ಪ್ರಧಾನಿ ಮೋದಿ ತವರಿನಲ್ಲಿ ಮಿಶ್ರ ಪ್ರತಿಕ್ರಿಯೆ

ಪ್ರಧಾನಿ ಮೋದಿ ತವರಿನಲ್ಲಿ ಮಿಶ್ರ ಪ್ರತಿಕ್ರಿಯೆ
ಗ್ರಾಮೀಣ ಪ್ರದೇಶದ ಮತದಾರರು ಕಾಂಗ್ರೆಸ್ ಪರ

ಗಾಂಧಿ ನಗರ: ದೇಶದ ಗಮನ ಸೆಳೆದಿರುವ ಗುಜರಾತ್ ವಿಧಾನಸಭೆ ಚುನಾವಣೆ ಎರಡು ಹಂತಗಳಲ್ಲಿ ನಡೆಯಲಿದ್ದು, ಮೊದಲ ಹಂತದ ಚುನಾವಣೆ ಇದೇ ಶನಿವಾರ ಮುಂಜಾನೆ 7ಕ್ಕೆ ಆರಂಭವಾಗಲಿದೆ. ಇಲ್ಲಿ ಸೋತಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ಮುಖಭಂಗವಾದಂತೆ. ಆದರೆ, ಸ್ಥಳೀಯಮಟ್ಟದಲ್ಲಿ ಬಿಜೆಪಿ ಕುರಿತು ಮತದಾರರ ಒಲವೇನು ಅನ್ನೋದ್ರ ಸಂಪೂರ್ಣ ವಿವರ ಇಲ್ಲಿದೆ.

ಗುಜರಾತ್​ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಇಂದು ಮೊದಲ ಹಂತದ ಚುನಾವಣೆಯ ಬಹಿರಂಗ ಪ್ರಚಾರ ಮುಕ್ತಾಯವಾಗಿದ್ದು, ಮನೆಮನೆ ಪ್ರಚಾರಕ್ಕೆ ಪಕ್ಷಗಳು ಮತ್ತು ಅಭ್ಯರ್ಥಿಗಳು ಮುಂದಾಗಿದ್ದಾರೆ. ಅಲ್ಲದೇ, ಅಂತಿಮ ಕ್ಷಣದಲ್ಲಿ ಮತದಾರರ ಮನ ಒಲಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಆದರೆ, ಗ್ರಾಮೀಣ ಮತ್ತು ಕಾರ್ಮಿಕ ವರ್ಗ ಈ ಬಾರಿ ಕಾಂಗ್ರೆಸ್ ಪರ ಒಲವು ತೋರಿಸುತ್ತಿದೆ.

2015ರಲ್ಲಿ ನಡೆದ ಪಂಚಾಯಿತಿ ಚುನಾವಣೆಗಳಲ್ಲಿ ಮತ್ತು 31 ಜಿಲ್ಲಾ ಪಂಚಾಯಿತಿಗಳ ಪೈಕಿ 24 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಶೇ. 48ರಷ್ಟು ಮತ ಗಳಿಸುವಲ್ಲಿ ಯಶಸ್ವಿಯಾಗಿದ್ರು. ಇನ್ನು ಬಿಜೆಪಿಯೇ ಆಡಳಿತದಲ್ಲಿರೋ 30 ಜಿಲ್ಲೆಗಳ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲೇ ಕಾಂಗ್ರೆಸ್ ಶೇ. 50.26ರಷ್ಟು ಮತ ಗಳಿಸಿದೆ. ಇದರೊಂದಿಗೆ 230 ತಾಲೂಕು ಪಂಚಾಯಿತಿಗಳ ಪೈಕಿ ಕಾಂಗ್ರೆಸ್ 134 ಮತ್ತು ಬಿಜೆಪಿ 67 ಕ್ಷೇತ್ರಗಳಲ್ಲಿ ಗೆದ್ದಿವೆ. ಈ ಮೂಲಕ ಗುಜರಾತ್​​ನ ಗ್ರಾಮೀಣ ಪ್ರದೇಶದ ಮತದಾರರು ಕಾಂಗ್ರೆಸ್ ಕಡೆ ಇರುವುದು ಸಾಬೀತಾಗಿದೆ.

ನೋಟು ನಿಷೇಧ ಮತ್ತು ಜಿಎಸ್​​ಟಿ ಜಾರಿ ನಂತರ ಕೂಡ ಸ್ಥಳೀಯ ಉದ್ಯಮಿಗಳು ಮೋದಿ ಪರವಾಗಿದ್ದಾರೆ. ಆದರೆ, ಇವರ ಅಡಿಯಲ್ಲೇ ಕರ್ತವ್ಯ ನಿರ್ವಹಿಸೋ ಕಾರ್ಮಿಕರು ಕಾಂಗ್ರೆಸ್ ಪರ ಒಲವು ತೋರಿಸುತ್ತಿದ್ದಾರೆ. ಗುಜರಾತ್​ನಲ್ಲಿ ಮೋದಿ ಮತ್ತು ಅಮಿತ್ ಶಾ ಅವರನ್ನು ಹಣಿಯೋಕೆ ಕಾಂಗ್ರೆಸ್ ಪಕ್ಷ ನೋಟು ನಿಷೇಧ ಮತ್ತು ಜಿಎಸ್​ಟಿ ವಿಷಯಗಳನ್ನಷ್ಟೇ ನೆಚ್ಚಿಕೊಂಡಿಲ್ಲ. ರಾಜ್ಯದಲ್ಲಿರುವ ಮುಸ್ಲಿಮರ ಮತ ಕಾಂಗ್ರೆಸ್ ಪರವಾಗಲಿವೆ ಅನ್ನೋದು ಕಾಂಗ್ರೆಸ್​​ನ ಲೆಕ್ಕಾಚಾರ. ಇನ್ನು ಗ್ರಾಮೀಣ ಮತ್ತು ಹೋಬಳಿ ಮಟ್ಟದ ಮತದಾರರು ಕಾಂಗ್ರೆಸ್ ಕೈ ಹಿಡಿಯುವ ವಿಶ್ವಾಸ ಕೂಡ ಕಾಂಗ್ರೆಸ್ಸಿಗರಲ್ಲಿದೆ.

ಬಿಜೆಪಿಯ 22 ವರ್ಷಗಳ ಆಡಳಿತದ ವಿರುದ್ಧ ರಾಹುಲ್ ಗಾಂಧಿ ಆನ್​ಲೈನ್ ಸಮರ ಸಾರಿದ್ದಾರೆ. ದಿನಕ್ಕೊಂದು ಪ್ರಶ್ನೆಗಳ ಮೂಲಕ ಇದುವರೆಗೆ 9 ಪ್ರಶ್ನೆಗಳನ್ನು ನರೇಂದ್ರ ಮೋದಿಯವರ ಮುಂದಿಟ್ಟಿದ್ದು, ಉದ್ಯೋಗ ಸೃಷ್ಟಿ, ಶಿಕ್ಷಣದಲ್ಲಿ ಗುಜರಾತಿನ ಸ್ಥಾನ, ವೇತನ ತಾರತಮ್ಯ, ವಿದ್ಯುತ್ ಕೊಳ್ಳುವಲ್ಲಿ ನಡೆದಿರುವ ಅಕ್ರಮಗಳ ಕುರಿತು ಟ್ವೀಟ್ ವಾರ್ ನಡೆಸಿದ್ದಾರೆ. ಈ ಮೂಲಕ ಸಂಘ ಪರಿವಾರ ಮತ್ತು ಮೋದಿಯವರನ್ನು ಒಟ್ಟಿಗೆ ಇಕ್ಕಟ್ಟಿಗೆ ಸಿಲುಕಿಸಲು ರಾಹುಲ್ ಗಾಂಧಿ ಯತ್ನಿಸುತ್ತಿದ್ದಾರೆ.

ಕಾಂಗ್ರೆಸ್​ನ ತಂತ್ರಕ್ಕೆ ಪ್ರತಿಯಾಗಿ ನರೇಂದ್ರ ಮೋದಿಯವರು ಕುಟುಂಬ ರಾಜಕಾರಣ ಮತ್ತು ಕಾಂಗ್ರೆಸ್ ಅವಧಿಯ ಇತಿಮಿತಿಗಳನ್ನೇ ಪ್ರಬಲ ಅಸ್ತ್ರಗಳನ್ನಾಗಿಸಿಕೊಂಡಿದ್ದಾರೆ. ಅಲ್ಲದೇ, ಅವರ ಬಹುತೇಕ ಭಾಷಣಗಳು ನೆಹರೂ, ಇಂದಿರಾಗಾಂಧಿ ಮತ್ತು ರಾಹುಲ್ ಗಾಂಧಿಯವರನ್ನೇ ಕೇಂದ್ರೀಕರಿಸಿವೆ. ಈ ಮೂಲಕ ರಾಜ್ಯದಲ್ಲಿ ಅಭಿವೃದ್ಧಿ, ಯೋಜನೆಗಳ ಕುರಿತು ಅವರಿಗೆ ಹೇಳುವುದಕ್ಕೆ ಏನೂ ಇಲ್ಲವೇನೋ? ಎಂಬ ಅನುಮಾನ ಕೂಡ ಮೂಡಿದೆ.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

 

0

Leave a Reply

Your email address will not be published. Required fields are marked *