ಪ್ರಧಾನಿ ನರೇಂದ್ರ ಮೋದಿ ಭ್ರಷ್ಟ ವ್ಯಕ್ತಿ: ರಾಹುಲ್ ಗಾಂಧಿ

ದೆಹಲಿ: ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ತರಾತುರಿಯಲ್ಲಿ ಫ್ರಾನ್ಸ್​​ನ ರಫೇಲ್ ಘಟಕಕ್ಕೆ ತುರ್ತು ಭೇಟಿ ನೀಡುವ ಅಗತ್ಯ ಏನಿತ್ತು? ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರಶ್ನಿಸಿದರು. ದೆಹಲಿಯಲ್ಲಿ ರಫೇಲ್ ಅವ್ಯವಹಾರ ಕುರಿತು ಸುದ್ದಿ ಗೋಷ್ಠಿ ನಡೆಸಿದ ಅವರು, ಮೂರು ದಿನಗಳ ಫ್ರಾನ್ಸ್ ಪ್ರವಾಸದಲ್ಲಿರುವ ನಿರ್ಮಲಾ ಸೀತಾರಾಮನ್ ಭಾರತಕ್ಕಾಗಿ ರಫೇಲ್ ಯುದ್ಧ ವಿಮಾನ ತಯಾರಾಗುತ್ತಿರುವ ಡಸಾಲ್ಟ್ ಘಟಕಕ್ಕೆ ಭೇಟಿ ನೀಡಿದ್ದು ಏಕೆ? ಎಂದರು.

ಫ್ರಾನ್ಸ್ ಅಧ್ಯಕ್ಷ ಪ್ರಾನ್ಸಿಸ್ಕೋ ಹಾಲಂಡೆ ಭಾರತದ ಪ್ರಧಾನಿ ರಿಲಯನ್ಸ್​​​ ಜೊತೆಗೆ ರಫೇಲ್ ಒಪ್ಪಂದ ಮಾಡಿಕೊಳ್ಳಬೇಕು ಎಂದು ತಿಳಿಸಿದ್ದರು ಎಂದಿದ್ದರು. ರಫೇಲ್​​ನ ಹಿರಿಯ ಅಧಿಕಾರಿಗಳು ಕೂಡ ಇದೇ ವಿಷಯವನ್ನು ಹೇಳಿದ್ದಾರೆ. ಇದು ಭ್ರಷ್ಟಾಚಾರದಿಂದ ಕೂಡಿದ ಪ್ರಕರಣ ಎಂಬುದು ಈ ಸಂಗತಿಗಳಿಂದ ಸ್ಪಷ್ಟವಾಗಿ ತಿಳಿಯುತ್ತದೆ ಎಂದರು. ಮೇಲಿನ ಎರಡು ಉದಾಹರಣೆಗಳನ್ನು ನೀಡಿದ ಅವರು, ದೇಶದ ಪ್ರಧಾನಿ ಭ್ರಷ್ಟ ಎಂಬುದನ್ನು ನಾನು ದೇಶದ ಯುವ ಜನತೆಗೆ ಹೇಳಲು ಬಯಸುತ್ತೇನೆ ಎಂದರು. ಜೊತೆಗೆ ಪ್ರಧಾನಿ ಟೊಳ್ಳು ಭರವಸೆ ನೀಡಿದ್ದಾರೆ ಎಂದು ದೂರಿದರು.

ನರೇಂದ್ರ ಮೋದಿಯವರು ಅನಿಲ್ ಅಂಬಾನಿಯವರಿಗೆ ಕಾವಲುಗಾರ ಎಂದು ಆರೋಪಿಸಿದ ರಾಹುಲ್, ಅನಿಲ್ ಅಂಬಾನಿಯವರಿಗೆ ಪ್ರಧಾನಿ 30,000 ಕೋಟಿ ರೂ. ಲಾಭ ಮಾಡಿಕೊಡಲು ಪ್ರಧಾನಿಯಾಗಿದ್ದಾರೆ ಎಂದು ಆರೋಪಿಸಿದರು. ಮೋದಿಯವರು ನೆನಪಿನಲ್ಲಿಟ್ಟುಕೊಳ್ಳಬೇಕು, ಒಂದು ವೇಳೆ ಆರೋಪಗಳಿಗೆ ಉತ್ತರ ನೀಡಲು ಆಗದಿದ್ದಲ್ಲಿ ಅವರು ಕಡ್ಡಾಯವಾಗಿ ರಾಜಿನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ರಾಹುಲ್ ಗಾಂಧಿ ಆರೋಪಕ್ಕೆ ಬಿಜೆಪಿ ತಿರುಗೇಟು ನೀಡಿದ್ದು, ರಾಹುಲ್ ದೇಶದ ಭಧ್ರತೆಗೆ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಆರೋಪಿಸಿದ್ದಾರೆ. ಅಲ್ಲದೇ, ಇಡೀ ಗಾಂಧಿ ಕುಟುಂಬವೇ ಭ್ರಷ್ಟ ಕುಟುಂಬ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಬೊಫೋರ್ಸ್​​ ಹಗರಣದಲ್ಲಿ ರಾಹುಲ್ ಗಾಂಧಿ ತಂದೆ ರಾಜೀವ್ ಗಾಂಧಿಯವರೇ ಅಧಿಕೃತ ಮಧ್ಯವರ್ತಿ ಎಂದು ರಾಹುಲ್ ವಿರುದ್ಧ ವಾಗ್ದಾಳಿ ನಡೆಸಿದರು.

ಒಟ್ಟಿನಲ್ಲಿ ಆಡಳಿತ ಮತ್ತು ವಿಪಕ್ಷಗಳು ರಫೇಲ್ ವಿಚಾರದಲ್ಲಿ ಪರಸ್ಪರ ಆರೋಪ – ಪ್ರತ್ಯಾರೋಪಗಳಲ್ಲಿ ನಿರತವಾಗಿದ್ದು, ರಫೇಲ್ ಒಪ್ಪಂದದಲ್ಲಿ ನಿಜಕ್ಕೂ ನಡೆದಿರುವುದು ಏನು ಎಂಬ ಸಂಗತಿ ದೇಶದ ಜನತೆಗೆ ತಿಳಿಯಬೇಕಿದೆ. ಸುಪ್ರೀಂ ಕೋರ್ಟ್ ಕೂಡ ಈ ವಿಷಯದಲ್ಲಿ ಮಧ್ಯಪ್ರವೇಶಿಸಿದ್ದು, ಕೇಂದ್ರ ಸರ್ಕಾರದಿಂದ ಒಪ್ಪಂದದ ಕುರಿತು ಮುಚ್ಚಿದ ಲಕೋಟೆಯಲ್ಲಿ ವರದಿ ನೀಡುವಂತೆ ಸೂಚಿಸಿದೆ. ಕೇಂದ್ರ ನೀಡುವ ವರದಿ ನಂತರ ಸುಪ್ರೀಂ ಕೋರ್ಟ್ ಯಾವ ಕ್ರಮ ಕೈಗೊಳ್ಳಲಿದೆ ಎಂದು ಕಾದುನೋಡಬೇಕಾಗಿದೆ.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *