ನರೇಂದ್ರ ಮೋದಿ 4 ವರ್ಷದ ಹಿಂದೆ ಹೇಳಿದ್ದೇನು? ಮಾಡಿದ್ದೇನು: ಪ್ರಧಾನಿ ಪ್ರೊಗ್ರೆಸ್ ಕಾರ್ಡ್​​

2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಶರವೇಗದಲ್ಲಿ ದೇಶವನ್ನು ಸುತ್ತಿ ಪಕ್ಷವನ್ನು ಅಧಿಕಾರಕ್ಕೆ ತರಲು ಅಪಾರವಾಗಿ ಶ್ರಮಿಸಿದರು. 2014ರ ಲೋಕಸಭೆ ಚುನಾವಣೆ ವೇಳೆ ಅವರು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಜಮ್ಮು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸುತ್ತಿದರು. ಬಿಜೆಪಿಯ ಅಭೂತಪೂರ್ವ ಗೆಲುವಿನಲ್ಲಿ ಅನೇಕರು ಪಾತ್ರ ವಹಿಸಿದಂತೆ ಅವರು ಚುನಾವಣಾ ಪ್ರಚಾರ ಸಭೆಗಳಲ್ಲಿ ಬಳಸಿದ ಸೋಗನ್​​ಗಳು ಕೂಡ ಪ್ರಮುಖ ಪಾತ್ರ ವಹಿಸಿದವು.

ಇವುಗಳ ಪೈಕಿ ಬಹು ಜನಪ್ರಿಯವಾದ ಹೇಳಿಕೆಯೆ ಅಬ್​​ ಕಿ ಬಾರ್ ಮೋದಿ ಸರ್ಕಾರ್ ( ಈ ಬಾರಿ ಮೋದಿ ಸರ್ಕಾರ). ಮೋದಿಯವರು 2014ರಲ್ಲಿ ಸಮೃದ್ಧ ಭಾರತದ ಕನಸು, ಉದ್ಯೋಗ ಸೃಷ್ಟಿಯ ಭರವಸೆ, ದೇಶವನ್ನು ಆಮೂಲಾಗ್ರವಾಗಿ ಅಭಿವೃದ್ಧಿಪಡಿಸುವ ಭರವಸೆಯೊಂದಿಗೆ ಅಚ್ಚೇ ದಿನ್​ (ಒಳ್ಳೆಯ ದಿನಗಳು)ಗಳನ್ನು ತರುವುದಾಗಿ ಭರವಸೆಗಳ ಮೂಟೆಯನ್ನೇ ದೇಶದ ಮತದಾರರ ಮೇಲೆ ಹೊರಿಸಿದ್ದರು. ಇದರ ಭಾರವನ್ನು ಹೊತ್ತ ದೇಶದ ಮತದಾರರು ಮೋದಿಯವರನ್ನು ಯಾರೂ, ಯಾವ ಚುನಾವಣಾ ಪೂರ್ವ ಮತ್ತು ಚುನಾವಣೋತ್ತರ ಸಮೀಕ್ಷೆಗಳೂ ನಿರೀಕ್ಷಿಸದಷ್ಟು ಭಾರೀ ಅಂತರದ ಗೆಲುವನ್ನು ಕೊಡುಗೆಯಾಗಿ ಕೊಟ್ಟಿದ್ದರು.

ದೇಶದ ಮತದಾರರಲ್ಲಿ ಕನಸನ್ನು ಬಿತ್ತಿದ್ದ ಮೋದಿಯವರು 2014ರ ಮೇ 26ರಂದು ದೇಶದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಅವರ ಆಡಳಿತಕ್ಕೆ 4 ವರ್ಷಗಳು ತುಂಬಿವೆ. ಇಷ್ಟು ದಿನಗಳ ಕಾಲ ಬಹುತೇಕ ಮಾಧ್ಯಮಗಳು ಮೋದಿಯವರ ಪ್ರೊಗ್ರೆಸ್ ಕಾರ್ಡ್​​​ ಕಡೆಗೆ ಒತ್ತು ನೀಡಿಲ್ಲ ಎಂದೇ ಹೇಳಬಹುದು. ಬೆರಳೆಣಿಕೆಯಷ್ಟು ಇಂಗ್ಲಿಷ್, ಹಿಂದಿ ಮಾಧ್ಯಮಗಳನ್ನು ಹೊರತುಪಡಿಸಿದರೆ, ಕನ್ನಡದಲ್ಲಂಥೂ ಇಂಥ ಕೆಲಸ ನಡೆದೇ ಇಲ್ಲ ಎನ್ನಬಹುದು. ಇದಕ್ಕೆ ಕೆಲವು ಅಪವಾದವೂ ಇದ್ದು, ಅಲ್ಲಲ್ಲಿ ಕೆಲವು ಬಿಡಿ ಲೇಖನಗಳು ಮಾತ್ರ ಪ್ರಕಟವಾಗಿವೆ.

ವರ್ಷಕ್ಕೆ ಒಂದು ಕೋಟಿ ಉದ್ಯೋಗ ಸೃಷ್ಟಿಸುವ ಮೂಲಕ ನಿರುದ್ಯೋಗ ನಿವಾರಣೆ: ನಡೆ ಬೇರೆ ನುಡಿ ಬೇರೆ

ಇದು ನರೇಂದ್ರ ಮೋದಿಯವರ ಅತ್ಯಂತ ಪ್ರಮುಖ ಭರವಸೆಗಳ ಪೈಕಿ ಒಂದಾಗಿತ್ತು. ಆದರೆ, ಅವರ ಆಡಳಿತಾವಧಿಯ 4 ವರ್ಷಗಳಲ್ಲಿ ಭರವಸೆ ನೀಡಿದಷ್ಟು ಪ್ರಮಾಣದ ಉದ್ಯೋಗವನ್ನು ಸೃಷ್ಟಿಸುವಲ್ಲಿ ಪ್ರಧಾನಿ ವಿಫಲರಾಗಿದ್ದಾರೆ. ವಾಸ್ತವದಲ್ಲಿ ಮೋದಿ ಪ್ರತಿ ವರ್ಷ ಕೇವಲ 2.05 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವಲ್ಲಿ ಮಾತ್ರ ಯಶಸ್ವಿಯಾಗಿವೆ ಎಂಬುದು ಸರ್ಕಾರ ನೀಡಿರುವ ಅಂಕಿಅಂಶಗಳಿಂದಲೇ ಬಹಿರಂಗವಾಗಿದೆ. ಇನ್ನೊಂದು ಆಘಾತಕಾರಿ ಸಂಗತಿ ಎಂದರೆ, 2014ರಲ್ಲಿ ನಿರುದ್ಯೋಗದ ಪ್ರಮಾಣ ಶೇ. 3.41ರಷ್ಟು ಇದ್ದರೆ, ಮೋದಿಯವರ 4 ವರ್ಷದ ಆಡಳಿತದ ಅವಧಿಯ ನಂತರ 2018ರಲ್ಲಿ ಇದರ ಪ್ರಮಾಣ ಶೇ. 6.23ಕ್ಕೆ ಏರಿಕೆಯಾಗಿದೆ.

ಚುನಾವಣೆ ವೇಳೆ ನೀಡಿದ್ದ ಭರವಸೆಯ ಪ್ರಕಾರ, ಮೋದಿ ಸೃಷ್ಟಿಸಬೇಕಿದ್ದ ಉದ್ಯೋಗಗಳ ಸಂಖ್ಯೆ 4 ಕೋಟಿ ಎನ್ನುವುದು ಶಾಲಾ ವಿದ್ಯಾರ್ಥಿಗಳಿಗೂ ಅರಿವಾಗುತ್ತದೆ. ಆದರೆ, ವಾಸ್ತವದಲ್ಲಿ ಕೇಂದ್ರ ಸರ್ಕಾರ ಕೇವಲ 8.23 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವುದರಲ್ಲಿ ಮಾತ್ರ ಯಶಸ್ವಿಯಾಗಿದೆ. ಒಂದು ವೇಳೆ ಕೇಂದ್ರ ಸರ್ಕಾರ ಇದೇ ವೇಗದಲ್ಲಿ ಉದ್ಯೋಗ ಸೃಷ್ಟಿಸುತ್ತಿದ್ದ ಪಕ್ಷದಲ್ಲಿ 2025ರ ವೇಳೆಗೆ ಕನಿಷ್ಠ 80 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಸಾಧ್ಯತೆ ಇದೆ ಎಂದು ಅಂತಾರಾಷ್ಟ್ರೀಯ ಕಾರ್ಮಿ ಸಂಘಟನೆಯ ಅಧ್ಯಯನಗಳು ಹೇಳುತ್ತವೆ.

ಇಂಧನ ಬೆಲೆ ಇಳಿಕೆ: ಭ್ರಮೆ ಮತ್ತು ವಾಸ್ತವಗಳ ಸುತ್ತ ಇಣುಕು ನೋಟ

ದೇಶದಲ್ಲಿ ಎರಡು ಅವಧಿಗೆ ಆಳ್ವಿಕೆ ನಡೆಸಿದ್ದ ಯುಪಿಎ ಸರ್ಕಾರದ ಅವಧಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಂಧನ ಬೆಲೆ ಏರಿಕೆ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿತ್ತು. ಇದರ ಪರಿಣಾಮದಿಂದಾಗಿ ದೇಶೀ ಮಾರುಕಟ್ಟೆಯಲ್ಲಿ ಇಂಧನ, ಎಲ್​​ಪಿಜಿ ದರ ಏರಿಕೆಯಾಗಿತ್ತು. ಇದರ ಪರಿಣಾಮದಿಂದಾಗಿ ದಿನ ಬಳಕೆಯ ವಸ್ತುಗಳ ಬೆಲೆಗಳಲ್ಲಿ ಕೂಡ ಏರಿಕೆ ಕಂಡುಬಂದಿತ್ತು.

2014ರ ಲೋಕಸಭೆ ಚುನಾವಣೆಯಲ್ಲಿ ಗುಜರಾತ್ ಸಿಎಂ ಆಗಿದ್ದ ನರೇಂದ್ರ ಮೋದಿ ಮತ್ತು ಬಿಜೆಪಿ ನಾಯಕರು ಬೆಲೆ ಏರಿಕೆ ವಿಷಯವನ್ನೇ ಇನ್ನೊಂದು ಪ್ರಮುಖ ವಿಷಯವನ್ನಾಗಿಸಿಕೊಂಡು ಪ್ರಚಾರ ನಡೆಸಿದ್ದರು. ಇದಕ್ಕೂ ಮುನ್ನ ದೇಶಾದ್ಯಂತ ಬಿಜೆಪಿ ಕಾರ್ಯಕರ್ತರು ಮತ್ತು ನಾಯಕರು ಹಾದಿಬೀದಿಗಳಲ್ಲಿ ಇಂಧನ ಬೆಲೆ ಏರಿಕೆ ಮತ್ತು ಎಲ್​ಪಿಜಿ ಬೆಲೆ ಏರಿಕೆ ವಿರೋಧಿಸಿ, ರಸ್ತೆಗಳಲ್ಲೇ ಅಡಿಗೆ ಮಾಡುವ, ಎಲ್​ಪಿಜಿ ಸಿಲಿಂಡರ್ ಪ್ರದರ್ಶಿಸುವ ಮೂಲಕ ದೇಶದ ಗಮನ ಸೆಳೆಯಲು ಯತ್ನಿಸಿದ್ದರು.

ವಾಸ್ತವದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ 2018ರಲ್ಲಿ ಇಂಧನ ಬೆಲೆ ಗಗನಕ್ಕೇರಿತು. ಮಹತ್ವದ ಸಂಗತಿ ಎಂದರೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಂಧನ ಬೆಲೆ ಇಳಿಕೆಯಾಗಿದ್ದರೂ ಇದರ ಲಾಭ ಭಾರತೀಯರಿಗೆ ಸಿಕ್ಕಿಲ್ಲ. ಇಂಧನದ ಮೂಲದಿಂದಲೇ ಭಾರತ ಸರ್ಕಾರ ಪ್ರತಿ ವರ್ಷ ಸರಾಸರಿ 4.5 ಲಕ್ಷ ಕೋಟಿ ರೂ.ಗಳಷ್ಟು ಬೃಹತ್ ಪ್ರಮಾಣದ ಆದಾಯವನ್ನು ಗಳಿಸಿದೆ. ಆದರೆ, ಇದರ ಲಾಭಾಂಶವನ್ನು ದೇಶದ ಜನಸಾಮಾನ್ಯರಿಗೆ ವರ್ಗಾಯಿಸಲು ಕೇಂದ್ರ ಸರ್ಕಾರ ಮುಂದಾಗಿಲ್ಲ. ಇದರ ಪರಿಣಾಮದಿಂದ ದೇಶಾದ್ಯಂತ ಇಂಧನ ಬೆಲೆ 84 ರೂ. ಆಸುಪಾಸು ತಲುಪಿಬಿಟ್ಟಿತ್ತು. ಇದೀಗ ಇದರ ಬೆಲೆಯಲ್ಲಿ ತುಸು ಇಳಿಕೆ ಕಂಡು ಬಂದಿದೆ. ಆದರೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಂಧನ ಬೆಲೆ ಇಳಿಕೆಯಾದರೂ ದೇಶೀ ಬೆಲೆಯಲ್ಲಿ ಏಕೆ ದರ ಇಳಿದಿಲ್ಲ? ಇದರ ಲಾಭಾಂಶ ಎಲ್ಲಿ ಹೋಯಿತು? ಎಂಬ ಪ್ರಶ್ನೆಗಳಿಗೆ ಕೇಂದ್ರ ಸರ್ಕಾರ ಮತ್ತು ಮೋದಿ ಬೆಂಬಲಿಗರು ಉತ್ತರ ಕೊಡಬೇಕಿದೆ.

ಗರಿಷ್ಠ ಮುಖ ಬೆಲೆಯ ನೋಟುಗಳ ನಿಷೇಧ: ಹೇಳಿದ್ದು ಒಂದು, ಆಗಿದ್ದು ಹನ್ನೊಂದು!

ಬೆಟ್ಟ ಅಗೆದು ಇಲಿ ಹಿಡಿದ ಕತೆಯನ್ನು ನೀವೆಲ್ಲ ಕೇಳಿರುತ್ತೀರಿ. ಪ್ರಧಾನಿ ಇಂಥ ಸಾಹಸದ ಮೂಲಕ ದೇಶದ 125 ಕೋಟಿ ಜನರನ್ನು ಇಕ್ಕಟ್ಟಿಗೆ ಸಿಲುಕಿಸಲು ಕಾರಣವಾಗಿದ್ದು, ಗರಿಷ್ಠ ಮುಖಬೆಲೆಯ ನೋಟುಗಳ ನಿಷೇಧ ನಿರ್ಧಾರದ ಮೂಲಕ. 2016 ನವೆಂಬರ್ 8ರಂದು ರಾತ್ರಿ 8 ಗಂಟೆಗೆ ಮೋದಿಯವರು ನೋಟು ನಿಷೇಧ ನಿರ್ಧಾರವನ್ನು ಸುದ್ದಿ ಗೋಷ್ಠಿಯ ಮೂಲಕ ಘೋಷಿಸಿದರು. ಈ ವೇಳೆ ನೋಟು ನಿಷೇಧಕ್ಕೆ ಅವರು ಪ್ರಮುಖವಾಗಿ ಮೂರು ಕಾರಣಗಳನ್ನು ನೀಡಿದ್ದರು. ಭ್ರಷ್ಟಾಚಾರ ನಿಯಂತ್ರಣ, ಕಪ್ಪು ಹಣಕ್ಕೆ ತಡೆ, ಭಯೋತ್ಪಾದನೆ ತಡೆಗಾಗಿ ತಾವು ನೋಟು ನಿಷೇಧ ನಿರ್ಧಾರ ಕೈಗೊಂಡಿದ್ದಾಗಿ ಹೇಳಿಕೊಂಡಿದ್ದರು.

ತಮ್ಮ ನಿರ್ಧಾರದ ಮೂಲಕ ದೇಶದಲ್ಲಿ ಚಲಾವಣೆಯಲ್ಲಿದ್ದ 500 ಮತ್ತು 1000 ರೂ. ಮುಖಬೆಲೆಯ 16,000 ಕೋಟಿ ರೂ. ಮೊತ್ತದ ಹಣವನ್ನು ನಿಷೇಧಿಸಿಬಿಟ್ಟರು. ಈ ಮೂಲಕ ಜನವರಿ – ಏಪ್ರಿಲ್ 2017ರ ಅವಧಿಯಲ್ಲಿ ಬರೋಬ್ಬರಿ 15 ಲಕ್ಷ ನಾಗರಿಕರು ಉದ್ಯೋಗ ಕಳೆದುಕೊಂಡರು. ಇನ್ನೊಂದು ಅಚ್ಚರಿಯ ಸಂಗತಿ ಎಂದರೆ, ನಿಷೇಧಿತ ನೋಟುಗಳ ಪೈಕಿ ಶೇ. 99ರಷ್ಟು ಆರ್​ಬಿಐಗೆ ಮರಳಿಬಿಟ್ಟವು. ಹೊಸ ನೋಟುಗಳ ಮುದ್ರಣಕ್ಕೆ ಕೇಂದ್ರ ಸರ್ಕಾರ 21,000 ಕೋಟಿ ರೂ.ಗಳನ್ನು ವ್ಯಯಿಸುವ ದುಃಸ್ಥಿತಿಗೆ ದೇಶವನ್ನು ತಳ್ಳಿದರು. ಇದರಿಂದ ಆರ್​​ಬಿಐ ಹಳೆಯ ನೋಟುಗಳನ್ನು ಎಣಿಸುವುದೋ ಅಥವಾ ಹೊಸ ನೋಟುಗಳನ್ನು ಮುದ್ರಿಸುವುದೋ ಎಂಬ ಗೊಂದಲಕ್ಕೆ ಬಿದ್ದಿತ್ತು.

ಗರಿಷ್ಠ ಮುಖಬೆಲೆಯ ನೋಟುಗಳ ನಿಷೇಧ ಪ್ರಹಸನದಿಂದಾಗಿ ದೇಶದ ಜಿಡಿಪಿ ದರ ಶೇ. 7.93ರಿಂದ ಶೇ. 6.50ಗೆ ಕುಸಿಯಿತು. ದೇಶದ ಒಂದು ಅಂಶ ಜಿಡಿಪಿ 1.5 ಲಕ್ಷ ಕೋಟಿ ರೂ.ಗೆ ಸಮ ಎಂಬುದು ಆರ್ಥಿಕ ತಜ್ಞರ ಅಭಿಪ್ರಾಯ. ಈ ಲೆಕ್ಕದ ಪ್ರಕಾರ, ಭವಿಷ್ಯದಲ್ಲಿ ಭಾರತದ ಆರ್ಥಿಕತೆಯನ್ನು ದುರವಸ್ಥೆಗೆ ತಳ್ಳಿದ ಅತ್ಯಂತ ಕೆಟ್ಟ ನಿರ್ಧಾರ ಎಂದೇ ನೋಟು ನಿಷೇಧವನ್ನು ವ್ಯಾಖ್ಯಾನಿಸಬೇಕಾಗುತ್ತದೆ. ಇನ್ನು ಭ್ರಷ್ಟಾಚಾರ ನಿಯಂತ್ರಣ ಮತ್ತು ಭಯೋತ್ಪಾದನೆ ಎಂಬ ಎರಡು ಭರವಸೆಗಳು ಕೂಡ ಕೇವಲ ಭ್ರಮೆಗಳಾಗಿ ಉಳಿದವು.

ಸ್ವತಃ ಬ್ಯಾಂಕ್ ಅಧಿಕಾರಿಗಳು ಉದ್ಯಮಿಗಳು ಮತ್ತು ಉಳ್ಳವರಿಗಾಗಿ ಹಳೆಯ ನೋಟುಗಳನ್ನು ಪಡೆದು ಹೊಸ ನೋಟುಗಳನ್ನು ನೀಡುವ ಅವ್ಯವಹಾರ, ಭ್ರಷ್ಟಾಚಾರಗಳಲ್ಲಿ ಸಿಲುಕಿ ಬಂಧನಕ್ಕೆ ಒಳಗಾದರು. ಇನ್ನು ಗಡಿಯಾಚೆಗಿನ ಭಯೋತ್ಪಾದನೆ ನಿಯಂತ್ರಣವಾಗುವುದಿರಲಿ, ಬದಲಾಗಿ ಪಾಕ್ ಯೋಧರು ಮತ್ತು ಭಯೋತ್ಪಾದಕರ ಅಟ್ಟಹಾಸದಲ್ಲಿ ಏರಿಕೆಯಾಗಿದೆ. ನೋಟು ನಿಷೇಧಿಸಿದ ಕೆಲವೇ ದಿನಗಳಲ್ಲಿ ಹೊಸ ಕರೆನ್ಸಿಯ ನಕಲಿ ನೋಟುಗಳು ಕೂಡ ಪತ್ತೆಯಾದವು. ಈ ಮೂಲಕ ಉದ್ದೇಶಿತ ಯಾವ ಗುರಿಯೂ ನೋಟು ನಿಷೇಧದಿಂದ ಈಡೇರಿಲ್ಲ ಎನ್ನುವುದು ಸಾಬೀತಾಗಿದೆ.

ಇದರೊಂದಿಗೆ ಹಳೆಯ ನೋಟುಗಳನ್ನು ಬದಲಿಸಿಕೊಳ್ಳಲು ದೇಶಾದ್ಯಂತ ಬಡವರು, ಮಹಿಳೆಯರು, ಮುದುಕರು ಮತ್ತು ಇನ್ನು ಕೆಲವಡೆ ಶ್ರೀಮಂತರ ದಲ್ಲಾಳಿಗಳು ಸರದಿ ಸಾಲಿನಲ್ಲಿ ನಿಂತರು. ಇವರ ಪೈಕಿ ಅಮಾಯಕರಾದ ನೂರಕ್ಕೂ ಹೆಚ್ಚು ಜನ ಬಲಿಯಾದರು. ಈ ಯಾವನ ನರಳಿಕೆಯೂ ದೆಹಲಿ ದೊರೆಯಾದ, ತಮ್ಮನ್ನು ತಾವು ಚೌಕಿದಾರ, ಪ್ರಧಾನ ಸೇವಕ ಎಂದು ಕರೆದುಕೊಳ್ಳುವ ಮೋದಿಯವರ ಕಿವಿಗೆ ತಲುಪಲೇ ಇಲ್ಲ. ಅವರು ನೋಟು ನಿಷೇಧಿಸಿದ 50 ದಿನಗಳು ಮತ್ತು ನಂತರ ವಿದೇಶ ಪ್ರವಾಸದ ಯೋಜನೆಗಳಲ್ಲಿ ಬಿಜಿಯಾಗಿದ್ದರೋ ಎಂಬ ಅನುಮಾನ ಮೂಡಿದ್ದಂಥೂ ಸುಳ್ಳಲ್ಲ.

ಅಧಿಕಾರಕ್ಕೆ ಬಂದರೆ ಭ್ರಷ್ಟಾಚಾರ ನಿರ್ಮೂಲನೆ ಮಾಡುವುದಾಗಿ ಹೇಳಿದ್ದ ಮೋದಿ: ಆಗಿದ್ದೇನು?

2014ರ ಚುನಾವಣಾ ಪ್ರಚಾರ ವೇಳೆ ಮೋದಿಯವರು ನೀಡಿದ ಭರವಸೆಗಳ ಪೈಕಿ ಭ್ರಷ್ಟಾಚಾರ ನಿಯಂತ್ರಣ ಹೇಳಿಕೆ ಕೂಡ ಪ್ರಾಮುಖ್ಯತೆ ಪಡೆದಿತ್ತು. ಇನ್ನೊಂದು ಭರವಸೆಯ ಪ್ರಕಾರ, ವಿದೇಶದಲ್ಲಿರುವ ಕಪ್ಪು ಹಣವನ್ನು ಕೂಡ ತರಲು ಮೋದಿ ಯೋಜನೆ ರೂಪಿಸುವವರಿದ್ದರು. ಆದರೆ, 2014ರಲ್ಲಿ ಬ್ಯಾಂಕ್ ಅವ್ಯವಹಾರ ಪ್ರಕರಣಗಳಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದ್ದು, ವಸೂಲಾಗದ ಸಾಲದ ಪ್ರಮಾಣ 2.4 ಲಕ್ಷ ಕೋಟಿಗೆ ಏರಿಕೆಯಾಯಿತು. 2017ರ ಹೊತ್ತಿಗೆ 9.5 ಕೋಟಿ ರೂ. ನಷ್ಟವನ್ನು ಬ್ಯಾಂಕ್​ಗಳು ಅನುಭವಿಸಿದವು. ಇದರೊಂದಿಗೆ ಉದ್ಯಮಿಗಳಾದ ವಿಜಯ್ ಮಲ್ಯ ಮತ್ತು ನೀರವ್ ಮೋದಿ ಸಾವಿರಾರು ಕೋಟಿ ರೂ. ಸಾಲ ಮಾಡಿ ದೇಶ ತೊರೆದರು. ದೇಶದ ಚೌಕೀದಾರ (ಕಾವಲುಗಾರ)ನಂತೆ ಕೆಲಸ ಮಾಡುವುದಾಗಿ ಹೇಳಿದ ಮೋದಿಯವರ ಅವಧಿಯಲ್ಲಿ ಒಟ್ಟಾರೆ, 17,789 ಕೋಟಿ ರೂ. ಬ್ಯಾಂಕ್​ಗಳಿಗೆ ನಷ್ಟವಾಗಿದೆ.

ತಿನ್ನುವುದಿಲ್ಲ, ತಿನ್ನಲು ಬಿಡುವುದಿಲ್ಲ ಎಂದಿದ್ದ ಮೋದಿ ಮಾಡಿದ್ದೇನು?

ಪ್ರಧಾನಿ ನರೇಂದ್ರ ಮೋದಿಯವರ ಸಮರ್ಥಕರ ಪ್ರಕಾರ, ಅವರಿಗೆ ಯಾವುದೇ ಮುಲಾಜು ಇಲ್ಲ. ಸ್ವತಃ ಮೋದಿಯವರೇ ನಾನು ಲಂಚವನ್ನು ತಿನ್ನುವುದಿಲ್ಲ, ಲಂಚ ತಿನ್ನಲು ಬಿಡುವುದಿಲ್ಲ ಎಂದಿದ್ದರು. ಇದನ್ನೇ ಇದುವರೆಗೆ ಮೋದಿ ಅನುಯಾಯಿಗಳು ಆಗಾಗ ಉಲ್ಲೇಖಿಸುತ್ತಾರೆ. ಆದರೆ, ವಾಸ್ತವ ಸಂಗತಿಯೇ ಬೇರೆ ಇದೆ. ನೀರವ್ ಮೋದಿಯವರು ಪಂಜಾಬ್ ನ್ಯಾಷನಲ್ ಬ್ಯಾಂಕ್​​ನಿಂದ 13,000 ಕೋಟಿ ರೂ. ಸಾಲ ಪಡೆದು, ಪಾವತಿಸದೇ ಪರಾರಿಯಾಗಿದ್ದಾರೆ.

ಪ್ರಬಲ ಲೋಕಪಾಲ ಮಸೂದೆ ಕತೆ ಏನಾಯಿತು?

ಇನ್ನು ವಿಪಕ್ಷದಲ್ಲಿದ್ದ ಅವಧಿ ಮತ್ತು 2014ರ ಲೋಕಸಭೆ ಚುನಾವಣೆ ಪ್ರಚಾರದ ವೇಳೆ ಪ್ರಬಲ ಲೋಕಪಾಲ ಬಿಲ್ ಕುರಿತು ಮಾತನಾಡಿದ್ದ, ಬೆಂಬಲಿಸಿದ್ದ ಬಿಜೆಪಿಗರಾಗಲಿ, ಪ್ರಧಾನಿ ಮೋದಿಯವರಾಗಲಿ ಇದುವರೆಗೆ ಲೋಕಪಾಲ ಮಸೂದೆ ಜಾರಿಗೆ ತರುವ ಇಚ್ಛಾಶಕ್ತಿ ತೋರಿಸಿಲ್ಲ. ಬದಲಾಗಿ ಸುಪ್ರೀಂ ಕೋರ್ಟ್​​ನಲ್ಲಿ ಅಧಕೃತ ವಿರೋಧ ಪಕ್ಷ ಲೋಕಸಭೆಯಲ್ಲಿ ಇಲ್ಲ ಎಂಬ ಕಾರಣ ಕೊಟ್ಟು, ಮಸೂದೆಯನ್ನು ನೆನೆಗುದಿಯಲ್ಲಿಟ್ಟ ಶ್ರೇಯಸ್ಸು ಮೋದಿ ಸರ್ಕಾರಕ್ಕೆ ಸಲ್ಲುತ್ತದೆ. ಇದುವರೆಗೆ ಲೋಕಪಾಲರ ನೇಮಕವನ್ನೂ ಮೋದಿಯವರು ಮಾಡಿಲ್ಲ. ಈ ಮೂಲಕ ಭ್ರಷ್ಟಾಚಾರದ ವಿರುದ್ಧ ಮಾತನಾಡಿದ್ದ ಮೋದಿ ಕೈಕಟ್ಟಿ ಕುಳಿತಿದ್ದಾರೆ.

ಮೋದಿ ಅವಧಿಯಲ್ಲಿ ಸಾಲ ಮಾಡಿ ಪರಾರಿಯಾದ ಉದ್ಯಮಿಗಳು: ಹರಸಾಹಸ ಪಡುತ್ತಿರುವ ಸರ್ಕಾರ

ನೀರವ್ ಮೋದಿ, ವಿಜಯ್ ಮಲ್ಯ, ಲಲಿತ್ ಮೋದಿಯವರಂಥೆ ಹಗರಣಗಳಲ್ಲಿ ಸಿಲುಕಿ ಒಟ್ಟು 31 ಹಗರಣಗಳಿಗೆ ಮೋದಿ ಆಡಳಿತ ಸಾಕ್ಷಿಯಾಗಿದೆ. ಇನ್ನು ಪನಾಮಾ ಪೇಪರ್ಸ್​​ ಲೀಕ್​ನಲ್ಲಿ ಭಾರತ ನಾಗರಿಕರ ಅದರಲ್ಲೂ ಸ್ವತಃ ಬಿಜೆಪಿ ನಾಯಕರು, ಬಾಲಿವುಡ್ ನಟರು ಸೇರಿದಂತೆ 500 ಪ್ರಭಾವಿಗಳ ದೊಡ್ಡ ಪಟ್ಟಿಯೇ ಇದೆ. ಆದರೆ, ಇದುವರೆಗೆ ಮೋದಿ ಸರ್ಕಾರ ಅಂಥವರ ವಿರುದ್ಧ ಯಾವುದೇ ಸಣ್ಣ ಕ್ರಮವನ್ನೂ ಕೈಗೊಂಡಿಲ್ಲ. ಬಾಯಿ ತೆರೆದರೆ ನೆರೆಯ ರಾಷ್ಟ್ರ ಪಾಕಿಸ್ತಾನದ ಮೇಲೆ ಗೂಬೆ ಕೂರಿಸುವ, ಬೈಯುವ ದೇಶಭಕ್ತರು ಇನ್ನೊಂದು ಮಹತ್ವದ ಸಂಗತಿಯನ್ನು ಮರೆತು ಬಿಡುತ್ತಾರೆ. ಇದೇ ಪನಾಮಾ ಪೇಪರ್ಸ್ ಲೀಕ್​​ನಲ್ಲಿ ಹೆಸರು ಇದೆ ಎಂಬ ಕಾರಣಕ್ಕೆ ಈಗಾಗಲೇ ನವಾಜ್ ಷರೀಫ್ ರಾಜೀನಾಮೆ ನೀಡಿ, ಮಾಜಿ ಪ್ರಧಾನಿಯಾಗಿ ವಿಚಾರಣೆ ಎದುರಿಸುತ್ತಿದ್ದಾರೆ. ಆದರೆ ಭಾರತದಲ್ಲಿ ಈ ಕುರಿತು ಯಾವುದೇ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವಲ್ಲಿ ಆಡಳಿತಾರೂಢ ಬಿಜೆಪಿ ಪಕ್ಷ ಮತ್ತು ಪ್ರಧಾನಿ ನರೇಂದ್ರ ಮೋದಿ ವಿಫಲರಾಗಿದ್ದಾರೆ.

ರಫೇಲ್ ಡೀಲ್​​ನಲ್ಲಿ ಅವ್ಯಹಾರದ ವಾಸನೆ!

ಇನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ರಫೇಲ್ ಯುದ್ಧ ವಿಮಾನ ಖರೀದಿಯ ಮೂಲಕ ದೇಶದ ಬೊಕ್ಕಸಕ್ಕೆ ಭಾರೀ ಮೊತ್ತದ ನಷ್ಟ ಉಂಟು ಮಾಡಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಆದರೆ, ಈ ಆರೋಪದ ಕುರಿತು ಸರ್ಕಾರ ಪ್ರತಿಕ್ರಿಯೆ ನೀಡುವ ಮುನ್ನವೇ ಫ್ರಾನ್ಸ್ ಮತ್ತು ರಿಲಯನ್ಸ್ ಪ್ರತಿಕ್ರಿಯಿಸಿವೆ. ಮಾನನಷ್ಟ ಮೊಕದ್ದಮೆ ಹೂಡುವುದಾಗಿ ರಿಲಯನ್ಸ್ ಬೆದರಿಕೆ ಒಡ್ಡಿದೆ. ಉದ್ದೇಶಿತ ರಫೇಲ್ ಡೀಲ್ 58,000 ಕೋಟಿ ರೂ. ಮೊತ್ತದ ಒಪ್ಪಂದವಾಗಿದೆ. ಈ ಕುರಿತು ಕಾಂಗ್ರೆಸ್, ರಫೇಲ್ ಯುದ್ಧ ವಿಮಾನ ಖರೀದಿಗೆ ಯುಪಿಎ ಅವಧಿಯಲ್ಲಿ ನಿಗದಿಗೊಳಿಸಿದ್ದಕ್ಕಿಂಥ ಮೂರು ಪಟ್ಟು ಹೆಚ್ಚಿನ ಮೊತ್ತವನ್ನು ಎನ್​ಡಿಎ ಸರ್ಕಾರ ನಿಗದಿಗೊಳಿಸಿದೆ ಎಂದು ಆರೋಪಿಸಿದೆ.

ವ್ಯಾಪಂ ಹಗರಣದ ಕುರಿತು ಮೌನಕ್ಕೆ ಜಾರಿದ ಪ್ರಧಾನಿ ಮೋದಿ!

ಸರಣಿ ಕೊಲೆಗಳಿಂದ ದೇಶದ ಗಮನ ಸೆಳೆದಿದ್ದ ದೇಶದ ಅತಿದೊಡ್ಡ ಮತ್ತು ಅತ್ಯಂತ ವಿವಾದಾಸ್ಪದ ವ್ಯಾಪಂ ಹಗರಣಕ್ಕೆ ಸಂಬಂಧಿಸಿದಂತೆ ಮೋದಿ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಸಿಬಿಐ ಎರಡು ಪ್ರತ್ಯೇಕ ದೋಷಾರೋಪ ಪಟ್ಟಿ ಸಲ್ಲಿಸಿದ್ದು, ಇಬ್ಬರು ಅಭ್ಯರ್ಥಿಗಳು ಮಧ್ಯವರ್ತಿಗಳು ಮತ್ತು ಪ್ರಕರಣದಲ್ಲಿ ಶಾಮೀಲಾದ ವ್ಯಕ್ತಿ ವಿರುದ್ಧ ಪ್ರತ್ಯೇಕ ದೋಷಾರೋಪ ಪಟ್ಟಿಗಳನ್ನು ಗ್ವಾಲಿಯರ್​​ ಕೋರ್ಟ್​​ ಮತ್ತು ಭೋಪಾಲ್​ನ ಮ್ಯಾಜಿಸ್ಟ್ರೇಟ್​​ ಕೋರ್ಟ್​ಗೆ ಸಿಬಿಐ ಸಲ್ಲಿಸಿದೆ.

ಉದ್ಯೋಗ ಗಿಟ್ಟಿಸುವ ಸಲುವಾಗಿ ಕಾಪಿ ಮಾಡಲು ಮತ್ತು ನಕಲು ಮಾಡಲು ಅವಕಾಶ ಮಾಡಿಕೊಟ್ಟಿದ್ದ ಆರೋಪದಡಿ ಐಪಿಸಿ ಸೆಕ್ಷನ್ ಮತ್ತು ಮಧ್ಯಪ್ರದೇಶ ಅಂಗೀಕೃತ ಪರೀಕ್ಷಾ ಕಾಯ್ದೆ 1937 ಅಡಿಯಲ್ಲಿ ದೂರು ದಾಖಲಾಗಿದೆ. ಅಭ್ಯರ್ಥಿ ವಿರುದ್ಧ ಆದಾಯ ಕಾಯ್ದೆಯ ಸೆಕ್ಷನ್ 66-ಡಿ ಅಡಿಯಲ್ಲಿ ಗ್ವಾಲಿಯರ್​​ನ ಮೊರಾರ್ ಪೊಲೀಸ್ ಠಾಣೆಯಲ್ಲಿ ಫೆಬ್ರವರಿ 24, 2013ರಂದು ದೂರು ದಾಖಲಾಗಿದೆ. ಈ ದೂರಿನ ಪ್ರಕಾರ ಅಭ್ಯರ್ಥಿ 2012ರಲ್ಲಿ ಸಬ್ ಇನ್ಸ್ಪೆಕ್ಟರ್ / ಸುಬೇದಾರ್ ಹುದ್ದೆಗಳಿಗೆ ನಡೆದ ಪರೀಕ್ಷೆಗೆ ಒಂದಕ್ಕಿಂತ ಹೆಚ್ಚು ಅರ್ಜಿಗಳನ್ನು ಸಲ್ಲಿಸಿದ್ದಾರೆ ಎಂಬ ಆರೋಪ ಇದೆ. ಅಲ್ಲದೇ, ಅಭ್ಯರ್ಥಿಗೆ ಎರಡು ನೋಂದಣಿ ಸಂಖ್ಯೆಯನ್ನು ನೀಡಿದ ಆರೋಪ ಕೂಡ ಕೇಳಿ ಬಂದಿದೆ.

ಸೆಪ್ಟಂಬರ್ 16, 2012ರಂದು ನಡೆದ ಪರೀಕ್ಷೆಗೆ ಒಂದು ನೋಂದಣಿ ಸಂಖ್ಯೆಯಲ್ಲಿ ಖುದ್ದಾಗಿ ಹಾಜರಾಗಿದ್ದ ಅಭ್ಯರ್ಥಿ, ಮತ್ತೊಂದು ನೋಂದಣಿ ಸಂಖ್ಯೆಗೆ ತನ್ನ ಸೋದರ ಸಂಬಂಧಿಯಿಂದ ಪರೀಕ್ಷೆಗೆ ಹಾಜರಾಗಲು ಅನುಕೂಲ ಮಾಡಿಕೊಟ್ಟ ಆರೋಪ ಕೂಡ ಕೇಳಿಬಂದಿದೆ. ಸಿಬಿಐ ತನಿಖೆ ವೇಳೆ ಅಭ್ಯರ್ಥಿ ಒಟ್ಟು 8 ಅರ್ಜಿಗಳನ್ನು ಸಲ್ಲಿಸಿರುವ ಮಾಹಿತಿ ಬಹಿರಂಗವಾಗಿದೆ. ಈ ಪ್ರಕರಣವನ್ನು ಭೇದಿಸಲು ಕೈಬರಹ ತಜ್ಞರು, ಸಹಿ ಮತ್ತು ಬೆರಳಚ್ಚು ತಜ್ಞರ ನೆರವನ್ನೂ ಪಡೆಯಲಾಗಿದೆ. ವಿವರವಾದ ತನಿಖೆಯ ನಂತರ ಇಂದು ದೋಷಾರೋಪ ಪಟ್ಟಿಯನ್ನು ಸಲ್ಲಿಸಲಾಗಿದೆ.

ಇನ್ನೊಂದು ಪ್ರಕರಣದ ಕುರಿತು ಭೋಪಾಲ್​​ನ ವಿಶೇಷ ಮ್ಯಾಜಿಸ್ಟ್ರೇಟ್​ ಕೋರ್ಟ್​​ನಲ್ಲಿ ದೋಷಾರೋಪ ಪಟ್ಟಿಯನ್ನು ಸಿಬಿಐ ಸಲ್ಲಿಸಿದೆ. ಮಧ್ಯವರ್ತಿಗಳು ಮತ್ತು ನಕಲಿ ಮಾಡಿದ ವ್ಯಕ್ತಿಯ ವಿರುದ್ಧ ಐಪಿಸಿ ಸೆಕ್ಷನ್ 120-ಬಿ, 419, 420, 467, 471 ಮತ್ತು ಮಧ್ಯಪ್ರದೇಶ ಅಂಗೀಕೃತ ಶಿಕ್ಷಣ ಕಾಯ್ದೆ 1937ರ ಅಡಿಯಲ್ಲಿ ದೂರು ದಾಖಲಾಗಿದೆ.

ಸುಪ್ರೀಂ ಕೋರ್ಟ್​​ ನಿರ್ದೇಶನದ ಮೇರೆಗೆ ಜುಲೈ 9, 2015ರಂದು ಈ ಕುರಿತು ಸಿಬಿಯ ತನಿಖೆ ಆರಂಭಿಸಿತ್ತು. ಪೊಲೀಸರ ನೇಮಕಾತಿ 2012ರಲ್ಲಿ ಅಕ್ರಮ ನಡೆದಿರುವುದಾಗಿ ಕೋರ್ಟ್ ಮೆಟ್ಟಿಲೇರಿದ್ದರಿಂದ ಭಾರೀ ಹಗರಣ ಬೆಳಕಿಗೆ ಬಂದಿತ್ತು. ಈ ವಿಷಯಕ್ಕೆ ಸಂಬಂಧಿಸಿದ ವ್ಯಕ್ತಿಗಳು ನಿರಂತರ ಕೊಲೆಯಾಗಿದ್ದರು. ಈ ಹಿನ್ನೆಲೆಯಲ್ಲಿ ದೇಶದಾದ್ಯಂತ ತೀವ್ರ ಕುತೂಹಲವನ್ನು ಈ ಪ್ರಕರಣ ಕೆರಳಿಸಿದೆ. ಆದರೆ, ಈ ಪ್ರಕರಣದ ಕುರಿತು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇದುವರೆಗೆ ಯಾವುದೇ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ.

ಸಬ್​​ ಕಾ ಸಾಥ್ ಸಬ್​ ಕಾ ವಿಕಾಸ್ ಘೋಷಣೆ: ಸಚ್ ಕ್ಯಾ ಹೈ? ಎಂಬ ಹುಡುಕಾಟ

2015ರಲ್ಲಿ ಉತ್ತರಪ್ರದೇಶದ ದಾದ್ರಿಯಲ್ಲಿ ಮೊಹಮದ್ ಅಖ್ಲಾಕ್​​ ಎಂಬ ವ್ಯಕ್ತಿಯನ್ನು ಹತ್ಯೆಗೈಯಲಾಯ್ತು. ಅಲ್ಲಿಂದ ದೇಶದಲ್ಲಿ ಅಲ್ಪಸಂಖ್ಯಾತರ ಮೇಲೆ ನಿರಂತರ ಹತ್ಯೆ, ಹಲ್ಲೆಗಳು ನಡೆಯುತ್ತಿವೆ. ಅಲ್ಲದೇ, ಮುಸ್ಲಿಮರು ಸೇರಿದಂತೆ ಅಲ್ಪಸಂಖ್ಯಾತರಿಗೆ ದೇಶ ಸುರಕ್ಷಿತ ತಾಣವಲ್ಲ ಎಂಬ ಅಭಿಪ್ರಾಯ ರೂಪುಗೊಳ್ಳತೊಡಗಿದೆ. ಅದರಲ್ಲೂ ದನದ ಸಾಗಣೆ, ದನದ ಮಾಂಸ ಸೇವನೆ, ಸಾಗಣೆ ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ಹತ್ಯೆಗಳ ಪ್ರಮಾಣದಲ್ಲಿ ನಿರಂತರವಾಗಿ ಏರಿಕೆಯಾಗಿದೆ. 2017ರಲ್ಲಿ ಜುನೇದ್ ಖಾನ್, ಅಫ್ಜರುಲ್ ಖಾನ್ ಮೊದಲಾದವರನ್ನು ಹತ್ಯೆಗೈಯಲಾಗಿದ್ದು, ಧಾರ್ಮಿಕ ದ್ವೇಷಕ್ಕೆ ಲವ್ ಜಿಹಾದ್ ಹೆಸರನ್ನು ಕೂಡ ಬಳಸಿಕೊಳ್ಳಲಾಗುತ್ತಿದೆ.

ಮೋದಿ ಆಡಳಿತದಲ್ಲಿ ದಲಿತರು ಎಷ್ಟು ಸುರಕ್ಷಿತ?

ಸಬ್ ಕಾ ಸಾತ್ ಸಬ್​ ಕಾ ವಿಕಾಸ್ ಎನ್ನುವ ಮೋದಿಯವರ ಘೋಷಣೆ ದಲಿತರ ಮೇಲೆ ನಡೆದ ದೌರ್ಜನ್ಯ ಪ್ರಕರಣಗಳಿಗೆ ಅನ್ವಯವಾಗುವುದಿಲ್ಲವೇ? ದಲಿತರು ಈ ಸಬ್​​ ಕಾ ಸಾತ್ ಸಬ್ ಕಾ ವಿಕಾಸ್ ಅಡಿಯಲ್ಲಿ ಬರುವುದಿಲ್ಲವೇ? ಎಂಬ ಪ್ರಶ್ನೆಗಳು ಉದ್ಭವವಾಗಿವೆ. ಏಕೆಂದರೆ, 2008ರವರೆಗೆ 33,000 ಇದ್ದ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದರೆ, 2014ರಲ್ಲಿ ಇದರ ಪ್ರಮಾಣ 45,000, 2016ರಲ್ಲಿ 40,800 ಏರಿಕೆಯಾಗಿದೆ. ಈ ಮಾಹಿತಿಯನ್ನು ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ ಬಿಡುಗಡೆ ಮಾಡಿದೆ.

ದನದ ಸಂಬಂಧ ನಡೆದಿರುವ ಹಲ್ಲೆ, ಹತ್ಯೆ, ದ್ವೇಷದ ಉದಾಹರಣೆಗಳು

2014ರ ನಂತರ ದೇಶದಲ್ಲಿ ದನದ ಸಂಬಂಧ ನಡೆಯುತ್ತಿರುವ ದಾಳಿಗಳ ಪ್ರಮಾಣದಲ್ಲಿ ಶೇ. 97ರಷ್ಟು ಏರಿಕೆಯಾಗಿದೆ. ಇದರ ಪೈಕಿ ಶೇ. 84ರಷ್ಟು ಘಟನೆಗಳಲ್ಲಿ ಅಮಾಯಕರನ್ನು ಹಿಡಿದು ಕೊಲ್ಲಲಾಗಿದೆ. ಕಳೆದ 4 ವರ್ಷಗಳ ಅವಧಿಯಲ್ಲಿ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಗೋ ರಕ್ಷಕರ ದಾಳಿಯ ಪ್ರಮಾಣದಲ್ಲಿ ಭಾರೀ ಪ್ರಮಾಣದ ಏರಿಕೆಯಾಗಿದೆ. ಈ ದಾಳಿಗಳಲ್ಲಿ ದಲಿತರು, ಮುಸ್ಲಿಮರ ಮೇಲೆ ನಿರಂತರವಾಗಿ ಹಲ್ಲೆ, ಹತ್ಯೆ ಯತ್ನಗಳು ನಡೆಯುತ್ತಿವೆ.

ರೈತರ ಆದಾಯವನ್ನು ಒಂದೂವರೆ ಪಟ್ಟು ಏರಿಸುತ್ತೇನೆ ಎಂದಿದ್ದ ಮೋದಿ: ಆಗಿದ್ದೇನು ಎಂಬ ಪ್ರಶ್ನೆಗೆ ಉತ್ತರವಿಲ್ಲ

2010 – 14ರ ಅವಧಿಯಲ್ಲಿ ವಾರ್ಚಿಕ ಕೃಷಿ ಅಭಿವೃದ್ಧಿ ದರ ಶೇ. 5.2ರಷ್ಟಿತ್ತು. ಆದರೆ, ಆಘಾತಕಾರಿ ಸಂಗತಿ ಎಂದರೆ, 2014 – 18ರ ಮೋದಿ ಆಡಳಿತದ ಅವಧಿಯಲ್ಲಿ ಕೃಷಿ ಅಭಿವೃದ್ಧಿ ದರ ಕೇವಲ ಶೇ. 2.4ಕ್ಕೆ ಕುಸಿದಿದೆ. ದೇಶದ ರೈತರ ಆದಾಯದಲ್ಲಿ ಕೂಡ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದ್ದು, 17 ರಾಷ್ಟ್ರಗಳ ರೈತರ ಆದಾಯ ಕೇವಲ 20,000ಕ್ಕಿಂತ ಕಡಿಮೆಯಾಗಿದೆ ಎನ್ನುವುದು ಕೃಷಿ ತಜ್ಞರ ಅಭಿಪ್ರಾಯವಾಗಿದೆ. ಹಾಗಾದಲ್ಲಿ ಮಾಸಿಕವಾಗಿ ರೈತರ ಆದಾಯ ಎಷ್ಟು ಎಂದು ತಿಳಿದರೆ ರೈತರು ಯಾಕೆ ಆತ್ಮಹತ್ಯೆಯ ದಾರಿ ಹಿಡಿಯುತ್ತಿದ್ದಾರೆ ಎನ್ನುವುದರ ಕುರಿತು ಸ್ಪಷ್ಟತೆ ಸಿಗಬಹುದಲ್ಲವೇ?

2014ರ ಲೋಕಸಭೆ ಚುನಾವಣೆ ವೇಳೆ ರೈತರಿಗೆ ಕನಿಷ್ಠ ಬೆಂಬಲ ಬೆಲೆ ಕೊಡುವ ಮೂಲಕ ಶೇ. 50ರಷ್ಟು ಲಾಭ ತಂದುಕೊಡುವ ಮಹತ್ವದ ಭರವಸೆಯನ್ನು ನೀಡಲಾಗಿತ್ತು. ಆದರೆ, 2014-16ರ ಅವಧಿಯಲ್ಲಿ ದೇಶದ 36,420 ಅನ್ನದಾತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಹಾಗಾದರೆ, ಮೋದಿಯವರು ನೀಡಿರುವ ಭರವಸೆಗಳು ಈಡೇರಿದವೇ? ಎಂಬ ಪ್ರಶ್ನೆ ಎದುರಾಗುತ್ತದೆ.

ದೇಶದ ವಿವಿಧ ರಾಜ್ಯಗಳಲ್ಲಿ ಸಾಲ ಮನ್ನಾ, ಬೆಂಬಲ ಬೆಲೆ ಘೋಷಣೆ, 60 ವರ್ಷ ಮೀರಿದ ರೈತರಿಗೆ ವೃದ್ಧಾಪ್ಯ ವೇತನ ಇತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ, ರೈತರು ದೇಶಾದ್ಯಂತ ಪ್ರತಿಭಟನೆ ನಡೆಸಿದ್ದಾರೆ. ಸಂಸತ್ ಆವರಣದಲ್ಲಿ ತಮಿಳುನಾಡು ರೈತರು ಬೆತ್ತಲೆ ಪ್ರತಿಭಟನೆಯನ್ನು ಕೂಡ ನಡೆಸಿದ್ದಾರೆ. ಆದರೆ, ಇವಾವ ದೃಶ್ಯಗಳನ್ನು ಮೋದಿ ತಮ್ಮ ಕಿರುಗಣ್ಣಿನಿಂದ ನೋಡುವ ಕೃಪೆಯನ್ನೂ ತೋರಿಲ್ಲ.

2014ರಲ್ಲಿ ಪ್ರಧಾನಿ ಅಭ್ಯರ್ಥಿಯಾಗಿ ದೇಶ ಸುತ್ತಿದ ನರೇಂದ್ರ ಮೋದಿಯವರು ದೇಶದ ಜನರಿಗೆ ಭರಪೂರ ಭರವಸೆಗಳ ಮಳೆ ಸುರಿಸಿದ್ದರು. ಅವುಗಳಲ್ಲಿ ಒಂದು ಪ್ರಮುಖ ಭರವಸೆ ಬೆಳೆಗಳಿಗೆ ಸಂಬಂಧಿಸಿದಂತೆ ಯಶಸ್ವಿ ಕಾರ್ಯಕ್ರಮಗಳನ್ನು ಕೈಗೊಳ್ಳುವುದೂ ಒಂದಾಗಿತ್ತು. ಇದೇ ಸಲಹೆಯನ್ನು ಸ್ವಾಮಿನಾಥನ್ ಆಯೋಗ ಯುಪಿಎ ಆಡಳಿತದ ಅವಧಿಯಲ್ಲಿ ಶಿಫಾರಸು ಮಾಡಿತ್ತು. ಅಂದು ಸ್ವಾಮಿನಾಥನ್ ಅವರ ಸಲಹೆಗಳನ್ನೇ ದೇಶದ ರೈತರು ಜಾರಿಗೆ ತರಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.

2014ರಲ್ಲಿ ಬೆಳೆಗಳಿಂದ ಶೇ. 50ರಷ್ಟು ಲಾಭವಾಗುವಂತೆ ಮಾಡುತ್ತೇನೆ ಮತ್ತು ರೈತರ ಆದಾಯವನ್ನು ದುಪ್ಪಟ್ಟುಗೊಳಿಸುತ್ತೇನೆ ಎಂದು ಕೂಡ ಮೋದಿಯವರು ಹೇಳಿಕೊಂಡಿದ್ದರು. ಅದೇ ಬೇಡಿಕೆಯನ್ನು ರೈತರು ಇಟ್ಟುಕೊಂಡು ದೇಶದಾದ್ಯಂತ ಪ್ರತಿಭಟನೆ ನಡೆಸಿದ್ದಾರೆ. ತಮಿಳುನಾಡು, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ ರೈತರ ಬೇಡಿಕೆಗಳಿಗೂ ಮೋದಿಯವರ ಭರವಸೆಗಳಿಗೂ ಅಕ್ಷರಶಃ ತಾಳೆಯಾಗುತ್ತಿದೆ.

ಏಪ್ರಿಲ್ 15, 2014ರಂದು ಜಾರ್ಖಂಡ್​​ನ್​​ ಹಜಾರಿಬಾಘ್​​ನಲ್ಲಿ ಎನ್​​ಡಿಎ ಪರ ಭಾಷಣ ಮಾಡಿದ್ದ ಮೋದಿಯವರು ನಾವು ಅಧಿಕಾರಕ್ಕೆ ಬಂದರೆ, ಕನಿಷ್ಠ ಬೆಂಬಲ ಬೆಲೆಯ ದರವನ್ನು ಏರಿಸುತ್ತೇವೆ ಎಂದಿದ್ದರು. ಹೊಸ ನಿಯಮಾವಳಿಗಳನ್ನು ರೂಪಿಸಿ, ಕೃಷಿ ಉತ್ಪನ್ನವನ್ನು ಏರಿಸುವ ಭರವಸೆ ನೀಡಿದ್ದನ್ನು ಮೋದಿಯವರು ವಿದೇಶ ಪ್ರವಾಸ ಮಾಡುವ ವೇಳೆಯಲ್ಲಾಗಲೀ, ಇನ್ನಾವ ಸಂದರ್ಭದಲ್ಲೇ ಆಗಲಿ ಅಪ್ಪಿತಪ್ಪಿ ಕೂಡ ನೆನಪಿಸಿಕೊಳ್ಳಲಿಲ್ಲ? ಇದನ್ನು ಮೋದಿ ಯಾಕೆ ಮರೆತರು ಎಂಬ ಸಂಗತಿ ಯಾರಿಗೂ ಗೊತ್ತಿಲ್ಲ. ಆದರೆ, ಅವರು ನೀಡಿದ್ದ ಭರವಸೆಯನ್ನು ನೆನಪಿಸುವ ಹೊಣೆಗಾರಿಕೆಯನ್ನು ಸ್ವಪಕ್ಷ, ವಿಪಕ್ಷ ಮತ್ತು ಬೆರಳೆಣಿಕೆಯ ಮಾಧ್ಯಮಗಳನ್ನು ಹೊರತುಡಪಿಸಿ ಮತ್ಯಾರೂ ನಿರ್ವಹಿಸಲಿಲ್ಲ. ಇನ್ನು ತಾವು ನೀಡಿದ ಇದೇ ಭರವಸೆಯನ್ನು ತವರು ರಾಜ್ಯ ಗುಜರಾತ್​ನ ಸುರೇಂದ್ರ ನಗರದಲ್ಲೂ ಪುನರಾವರ್ತಿಸಿದ್ದರು. ಅಲ್ಲಿ ಅವರ ಮಾತುಗಳಿಗೆ ಭಾರೀ ಸಂಖ್ಯೆಯಲ್ಲಿ ಹತ್ತಿ ಬೆಳೆಯುವ ರೈತರು ಸಾಕ್ಷಿಯಾಗಿದ್ದರು.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ, ಕೃಷಿ ಉತ್ಪನ್ನಗಳ ಉತ್ಪಾದನೆಯಲ್ಲಿ ನಿರ್ಣಾಯಕವಾದ ಬದಲಾವಣೆ ತರುತ್ತೇನೆ ಎನ್ನುವುದು ಅವರ ಭರವಸೆಯಾಗಿತ್ತು. ಅಲ್ಲದೇ, ಬೀಜ, ನೀರಾವರಿ, ವಿದ್ಯುತ್, ಕೃಷಿ ಉಪಕರಣಗಳು, ಔಷಧಿ, ರಸಗೊಬ್ಬರು ಮತ್ತು ಇತರ ವೆಚ್ಚಗಳನ್ನು ಆಧರಿಸಿ ಶೇ. 50ರಷ್ಟು ಲಾಭವನ್ನು ರೈತರಿಗೆ ತಂದುಕೊಡುತ್ತೇನೆ. 100 ರೂ. ವೆಚ್ಚವಾಗಿದ್ದಲ್ಲಿ 150 ರೂ. ಆದಾಯ ತಂದುಕೊಡುತ್ತೇನೆ ಎಂದು ಅವರು ಭರವಸೆಯ ಆಣಿಮುತ್ತುಗಳನ್ನು ಉದುರಿಸಿದ್ದರು.

ಆದರೆ, ಅವರು ಅಧಿಕಾರ ಅನುಭವಿಸಿದ ಈ ಮೂರು ವರ್ಷಗಳಲ್ಲಿ ತಮ್ಮ ಭರವಸೆಯನ್ನು ಅಪ್ಪಿತಪ್ಪಿಯೂ ನೆನೆಪಿಸಿಕೊಂಡಿಲ್ಲ. ಭರವಸೆಯನ್ನು ಈಡೇರಿಸಲು ಒಂದು ಹೆಜ್ಜೆಯನ್ನಾದರೂ ಅವರಾಗಲಿ, ಸರ್ಕಾರವಾಗಲಿ ಇಟ್ಟಿದ್ದಲ್ಲಿ ರೈತರು ಇಂದು ನೇಣಿನ ಕುಣಿಕೆಗೆ ಕೊರಳೊಡ್ಡುವುದು ಮತ್ತು ವಿಷ ನುಂಗಿ ನೀಲಕಂಠನ ಅಪರಾವತರವನ್ನು ಎತ್ತುವ ಪರಿಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ.

ಇದರೊಂದಿಗೆ ಕಾರ್ಪೊರೇಟ್ ಕಂಪನಿಗಳ ಸಾಲವನ್ನು ವಸೂಲಾಗದ ಸಾಲದ ರೂಪದಲ್ಲಿ ಮತ್ತು ಇತರ ರೂಪಗಳಲ್ಲಿ ಮನ್ನಾ ಮಾಡಿರುವ ಕೇಂದ್ರ ಸರ್ಕಾರ, ರೈತರ ಸಾಲ ಮನ್ನಾ ಸಾಧ್ಯವಿಲ್ಲ ಎಂದು ಕೈಚೆಲ್ಲಿ ಕುಳಿತಿದೆ. ಈ ಕುರಿತು ಸ್ವತಃ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿಕೆ ನೀಡಿದ್ದು, ಕೇಂದ್ರ ಸರ್ಕಾರ ರೈತರ ಸಾಲ ಮನ್ನಾ ಮಾಡುವುದಿಲ್ಲ. ಸಾಲ ಮನ್ನಾ ನಿರ್ಧಾರವನ್ನು ರಾಜ್ಯ ಸರ್ಕಾರಗಳೇ ತೆಗೆದುಕೊಳ್ಳಲಿ ಎಂದು ಕೈ ತೊಳೆದುಕೊಂಡಿದ್ದಾರೆ.

ಇನ್ನು ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ನಿರ್ವಹಿಸಿದ ಜನರಿಗೆ ಹಣ ಪಾವತಿಯ ವಿಳಂಬದ ಆರೋಪ ಕೂಡ ಕೇಳಿ ಬಂದಿದೆ. ಈ ನಡುವೆ ರೈತರ ಸಾಲ ಮನ್ನಾದಿಂದ ವಿತ್ತೀಯ ಕೊರತೆ ಎದುರಾಗುತ್ತದೆ. ಇದರಿಂದ ಜಿಡಿಪಿ ದರದಲ್ಲಿ ಕುಸಿತವಾಗುತ್ತದೆ ಎಂದು ಆರ್​ಬಿಐ ಗವರ್ನರ್ ಎಚ್ಚರಿಕೆ ನೀಡಿದ್ದಾರೆ. ಇದರೊಂದಿಗೆ ರೈತರ ಸಾಲ ಮನ್ನಾ ಮಾಡುವುದು ನೈತಿಕ ಅಪಾಯ ಎಂದು ವ್ಯಾಖ್ಯಾನಿಸಿದ್ದಾರೆ.

ಶೈಕ್ಷಣಿಕ ಪರಿಸ್ಥಿತಿ ಸುಧಾರಣೆ ಕುರಿತು ಮೋದಿ ಅವಧಿಯಲ್ಲಿ ಸಾಧಿಸಿದ್ದೇನು?

2017ರಲ್ಲಿ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಶೈಕ್ಷಣಿಕ ವಿಷಯಕ್ಕೆ ಸಂಬಂಧಿಸಿದಂತೆ ಗಮನಾರ್ಹ ಹೇಳಿಕೆಯೊಂದನ್ನ ನೀಡಿದ್ದರು. ಅವರ ಪ್ರಕಾರ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶೇ. 4.5ರಷ್ಟು ಹಣವನ್ನು ವಿನಿಯೋಗಿಸುತ್ತಿವೆ. ಇದು ಶೈಕ್ಷಣಿಕ ಪ್ರಗತಿಗೆ ಸಹಾಯಕವಾಗಲಿದೆ ಎನ್ನುವುದು ಅವರ ಅಭಿಪ್ರಾಯವಾಗಿತ್ತು. ಜೊತೆಗೆ, ಶೈಕ್ಷಣಿಕ ಅಭಿವೃದ್ಧಿಯ ಗುರಿಯನ್ನು ಶೇ. 6ಕ್ಕೆ ನಿಗದಿಗೊಳಿಸಲಾಗಿದೆ ಎಂದಿದ್ದರು. ಆದರೆ, ಆರ್ಥಿಕ ಸಮೀಕ್ಷೆ ಕೇಂದ್ರ ಸಚಿವರ ಹೇಳಿಕೆ ಸುಳ್ಳು ಎಂದು ಸಾಬೀತುಮಾಡಿತ್ತು. 2016-17ರ ಆರ್ಥಿಕ ಸಮೀಕ್ಷೆ ಪ್ರಕಾರ, ವಾಸ್ತವದಲ್ಲಿ ಶೈಕ್ಷಣಿಕ ವ್ಯವಸ್ಥೆಗೆ ವಿನಿಯೋಗಿಸಿದ ಪ್ರಮಾಣ ಕೇವಲ ಶೇ. 2.9ರಷ್ಟು ಮಾತ್ರ. ಈ ಮೂಲಕ ಕೇಂದ್ರ ಸರ್ಕಾರ ನಿಗದಿತ ಗುರಿ ತಲುಪುವುದು ಕೂಡ ಅಸಾಧ್ಯ ಎನ್ನುವುದು ಸಾಬೀತಾಗಿದೆ.

ಶೈಕ್ಷಣಿಕ ಸಂಸ್ಥೆಗಳಿಗೆ ಉತ್ತೇಜನ ನೀಡುವುದಾಗಿ ಕೇಂದ್ರ ಸರ್ಕಾರ ಮತ್ತೆ ಮತ್ತೆ ಹೇಳಿಕೊಳ್ಳುತ್ತಿದೆ. ಆದರೆ, ಕಳೆದ 4 ವರ್ಷಗಳ ಅವಧಿಯಲ್ಲಿ ಒಟ್ಟು 2 ಲಕ್ಷ ಸರ್ಕಾರಿ ಶಾಲೆಗಳು ಮುಚ್ಚಿಹೋಗಿವೆ. ಸರ್ಕಾರಿ ಶಾಲೆಗಳಿಗೆ ಬಲ ನೀಡುವುದು, ನಿಯಮಿತವಾಗಿ ಸಿಬ್ಬಂದಿ ನೇಮಕ ಪ್ರಕ್ರಿಯೆ ಬದಲಿಗೆ, ಸರ್ಕಾರ ಶಾಲೆಗಳನ್ನು ಮುಚ್ಚಲು ಅಡ್ಡದಾರಿ ಹಿಡಿದ ಅನುಮಾನ ಕೂಡ ವ್ಯಕ್ತವಾಗಿದೆ. ಶಾಲೆ ಬಿಟ್ಟ ಮಕ್ಕಳ ವಿದ್ಯಾಭ್ಯಾಸ, ಬಾಲಕಿಯರು ಮತ್ತು ವಿಶೇಷವಾಗಿ ಒಡಿಶಾ, ಛತ್ತೀಸ್​ಗಡ, ಜಾರ್ಖಂಡ್, ರಾಜಸ್ಥಾನ, ತೆಲಂಗಾಣ ಮತ್ತು ಗುಜರಾತ್​​​ನ ಬುಡಕಟ್ಟು ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ನೀಡಲು ಒತ್ತಾಸೆ ನೀಡಬೇಕಿದ್ದ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ.

ಇತಿಹಾಸ ತಿರುಚುವ ಕೆಲಸಕ್ಕೆ ಮುಂದಾಗಿದೆ ಕೇಂದ್ರ ಸರ್ಕಾರ!!!

ವಿದ್ಯಾಭ್ಯಾಸಕ್ಕೆ ಉತ್ತೇಜನ ಕೊಡುವ ಬದಲು, ಸಮಸ್ಯೆಗಳ ನಿವಾರಣೆಯ ಬದಲು, ಎಲ್ಲ ಕೊರತೆಗಳ ನಿವಾರಣೆಯಲ್ಲಿ ಸೋತಿರುವ ನಡುವೆ, ಕೇಂದ್ರ ಸರ್ಕಾರ ಶಾಲಾ, ಕಾಲೇಜುಗಳಲ್ಲಿ ಬೋಧಿಸುತ್ತಿರುವ ಇತಿಹಾಸವನ್ನು ತಿರುಚುವ ಸಾಹಸಕ್ಕೆ ಮುಂದಾಗಿದೆ. ಭಾರತದ ಇತಿಹಾಸ ಪಠ್ಯಗಳಲ್ಲಿ ಮೊಗಲರ ಇತಿಹಾಸವನ್ನು ನಿಧಾನಕ್ಕೆ ಮರೆಯಾಗಿಸಲಾಗುತ್ತಿದೆ. ಇದರ ಪರಿಣಾಮದಿಂದಾಗಿ ಭವಿಷ್ಯದಲ್ಲಿ ಮುಸ್ಲಿಂ ಸಾಮ್ರಾಜ್ಯ, ರಾಜರ ಕೊಡುಗೆಗಳಾದ ದೆಹಲಿಯ ಕುತುಬ್ ಮಿನಾರ್, ಆಗ್ರಾದ ತಾಜ್ ಮಹಲ್, ದೆಹಲಿಯಲ್ಲಿ ಆಗಸ್ಟ್ 15ರಂದು ದೇಶವನ್ನುದ್ದೇಶಿಸಿ ದೇಶದ ಪ್ರಧಾನಿ ಮಾತನಾಡುವ ಕೆಂಪು ಕೋಟೆಯಂಥ ಐತಿಹಾಸಿಕ ಸ್ಮಾರಕಗಳನ್ನು ಕಟ್ಟಿಸಿದವರು ಯಾರು? ಎಂಬ ವಿಷಯ ಅರಿಯದ ಹೊಸ ಜನಾಂಗವನ್ನು ಕೇಂದ್ರ ಸರ್ಕಾರ ಸೃಷ್ಟಿಸಲು ಮುಂದಾಗಿದೆ. ಈ ಮೂಲಕ ಅರೆ ಇತಿಹಾಸವನ್ನು ಕಲಿಸುವ ಹುನ್ನಾರವನ್ನು ತೆರೆಮರೆಯಲ್ಲಿ ನಡೆಸುತ್ತಿದೆ.

ಇನ್ನೊಂದು ಅಚ್ಚರಿಯ ಅಥವಾ ಜೋಕಿನ ಎಂದೂ ಹೇಳಬಹುದಾದ ಸಂಗತಿ ಎಂದರೆ, ಪ್ರಧಾನಿ ನರೇಂದ್ರ ಮೋದಿಯವರು ಆರಂಭಿಸಿರುವ ಮೇಕ್ ಇನ್ ಇಂಡಿಯಾ, ಮಾಂಸಾಹಾರದ ಕುರಿತು ನಕಾರಾತ್ಮಕ ಅಂಶಗಳಿರುವ ಸಂಗತಿ, ಮೋದಿಯವರ ವಿದೇಶ ಪ್ರವಾಸಗಳು, ನೀತಿ ಆಯೋಗ, 16ನೇ ಲೋಕಸಭೆ, ಸ್ವಚ್ಛ ಭಾರತ್ ಮಿಷನ್ ಮೊದಲಾದ ಕೇಂದ್ರ ಸರ್ಕಾರದ ನಿರ್ಧಾರಗಳಿಗೆ ಪಠ್ಯದಲ್ಲಿ ಒತ್ತು ಕೊಡಲಾಗುತ್ತಿದೆ. ವಾಸ್ತವದಲ್ಲಿ ಮೇಕ್ ಇನ್ ಇಂಡಿಯಾ ವಿಫಲವಾದ ಕೇಂದ್ರ ಸರ್ಕಾರದ ಯೋಜನೆ. ಆದರೆ, ಇಂಥ ವಿಷಯಗಳನ್ನು ಸೇರಿದಂತೆ ಕೇಂದ್ರದ ಯೋಜನೆಗಳನ್ನು ವಿದ್ಯಾರ್ಥಿಗಳಿಗೆ ಕಲಿಸಬೇಕಾದ ಅನಿವಾರ್ಯತೆ ಏನು? ಎಂಬ ಪ್ರಶ್ನೆಗೆ ಕೇಂದ್ರ ಸರ್ಕಾರ ಉತ್ತರಿಸಬೇಕಿದೆ.

ವಿಶ್ವವಿದ್ಯಾಲಯಗಳು ಮತ್ತು ಪದವಿ ಕಾಲೇಜಿನ ಶೈಕ್ಷಣಿಕ ಪರಿಸ್ಥಿತಿ ಹಾಳು ಮಾಡುತ್ತಿದೆಯೇ ಕೇಂದ್ರ ಸರ್ಕಾರ?

ಪದವಿ ಮತ್ತು ವಿಶ್ವವಿದ್ಯಾಲಯದ ಬೋಧಕರ ಹುದ್ದೆಗೆ ರಾಷ್ಟ್ರೀಯ ಅರ್ಹತಾ ಪರೀಕ್ಷೆ (ನೆಟ್)ಯಲ್ಲಿ ಉತ್ತೀರ್ಣವಾಗುವುದು ಇದುವರೆಗೆ ಕಡ್ಡಾಯವಾಗಿತ್ತು. ನೆಟ್ ಪಾಸ್ ಆದ ಅಭ್ಯರ್ಥಿಗಳನ್ನು ಪದವಿ ಮತ್ತು ವಿಶ್ವವಿದ್ಯಾಲಯಗಳಿಗೆ ನೇಮಕ ಮಾಡಲಾಗುತ್ತಿತ್ತು. ಆದರೆ, ಕೆಲ ದಿನಗಳ ಹಿಂದೆ ಜಾರಿಗೆ ತಂದಿರುವ ತಿದ್ದುಪಡಿಯ ಪ್ರಕಾರ, ಪದವಿ ಕಾಲೇಜುಗಳ ಬೋಧಕರಿಗೆ ನೆಟ್ ಪರೀಕ್ಷೆಯನ್ನು ಸೀಮಿತಗೊಳಿಸಲಾಗಿದ್ದು, ವಿಶ್ವವಿದ್ಯಾಲಯಗಳಿಗೆ ಪಿಎಚ್​ಡಿ ಪದವಿ ಹೊಂದಿದವರನ್ನೂ ಪರಿಗಣಿಸಲು ಮುಂದಾಗಿದೆ.

ಭವಿಷ್ಯದಲ್ಲಿ ಪದವಿ ಕಾಲೇಜುಗಳ ಬೋಧನೆಗೆ ನೆಟ್ ಕಡ್ಡಾಯವಾಗಿದ್ದು, ಈ ನಿಯಮ ಜಾರಿಗೆ ತರುವ ಮೂಲಕ ಕೇಂದ್ರ ಸರ್ಕಾರ ಮತ್ತು ಮಾನವ ಸಂಪನ್ಮೂಲ ಇಲಾಖೆ ನಗೆಪಾಟಲಿಗೆ ಗುರಿಯಾಗಿದೆ. ಸಹ ಪ್ರಾಧ್ಯಾಪಕ, ಸಹಾಯಕ ಪ್ರಾಧ್ಯಾಪಕ ಮತ್ತು ಪ್ರಾಧ್ಯಾಪಕ ಹುದ್ದೆಗಳು ಸದ್ಯಕ್ಕೆ ಅಸ್ತಿತ್ವದಲ್ಲಿದ್ದು,
ವಿ ಎಸ್ ಅಚ್ಯುತನ್ ಸಮಿತಿ ಆರು ಹಂತಗಳನ್ನಾಗಿ ಬೋಧಕರನ್ನು ವಿಂಗಡಿಸಲು ಸೂಚಿಸಿತ್ತು. ಸಮಿತಿಯ ಪ್ರಕಾರ, ಸಹ ಪ್ರಾಧ್ಯಾಪಕ, ಹಿರಿ ಸಹ ಪ್ರಾಧ್ಯಾಪಕ, ಆಯ್ಕೆ ಶ್ರೇಣಿ ಸಹ ಪ್ರಾಧ್ಯಾಪಕ, ಸಹಾಯಕ ಪ್ರಾಧ್ಯಾಪಕ, ಪ್ರಾಧ್ಯಾಪಕ ಮತ್ತು ಹಿರಿಯ ಶ್ರೇಣಿ ಪ್ರಾಧ್ಯಾಪಕ ಎಂದು ವಿಂಗಡಣೆ ಜಾರಿಗೆ ತರಲು ಶಿಫಾರಸು ಮಾಡಲಾಗಿತ್ತು.

ನೆಟ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದದೆ ಕೇವಲ ಪಿಎಚ್​​ಡಿ., ಪದವಿ ಪಡೆದವರು ವಿಶ್ವವಿದ್ಯಾಲಯ ಬೋಧಕ ಹುದ್ದೆಗಳನ್ನು ಪಡೆಯಲು ಅರ್ಹರನ್ನಾಗಿಸುವ ಹುನ್ನಾರವನ್ನು ಕೇಂದ್ರ ಸರ್ಕಾರ ನಡೆಸಿದೆ. ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆಗೆ ಮತ್ತು ಕಾಲೇಜು ಬೋಧಕರು ಬೋಧನೆಗೆ ಒತ್ತು ನೀಡಬೇಕೆಂದು ಸಮಿತಿ ಹೇಳಿದೆ. ಈ ಮೂಲಕ ರಾಷ್ಟ್ರೀಯ ಅರ್ಹತಾ ಪರೀಕ್ಷೆ ಪಡೆದವರು ಪದವಿ ಕಾಲೇಜಿಗೆ, ಪಿಎಚ್​ಡಿ ಪದವಿಯನ್ನು ಮಾತ್ರ ಪಡೆದವರನ್ನು ವಿಶ್ವವಿದ್ಯಾಲಯಕ್ಕೆ ನೇಮಿಸಲು ಸರ್ಕಾರ ಮುಂದಾಗಿದೆ.

ವಿಶ್ವ ವಿದ್ಯಾಲಯ ಧನ ಸಹಾಯ ಆಯೋಗದ ಇದುವರೆಗಿನ ನಿಯಮದ ಪ್ರಕಾರ, ವಿಶ್ವವಿದ್ಯಾಲಯ ಮತ್ತು ಪದವಿ ಕಾಲೇಜುಗಳಲ್ಲಿ ಬೋಧಕರ ನೇಮಕಕ್ಕೆ ನೆಟ್ ಪರೀಕ್ಷೆಯಲ್ಲಿ ತೇರ್ಗಡೆ ಕಡ್ಡಾಯವಾಗಿತ್ತು. ಅಂಗೀಕೃತ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಮತ್ತು ನೆಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವವರು ಮಾತ್ರ ಬೋಧಕರಾಗಲು ಅರ್ಹರಾಗುತ್ತಿದ್ದರು. ಆದರೆ, ತಿದ್ದುಪಡಿಯಿಂದಾಗಿ ನೆಟ್ ಪಾಸ್ ಆಗದವರು ವಿಶ್ವವಿದ್ಯಾಲಯಗಳಿಗೆ ನೇಮಕವಾಗಲು ಅವಕಾಶ ನೀಡಲಾಗಿದೆ.

ಏನಿದು ನೆಟ್ ಪರೀಕ್ಷೆ?

ನೆಟ್ ಪರೀಕ್ಷೆ ಬಹು ಆಯ್ಕೆಯ ಮಾದರಿಯಲ್ಲಿದ್ದು, ಸಂಶೋಧನೆ, ತಂತ್ರಜ್ಞಾನ, ಸಾಮಾನ್ಯ ಜ್ಞಾನ ಹಾಗೂ ಆಯಾ ವಿದ್ಯಾರ್ಥಿಗಳು ಸ್ನಾತಕೋತ್ತರ ವಿಷಯಕ್ಕೆ ಸಂಬಂಧಿಸಿದಂತೆ ಪರೀಕ್ಷೆ ನಡೆಯುತ್ತದೆ. ನೆಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಾಕಷ್ಟು ಪೂರ್ವ ಸಿದ್ಧತೆಯ ಅಗತ್ಯವಿದೆ. ಅರ್ಜಿ ಸಲ್ಲಿಸಿದ ಕೆಲವೇ ಪ್ರಮಾಣದ ಅಭ್ಯರ್ಥಿಗಳು ಈ ಪರೀಕ್ಷೆಯಲ್ಲಿ ತೇರ್ಗಡೆ ಹೊಂದುತ್ತಾರೆ. ಕಠಿಣ ಪರಿಶ್ರಮಿಗಳು ಮತ್ತು ಓದಿನ ಹವ್ಯಾಸ ಇರುವವರು ಮಾತ್ರ ಈ ಪರೀಕ್ಷೆಯಲ್ಲಿ ನೆಟ್ ಮತ್ತು ಜೆಆರ್​ಎಫ್ ತೇರ್ಗಡೆ ಹೊಂದಲು ಸಾಧ್ಯ. ಆದರೆ, ಕೇಂದ್ರ ಸರ್ಕಾರ ತಂದಿರುವ ತಿದ್ದುಪಡಿಗಳಿಂದ ಶೈಕ್ಷಣಿಕ ವ್ಯವಸ್ಥೆಯ ದಿಕ್ಕುತಪ್ಪಿಸುವ ಹುನ್ನಾರ ಜಗಜ್ಜಾಹೀರಾಗಿದೆ.

ವಿಶ್ವವಿದ್ಯಾಲಯಗಳಿಗೆ ಧನ ಸಹಾಯ ನೀಡಲು ಹಿಂದೇಟು ಹಾಕುತ್ತಿರುವ ಆರೋಪ!!!

ಭಾರತದಾದ್ಯಂತ ಇರುವ ವಿಶ್ವವಿದ್ಯಾಲಯಗಳಿಗೆ ಅನುದಾನ ಬಿಡುಗಡೆ ಸಂಬಂಧ ತಕರಾರುಗಳು ಎದುರಾಗಿವೆ. ದೇಶದೆಲ್ಲೆಡೆ ಇರುವ ಸಾಮಾಜಿಕ ಅಸಮಾನತೆ ಕುರಿತ ಸಂಶೋಧನಾ ಕೇಂದ್ರಗಳಿಗೆ ಕೇಂದ್ರ ಸರ್ಕಾರ ಅನುದಾನ ನಿಲ್ಲಿಸಿದೆ. 11ನೇ ಪಂಚವಾರ್ಷಿಕ ಯೋಜನೆಯಡಿ ಯುಜಿಸಿ ಅನುದಾನ ಪಡೆದು ವಿವಿಧ ವಿಶ್ವವಿದ್ಯಾಲಯಗಳಲ್ಲಿ ಈ ಸಂಶೋಧನಾ ಕೇಂದ್ರಗಳು ಕಾರ್ಯನಿರತವಾಗಿವೆ. 12ನೇ ಪಂಚವಾರ್ಷಿಕ ಯೋಜನೆಯಲ್ಲಿ ಕೂಡ ಇವುಗಳನ್ನು ನವೀಕರಿಸಲಾಗಿತ್ತು.

ಟೆಲಿಗ್ರಾಫ್​ನ ಫಿರೋಜ್ ಎಲ್ ವಿನ್ಸೆಂಟ್ ಮತ್ತು ಬಸಂತ್ ಮೊಹಾಂತಿ ವರದಿಯ ಪ್ರಕಾರ, ವಿಶ್ವವಿದ್ಯಾಲಯ ಧನಸಹಾಯ ಆಯೋಗ 2007-12 ಮತ್ತು 2012-17ರ ಅವಧಿಯಲ್ಲಿ ಅನುದಾನದ ಪ್ರಮಾಣವನ್ನು ಕಡಿಮೆ ಮಾಡಲಾಗಿದೆ. ಯುಪಿಎ ಅವಧಿಯಲ್ಲಿ ಈ ಕುರಿತು ಅಧ್ಯಯನಕ್ಕೆ ಅನುದಾನವನ್ನು ಸತತವಾಗಿ ಏರಿಸಲಾಗಿತ್ತು. ಆದರೆ, ಎನ್​ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ ಅನುದಾನದಲ್ಲಿ ಇಳಿಕೆಯಾಗಿದೆ. ಸದ್ಯಕ್ಕೆ 13ನೇ ಪಂಚವಾರ್ಷಿಕ ಯೋಜನೆ ಜಾರಿಯಲ್ಲಿದ್ದು, ಕೆಲವು ವಿಶ್ವವಿದ್ಯಾಲಯಗಳಿಗೆ ಕಳುಹಿಸಿರುವ ಅಧಿಸೂಚನೆಯಲ್ಲಿ ಮಾರ್ಚ್ 31, 2017ಕ್ಕೆ ಅನುದಾನ ಕೊನೆಯಾಗಲಿರುವುದಾಗಿ ಹೇಳಿದೆ.

ಇನ್ನು ಸ್ವತಂತ್ರ ಆಲೋಚನೆ, ಪ್ರಶ್ನಿಸುವ ಮನೋಧರ್ಮವನ್ನು ಬೆಳೆಸುವ ಜೆಎನ್​ಯು, ಹೈದರಾಬಾದ್ ವಿವಿ, ಅಲಿಘರ್ ಮುಸ್ಲಿಂ ವಿವಿ, ದೆಹಲಿ ವಿವಿ, ಬನಾರಸ್ ಹಿಂದೂ ವಿವಿಗಳಲ್ಲಿ ಸತತ ದಾಳಿಗಳ ಮೂಲಕ ದೊಡ್ಡದಾಗಿ ಸದ್ದು ಮಾಡಿವೆ. ಅದರಲ್ಲೂ ಜೆಎನ್​ಯುನಲ್ಲಿ ಕೇಂದ್ರವನ್ನು ಪ್ರಶ್ನಿಸಿದ ವಿದ್ಯಾರ್ಥಿ ಕನ್ಹಯ್ಯ ಕುಮಾರ್​​ ವಿರುದ್ಧ ದೇಶದ್ರೋಹದ ಆರೋಪ ಹೊರಿಸಿ ಬಂಧಿಸಿದರೆ, ಹೈದರಾಬಾದ್ ವಿವಿಯಲ್ಲಿ ಅಂಬೇಡ್ಕರ್ ವಾದಿ ವಿದ್ಯಾರ್ಥಿ ರೋಹಿತ್ ವೇಮುಲ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಂಥ ಘಟನೆಗಳು ವಿಶ್ವವಿದ್ಯಾಲಯಗಳ ಮೇಲೆ ಅನುಮಾನ ಮೂಡಿಸುವಂತ ವಾತಾವರಣವನ್ನು ನಿರ್ಮಿಸಿವೆ.

ವಿದೇಶಾಂಗ ನೀತಿ ಮತ್ತು ರಾಜತಾಂತ್ರಿಕ ನಡೆ ಕುರಿತ ಪ್ರಶ್ನೆಗಳು

ಪ್ರಧಾನಿ ನರೇಂದ್ರ ಮೋದಿ ದೇಶದಲ್ಲಿರುವುದಕ್ಕಿಂಥ ವಿದೇಶ ಪ್ರವಾಸದದಲ್ಲಿರುವುದೇ ಹೆಚ್ಚು ಎಂಬ ಜೋಕುಗಳು ಚಾಲ್ತಿಯಲ್ಲಿವೆ. ಇನ್ನು ಮೋದಿ ವಿದೇಶಕ್ಕೆ ಹೋದೆಡೆಯೆಲ್ಲ ವಿದೇಶೀ ನಾಯಕರನ್ನು ಅಪ್ಪುವ ದೃಶ್ಯಗಳು ಸರ್ವೇ ಸಾಮಾನ್ಯ ಸಂಗತಿಯಾಗಿವೆ. ಅನವಶ್ಯಕವಾಗಿ ವಿದೇಶೀ ನಾಯಕರನ್ನು ಶಿಷ್ಟಾಚಾರ ಮೀರಿ ಆಲಂಗಿಸುತ್ತಿರುವುದನ್ನು ಕೂಡ ಸಾಮಾಜಿಕ ಜಾಲತಾಣದಲ್ಲಿ ಕಟುವಾಗಿ ಟೀಕಿಸಲಾಗಿದೆ. ಎಚ್​​​1ಬಿ ವೀಸಾ, ದೇಶದಲ್ಲಿ ಹೂಡಿಕೆ ಪ್ರಮಾಣದಲ್ಲಿ ಹೆಚ್ಚಳ ಇತ್ಯಾದಿ ಸಮಸ್ಯೆಗಳನ್ನು ಮೋದಿ ನಿರೀಕ್ಷಿತ ಪ್ರಮಾಣದಲ್ಲಿ ಈಡೇರಿಸಿಲ್ಲ. ಇದುವರೆಗೆ 50ಕ್ಕೂ ಹೆಚ್ಚು ವಿದೇಶಗಳ ಪ್ರವಾಸ ಕೈಗೊಂಡಿರುವ ಮೋದಿಯವರು ನಿರೀಕ್ಷಿತ ಪ್ರಮಾಣದಲ್ಲಿ ಯಶಸ್ಸು ಗಳಿಸಿಲ್ಲ. ಇದಕ್ಕೆ ಅವರು ನಡೆಸುತ್ತಿರುವ ಸರ್ಕಸ್​ಗಳೇ ಸಾಕ್ಷಿ. ಅಮೆರಿಕಾ, ಜಪಾನ್, ರಷ್ಯಾ, ಚೀನಾ ಮೊದಲಾದ ಬದ್ಧವೈರಿಗಳಿಂಥಿರುವ, ವರ್ತಿಸುವ ದೇಶಗಳಿಗೆ ಒಂದರ ನಂತರ ಒಂದು ದೇಶಕ್ಕೆ ಭೇಟಿ ನೀಡಿ ಮಾತುಕತೆ ಆಡಿದ್ದಾರೆ. ಆದರೆ, ನಿರೀಕ್ಷಿತ ಹೂಡಿಕೆ, ಉತ್ಪಾದನೆ ಕುರಿತು ಮೋದಿಯವರು ಯಾವುದೇ ಹೇಳಿಕೆಗಳನ್ನು ಇದುವರೆಗೆ ನೀಡಿಲ್ಲ.

ಮಹಿಳೆಯರ ಮೇಲೆ ಹೆಚ್ಚಿದ ದೌರ್ಜನ್ಯದ ಪ್ರಮಾಣ

ಜಮ್ಮು ಕಾಶ್ಮೀರದ ಕಥುವಾ ಮತ್ತು ಉತ್ತರಪ್ರದೇಶದ ಉನ್ನಾವೋಗಳಲ್ಲಿ ನಡೆದಿರುವ ಘಟನೆಗಳು ದೇಶದಲ್ಲಿ ಮಹಿಳೆಯರು ಮತ್ತು ಬಾಲಕಿಯರ ರಕ್ಷಣೆಯ ಕುರಿತು ದೊಡ್ಡ ಪ್ರಶ್ನಾರ್ಥಕ ಚಿಹ್ನೆಯನ್ನು ಮೂಡಿಸಿವೆ. ಅಲ್ಲದೇ, ದೇಶದಲ್ಲಿ ಮಹಿಳೆಯರು ಅಸುರಕ್ಷಿತ ಎಂಬ ಸಂದೇಶವನ್ನು ರವಾನಿಸಿವೆ. ರಾಷ್ಟ್ರೀಯ ಅಪರಾಧ ಬ್ಯೂರೋ (ಎನ್​ಸಿಆರ್​​ಬಿ) ನೀಡಿರುವ ಮಾಹಿತಿಯ ಪ್ರಕಾರ, ಮೋದಿಯವರ ಆಡಳಿತದ ಅವಧಿಯಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಪ್ರಮಾಣದಲ್ಲಿ ಶೇ. 12.4ರಷ್ಟು ಏರಿಕೆಯಾಗಿದೆ. 2015ರಲ್ಲಿ 34,651 ದೌರ್ಜನ್ಯ ಪ್ರಕರಣಗಳ ಸಂಖ್ಯೆ 2016ರಲ್ಲಿ 38,947ಕ್ಕೆ ಏರಿಕೆಯಾಗಿದೆ. ಈ ಮೂಲಕ ಮೋದಿಯವರ ಆಡಳಿತದ ಅವಧಿಯಲ್ಲಿ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯದ ಪ್ರಕರಣಗಳಲ್ಲಿ ಏರಿಕೆಯಾಗಿರುವುದು ಸ್ಪಷ್ಟವಾಗಿದೆ. ಇದನ್ನು ಸ್ವತಃ ಕೇಂದ್ರ ಸರ್ಕಾರದ ಒಡೆತನದ ಎನ್​ಸಿಆರ್​​ಬಿ ಬಿಡುಗಡೆ ಮಾಡಿರುವುದು ಗಮನಾರ್ಹ ಸಂಗತಿಯಾಗಿದೆ.

ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಅಧ್ಯಯನದ ಪ್ರಕಾರ, ಬಿಜೆಪಿಯ ಸಂಸದರು ಮತ್ತು ಶಾಸಕರು ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿದ ಪ್ರಕರಣದ ಆರೋಪ ಹೊತ್ತಿದ್ದಾರೆ. ಇವರ ನಂತರದ ಸ್ಥಾನ ಶಿವಸೇನೆ, ಟಿಎಂಸಿ ಪಕ್ಷಗಳಿಗೆ ಸಿಕ್ಕಿದೆ. ಈ ಪೈಕಿ ಬಿಜೆಪಿಯ 14, ಶಿವಸೇನೆಯ 7, ಟಿಎಂಸಿಯ 6 ನಾಯಕರ ವಿರುದ್ಧ ಗಂಭೀರ ಆರೋಪಗಳಿವೆ.

ಇನ್ನು ಒಂದೇ ವರ್ಷದ ಅವಧಿಯಲ್ಲಿ ಜಾಗತಿಕ ಲಿಂಗ ಅನುಪಾತ ಪಟ್ಟಿಯಲ್ಲಿ ಭಾರತ 21 ಸ್ಥಾನಗಳಷ್ಟು ಕುಸಿದಿದೆ ಎಂದು ವಿಶ್ವ ಆರ್ಥಿಕ ಫೋರಂ ಹೇಳಿದೆ. ಈ ಹಿಂದೆ ಲಿಂಗ ಅನುಪಾತದಲ್ಲಿ 87ನೇ ಸ್ಥಾನದಲ್ಲಿದ್ದ ಭಾರತ ಇದೀಗ 108ನೇ ಸ್ಥಾನಕ್ಕೆ ಕುಸಿದಿದೆ. ಅಚ್ಚರಿಯ ಸಂಗತಿ ಎಂದರೆ ನೆರೆಯ ಚೀನಾ ಮತ್ತು ಬಾಂಗ್ಲಾ ದೇಶಗಳಿಗಿಂಥ ಭಾರತದ ಸ್ಥಾನ ಕಳಪೆಯಾಗಿದೆ. ಇನ್ನೊಂದು ಆಘಾತಕಾರಿ ಮಾಹಿತಿ ಎಂದರೆ, ದೇಶದ ಶೇ. 66ರಷ್ಟು ಮಹಿಳೆಯರು ಬಿಟ್ಟಿ ಚಾಕರಿ ಮಾಡುತ್ತಿದ್ದಾರೆ. ಇನ್ನು ಪುರುಷರ ಪೈಕಿ ಶೇ. 12ರಷ್ಟು ನಾಗರಿಕರ ದುಡಿಮೆಗೆ ಯಾವುದೇ ಪ್ರತಿಫಲ ಸಿಗುತ್ತಿಲ್ಲ. ಇದರೊಂದಿಗೆ ಮೋದಿಯವರ ಮಹತ್ವಾಕಾಂಕ್ಷೆಯ ಬೇಟಿ ಬಚಾವೋ, ಬೇಟಿ ಪಡಾವೋ ಯೋಜನೆಗೆ ಬಿಡುಗಡೆಯಾದ ಶೇ. 90ರಷ್ಟು ಪೈಕಿ ಹಣವನ್ನು ಇದುವರೆಗೆ ಬಳಸಿಯೇ ಇಲ್ಲ. ಮೋದಿಯವರ ಯೋಜನೆಯ ಕ್ರಿಯಾಶೀಲತೆಗೆ ಇದಕ್ಕಿಂಥ ಇನ್ನೊಂದು ಉದಾಹರಣೆ ಸಿಗಲಾರದು.

ಇವೆಲ್ಲ ಅವಘಡಗಳ ನಡುವೆ ಔಟ್​ಲುಕ್ ಪತ್ರಿಕೆ ಬೇಟಿ ಉಟಾವೋ ಹೆಸರಿನಲ್ಲಿ ನಡೆಸಿದ ಕುಟುಕು ಕಾರ್ಯಾಚರಣೆ ವೇಳೆ ಬಹಿರಂಗವಾಗಿರುವ ಸಂಗತಿ ಇನ್ನೂ ಭಯಾನಕವಾಗಿದೆ. ಬುಡಕಟ್ಟು ಬಾಲಕಿಯರ ಕಳ್ಳ ಸಾಗಣೆಯ ಮೂಲಕ ಆರ್​ಎಸ್​​ಎಸ್​​ ತನ್ನ ಸಿದ್ಧಾಂತ ಹೇರಲು ಪ್ರಯತ್ನಿಸುತ್ತಿದೆ ಎಂದು ನೇಹಾ ದೀಕ್ಷಿತ್ ಬರೆದುಕೊಂಡಿದ್ದಾರೆ. ಈ ಎಲ್ಲ ಉದಾಹರಣೆಗಳೊಂದಿಗೆ ಕೇಂದ್ರ ಸರ್ಕಾರ ಅನೇಕ ವಿಷಯಗಳಂತೆ, ಮಹಿಳೆ ಮತ್ತು ಮಕ್ಕಳ ರಕ್ಷಣೆ ಹಾಗೂ ಕಲ್ಯಾಣ ವಿಷಯಗಳಲ್ಲೂ ಕೂಡ ಹಿಂದೆ ಬಿದ್ದಿದೆ ಎಂಬುದು ಸಾಬೀತಾದಂಥಾಗಿದೆ.

ನ್ಯಾಯಾಂಗದ ಮೇಲೆ ಕೇಂದ್ರದ ದಾಳಿಯ ಆರೋಪ

ದೇಶದ ನ್ಯಾಯಾಂಗದ ಇತಿಹಾಸದಲ್ಲೇ ಇದೇ ಮೊಟ್ಟ ಮೊದಲ ಬಾರಿ ಸುಪ್ರೀಂ ಕೋರ್ಟ್​​ನ 4 ನ್ಯಾಯಮೂರ್ತಿಗಳು ಮಾಧ್ಯಮದ ಮುಂದೆ ಬಂದು ತಮ್ಮ ಅಸಹಾಯಕತೆ ತೋಡಿಕೊಂಡ ಘಟನೆ ಮೋದಿಯವರ ಆಡಳಿತದ ಅವಧಿಯಲ್ಲಿ ನಡೆದಿದೆ. ತಾವು ಅಧಿಕಾರಕ್ಕೆ ಬಂದಲ್ಲಿ ನ್ಯಾಯಾಂಗ ನೇಮಕದಲ್ಲಿ ಸುಧಾರಣೆ ತರುವುದಾಗಿ ಬಿಜೆಪಿ ಹೇಳಿಕೊಂಡಿತ್ತು. ಆದರೆ, ನ್ಯಾಯಾಂಗದ ನೇಮಕದಲ್ಲಿ ಕೂಡ ರಾಜಕೀಯ ಹಸ್ತಕ್ಷೇಪದ ಆರೋಪ ಕೇಳಿ ಬಂದಿದೆ. ಕೊಲೀಜಿಯಂ ನೇಮಿಸಿದ ನ್ಯಾಯಮೂರ್ತಿಗೆ ಕೇಂದ್ರ ಅವಕಾಶ ನೀಡದ ಘಟನೆಗಳಿಗೆ ಕೂಡ ದೇಶ ಸಾಕ್ಷಿಯಾಗಿದೆ.

ಇದರೊಂದಿಗೆ ನ್ಯಾಯಮೂರ್ತಿ ಲೋಯ ಅನುಮಾನಾಸ್ಪದ ಸಾವು ಪ್ರಕರಣದ ತನಿಖೆಯಲ್ಲಿ ಕೂಡ ಬಿಜೆಪಿ ಮೂಗು ತೂರಿಸಿರುವ ಆರೋಪ ಕೇಳಿ ಬಂದಿದೆ. ಇವೆಲ್ಲ ಘಟನೆಗಳ ನಡುವೆ, ವಿಪಕ್ಷಗಳು ಸುಪ್ರೀಂ ಕೋರ್ಟ್​​ ನ್ಯಾಯಮೂರ್ತಿ ವಿರುದ್ಧ ಮಹಾಭಿಯೋಗಕ್ಕೆ ಮನವಿ ಸಲ್ಲಿಸಿದವು. ಆದರೆ, ರಾಜ್ಯಸಭೆ ಸಭಾಪತಿ ಎಂ ವೆಂಕಯ್ಯ ನಾಯ್ಡು, ಇದಕ್ಕೆ ಅವಕಾಶ ಕೊಡದೆ, ಕೇಂದ್ರಕ್ಕೆ ಎದುರಾಗಬಹುದಾಗಿದ್ದ ಮಹಾ ಮಾನ ಹಾನಿಯನ್ನು ತಡೆದಿದ್ದಾರೆ. ಒಂದು ವೇಳೆ, ರಾಜ್ಯಸಭೆಯಲ್ಲಿ ವಿಪಕ್ಷಗಳ ಮನವಿಯನ್ನು ಪರಿಗಣಿಸಿದ್ದಲ್ಲಿ ಕೇಂದ್ರಕ್ಕೆ ಮುಖಭಂಗವಾಗುತ್ತಿತ್ತು.

ಇನ್ನು ಆಧಾರ್, ಜಿಎಸ್​ಟಿ, ಇಂಧನ ಬೆಲೆ ಏರಿಕೆ, ದಿನಸಿ ವಸ್ತುಗಳ ಬೆಲೆ ಏರಿಕೆ ಕುರಿತು ಮೋದಿ ಅಧಿಕಾರಕ್ಕೆ ಬರುವ ಮುನ್ನ ಹೇಳಿದ್ದಕ್ಕೂ, ಈಗ ನಡೆದುಕೊಳ್ಳುತ್ತಿರುವುದಕ್ಕೂ ಒಂದೇ ಒಂದು ಅಂಶದಷ್ಟು ಕೂಡ ಹೊಂದಾಣಿಕೆ ಕಂಡು ಬಂದಿಲ್ಲ. ಈ ಎಲ್ಲ ಪ್ರಶ್ನೆಗಳಿಗೆ 2019ರ ಲೋಕಸಭೆ ಚುನಾವಣೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ, ಅವರ ಸಚಿವ ಸಂಪುಟದ ಸಚಿವರು, ಬಿಜೆಪಿ, ಆರ್​ಎಸ್​ಎಸ್ ಬೆಂಬಲಿಗರು ನೀಡಬೇಕಿದೆ. ಆದರೆ, ಅವರಿಂದ ಉತ್ತರ ನಿರೀಕ್ಷಿಸುವುದು ತಪ್ಪು ಎಂಬ ಅಭಿಪ್ರಾಯ ಬಹುತೇಕರಲ್ಲಿದೆ. ಏಕೆಂದರೆ, ಅವರು ಉತ್ತರ ಕೊಡುವ ಬದಲು ಈ ಹಿಂದಿನ ಸರ್ಕಾರಗಳು ಮಾಡಿರುವುದು ಏನು? ಎಂದು ಈಗಾಗಲೇ ಮೋದಿ ಸಮರ್ಥಕರು ಮತ್ತು ಬಿಜೆಪಿ ನಾಯಕರು ಕೇಳುತ್ತಿದ್ದಾರೆ. ಎಲ್ಲಕ್ಕೂ 2019ರ ಲೋಕಸಭೆ ಚುನಾವಣೆಯಲ್ಲಿ ಜನರೇ ಉತ್ತರ ಕೊಡುತ್ತಾರೆಯೇ? ಕಾದು ನೋಡಬೇಕಿದೆ.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *