ಜನಪದದ ಉಳಿವಿಗೆ ಪಣತೊಟ್ಟಿರುವ ಗಾಯಕಿ ಮಂಗ್ಕಾ ಮಯಂಗಲಂಬಮ್

ಗಾಯನಕ್ಕೂ ಸೈ, ನಟನೆಗೂ ಜೈ ಎನ್ನುವ ಕಲಾವಿದೆ
ಮಣಿಪುರದ ಸಮೃದ್ಧ ಜನಪದವನ್ನು ಜಗತ್ತಿಗೆ ಪರಿಚಯಿಸುವ ಕೈಂಕರ್ಯ

ಮಣಿಪುರದ ಕಲಾವಿದೆಯೊಬ್ಬರು ಜಾನಪದವನ್ನು ಉಳಿಸುವ ದೊಡ್ಡ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಜಾನಪದ ಹಾಗೂ ಇತರ ಗೀತೆಗಳ ಗಾಯಕಿ ಹಾಗೂ ನೃತ್ಯಗಾತಿಯಾಗಿರುವ ಮಂಗ್ಕಾ ಮಯಂಗಲಂಬಮ್, ತಮ್ಮ ಜನಪದ ಗೀತೆಗಳನ್ನು ಉತ್ತುಂಗಕ್ಕೆ ಕೊಂಡೊಯ್ಯಲು ಪಣ ತೊಟ್ಟಿದ್ದಾರೆ.

ಭಾರತದಲ್ಲಿ ಸಮೃದ್ಧವಾದ ಜನಪದ ಸಾಹಿತ್ಯ ಅಸ್ತಿತ್ವದಲ್ಲಿದೆ. ಅದರಲ್ಲೂ ಈಶಾನ್ಯ ಭಾರತದಲ್ಲಿ ಇದರ ವಿಭಿನ್ನ ಪ್ರಕಾರಗಳು ಜನಮಾನಸದಲ್ಲಿ ಉಳಿದಿವೆ. ಆದರೆ, ಇತ್ತೀಚಿಗೆ ಆಧುನಿಕತೆಯ ಭರಾಟೆಯಲ್ಲಿ ಹಿನ್ನೆಲೆಗೆ ಕೂಡ ಸರಿಯುತ್ತಿವೆ. ಮಣಿಪುರದ ಗಾಯಕಿ ಮಂಗ್ಕಾ ಮಯಂಗಲಂಬಮ್ ಅವರು ತುಂಬಾ ಆಸ್ಥೆ, ಮುತುವರ್ಜಿ ವಹಿಸಿ ತಮ್ಮ ಪ್ರದೇಶದಲ್ಲಿ ಅಸ್ತಿತ್ವದಲ್ಲಿರುವ ಜನಪದ ಗೀತೆಗಳನ್ನು ಮುಂದಿನ ಜನಾಂಗಕ್ಕೆ ದಾಟಿಸುವ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸ್ತಿದಾರೆ.

ಮಣಿಪುರ ಕಲೆ, ಸಂಸ್ಕೃತಿ ವಿಷಯಗಳಿಗೆ ಸಂಬಂಧಪಟ್ಟಂತೆ ಅತ್ಯಂತ ಸಮೃದ್ಧ ರಾಜ್ಯ. ಇದರ ಅತ್ಯುತ್ತಮ ಪ್ರತಿಫಲನ ಸಂಗೀತದಲ್ಲಿದೆ. ವಿವಿಧ ಬಗೆಯ ಜನಪದ ಸಂಗೀತ ಪರಿಕರ ಮತ್ತು ಪ್ರಕಾರಗಳಿಗೆ ಮಾನವರ ಸಂವೇದನೆಯನ್ನು ಜಾಗೃತಗೊಳಿಸುವ ಶಕ್ತಿ ಇದೆ. ಈ ಜನಪದ ಸಂಗೀತವನ್ನು ಉಳಿಸಿ, ಬೆಳೆಸುವ ಮತ್ತು ಮುಂದಿನ ಜನಾಂಗಕ್ಕೆ ಯಶಸ್ವಿಯಾಗಿ ದಾಟಿಸುವ ಹೊಣೆಯನ್ನು ಸ್ವತಃ ಮಂಗ್ಕಾ ಮಯಂಗಲಂಬಮ್ ತಮ್ಮ ಹೆಗಲಿಗೆ ಏರಿಸಿಕೊಂಡಿದ್ದಾರೆ. ಅಂದಹಾಗೆ ಇವರಿಗೆ ಪಾಪ್ ಗಾಯನದಲ್ಲಿ ಕೂಡ ಆಸಕ್ತಿ ಇದೆ.

ಮಂಗ್ಕಾ ಮಯಂಗಲಂಬಮ್ ಅತಿ ಚಿಕ್ಕ ವಯಸ್ಸಿಗೆ ಸಂಗೀತವನ್ನು ತನ್ನ ಗುರುಗಳಾದ ಲಂಗ್ತೆಲ್ ತೊಯ್ನು ಅವರ ಬಳಿ ಆರಂಭಿಸಿದ್ದರು. ಜನಪದ ಸಂಗೀತವನ್ನು ಸಣ್ಣ ವಯಸ್ಸಿನಲ್ಲಿ ಕೇಳುತ್ತಾ, ಅದರ ಪ್ರಭಾವಕ್ಕೆ ಒಳಗಾಗಿಬಿಟ್ಟರು. ತಮ್ಮ ಮನೆಗೆ ಬರುವ ಬಹುತೇಕ ಅತಿಥಿಗಳು ಲಾಯಿ ಹುಯಿ ಸಂಗೀತವನ್ನು ಜೀವಿಸುತ್ತಿದ್ದರು. ಬಾಲ್ಯದ ನಂತರ ಮಯಂಗಲಂಬಮ್ ಲಾಯಿ ಹರೋಬಾ ಕಡೆ ಆಕರ್ಷಿತರಾದರು. ಅನಂತರ ಪ್ರತಿನಿತ್ಯ ಇದರ ಅಭ್ಯಾಸದಲ್ಲಿ ಕೂಡ ತೊಡಗಿಕೊಂಡರು. ಇವರಿಗೆ ಸ್ಫೂರ್ತಿಯಾಗಿ ನಿಂತಿರುವವರು ಇವರ ತಂದೆ ಮಯಂಗಲಂಬಮ್ ಮಂಗಂಗ್ಸನ. ಅವರು ಕೂಡ ಹಾಡು, ನಾಟಕ ಬರೆಯುವುದರ ಜೊತೆಗೆ, ಹಾಡುಗಳಿಗೆ ಸಂಗೀವನ್ನು ಕೂಡ ಸಂಯೋಜಿಸುತ್ತಾರೆ.

ನಿರಂತರ ಪರಿಶ್ರಮ ಮತ್ತು ಕಲಿಕೆಯ ಮೂಲಕ ಸಂಗೀತದ ಮೇಲೆ ಪ್ರಭುತ್ವವನ್ನು ಸಾಧಿಸಿದ್ದಾರೆ. ಎ ಹೌಸ್ ಅಂಡ್​ ಅ ಗಿಟಾರ್​ ಯೂಟೂಬ್ ಜಾಲತಾಣದ ಮೂಲಕ 2013ರ ಆಗಸ್ಟ್​​​ನಲ್ಲಿ ಪ್ರಸಾರವಾದ ಅವರ ವೀಡಿಯೋ ಒಂದು ಅವರಿಗೆ ಭಾರೀ ಜನಪ್ರಿಯತೆಯನ್ನು ತಂದುಕೊಟ್ಟಿತು. ಈ ವೀಡಿಯೋದಲ್ಲಿ ತಮ್ಮ ಗಾಯನ, ನಟನೆ ಮತ್ತು ನೃತ್ಯಗಳೆಲ್ಲವನ್ನೂ ಅವರು ಒಟ್ಟಿಗೆ ಬೆಸೆದುಬಿಟ್ಟಿದ್ದರು. ತನ್ನ ಸೋದರನ ಸಂಗೀತ ಉಪಕರಣದ ಏರಿಳಿತಕ್ಕೆ ತಮ್ಮ ದನಿಗೂಡಿಸಿದ್ದರು.

2014ರಲ್ಲಿ 8ನೇ ಮಣಿಪುರ ಅಂತಾರಾಷ್ಟ್ರೀಯ ಪೋಲೋದಲ್ಲಿ ಹದ ಶಮತೋನ್ ಹಾಡನ್ನು ಪ್ರಸ್ತುತಪಡಿಸುವ ಅವಕಾಶ ಅವರಿಗೆ ಲಭಿಸಿತ್ತು. ಅನಂತರ 2014ರಲ್ಲಿ ಮಂಗ್ಕಾ ಅವರು ಕೊಲಂಬೋದ ಏಷ್ಯಾ ಪೆಸಿಫಿಕ್ ಬ್ರಾಡ್​​ಕಾಸ್ಟಿಂಗ್ ರೇಡಿಯೋ ಸಾಂಗ್ ಫೆಸ್ಟಿವಲ್​​ನಲ್ಲಿ ಕೂಡ ಪ್ರದರ್ಶನ ನೀಡಿದರು. ಇತ್ತೀಚೆಗೆ ಅಂತಾರಾಷ್ಟ್ರೀಯ ಸಹಯೋಗದಲ್ಲಿ ಹವಾಯಿ, ಲಂಡನ್ ಮತ್ತು ಜಪಾನ್​​​​ ದೇಶಗಳಲ್ಲಿ ಲಾಯಿ ಹುಯಿ ಪ್ರಕಾರವನ್ನು ಪ್ರಸಾರ ಮಾಡುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಇದರೊಂದಿಗೆ ಮಕ್ಕಳಿಗೆ ಈ ಪ್ರಕಾರವನ್ನು ಕಲಿಸುವ ಕೆಲಸವನ್ನು ಕೂಡ ತುಂಬಾ ಶ್ರದ್ಧೆಯಿಂದ ನಡೆಸುತ್ತಾರೆ.

ಕಾಲಾ ನಂತರ ಅವರ ಜಾನಪದ ಪ್ರದರ್ಶನಗಳಿಗೆ ದೇಶ ವಿದೇಶದ ಪುರಸ್ಕಾರಗಳು ಲಭಿಸಿವೆ. ನೂರ ಪಖಂಗ್ ಹೆಸರಿನ ಆಲ್ಬಮ್ ಒಂದು ಫ್ರೆಂಚ್ ಭಾಷೆಯಲ್ಲಿ ಬಿಡುಗಡೆಯಾಗಿದೆ. ಈ ಆಲ್ಬಮ್​​ ಪಾಪ್ ಬ್ಯಾಂಡ್​​ ಭಾರೀ ಪ್ರಶಂಸೆಗೆ ಕೂಡ ಒಳಪಟ್ಟಿದೆ. ತಮ್ಮ ಸ್ಥಳೀಯ ಜಾನಪದವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದಿದಾರೆ. ಇಂಥವರ ಸಂತತಿ ಸಾವಿರವಾಗಬೇಕು. ಈ ಮೂಲಕ ಸ್ಥಳೀಯ ಜಾನಪದ ಪ್ರಕಾರಗಳು ಜಾಗತಿಕ ಮಟ್ಟಕ್ಕೆ ಏರಬಹುದು.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *