ಮನೋ ಒತ್ತಡ ಅಪಾಯಕಾರಿ ಸ್ಫೋಟಕ

ಅಟಂಬಾಂಬ್, ಡೈನಮೇಟ್ ಮತ್ತು ಆರ್ ಎಕ್ಸ್ ಡಿ. ಇವುಗಳಿಗೆ ಸುತ್ತಮುತ್ತಲಿನ ಭೌತಿಕ ಪರಿಸರವನ್ನು ನಾಶಗೊಳಿಸುವ ಶಕ್ತಿಯಿದೆ. ಇವುಗಳ ಸಂಗ್ರಹಣೆ ಮತ್ತು ಬಳಕೆಯಲ್ಲಿ ಅತಿ ಜಾಗರೂಕತೆ ವಹಿಸದಿದ್ದರೆ ಅಪಾಯ ತಪ್ಪಿದ್ದಲ್ಲ. ಮನೋ ಒತ್ತಡವೂ ಇಷ್ಟೆ ಅಪಾಯಕಾರಿ. ಇದು ಕೇವಲ ಭೌತಿಕ ಮಟ್ಟದ ಅಪಾಯವಾಗಿರದೇ ಅಭೌತಿಕ ಮಟ್ಟದಲ್ಲಿಯೂ ಹಾನಿಯನ್ನುಂಟು ಮಾಡುತ್ತದೆ. ಆದ್ದರಿಂದ ಮನೋ ಒತ್ತಡಕ್ಕೆ ಈಡಾಗದಿರುವುದು. ಒಂದು ವೇಳೆ ಒತ್ತಡ ಉಂಟಾಗುವಂಥ ಪರಿಸರಲ್ಲಿ ಕೆಲಸ ಮಾಡುತ್ತಿದ್ದರೆ ಅದರ ನಿರ್ವಹಣೆ-ಬಿಡುಗಡೆಯನ್ನು ಸೂಕ್ತ ರೀತಿಯಲ್ಲಿ ಮಾಡಲು ಕಲಿಯುವುದು ಅತ್ಯಗತ್ಯ.
ನರದೌರ್ಬಲ್ಯ:
ಸುದೀರ್ಘ ಸಮಯದ ಮನೋ ಒತ್ತಡದಿಂದಾಗಿ ವ್ಯಕ್ತಿಯಲ್ಲಿ ನರದೌರ್ಬಲ್ಯ ಉಂಟಾಗುತ್ತದೆ. ಇದರಿಂದ ಅಂಥವರು ತಮ್ಮ ಯೋಚನೆ ಮತ್ತು ಕ್ರಿಯೆಗಳ ಮೇಲಿನ ಒತ್ತಡ ಕಳೆದುಕೊಳ್ಳುತ್ತಾರೆ. ಇವರ ವರ್ತನೆ ಸ್ವತಃ ಅವರಿಗೆ ಮಾತ್ರವಲ್ಲದೇ ಸುತ್ತಮುತ್ತಲೂ ಇರುವವರಿಗೂ ಕೆಡಕನ್ನುಂಟು ಮಾಡಬಲ್ಲದು. ಸೂಕ್ತ ಹಂತದಲ್ಲಿ ಚಿಕಿತ್ಸೆಯಾಗದಿದ್ದರೆ ಸರಿಪಡಿಸಲಾಗದಂಥ ಹಾನಿಯೂ ಉಂಟಾಗಬಲ್ಲದು.
ಮಿತಿ:
ಒತ್ತಡವನ್ನು ಸಹಿಸುವ ಶಕ್ತಿ ಎಲ್ಲರಲ್ಲಿಯೂ ಒಂದೇ ರೀತಿ ಇರುವುದಿಲ್ಲ. ಇದಕ್ಕೆ ಅವರು ಬೆಳೆದುಬಂದ ಪರಿಸರ ಅವರ ಮೇಲೆ ಉಂಟು ಮಾಡಿದ ಪರಿಣಾಮ ಕಾರಣವಾಗಿರುತ್ತದೆ. ತುಂಬ ಸಂವೇದನಾತ್ಮಕ ಪರಿಸರದಲ್ಲಿ ಬೆಳೆದವರು ಭಾವನಾಜೀವಿಗಳಾಗಿರುತ್ತಾರೆ. ಇಂಥವರು ತೀವ್ರ ಭಾವನಾತ್ಮಕ ಒತ್ತಡಗಳನ್ನು ಸಹಿಸಲಾರರು. ಇದನ್ನು ಭರಿಸುವ ಶಕ್ತಿ ಕಳೆದುಕೊಂಡಾಗ ಇವರಲ್ಲಿ ಮನೋ ಮತ್ತು ನರ ದೌರ್ಬಲ್ಯದ ಲಕ್ಷಣಗಳು ಕಾಣಿಸಿಕೊಳ್ಳಬಹುದು. ವ್ಯಕ್ತಿಯ ಶಾರೀರಿಕ ಸ್ಥಿತಿಗತಿಗಳು ಕೂಡ ಮನೋ ಒತ್ತಡವನ್ನು ಭರಿಸಬಹುದಾದ ಮಿತಿಯನ್ನು ನಿರ್ಧರಿಸುತ್ತವೆ.
ಸ್ವಭಾವಗಳು:
ರೂಢಿಸಿಕೊಂಡ ಸ್ವಭಾವಗಳು ಕೂಡ ಮನೋ ಒತ್ತಡವನ್ನು ಭರಿಸುವಂಥ ಮಿತಿಯನ್ನು ನಿರ್ಧರಿಸುತ್ತವೆ. ಬಹುಬೇಗನೇ ಯಾವುದೇ ವಿಷಯದ ಬಗ್ಗೆ ಉದ್ರೇಕಗೊಳ್ಳುವಂಥವರು, ಯೋಚನೆ ಮಾಡದೇ ಥಟ್ಟನೆ ಪ್ರತಿಕ್ರಿಯೆ ನೀಡುವಂಥವರು. ಅತೀವ ಮಹತ್ವಾಕಾಂಕ್ಷೆಯ ವ್ಯಕ್ತಿಗಳು ಬಲುಬೇಗ ಒತ್ತಡಕ್ಕೆ ಒಳಗಾಗುತ್ತಾರೆ. ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವ ಮತ್ತು ಅದಕ್ಕೆ ಅನುಗುಣವಾದ ಮನೋಭಾವವನ್ನು ಇವರು ವ್ಯಕ್ತಪಡಿಸುವುದಿಲ್ಲ. ಶಾಂತಚಿತ್ತದ ಮತ್ತು ಯಾವುದೇ ಕೆಲಸವನ್ನು ಯೋಚನೆ ಮಾಡಿ ಮಾಡುವಂಥ ಸ್ವಭಾವವುಳ್ಳವರು ಹೆಚ್ಚಿನ ಒತ್ತಡವನ್ನು ಭರಿಸುವಂಥ ಮನೋಶಕ್ತಿ ಹೊಂದಿರುತ್ತಾರೆ.
ಸಾವು-ನೋವು:
ಇಂಥ ಘಟನೆಗಳಿಗೆ ಸ್ಪಂದಿಸುವ ಗುಣ ಕೂಡ ಒಬ್ಬರಿಂದ ಒಬ್ಬರಿಗೆ ಭಿನ್ನವಾಗಿರುತ್ತದೆ. ಕುಟುಂಬ ಅಥವಾ ಅತ್ಯಂತ ಆತ್ಮೀಯ ವಲಯದ ವ್ಯಕ್ತಿ ಸಾವು ದಿಗ್ಭ್ರಮೆ ಮೂಡಿಸುತ್ತದೆ. ಇದರ ಷಾಕ್ನಿಂದ ಕೆಲವರು ಅಷ್ಟು ಸುಲಭವಾಗಿ ಚೇತರಿಸಿಕೊಳ್ಳಲಾರರು. ದೃಢಮನೋಭಾವದ ವ್ಯಕ್ತಿಗಳು ದುಃಖದ ಮನಸ್ಥಿತಿಯಿಂದ ಶೀಘ್ರ ಚೇತರಿಸಿಕೊಳ್ಳಬಲ್ಲರು. ಆದರೆ ಮೊದಲಿನ ವರ್ಗದವರಿಗೆ ಎಷ್ಟರ ಮಟ್ಟಿಗೆ ಆಘಾತವಾಗಿರುತ್ತದೆ ಎಂದರೆ ಅವರ ದೈನಂದಿನ ವ್ಯವಹಾರಗಳು ಮೊದಲಿನಂತೆ ಸರಾಗವಾಗಿ ಇರುವುದಿಲ್ಲ. ವ್ಯವಹಾರಗಳಲ್ಲಾಗುವ ಕಷ್ಟ-ನಷ್ಟಗಳಲ್ಲಿಯೂ ಇಂಥದ್ದೆ ಪರಿಸ್ಥಿತಿ ಉಂಟಾಗಬಹುದು.
ವೃತ್ತಿ ಕ್ಷೇತ್ರದ ಸವಾಲುಗಳು:
ಇಂದಿನ ಆಧುನಿಕ ಬದುಕಿನಲ್ಲಿ ಪ್ರತಿಯೊಂದು ವೃತ್ತಿಯೂ ಸವಾಲಿನದೇ. ಆದರೆ ಕೆಲವೊಂದು ವೃತ್ತಿಗಳು ಅತ್ಯಂತ ಹೆಚ್ಚಿನ ಸವಾಲು ಒಡ್ಡುವಂಥವು ಮತ್ತು ಅಷ್ಟೆ ತೀವ್ರವಾದ ಒತ್ತಡವನ್ನು ಹಾಕುವಂಥವು ಆಗಿರುತ್ತವೆ. ಇಂಥ ಕ್ಷೇತ್ರಗಳಲ್ಲಿ ಕೆಲಸ ಮಾಡುವವರು ಇಂಥ ಒತ್ತಡಕ್ಕೆ ಮಾನಸಿಕವಾಗಿ ಸಿದ್ದರಾಗದಿದ್ದರೆ ಅಪಾಯ ಗ್ಯಾರಂಟಿ. ಒಂದು ಅವರು ತಮಗೆ ಹಾನಿ ಮಾಡಿಕೊಳ್ಳಬಹುದು ಅಥವಾ ಜೊತೆಗಿರುವ ವ್ಯಕ್ತಿಗಳಿಗೆ ಹಾನಿ ಉಂಟು ಮಾಡಬಹುದು. ಕೆಲವು ಸಂದರ್ಭಗಳಲ್ಲಿ ಎರಡೂ ಕೂಡ ಸಂಭವಿಸುತ್ತದೆ.
ಅಭ್ಯಾಸಗಳು:
ಆಘಾತಕ್ಕೊಳಗಾದ ಸಂದರ್ಭದಲ್ಲಿ ಕೆಲವಾರು ಅಭ್ಯಾಸಗಳು ಅಂಟಿಕೊಳ್ಳುವ ಸಾಧ್ಯತೆಗಳಿರುತ್ತವೆ. ಅತೀವ ಒತ್ತಡದಿಂದ ಕೆಲವರು ಅತಿಯಾದ ಮದ್ಯಪಾನ ಮಾಡತೊಡಗುತ್ತಾರೆ. ಕೆಲವರು ಜೂಜುಗಳಿಗೆ ಶರಣಾಗುತ್ತಾರೆ. ಇನ್ನೂ ಕೆಲವರು ವೇಶ್ಯೆಯರ ಸಹವಾಸಕ್ಕೆ ಬೀಳುತ್ತಾರೆ. ಆದರೆ ಕೆಲವರು ತೀರ್ಥಯಾತ್ರೆ, ಧ್ಯಾನ-ಪೂಜೆ-ಪುನಸ್ಕಾರ-ಅಧ್ಯಯನಗಳಲ್ಲಿ ತೊಡಗಿ ಮನೋವಿಕಾಸಕ್ಕೆ ತನ್ಮೂಲಕ ಒತ್ತಡದ ಬಿಡುಗಡೆಗೆ ಯತ್ನಿಸುತ್ತಾರೆ.
ದುರಭ್ಯಾಸಗಳಿಗೆ ಒಳಗಾದವರು ಅದರಿಂದ ತಮಗೆ ಆಗಿರುವ ಒತ್ತಡದ ಬಿಡುಗಡೆ ಸಾಧ್ಯವಾಗುವುದೆಂದು ನಂಬುತ್ತಾರೆ. ಆದರೆ ಅದರಿಂದ ಅವರ ಒತ್ತಡ ಮತ್ತಷ್ಟು ಹೆಚ್ಚುತ್ತದೆ. ಅನೇಕರು ಕುಡಿದ ನಂತರ ಹಳೆಯದನ್ನೆಲ್ಲ ನೆನಪಿಸಿಕೊಂಡು ಅಳುತ್ತಿರುತ್ತಾರೆ. ಇದೇ ವರ್ತನೆ ಮುಂದುವರಿಯುತ್ತಲೇ ಇದ್ದರೆ ಇಂಥವರು ಆತ್ಮಹತ್ಯೆಗೆ ಶರಣಾಗುವ ಸಾಧ್ಯತೆಗಳು ಇರುತ್ತವೆ. ಜೂಜು, ವೇಶ್ಯಾ ಸಹವಾಸದಂಥ ಸಂದರ್ಭಗಳಲ್ಲಿಯೂ ಇಂಥ ಸಾಧ್ಯತೆ ಹೆಚ್ಚು.
ಮನೋದೈಹಿಕ ಬೇನೆಗಳು:
ತೀವ್ರವಾದ ಒತ್ತಡಗಳು ಬೇರೆಬೇರೆ ರೀತಿಯಲ್ಲಿ ಪ್ರಕಟವಾಗುತ್ತವೆ. ಇಂಥ ವ್ಯಕ್ತಿಗಳಲ್ಲಿ ತಲೆನೋವು, ಅರೆ ತಲೆನೋವು, ಬೆನ್ನುನೋವು, ಹೃದಯ ಸಂಬಂಧಿ ತೊಂದರೆಗಳು, ಜೀರ್ಣತೆಯ ವ್ಯವಸ್ಥೆಯಲ್ಲಿ ತೀವ್ರ ಏರು-ಪೇರು, ಬೇಧಿ ಮತ್ತು ಲೈಂಗಿಕ ನಿಶಕ್ತಿ-ನಿರಾಸಕ್ತಿ ಉಂಟಾಗಬಹುದು. ಇಂಥ ಲಕ್ಷಣಗಳು ಕಾಣಿಸಿಕೊಂಡಾಗ ಅವುಗಳನ್ನು ನಿರ್ಲಕ್ಷ್ಯ ಮಾಡದೇ ತುರ್ತಾಗಿ ವೈದ್ಯರನ್ನು ಕಾಣಬೇಕು. ಆದರೆ ದೈಹಿಕ ಚಿಕಿತ್ಸೆ ಪಡೆದರೆ ಸಾಲದು ಸಮಸ್ಯೆಯ ಮೂಲಕ್ಕೆ ಚಿಕಿತ್ಸೆ ಆಗುವುದು ಅಗತ್ಯ.
ಮನೋ ಚಿಕಿತ್ಸೆ:
ಮನೋ ಒತ್ತಡದಿಂದ ಉಂಟಾದ ದೈಹಿಕ ಬೇನೆಗಳಿಗೆ ಚಿಕಿತ್ಸೆ ಪಡೆದಾಗ ತಾತ್ಕಾಲಿಕವಾಗಿ ಗುಣವಾದಂತೆ ಕಂಡುಬರುತ್ತದೆ. ಆದರೆ ಮತ್ತೆಮತ್ತೆ ಸಮಸ್ಯೆ ಮರುಕಳಿಸುತ್ತಲೇ ಇದ್ದರೆ ಚಿಕಿತ್ಸೆಯಿಂದ ಯಾವುದೇ ಪ್ರಯೋಜನವಾಗುತ್ತಿಲ್ಲವೆಂದು ಕಳವಳಪಡುತ್ತಾರೆ. ಇದಕ್ಕೆ ಕಾರಣ ಮೂಲಕ್ಕೆ ಚಿಕಿತ್ಸೆ ಆಗದಿರುವುದೇ ಆಗಿದೆ. ಆದರೆ ಅನೇಕ ಮಂದಿಗೆ ನೀವು ಒಮ್ಮೆ ಮನೋವೈದ್ಯರನ್ನು ಭೇಟಿಯಾಗಿ ಎಂದರೆ ನನಗೇನು ಹುಚ್ಚೇ ಎನ್ನುವಂತೆ ಸಿಟ್ಟೆಗೇಳುತ್ತಾರೆ. ಇಂಥ ಸಿಟ್ಟಿಗೆ ಅರ್ಥವೇ ಇರುವುದಿಲ್ಲ. ಎಲ್ಲಿಯವರೆಗೂ ಅವರು ಮನೋಚಕಿತ್ಸೆ ಪಡೆಯುವುದಿಲ್ಲವೋ ಅಲ್ಲಿಯವರೆಗೂ ಸಮಸ್ಯೆ ಉಳಿಯುವುದಲ್ಲದೇ ಮತ್ತಷ್ಟು ಉಲ್ಬಣವಾಗುವ ಸಾಧ್ಯತೆ ಇರುತ್ತದೆ. ಮನೋವೈದ್ಯರನ್ನು ಸಂಪರ್ಕಿಸಿದಾಗ ಅವರು ಸಮಸ್ಯೆಯ ಮೂಲ ತಿಳಿದು ಅದಕ್ಕೆ ಚಿಕಿತ್ಸೆ ನೀಡುತ್ತಾರೆ. ಈ ಸಂದರ್ಭದಲ್ಲಿ ಕಂಡ ದೈಹಿಕ ತೊಂದರೆಗಳಿಗೂ ಅವರು ಚಿಕಿತ್ಸೆ ಸೂಚಿಸುತ್ತಾರೆ.

ಕುಮಾರ ರೈತ, ವಿಶೇಷ ಪ್ರತಿನಿಧಿ, ಸುದ್ದಿಟಿವಿ, ಬೆಂಗಳೂರು

0

Leave a Reply

Your email address will not be published. Required fields are marked *