ಪಂಚರಾಜ್ಯಗಳ ವಿಧಾನಸಭೆ ಚುನಾವಣೆಗೆ ಆಡಳಿತ – ವಿಪಕ್ಷದಿಂದ ತಾಲೀಮು

ಅಧಿಕಾರಕ್ಕಾಗಿ ಕಾಂಗ್ರೆಸ್ ವಿಭಜಕ ರಾಜಕಾರಣ ಮಾಡುತ್ತಿದೆ ಎಂದ ಮೋದಿ
ಆಯ್ದ 15 ಉದ್ಯಮಿಗಳ ಪರ ಪ್ರಧಾನಿ ನರೇಂದ್ರ ಮೋದಿ ಎಂದ ರಾಹುಲ್ ಗಾಂಧಿ

ಜೈಪುರ/ಭೋಪಾಲ್: ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಪಕ್ಷ ಪರ ಈಗಾಗಲೇ ಆಡಳಿತ ಪಕ್ಷ ಬಿಜೆಪಿ ಮತ್ತು ಪ್ರಮುಖ ವಿಪಕ್ಷ ಕಾಂಗ್ರೆಸ್ ಪ್ರಚಾರ ನಡೆಸುತ್ತಿವೆ. ಇಂದು ರಾಜಸ್ಥಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಮಧ್ಯಪ್ರದೇಶದಲ್ಲಿ ರಾಹುಲ್ ಗಾಂಧಿ ಚುನಾವಣೆಗೆ ಪಕ್ಷ ಮತ್ತು ಕಾರ್ಯಕರ್ತರನ್ನು ಸಜ್ಜುಗೊಳಿಸಿದರು. ಈ ವೇಳೆ ಉಭಯ ನಾಯಕರು ಪರಸ್ಪರರ ಮೇಲೆ ವಾಗ್ದಾಳಿ ನಡೆಸಿದರು.

ರಾಜಸ್ಥಾನ ವಿಧಾನಸಭೆಗೆ ಇದೇ ಡಿಸೆಂಬರ್ 7ರಂದು ಚುನಾವಣೆ ನಡೆಯಲಿದ್ದು, ಇಂದು ಪಕ್ಷದ ಪರ ಪ್ರಧಾನಿ ನರೇಂದ್ರ ಮೋದಿ ಅಜ್ಮೀರ್​​ನಲ್ಲಿ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಭಾಗವಹಿಸಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಅಧಿಕಾರಕ್ಕಾಗಿ ಕಾಂಗ್ರೆಸ್ ಪಕ್ಷ ವಿಭಜಿಸುವ ರಾಜಕಾರಣದಲ್ಲಿ ತೊಡಗಿದೆ ಎಂದು ಅವರು ಆರೋಪಿಸಿದರು. ಕಾಂಗ್ರೆಸ್ ಈ ಪರಂಪರೆಯನ್ನು ಕಳೆದ 60 ವರ್ಷಗಳಿಂದ ನಡೆಸಿಕೊಂಡು ಬಂದಿದೆ ಎಂದು ಅವರು ಕಿಡಿಕಾರಿದರು.

ಅಧಿಕಾರ ರಾಜಕಾರಣಕ್ಕಾಗಿ ಹಣವನ್ನು ವಿನಿಯೋಗಿಸಿರುವುದರಿಂದಾಗಿ ದೇಶದಲ್ಲಿ ಸಮಗ್ರವಾದ ಬೆಳವಣಿಗೆ ಆಗಿಲ್ಲ ಎಂದು ಕಾಂಗ್ರೆಸ್ ಪಕ್ಷದ ಆರ್ಥಿಕ ನೀತಿಯನ್ನು ಮೋದಿ ಖಂಡಿಸಿದರು. ಇದರೊಂದಿಗೆ, ನಾನು ಭಾರತದ ಪ್ರಧಾನಿ, ಪಕ್ಷದ ಕಾರ್ಯಕರ್ತ. ಪಕ್ಷ ಸಂಘಟನೆಗೆ ನಾನು ಸೈಕಲ್​​ನಲ್ಲಿ ಸವಾರಿ ಮಾಡಿದ ಸಂಗತಿ ನನಗೆ ನೆನಪಿದೆ. ಪಕ್ಷದಿಂದ ಆಹ್ವಾನ ಬಂದಲ್ಲಿ ಬೂತ್ ಮಟ್ಟದ ಕಾರ್ಯಕ್ರಮದಲ್ಲೂ ನಾನು ಭಾಗವಹಿಸುತ್ತೇನೆ ಎಂದು ಪಕ್ಷದ ಕಾರ್ಯಕರ್ತರಿಗೆ ಭರವಸೆ ನೀಡಿದರು.

ನವೆಂಬರ್ 28ರಂದು ಮಧ್ಯಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮೊರೇನಾದಲ್ಲಿ ಮಾತನಾಡಿದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಕೇಂದ್ರ ಸರ್ಕಾರ ಆಯ್ದ 15 ಉದ್ಯಮಿಗಳ ಪರ ತಾರತಮ್ಯ ನಡೆಸುತ್ತಿದೆ ಎಂದು ಆರೋಪಿಸಿದರು. ಕಳೆದ ನಾಲ್ಕೂವರೆ ವರ್ಷಗಳಿಂದ ಕೇಂದ್ರ ಸರ್ಕಾರ ಕೈಗಾರಿಕೋದ್ಯಮಿಗಳ 3 ಲಕ್ಷ ಕೋಟಿ ರೂ. ಸಾಲವನ್ನು ಮನ್ನಾ ಮಾಡಿದೆ. ಇದೇ ರೀತಿ ರೈತರ ಸಾಲವನ್ನೂ ಮನ್ನಾ ಮಾಡಬೇಕು ಎಂದು ಅವರು ಆಗ್ರಹಿಸಿದರು. ವಿಜಯ್ ಮಲ್ಯ ದೇಶ ತೊರೆಯುವ ಸಂಗತಿ ಗೊತ್ತಿದ್ದರೂ ಹಣಕಾಸು ಸಚಿವ ಅರುಣ್ ಜೇಟ್ಲಿ, ಇಡಿ, ಸಿಬಿಐ ಅಥವಾ ಪೊಲೀಸರಿಗೆ ತಿಳಿಸಲಿಲ್ಲ. ಮಲ್ಯ ದೇಶ ತೊರೆದು ಓಡಿ ಹೋದರು ಎಂದು ವಾಗ್ದಾಳಿ ನಡೆಸಿದರು. ಅಲ್ಲದೇ, ತಾವು ಅಧಿಕಾರಕ್ಕೆ ಬಂದರೆ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವುದಾಗಿ ಮಧ್ಯಪ್ರದೇಶದ ಜನತೆಗೆ ರಾಹುಲ್ ಭರವಸೆ ನೀಡಿದರು.

ಒಟ್ಟಿನಲ್ಲಿ ಪಂಚ ರಾಜ್ಯಗಳ ಚುನಾವಣೆ ಕಾವು ಏರತೊಡಗಿದ್ದು, ಆಯೋಗ ದಿನಾಂಕವನ್ನೂ ಘೋಷಿಸಿದೆ. ಇನ್ನು ಮುಂದೆ ದೇಶದ 5 ರಾಜ್ಯಗಳಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ವಿಪಕ್ಷ ಕಾಂಗ್ರೆಸ್ ಸೇರಿದಂತೆ ಇನ್ನುಳಿದ ಪಕ್ಷಗಳು ಯಾವ ರೀತಿಯ ವಾಕ್ಸಮರ ನಡೆಸುತ್ತವೆ? ಇದರಲ್ಲಿ ಯಾರು ಅಂತಿಮವಾಗಿ ಗೆಲುವು ಸಾಧಿಸುತ್ತಾರೆ? ಎಂಬ ಕುತೂಹಲ ಸದ್ಯಕ್ಕೆ ಮೂಡಿದೆ.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *