4ನೇ ರಷ್ಯಾ ಪ್ರವಾಸದಲ್ಲಿರುವ ಪ್ರಧಾನಿ ಮೋದಿ: ಭೇಟಿ ಹಿಂದಿದೆ ಅನೇಕ ಲೆಕ್ಕಾಚಾರ

4ನೇ ರಷ್ಯಾ ಪ್ರವಾಸದಲ್ಲಿರುವ ಪ್ರಧಾನಿ ಮೋದಿ
ರಷ್ಯಾದ ಸೋಚಿಯಲ್ಲಿ ಅಧ್ಯಕ್ಷ ಪುಟಿನ್ ಭೇಟಿ
ಅನೌಪಚಾರಿಕ ಸಭೆ ನಡೆಸಲಿರುವ ಉಭಯ ನಾಯಕರು
ಚೀನಾ – ಅಮೆರಿಕ ದೇಶಗಳ ಪ್ರಾಬಲ್ಯಕ್ಕೆ ತಿರುಗೇಟು ನೀಡಲು ತಂತ್ರ

ಸೋಚಿ: ಪ್ರಧಾನಿ ನರೇಂದ್ರ ಮೋದಿ ಇಂದು ರಷ್ಯಾ ಪ್ರವಾಸದಲ್ಲಿದ್ದಾರೆ. ಜಾಗತಿಕ ಮಟ್ಟದಲ್ಲಿ ಆಗುತ್ತಿರುವ ವ್ಯಾವಹಾರಿಕ ಬದಲಾವಣೆ ಮತ್ತು ಉದ್ಯಮ ಸಾಮ್ರಾಜ್ಯದ ವಿಸ್ತರಣೆಗಳ ಹಿನ್ನೆಲೆಯಲ್ಲಿ ಎರಡೂ ರಾಷ್ಟ್ರಗಳ ನಾಯಕರ ಭೇಟಿ ತೀವ್ರ ಕುತೂಹಲ ಕೆರಳಿಸಿದೆ.

ಪ್ರಧಾನಿ ನರೇಂದ್ರ ಮೋದಿ 4ನೇ ಬಾರಿ ರಷ್ಯಾ ಪ್ರವಾಸ ನಡೆಸಿದ್ದಾರೆ. ಇಂದು ಅನೌಪಚಾರಿಕ ಸಭೆಯಲ್ಲಿ ಭಾಗವಹಿಸಿದ್ದ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪರಸ್ಪರರನ್ನು ಹೊಗಳಿಕೊಂಡರು. ಶಾಂಘೈ ಸಹಕಾರ ಸಂಸ್ಥೆಯಲ್ಲಿ ಭಾರತಕ್ಕೆ ಖಾಯಂ ಸದಸ್ಯತ್ವ ಸಿಗುವ ವಿಷಯಕ್ಕೆ ಸಂಬಂಧಿಸಿದಂತೆ ರಷ್ಯಾ ಮಹತ್ವದ ಪಾತ್ರ ನಿರ್ವಹಿಸಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಅಲ್ಲದೇ, ರಷ್ಯಾ ದೀರ್ಘ ಕಾಲದಿಂದ ಭಾರತ ಸ್ನೇಹ ರಾಷ್ಟ್ರವಾಗಿದೆ. ಅನೌಪಚಾರಿಕ ಸಭೆ ನಡೆಸಲು ಅವಕಾಶ ನೀಡಿದ ಪುಟಿನ್ ಅವರಿಗೆ ಧನ್ಯವಾದಗಳು. ಇದರಿಂದ ಭಾರತ ಮತ್ತು ರಷ್ಯಾದ ಸಂಬಂಧ ಇನ್ನಷ್ಟು ವೃದ್ಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಷ್ಯಾದ ಸೋಚಿಯಲ್ಲಿ ಭೇಟಿಯಾದ ಉಭಯ ನಾಯಕರ ಭೇಟಿ ಅನೇಕ ನಿಟ್ಟಿನಲ್ಲಿ ಮಹತ್ವ ಪಡೆದುಕೊಂಡಿದೆ. ಅಮೆರಿಕ ಮತ್ತು ಚೀನಾ ರಾಷ್ಟ್ರಗಳ ವ್ಯಾವಹಾರಿಕ ಪ್ರಾಬಲ್ಯದ ನಡುವಿನ ಪೈಪೋಟಿ ಹಾಗೂ ಅಮೆರಿಕದೊಂದಿಗೆ ಭಾರತ ವ್ಯಾವಹಾರಿಕ ಸಂಬಂಧಗಳನ್ನು ಬಲಪಡಿಸುವಲ್ಲಿ ಎದುರಾಗಿರುವ ಹಿನ್ನಡೆಯ ಕಾರಣದಿಂದಾಗಿ ಪ್ರಧಾನಿ ಮೋದಿ, ರಷ್ಯಾದೊಂದಿಗೆ ಸಂಬಂಧ ಅಭಿವೃದ್ಧಿ ಪಡಿಸಲು ಮುಂದಾಗಿದ್ದಾರೆ.

ಇನ್ನು ಅರುಣಾಚಲ ಪ್ರದೇಶ ಮತ್ತು ಟಿಬೇಟ್​ಗೆ ಹೊಂದಿಕೊಂಡಿರುವ ಸ್ಥಳದಲ್ಲಿ ಬರೋಬ್ಬರಿ 60 ಬಿಲಿಯನ್ ಅಮೆರಿಕನ್ ಡಾಲರ್ ಮೊತ್ತದ ಚಿನ್ನ ಮತ್ತು ಬೆಳ್ಳಿಯ ಗಣಿಗಳನ್ನು ಚೀನಾ ಪತ್ತೆ ಹಚ್ಚಿದ್ದು, ಗಣಿಗಾರಿಕೆ ನಡೆಸಲು ತೀರ್ಮಾನಿಸಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಚೀನಾ ವಿದೇಶಾಂಗ ಇಲಾಖೆ ವಕ್ತಾರ ಲು ಕಾಂಗ್, ಗಣಿ ಇರುವ ಪ್ರದೇಶ ಸಂಪೂರ್ಣವಾಗಿ ಚೀನಾ ವ್ಯಾಪ್ತಿಗೆ ಒಳಪಡುತ್ತದೆ ಎಂದಿದ್ದಾರೆ. ಚೀನಾ ಈ ಪ್ರದೇಶದಲ್ಲಿ ಭೌಗೋಳಿಕ ಮತ್ತು ವೈಜ್ಞಾನಿಕ ಸಂಶೋಧನೆಗಳನ್ನು ನಡೆಸಿದ್ದು, ಗಣಿಗಾರಿಕೆಗೆ ಸಂಪೂರ್ಣ ಸಿದ್ಧತೆ ನಡೆಸಿದೆ.

ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ದೀರ್ಘ ಕಾಲದ ಮಿತ್ರ ರಾಷ್ಟ್ರದ ಜೊತೆಗೆ ಅನೌಪಚಾರಿಕ ಸಭೆ ನಡೆಸಲು ಪ್ರಧಾನಿ ನರೇಂದ್ರ ಮೋದಿ ಮುಂದಾಗಿದ್ದಾರೆ. ಆರ್ಥಿಕವಾಗಿ ಸಬಲತೆಯ ವಿಷಯದಲ್ಲಿ ಬೃಹತ್ ರಾಷ್ಟ್ರಗಳಾದ ಅಮೆರಿಕ – ಚೀನಾ ನಡುವಿನ ಪೈಪೋಟಿ ವೇಳೆ ಮತ್ತೆರಡು ಬಲಿಷ್ಠ ರಾಷ್ಟ್ರಗಳಾದ ರಷ್ಯಾ ಮತ್ತು ಭಾರತ ನಾಯಕರ ಭೇಟಿ ತೀವ್ರ ಕುತೂಹಲ ಕೆರಳಿಸಿದೆ.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *