರಾಜ್ಯಪಾಲರ ಈ ನಿರ್ಣಯ ವಿರೋಧಿಸಿದ ಬೊಮ್ಮಾಯಿ ಕರ್ನಾಟಕ ಹೈ ಕೋರ್ಟ್ ಮೆಟ್ಟಿಲೇರಿ ಕಾನೂನು ಹೋರಾಟಕ್ಕೆ ಮುಂದಾದರು. ಆದರೆ, ಹೈಕೋರ್ಟ್​​ ಬೊಮ್ಮಾಯಿಯವರ ಅರ್ಜಿಯನ್ನು ವಜಾಗೊಳಿಸಿತು. ನಂತರ ಕೂಡ ಎದೆಗುಂದದ ಬೊಮ್ಮಾಯಿ ಸುಪ್ರೀಂ ಕೋರ್ಟ್​​ ಮೆಟ್ಟಿಲೇರಿದರು.

ಸುಪ್ರೀಂ ಕೋರ್ಟ್​​ನಲ್ಲಿ ಮುಂದುವರೆದ ಕಾನೂನು ಹೋರಾಟ

ಅತಂತ್ರ ವಿಧಾನಸಭೆ ಸೃಷ್ಟಿಯಾದ ಸನ್ನಿವೇಶದಲ್ಲಿ ರಾಜ್ಯಪಾಲರ ನಡೆ ಏನಾಗಿರಬೇಕು? ಎಂಬ ಕುರಿತು ಸುಪ್ರೀಂ ಕೋರ್ಟ್​ ಬೊಮ್ಮಾಯಿ ಪ್ರಕರಣದಲ್ಲಿ ಐತಿಹಾಸಿಕ ತೀರ್ಪು ನೀಡಿತು. ದೇಶದಲ್ಲಿ ಅತಂತ್ರ ವಿಧಾನಸಭೆ ಸನ್ನಿವೇಶ ಎದುರಾದ ಸಂದರ್ಭದಲ್ಲೆಲ್ಲ ಬೊಮ್ಮಾಯಿ ಪ್ರಕರಣವನ್ನು ಬಹುತೇಕ ಕೋರ್ಟ್​​ಗಳು, ನ್ಯಾಯಮೂರ್ತಿಗಳು, ರಾಜಕೀಯ ಪಕ್ಷಗಳು ಮತ್ತು ವಿಶೇಷವಾಗಿ ಪತ್ರಕರ್ತರು ಉಲ್ಲೇಖಿಸುವುದು ಸಂಪ್ರದಾಯವಾಗಿ ಹೋಗಿದೆ. ಇಂಥ ನಿರ್ಣಯ ಹೊರಬಿದ್ದದ್ದು ಮಾರ್ಚ್ 11, 1994ರಂದು. 9 ನ್ಯಾಯಮೂರ್ತಿಗಳು ಪೂರ್ಣ ಪೀಠ ಐತಿಹಾಸಿಕ ತೀರ್ಮಾನವನ್ನ ನೀಡಿತ್ತು. ಸಂವಿಧಾನದ 356ನೇ ವಿಧಿಯ ಪ್ರಕಾರ ನಿರಂಕುಶವಾಗಿ ಅಧಿಕಾರ ಮೊಟಕುಗೊಳಿಸುವ, ಸರ್ಕಾರವನ್ನು ವಜಾಗೊಳಿಸುವ, ರಾಷ್ಟ್ರಪತಿ ಆಡಳಿತ ಹೇರುವ ಕುರಿತು ನಿರ್ಣಾಯಕ ತೀರ್ಪನ್ನು ನ್ಯಾಯಪೀಠ ನೀಡಿತ್ತು.

ಐತಿಹಾಸಿಕ ತೀರ್ಪು ಎಂದು ಏಕೆ ಪರಿಗಣಿಸಲು ಕಾರಣ

ರಾಜ್ಯಗಳಲ್ಲಿ ರಾಷ್ಟ್ರಪತಿ ಆಡಳಿತ ಹೇರುವಲ್ಲಿ ರಾಷ್ಟ್ರಪತಿಯ ಅಧಿಕಾರದ ಕುರಿತು 9 ನ್ಯಾಯಮೂರ್ತಿಗಳ ನ್ಯಾಯಪೀಠ ಮಹತ್ವದ ಆದೇಶ ಹೊರಡಿಸಿತು. ಅಲ್ಲದೇ, ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಸರ್ಕಾರವನ್ನು ವಜಾಗೊಳಿಸುವ ಕುರಿತು ನಿರ್ಣಯ ತೆಗೆದುಕೊಳ್ಳಬೇಕು ಎಂದು ಹೇಳಿತು. ಅಲ್ಲಿಯವರೆಗೆ ಕೇವಲ ವಿಧಾನಸಭೆಯನ್ನು ಅಮಾನತ್ತಿನಲ್ಲಿಡಬೇಕು ಎಂಬ ಮಹತ್ವದ ಆದೇಶವನ್ನು ಹೊರಡಿಸಿತು. ಈ ಆದೇಶದ ನಂತರ ವಿಧಾನಸಭೆಯ ವಿಸರ್ಜನೆ ಕುರಿತು ಮಹತ್ವದ ಬೆಳವಣಿಗೆಗಳು ನಡೆದವು.

ತೀರ್ಪಿನಲ್ಲಿರುವ ಮಹತ್ವದ ಅಂಶಗಳು

ವಿಧಾನಸಭೆ ವಿಸರ್ಜನೆ ನಿರ್ಣಯದ ಪರವಾಗಿ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ 2 ತಿಂಗಳ ಒಳಗೆ ಅಂಗೀಕಾರವಾಗಬೇಕು. ಇಲ್ಲವಾದಲ್ಲಿ ವಿಸರ್ಜನೆ ನಿರ್ಣಯ ಬಿದ್ದುಹೋಗುತ್ತದೆ. ಇಂಥ ಸಂದರ್ಭದಲ್ಲಿ ವಜಾಗೊಂಡ ಸರ್ಕಾರ ಮತ್ತೆ ಪುನಃಸ್ಥಾಪನೆಗೊಳ್ಳುತ್ತದೆ ಎಂದು ಕೋರ್ಟ್ ಹೇಳಿದೆ. ಅಲ್ಲದೇ, ಸಂವಿಧಾನದ 35ನೇ ವಿಧಿಯನ್ವಯ ರಾಜ್ಯ ಸರ್ಕಾರವನ್ನು ವಜಾಗೊಳಿಸುವ, ರಾಷ್ಟ್ರಪತಿ ಆಡಳಿತವನ್ನು ಹೇರುವ ನಿರ್ಣಯವನ್ನು ನ್ಯಾಯಾಂಗದ ಪರಿಶೀಲನೆಗೆ ಒಳಪಟ್ಟಿರುತ್ತದೆ ಎಂದು ಕೋರ್ಟ್​​ ಹೇಳಿತ್ತು.

ಎಸ್ ಆರ್ ಬೊಮ್ಮಾಯಿ ಪ್ರಕರಣದ ಮಹತ್ವ

ಎಸ್​ ಆರ್ ಬೊಮ್ಮಾಯಿ ಪ್ರಕರಣದ ತೀರ್ಪು, ಕೇಂದ್ರ ಸರ್ಕಾರ ನಿರಂಕುಶವಾಗಿ ರಾಜ್ಯ ಸರ್ಕಾರಗಳನ್ನು ವಜಾಗೊಳಿಸುವ, ಅಮಾನತಿಲ್ಲಿಡುವ ವಿಷಯಕ್ಕೆ ಸಂಬಂಧಿಸಿದಂತೆ ತೆಗೆದುಕೊಳ್ಳುವ ನಿರ್ಧಾರಗಳ ಕುರಿತು ಮಹತ್ವದ ಅಂಶಗಳನ್ನು ಒಳಗೊಂಡಿದೆ. ಅಲ್ಲದೇ, ಬಂಡಾಯ ಅಥವಾ ಅತಂತ್ರ ವಾತಾವರಣ ನಿರ್ಮಾಣ ಸಂದರ್ಭದಲ್ಲಿ ಸದನದಲ್ಲಿ ಬಹುಮತ ಸಾಬೀತುಪಡಿಸುವುದೇ ಅಂತಿಮ ಎಂಬ ಆದೇಶವನ್ನೂ ಸುಪ್ರೀಂ ಕೋರ್ಟ್ ನೀಡಿತು. ಈ ಮೂಲಕ ರಾಜ್ಯಪಾಲರ ವಿವೇಚನಾ ಅಧಿಕಾರದ ಕುರಿತು ಕೂಡ ಸುಪ್ರೀಂ ಕೋರ್ಟ್​​​ ಮುಖ್ಯ ನಿರ್ಣಯ ಹೇಳಿದಂತಾಗಿದೆ.

ಬೊಮ್ಮಾಯಿ ಪ್ರಕರಣದ 1999ರಲ್ಲಿ ಮೊಟ್ಟ ಮೊದಲು ಅನ್ವಯವಾಯಿತು 

ಅಪರೂಪದಲ್ಲಿ ಅಪರೂಪದ ಪ್ರಕರಣವಾಗಿ ಕಾನೂನು ಸಮರದಲ್ಲಿ ಗೆದ್ದ ಎಸ್ ಆರ್ ಬೊಮ್ಮಾಯಿ ಪ್ರಕರಣ ಮೊಟ್ಟ ಮೊದಲ ಬಾರಿ ಅನ್ವಯವಾಗಿತ್ತು. 1999ರಲ್ಲಿ ವಜಾಗೊಂಡಿದ್ದ ಸರ್ಕಾರವನ್ನು ಪುನಃಸ್ಥಾಪನೆ ಮಾಡುವ ಮೂಲಕ ಬೊಮ್ಮಾಯಿ ಪ್ರಕರಣ ಪ್ರತಿಧ್ವನಿಸಿತ್ತು. ಫೆ. 12, 1999ರಲ್ಲಿ ಬಿಹಾರದ ರಾಬ್ರಿ ದೇವಿ ನೇತೃತ್ವದ ರಾಜ್ಯ ಸರ್ಕಾರವನ್ನು ಕೇಂದ್ರ ಸರ್ಕಾರ ವಜಾಗೊಳಿಸಿತ್ತು. ಆದರೆ, ರಾಜ್ಯಸಭೆಯಲ್ಲಿ ವಜಾ ನಿರ್ಧಾರದ ಪರವಾಗಿ ನಿರ್ಣಯ ತೆಗೆದುಕೊಳ್ಳುವಲ್ಲಿ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಕೇಂದ್ರ ಸರ್ಕಾರ ವಿಫಲವಾಗಿತ್ತು. ಫೆಬ್ರವರಿ 11, 1999ರಂದು ರಾಷ್ಟ್ರಪತಿ ಆಡಳಿತವನ್ನು ಹೇರಲಾಗಿದ್ದು, ರಾಜ್ಯಸಭೆಯಲ್ಲಿ ನಿರ್ಣಯದ ಪರ ಅಂಗೀಕಾರ ಪಡೆಯುವಲ್ಲಿ ವಿಫಲವಾದ ಪರಿಣಾಮದಿಂದಾಗಿ ಮಾರ್ಚ್ 9, 1999ರಂದು ರಾಬ್ರಿ ದೇವಿ ಮತ್ತೆ ಸಿಎಂ ಆಗಿ ಮುಂದುವರೆದರು.

ಅತಂತ್ರ ವಿಧಾನಸಭೆ ಸೃಷ್ಟಿಯಾದ ಸಂದರ್ಭದಲ್ಲಿ ಇಂಥ ಘಟನೆಗಳನ್ನೆಲ್ಲ ಗಮನದಲ್ಲಿಟ್ಟುಕೊಂಡು ರಾಜ್ಯಪಾಲರು ವರ್ತಿಸಬೇಕಿದೆ. ಆದರೆ, ವಿವಿಧ ರಾಜ್ಯಗಳ ರಾಜ್ಯಪಾಲರು ಇದುವರೆಗೆ ಅನೇಕ ಬಾರಿ, ಉದ್ದೇಶಪೂರ್ವಕವಾಗಿ ಎಸ್ ಆರ್ ಬೊಮ್ಮಾಯಿ ಪ್ರಕರಣವನ್ನು ಮರೆತು ವರ್ತಿಸಿದ ಉದಾಹರಣೆಗಳು ಇವೆ. ಗೋವಾ, ಮೇಘಾಲಯ, ಮಣಿಪುರ, ಬಿಹಾರ ರಾಜ್ಯಗಳಲ್ಲಲ್ಲದೇ, ಇದೀಗ ಕರ್ನಾಟಕದಲ್ಲಿ ಕೂಡ ಇಂಥದ್ದೇ ಪ್ರಕರಣಗಳು ಪುನರಾವರ್ತನೆಯಾಗಿವೆ. ಕರ್ನಾಟದಿಂದಲೇ ಕೋರ್ಟ್ ಮೆಟ್ಟಿಲೇರಿ ಗೆಲುವು ಸಾಧಿಸಿದ್ದ ಬೊಮ್ಮಾಯಿ ಪ್ರಕರಣವನ್ನು ರಾಜ್ಯದ ರಾಜ್ಯಪಾಲ ವಜೂಭಾಯಿ ವಾಲಾ ಮರೆತದ್ದು ಸ್ವತಃ ಅವರಿಗೆ ಮತ್ತು ಪಕ್ಷಕ್ಕೆ ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೂಡ ತೀವ್ರ ಮುಖಭಂಗಕ್ಕೆ ಕಾರಣವಾಗಿದೆ.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

1+

Leave a Reply

Your email address will not be published. Required fields are marked *