ರಾಮನನ್ನು ಕೈಬಿಟ್ಟ ಮೋದಿ ಸರ್ಕಾರ ಮುಸ್ಲಿಂ ಮಹಿಳೆಯರ ಪರ ವಕೀಲಿ ನಡೆಸುತ್ತಿದೆ: ಪ್ರವೀಣ್ ತೊಗಾಡಿಯಾ

ಲಖ್ನೋ: ಶ್ರೀರಾಮನನ್ನು ಮರೆತ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಮುಸ್ಲಿಂ ಮಹಿಳೆಯರ ಪರ ವಕೀಲಿ ನಡೆಸುತ್ತಿದೆ ಎಂದು ವಿಶ್ವ ಹಿಂದು ಪರಿಷತ್ ಮಾಜಿ ಅಧ್ಯಕ್ಷ ಪ್ರವೀಣ್ ಬಾಯ್ ತೊಗಾಡಿಯಾ ಕಿಡಿಕಾರಿದ್ದಾರೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸುವಂತೆ ಆಗ್ರಹಿಸಿ ಅಕ್ಟೋಬರ್ 21ರಂದು ಲಖ್ನೋದಲ್ಲಿ ನಡೆಯುವ ಪ್ರತಿಭಟನೆಯನ್ನು ಅವರು ಬೆಂಬಲಿಸುವುದಾಗಿ ಹೇಳಿದ್ದಾರೆ.

ದೆಹಲಿಯಲ್ಲಿ ಬಿಜೆಪಿ 500 ಕೋಟಿ ರೂ. ಮೌಲ್ಯದ ಕಚೇರಿಯನ್ನು ಕಟ್ಟಿದೆ. ಆದರೆ, ರಾಮಮಂದಿರ ಕಟ್ಟುವುದನ್ನು ಮರೆತುಬಿಟ್ಟಿದೆ. ಬಿಜೆಪಿ ಜನರಿಗೆ ದ್ರೋಹ ಎಸಗಿದೆ. ಬುಧವಾರ ಬಿಎಸ್​ಎಫ್ ಯೋಧರ ಕತ್ತು ಕತ್ತರಿಸಲಾಗಿದೆ. ಸರ್ಕಾರ ಪಾಕಿಸ್ತಾನಕ್ಕೆ ಕೂಡ ಪಾಠ ಕಲಿಸಿಲ್ಲ ಎಂದು ಅವರು ಕೇಂದ್ರದ ವೈಫಲ್ಯಗಳನ್ನು ವಿವರಿಸಿದರು.

ಸಂಸತ್ತಿನಲ್ಲಿ ಕಾಯ್ದೆ ರೂಪಿಸುವ ಮೂಲಕ ರಾಮ ಮಂದಿರವನ್ನು ನಿರ್ಮಾಣ ಮಾಡುತ್ತೇವೆ, ಕೈಗೆಟುವ ದರದಲ್ಲಿ ಎಲ್ಲರಿಗೂ ಶಿಕ್ಷಣ ಹಾಗೂ ಕೋಟ್ಯಂತರ ಯುವಕರಿಗೆ ಉದ್ಯೋಗ ಕೊಡುತ್ತೇವೆ, ಪೆಟ್ರೋಲ್ ಬೆಲೆ ಇಳಿಯುತ್ತದೆ, ರೈತರ ಸಾಲ ಮನ್ನಾ ಮಾಡಲಾಗುತ್ತದೆ ಎಂದು ನಾವು ನಿರೀಕ್ಷಿಸಿದ್ದೆವು. ಆದರೆ, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನಮ್ಮ ಎಲ್ಲ ನಿರೀಕ್ಷೆಗಳನ್ನೂ ಹುಸಿಗೊಳಿಸಿದೆ ಎಂದು ಅವರು ಅಸಮಧಾನ ವ್ಯಕ್ತಪಡಿಸಿದರು. ಅಲ್ಲದೇ, ರಾಮನನ್ನೇ ಮರೆತಿರುವ ಕೇಂದ್ರ ಸರ್ಕಾರ ತ್ರಿವಳಿ ತಲಾಖ್ ಮೂಲಕ ಮುಸ್ಲಿಂ ಮಹಿಳೆಯರ ಪರ ವಕೀಲಿಕೆ ನಡೆಸುತ್ತಿದೆ ಎಂದು ಅವರು ವಾಗ್ದಾಳಿ ನಡೆಸಿದರು. ಜೊತೆಗೆ ಮಲಗಿರುವ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ಎಚ್ಚರಿಸುವ ಕೆಲಸವನ್ನು ನಾವು ಮಾಡುತ್ತೇವೆ ಎಂದರು.

ಈ ಮೂಲಕ ಸಂಘ ಪರಿವಾರದ ಅಂಗ ಪಕ್ಷವಾದ ವಿಶ್ವ ಹಿಂದೂ ಪರಿಷತ್​​​ನಲ್ಲೇ ಕೇಂದ್ರ ಸರ್ಕಾರ, ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಅಪಸ್ವರ ಬಹಿರಂಗವಾಗಿದೆ. ನಿನ್ನೆ ನಡೆದಿದ್ದ ಆರ್​ಎಸ್​ಎಸ್ ಸಮಾವೇಶದಲ್ಲಿ ಕೂಡ ಮೋಹನ್ ಭಾಗವತ್ ಅವರು ರಾಮ ಮಂದಿರವನ್ನು ನಿರ್ಮಿಸಲಾಗುವುದು ಎಂದಿದ್ದರು. ಆದರೆ, ಈ ಕುರಿತು ಸುಪ್ರೀಂ ಕೋರ್ಟ್​​ನಲ್ಲಿ ವಿಚಾರಣೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಯಾವುದೇ ನಿರ್ಣಯ ಕೈಗೊಳ್ಳಲು ಸಾಧ್ಯವಾಗದ ಪರಿಸ್ಥಿತಿ ಸದ್ಯಕ್ಕೆ ಇದೆ.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *