ಎಚ್​ಡಿಕೆಗೆ ಮೋದಿ ಫಿಟ್ನೆಸ್ ಸವಾಲು: ರಾಜ್ಯದ ಅಭಿವೃದ್ಧಿಗೆ ನೆರವಾಗಿ ಎಂದ ಸಿಎಂ

ಯೋಗ ಹೊರತುಪಡಿಸಿ, ಬೆಳಗಿನ ವೇಳೆಯಲ್ಲಿ ಕೆಲವು ಕಸರತ್ತಿನ ಕ್ಷಣಗಳು ಇಲ್ಲಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ. ಪೃಥ್ವಿ, ಜಲ, ಅಗ್ನಿ, ವಾಯು, ಆಕಾಶ (ಪಂಚಭೂತ)ಗಳಿಂದ ನಾನು ಪ್ರೇರಣೆ ಪಡೆಯುತ್ತೇನೆ ಎಂದಿರುವ ಅವರು, ಇದು ಅತ್ಯಂತ ತಾಜಾತನ ನೀಡುತ್ತದೆ ಮತ್ತು ಪುನಶ್ಚೇತನದಾಯಕ ಎಂದಿದ್ದಾರೆ. ಜೊತೆಗೆ, ನಾನು ಉಸಿರಾಟದ ಕಸರತ್ತು ನಡೆಸುತ್ತೇನೆ ಎಂದು ತಮ್ಮ ಬೆಳಗಿನ ಕ್ಷಣಗಳನ್ನು ಹೊಂದಿರುವ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, #HumFitTohIndiaFit ಹ್ಯಾಷ್​​ಟ್ಯಾಗ್​ನಡಿ ಟ್ವೀಟ್ ಮಾಡಿದ್ದಾರೆ.

ಫಿಟ್ನೆಸ್ ಸವಾಲೊಡ್ಡಲು ನನಗೆ ಸಂತಸವಾಗುತ್ತದೆ ಎಂದು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಕರ್ನಾಟಕ ಸಿಎಂ ಎಚ್​ ಡಿ ಕುಮಾರಸ್ವಾಮಿಯವರಿಗೆ ಫಿಟ್ನೆಸ್ ಸವಾಲೊಡ್ಡಿದ್ದಾರೆ. ಇವರೊಂದಿಗೆ ಕಾಮನ್ ವೆಲ್ತ್ ಗೇಮ್ಸ್​​ನಲ್ಲಿ ಭಾರತದ ಹೆಮ್ಮೆ ಮತ್ತು ಅತಿ ಹೆಚ್ಚು ಪದಕ ವಿಜೇತ ಬಾರತೀಯ ಕ್ರೀಡಾಪಟು ಮಾಣಿಕ್​ಬಾತ್ರ ಅವರಿಗೂ ಸವಾಲೊಡ್ಡಿದ್ದಾರೆ. ಜೊತೆಗೆ 40 ವರ್ಷಗಳನ್ನು ಮೀರಿದ ಎಲ್ಲ ಧೈರ್ಯಶಾಲಿ ಐಪಿಎಸ್ ಅಧಿಕಾರಿಗಳಿಗೂ ಅವರು ಸವಾಲೊಡ್ಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಟೇಬಲ್ ಟೆನ್ನಿಸ್ ಆಟಗಾರ್ತಿ ಮಾಣಿಕ ಬಾತ್ರ, ಫಿಟ್ನೆಸ್ ಸವಾಲಿಗೆ ನನ್ನನ್ನು ನಾಮ ನಿರ್ದೇಶನ ಮಾಡಿದ್ದಕ್ಕೆ ನನನಗೆ ತುಂಬಾ ಸಂತಸವಾಗಿದೆ. ಇದು ಪ್ರಧಾನಿಗಳಿಂದ ಕೈಗೊಳ್ಳಲಾದ ಉತ್ತಮ ಕ್ರಮ. ಇದು ಕೇವಲ ಕ್ರೀಡಾಪಟುಗಳಿಗೆ ಮಾತ್ರವಲ್ಲ, ಎಲ್ಲರೂ ಇದನ್ನು ಅನುಸರಿಸಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಮೋದಿಯವರ ಸವಾಲಿನ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ರಾಜವರ್ಧನ್ ಸಿಂಗ್ ರಾಥೋರ್, ಪ್ರಧಾನಿ ಸದಾ ಯುವಕರ ಫಿಟ್ನೆಸ್​ ಕುರಿತು ಮಾತನಾಡುತ್ತಾರೆ. ಏಕೆಂದರೆ, ಯುವಕರು ದೇಶವನ್ನು ಪ್ರಗತಿ ಪಥದಲ್ಲಿ ಕೊಂಡೊಯ್ಯಬೇಕಾಗಿದೆ. ಕೆಲವೇ ಕೆಲವು ಪ್ರಧಾನಿಗಳು ಮಾತ್ರ ಇಂಥ ವೀಡಿಯೋಗಳನ್ನು ಹಂಚಿಕೊಂಡಿದ್ದಾರೆ ಎಂದಿದ್ದಾರೆ. ಅಲ್ಲದೇ, ಇದು ಸಕಾರಾತ್ಮಕ ಅಭಿಯಾನ ಮತ್ತು ಇದು ರಾಜಕೀಯೇತರ ನಿರ್ಧಾರ ಎಂದು ಪ್ರಧಾನಿ ಕ್ರಮವನ್ನು ಶ್ಲಾಘಿಸಿದ್ದಾರೆ.

ಇನ್ನೊಂದು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಎಲ್ಲ ಭಾರತೀಯರೂ ಫಿಟ್ನೆಸ್​​ಗಾಗಿ ಕೆಲ ಸಮಯ ಮೀಸಲಿಡಿ ಎಂದು ಮನವಿ ಮಾಡಿದ್ದಾರೆ. ಅಲ್ಲದೇ, ಇದರಿಂದಾಗಿ ನಿಮ್ಮ ಜೀವನದಲ್ಲಿ ಸಕಾರಾತ್ಮಕವಾದ ಬದಲಾವಣೆಯಾಗುವುದು ಅನುಭವಕ್ಕೆ ಬರುತ್ತದೆ ಎಂದಿರುವ ಅವರು, #FitnessChallenge #HumFitTohIndiaFit ಹ್ಯಾಷ್​ಟ್ಯಾಗ್​ನಡಿ ಟ್ವೀಟ್ ಮಾಡಿದ್ದಾರೆ.

ಪ್ರಧಾನಿ ಮೋದಿಯವರು ನೀಡಿರುವ ಸವಾಲಿನ ಕುರಿತು ಪ್ರತಿಕ್ರಿಯಿಸಿರುವ ಸಿಎಂ ಕುಮಾರಸ್ವಾಮಿ, ಪ್ರಿಯ ನರೇಂದ್ರ ಮೋದೀಜೀ, ನನ್ನ ಆರೋಗ್ಯದ ಕುರಿತ ನಿಮ್ಮ ಕಾಳಜಿಯಿಂದ ನನ್ನನ್ನು ಗೌರವಿಸಿದ್ದೀರಿ ಮತ್ತು ನಿಮಗೆ ಅದಕ್ಕಾಗಿ ಧನ್ಯವಾದ ಸಲ್ಲಿಸುತ್ತೇನೆ ಎಂದಿದ್ದಾರೆ. ಜೊತೆಗೆ, ದೈಹಿಕ ಫಿಟ್ನೆಸ್ ಮುಖ್ಯ ಎಂದು ನಾನು ನಂಬುತ್ತೇನೆ ಮತ್ತು ಇದನ್ನು ಬೆಂಬಲಿಸುತ್ತೇನೆ. ಯೋಗ – ಟ್ರೆಡ್​​ಮಿಲ್ ನನ್ನ ಆಡಳಿತದ ಅವಧಿಯಲ್ಲಿ ಕೂಡ ನನ್ನ ದೈನಂದಿನ ಭಾಗ. ನನ್ನ ರಾಜ್ಯದ ಅಭಿವೃದ್ಧಿ ಕುರಿತ ಫಿಟ್ನೆಸ್​​ ಕುರಿತು ನನಗೆ ಹೆಚ್ಚಿನ ಕಾಳಜಿ ಇದೆ. ಇದಕ್ಕಾಗಿ ನಿಮ್ಮ ಬೆಂಬಲವನ್ನು ನಿರೀಕ್ಷಿಸುತ್ತೇನೆ ಎಂದು ತಿರುಗೇಟು ನೀಡಿದ್ದಾರೆ.

ಆದರೆ ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್ ಮಾಡಿರುವ ವೀಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದಲ್ಲಿ, ಇದು ನಿರಂತರವಾಗಿ ಕಸರತ್ತು ನಡೆಸುವ ವ್ಯಕ್ತಿಯ ಕಸರತ್ತು ಅಲ್ಲ ಎಂಬ ಅನುಮಾನ ಮೂಡುವಂತೆ ವೀಡಿಯೋದಲ್ಲಿ ದೃಶ್ಯಗಳು ಸೆರೆಯಾಗಿವೆ. ಟ್ರ್ಯಾಕ್​​ ಮೇಲೆ ನಡೆಯುವ ಮಾದರಿಯಲ್ಲಿ ನಡೆಯುವ ಮೋದಿಯವರು ನಿಗದಿತ ಸ್ಥಳದಲ್ಲಿ ಪಾದಗಳನ್ನು ಊರುವ ಬದಲು ಹಿಂದೆ – ಮುಂದೆ ಹೆಜ್ಜೆಗಳನ್ನು ಇಡುತ್ತಿರುವುದು ಕಂಡು ಬಂದಿದೆ.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *