ಮೀಟೂ ಅಭಿಯಾನಕ್ಕೆ ಮುಂದುವರೆದ ಬೆಂಬಲ

ಮೀಟೂ ಅಭಿಯಾನಕ್ಕೆ ದೇಶಾದ್ಯಂತ ವ್ಯಾಪಕ ಬೆಂಬಲ
ಪೊಲೀಸರಿಗೆ ದೂರು ನೀಡಿ ಎಂದ ಮಹಿಳಾ ಆಯೋಗ
ಕಾನೂನು ಕ್ರಮ ಎದುರಿಸಿ ಎಂದ ಆರೋಪಿ ಪರ ವಕೀಲ

ಮುಂಬೈ/ದೆಹಲಿ: ದೇಶದಲ್ಲಿ ಇಂದು ಕೂಡ ಮೀಟೂ ಅಭಿಯಾನ ಕುರಿತು ಸಾಕಷ್ಟು ಬೆಳವಣಿಗೆಗಳು ನಡೆದಿದ್ದು, ರಾಷ್ಟ್ರೀಯ ಮಹಿಳಾ ಆಯೋಗ ದೌರ್ಜನ್ಯಕ್ಕೆ ಒಳಗಾದವರ ಬೆಂಬಲಕ್ಕೆ ನಿಂತಿದೆ. ಸಿನಿಮಾ ಮತ್ತು ದೂರದರ್ಶನ ಸಂಘದ ನಿರ್ದೇಶಕರ ಸಂಘ ಕೂಡ ಮೀಟೂ ಅಭಿಯಾನವನ್ನು ಬೆಂಲಿಸಿದೆ. ಆದರೆ, ವಿಂಟಾ ನಂದಾ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಅಲೋಕ್​​ನಾಥ್ ಪರ ವಕೀಲರು ಹೇಳಿದ್ದಾರೆ.

ಲೈಂಗಿಕ ದೌರ್ಜನ್ಯಕ್ಕೆ ಬಹುತೇಕ ಮಹಿಳೆಯರು ಒಳಗಾಗುತ್ತಾರೆ ಎಂದು ಮೀಟೂ ಅಭಿಯಾನ ಕುರಿತು ರಾಷ್ಟ್ರೀಯ ಮಹಿಳಾ ಆಯೋಗದ ಮುಖ್ಯಸ್ಥೆ ರೇಖಾ ಶರ್ಮಾ ಹೇಳಿದ್ದಾರೆ. ತಮ್ಮ ಮೇಲೆ ನಡೆದ ದೌರ್ಜನ್ಯ ವಿಷಯವನ್ನು ಹೇಳದಿದ್ದಲ್ಲಿ ಇಂತಹ ಕೃತ್ಯಗಳು ಮುಂದುವರೆಯುತ್ತವೆ ಎಂದಿರುವ ಅವರು, ದೌರ್ಜನ್ಯ ನಡೆದರೆ ಪೊಲೀಸರಿಗೆ ದೂರು ನೀಡಿ ಎಂದು ಸಲಹೆ ನೀಡಿದ್ದಾರೆ. ಜೊತೆಗೆ ಸಂತ್ರಸ್ತೆಯರ ಜೊತೆಗೆ ಮಾತುಕತೆ ನಡೆಸುತ್ತಿರುವುದಾಗಿ ಅವರು ಹೇಳಿದ್ದಾರೆ.

ಅಲೋಕ್​​ನಾಥ್ ವಿರುದ್ಧ ಅತ್ಯಾಚಾರ ಆರೋಪ ಕುರಿತು ಪ್ರತಿಕ್ರಿಯಿಸಿರುವ ವಕೀಲ ಅಶೋಕ್ ಸಾರೋಗಿ, 19 ವರ್ಷಗಳ ಹಿಂದಿನ ಘಟನೆ ಕುರಿತು ಆರೋಪ ಮಾಡುವುದು ಸುಲಭ ಎಂದಿದ್ದಾರೆ. ಅಲ್ಲದೇ, ಆರೋಪ ಸಂಪೂರ್ಣ ನಿರಾಧಾರ ಎಂದ ಅವರು, ಮಾನಹಾನಿ ಮಾಡುವ ಉದ್ದೇಶದಿಂದ ಆರೋಪ ಮಾಡಲಾಗಿದೆ. ವಿಂಟಾ ನಂದಾ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಒಂದೆರೆಡು ದಿನಗಳಲ್ಲಿ ನೊಟೀಸ್ ನೀಡುತ್ತೇವೆ ಎಂದು ಅವರು ಹೇಳಿದರು.

ಕವಿ ವೈರಮುತ್ತು ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಗಾಯಕಿ ಆರೋಪ ಮಾಡಿದ್ದಾರೆ. ತಮ್ಮ ಮಗಳ ನಡೆ ಹಾಗೂ ಮೀಟೂ ಅಭಿಯಾನವನ್ನು ಸಮರ್ಥಿಸಿರುವ ಗಾಯಕಿಯ ತಾಯಿ, ಲೈಂಗಿಕ ದೌರ್ಜನ್ಯ ಕುರಿತು ಚರ್ಚೆಯಾಗುತ್ತಿರುವುದು ಒಳ್ಳೆಯ ನಡೆ ಎಂದಿದ್ದಾರೆ. ಆರೋಪಿಗಳು ತಲೆ ತಗ್ಗಿಸುವಂತೆ ಮಾಡುವುದು ನಮ್ಮ ಜವಾಬ್ದಾರಿ ಎಂದಿರುವ ಅವರು, ಮಗಳ ಹೇಳಿಕೆಯನ್ನು ಸಮರ್ಥಿಸಿದ್ದಾರೆ.

ಮೀಟೂ ಅಭಿಯಾನಕ್ಕೆ ಐಎಫ್​ಟಿಡಿಎ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಭಾರತೀಯ ಸಿನಿಮಾ ಮತ್ತು ದೂರದರ್ಶನ ನಿರ್ದೇಶಕರ ಸಂಘದ ಅಧ್ಯಕ್ಷ ಅಶೋಕ್ ಪಂಡಿತ್ ಹೇಳಿದ್ದಾರೆ. ಅಲೋಕ್​​​​ನಾಥ್ ಅವರಿಗೆ ನೊಟೀಸ್ ಕರಡು ಸಿದ್ಧವಾಗಿದೆ ಎಂದಿರುವ ಅವರು, ಸಂತ್ರಸ್ತೆ ವಿಂಟಾ ನಂದಾ ಕೂಡ ಗೌರವಾನ್ವಿತ ಸದಸ್ಯೆ. ಅವರ ಬೆಂಬಲಕ್ಕೆ ಸಂಘ ನಿಂತಿದೆ ಎಂದರು. ಇನ್ನು ಕೇಂದ್ರ ಸಚಿವ ಎಂ.ಜೆ.ಅಕ್ಬರ್ ವಿರುದ್ಧ ಅತ್ಯಾಚಾರ ಆರೋಪ ಕೇಳಿಬಂದಿದ್ದು, ಆರೋಪದ ಕುರಿತು ಅಕ್ಬರ್ ತೃಪ್ತಿದಾಯಕ ಉತ್ತರ ನೀಡಬೇಕು ಎಂದು ಕಾಂಗ್ರೆಸ್ ನಾಯಕ ಜೈಪಾಲ್ ರೆಡ್ಡಿ ಆಗ್ರಹಿಸಿದ್ದು, ಈ ಆರೋಪದ ಕುರಿತು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. ಈ ನಡುವೆ ಕೇಂದ್ರ ಸಚಿವ ಎಂ.ಜೆ.ಅಕ್ಬರ್ ವಿರುದ್ಧ ಅತ್ಯಾಚಾರ ಆರೋಪ ಹಿನ್ನೆಲೆಯಲ್ಲಿ ನೈತಿಕ ಹೊಣೆ ಹೊತ್ತು ಕೇಂದ್ರ ಸಚಿವರು ರಾಜಿನಾಮೆ ನೀಡಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ. ಅಕ್ಬರ್ ನನಗೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಪತ್ರಕರ್ತೆಯೊಬ್ಬರು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಸಚಿವರ ರಾಜಿನಾಮೆಗೆ ಒತ್ತಡ ಹೆಚ್ಚಿದೆ.

ಒಟ್ಟಿನಲ್ಲಿ ದಿನಕಳೆದಂತೆ ವಿವಿಧ ಕ್ಷೇತ್ರಗಳಲ್ಲಿ ನಡೆದಿರುವ ದೌರ್ಜನ್ಯದ ವಿರುದ್ಧ ದೇಶದಲ್ಲಿ ವ್ಯಾಪಕ ಜನಾಭಿಪ್ರಾಯ ರೂಪುಗೊಳ್ಳುತ್ತಿದ್ದು, ತಮ್ಮ ಮೇಲೆ ದೌರ್ಜನ್ಯ ನಡೆಸಿದವರ ವಿರುದ್ಧ ಸಂತ್ರಸ್ತ ಮಹಿಳೆಯರು, ಬಾಲಕಿಯರು ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ನೋವನ್ನು ಹಂಚಿಕೊಳ್ಳತೊಡಗಿದ್ದಾರೆ.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *