ಮೋದಿ ನೀಚ ಎಂದದ್ದಕ್ಕೆ ಕ್ಷಮೆ ಕೋರಿದ ಮಣಿಶಂಕರ್ ಅಯ್ಯರ್

ನವದೆಹಲಿ: ಪ್ರಧಾನಿ ಮೋದಿ ವಿರುದ್ಧ ಕೆಟ್ಟ ಪದ ಬಳಕೆ ವಿಚಾರದ ಕುರಿತು ಮಾಜಿ ಸಚಿವ ಮತ್ತು ಕಾಂಗ್ರೆಸ್​ನ ಹಿರಿಯ ನಾಯಕ ಮಣಿಶಂಕರ್ ಅಯ್ಯರ್, ಕ್ಷಮೆ ಕೋರಿದ್ದಾರೆ. ನೀಚ ಶಬ್ದಕ್ಕೆ ಭಿನ್ನ ವ್ಯಾಖ್ಯಾನಗಳಿರಬಹುದು ಎಂದಿರುವ ಅವರು, ಮೋದಿಯವರನ್ನು ನಿಂದಿಸುವುದು ನನ್ನ ಉದ್ದೇಶವಾಗಿರಲಿಲ್ಲ. ಅದಕ್ಕಾಗಿ ನಾನು ಈಗಾಗಲೇ ಕ್ಷಮೆ ಕೋರಿದ್ದೇನೆ ಎಂದರು.

ಜೊತೆಗೆ ನಾನು ಕಾಂಗ್ರೆಸ್​​ನ ಸಾಮಾನ್ಯ ಕಾರ್ಯಕರ್ತ. ನಾನು ಗುಜರಾತ್​​ನಲ್ಲಿ ಚುನಾವಣಾ ಪ್ರಚಾರ ಕೈಗೊಂಡಿಲ್ಲ. ಆದರೂ ನನ್ನ ಹೇಳಿಕೆಗೆ ಇಷ್ಟೊಂದು ಗದ್ದಲ ಏಕೆ? ಎಂದು ಅಯ್ಯರ್ ಪ್ರಶ್ನಿಸಿದ್ದಾರೆ. ಅಲ್ಲದೇ, ನನ್ನ ತಾಯಿನುಡಿ ಹಿಂದಿಯಲ್ಲ. ನಾನು ಇಂಗ್ಲಿಷ್​ನಲ್ಲಿ ಆಲೋಚಿಸಿ, ಹಿಂದಿಯಲ್ಲಿ ಮಾತನಾಡುತ್ತೇನೆ. ಈ ಪದಕ್ಕೆ ಕೆಟ್ಟ ಅರ್ಥವಿದ್ದಲ್ಲಿ ನಾನು ಕ್ಷಮೆ ಕೋರುತ್ತೇನೆ ಎಂದು ಸ್ಪಷ್ಟೀಕರಣವನ್ನೂ ನೀಡಿದ್ದಾರೆ.

ಇದಕ್ಕೂ ಮುನ್ನ ಅಯ್ಯರ್ ಅವರ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ್ದ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ, ಕಾಂಗ್ರೆಸ್ ಪಕ್ಷ ಮತ್ತು ತಾವು ಮಣಿಶಂಕರ್​ ಅಯ್ಯರ್ ಕ್ಷಮೆಯಾಚಿಸುವಂತೆ ಕೋರುವುದಾಗಿ ಹೇಳಿದ್ದರು. ಅಲ್ಲದೇ, ಕಾಂಗ್ರೆಸ್​ಗೆ ತನ್ನದೇ ಆದ ಸಂಸ್ಕೃತಿ ಮತ್ತು ಸಂಪ್ರದಾಯವಿದೆ. ಈ ರೀತಿಯ ಭಾಷಾ ಪ್ರಯೋಗ ಒಳ್ಳೆಯದಲ್ಲ ಎಂದಿದ್ದರು. ಜೊತೆಗೆ, ಬಿಜೆಪಿ ಮತ್ತು ಸ್ವತಃ ಪ್ರಧಾನಿ ನರೇಂದ್ರ ಮೋದಿಯವರು, ಕಾಂಗ್ರೆಸ್ ವಿರುದ್ಧ ಕೆಟ್ಟ ಪದಗಳನ್ನು ಬಳಸಿದ್ದಾರೆ. ಬಿಜೆಪಿ ಸದಾ ಕೆಟ್ಟ ಭಾಷೆಯನ್ನೇ ಬಳಸುತ್ತದೆ ಎಂದು ಆರೋಪಿಸಿದ್ದರು.

ಈ ಕುರಿತು ಪ್ರತಿಕ್ರಿಯಿಸಿದ್ದ ಹಣಕಾಸು ಸಚಿವ ಅರುಣ್ ಜೇಟ್ಲಿ, ಇದು ಕೇವಲ ಕೆಟ್ಟ ಭಾಷಯ ಬಳಕೆಯ ಪ್ರಶ್ನೆಯಲ್ಲ. ಇದು ಕಾಂಗ್ರೆಸ್​​​ನ ಮನಃಸ್ಥಿತಿ ಎಂದು ಕಿಡಿಕಾರಿದ್ದರು. ಅಲ್ಲದೇ, ಒಂದೇ ಕುಟುಂಬ ದೇಶವನ್ನು ಆಳಬೇಕು ಎಂದು ಕಾಂಗ್ರೆಸ್ ಬಯಸುತ್ತದೆ. ಕೆಳ ಸಮುದಾಕ್ಕೆ ಸೇರಿದವರು ಪ್ರಧಾನಿಯಾದರೆ ಅವರನ್ನು ಚಾಯ್​ವಾಲಾ ಮತ್ತು ನೀಚ ಎಂದು ಕರೆಯಲಾಗುತ್ತದೆ ಎಂದು ವಾಗ್ದಾಳಿ ನಡೆಸಿದ್ದರು.

ಈ ಆರೋಪದ ಕುರಿತು ಪ್ರತಿಕ್ರಿಯಿಸಿದ ಮಣಿಶಂಕರ್ ಅಯ್ಯರ್, ನಾನು ಮೋದಿಯವರನ್ನು ಚಾಯ್​ವಾಲಾ ಎಂದು ಕರೆದೇ ಇಲ್ಲ. ಬೇಕಿದ್ದಲ್ಲಿ ಹಳೆಯ ವೀಡಿಯೋಗಳನ್ನು ಪರೀಕ್ಷಿಸಿ ಎಂದು ಅವರು ಸವಾಲು ಹಾಕಿದ್ದಾರೆ. ಆದರೂ, ಇಂದು ಇಡೀ ದಿನ ಗುಜರಾತ್ ಚುನಾವಣೆಯನ್ನೂ ಸೇರಿದಂತೆ ಮತ್ತು ಮಾಧ್ಯಮಗಳಲ್ಲಿ ಮಣಿಶಂಕರ್ ಅಯ್ಯರ್ ಹೇಳಿಕೆಯೇ ಪ್ರಾಮುಖ್ಯತೆಯನ್ನು ಪಡೆಯಿತು ಅಚ್ಚರಿಯ ವಿಚಾರವೆಂದರೆ ಅವರು ನೀಡಿದ ಸ್ಪಷ್ಟೀಕರಣಕ್ಕೆ ಒತ್ತು ಕೊಡುವ ಬದಲು, ವಿವಾದಿತ ಹೇಳಿಕೆಯ ಸುತ್ತಲೇ ವಿದ್ಯುನ್ಮಾನ ಮಾಧ್ಯಮಗಳು ಗಮನ ನೀಡಿದವು.

ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ತಮ್ಮ ವಿರುದ್ಧ ನೀಚ ಎಂಬ ಹೇಳಿಕೆ ನೀಡಿದ್ದ ಕುರಿತು ಗುಜರಾತ್ ಚುನಾವಣೆಯ ಪ್ರಚಾರ ಸಭೆಯಲ್ಲಿ ಪ್ರತಿಕ್ರಿಯಿಸಿದ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸ್ವೀಕಾರಾರ್ಹವಲ್ಲದ ಭಾಷೆಯನ್ನು ಬಳಸುತ್ತಿದ್ದಾರೆ ಎಂದು ಆರೋಪಿಸಿದರು. ಅತ್ಯುತ್ತಮ ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಯನ ಮಾಡಿರುವ ಮತ್ತು ರಾಜತಾಂತ್ರಿಕ ಹುದ್ದೆಗಳನ್ನು ನಿರ್ವಹಿಸಿರುವ, ಸಂಪುಟ ದರ್ಜೆಯ ಸ್ಥಾನವನ್ನು ನಿರ್ವಹಿಸಿರುವ ನಾಯಕ ಮೋದಿ ನೀಚ ಎನ್ನುತ್ತಿದ್ದಾರೆ. ಇದು ಅವಮಾನಕರ. ಇದು ಮೊಘಲ್​​ರ ಮನಃಸ್ಥಿತಿ ಎಂದು ವಾಗ್ದಾಳಿ ನಡೆಸಿದರು.

ಈ ನಡುವೆ ಮೊಘಲರು 6,000 ಹಿಂದೂ ಸ್ಥಳಗಳನ್ನು ನಾಶಪಡಿಸಿದ್ದಾರೆ. ಕಾಂಗ್ರೆಸ್ ಬಾಬ್ರಿ ಮಸೀದಿ ನಿರ್ಮಾಣಕ್ಕೆ ಮುಂದಾದರೆ, ನಾವು ಈ ಸ್ಥಳಗಲ ಮೇಲೆ ಹಕ್ಕು ಮಂಡಿಸುತ್ತೇವೆ ಎಂದ ಬಿಜೆಪಿ ನಾಯಕ ವಿನಯ್ ಕಟಿಯಾರ್ ವಿವಾದಾಸ್ಪದ ಹೇಳಿಕೆ ಹಿನ್ನೆಲೆಗೆ ಸರಿಯಿತು.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *