ಮಹಾತ್ಮಾ ಗಾಂಧಿ ಹತ್ಯೆಯಿಂದ ಕಾಂಗ್ರೆಸ್​ಗೆ ಲಾಭವಾಗಿದೆ: ಉಮಾ ಭಾರತಿ

ಬನಸ್ಕಾಂತ: ಮಹಾತ್ಮ ಗಾಂಧಿಯವರ ಹತ್ಯೆಯಿಂದ ಕಾಂಗ್ರೆಸ್​ಗೆ ಲಾಭವಾಗಿದೆ. ಅವರು ಕಾಂಗ್ರೆಸ್​​ ಪಕ್ಷವನ್ನು ನಿಷೇಧಿಸಬೇಕು ಎಂದಿದ್ದರು ಎಂದು ಕೇಂದ್ರ ಸಚಿವೆ ಉಮಾ ಭಾರತಿ ಹೊಸ ವಿವಾದಕ್ಕೆ ನಾಂದಿ ಹಾಡಿದ್ದಾರೆ. ಗೋಡ್ಸೆ ಗಾಂಧಿಯವರನ್ನು ಕೊಂದಿರಬಹುದು. ಆದರೆ, ಅವರಿಗೆ ಪ್ರಚೋದನೆ ಕೊಟ್ಟವರು ಯಾರು ಎಂದು ಪ್ರಶ್ನಿಸಿದರು.

ಮಹಾತ್ಮಾ ಗಾಂಧಿಯವರು ಜನವರಿ 30, 1948ರಂದು ಹಿಂದೂ ಮಹಾಸಭೆಯ ನಾಥೂರಾಂ ವಿನಾಯಕ ಗೋಡ್ಸೆ ದೆಹಲಿಯಲ್ಲಿ ಗುಂಡು ಹಾರಿಸುವ ಮೂಲಕ ಹತ್ಯೆಗೈದಿದ್ದರು.

ಗಾಂಧಿ ಹತ್ಯೆ ಪ್ರಕರಣದ ಮರುವಿಚಾರಣೆ ಕುರಿತ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್​​​ ಕಳೆದ ಅಕ್ಟೋಬರ್ 6ರಂದು ಕೇಂದ್ರ ಸರ್ಕಾರದ ಹೆಚ್ಚುವರಿ ಸಾಲಿಸಿಟರ್ ಜನರಲ್ ಅಮರೆಂದರ್ ಶರಣ್ ಅವರನ್ನು ಕೋರ್ಟ್​ನ ಪ್ರತಿನಿಧಿಯಾಗಿ ನೇಮಿಸಿತ್ತು. ಸಂಶೋಧಕ ಮತ್ತು ಅಭಿನವ್ ಭಾರತ್ ಟ್ರಸ್ಟ್​​​ನ ಧರ್ಮದರ್ಶಿಯಾಗಿರುವ ಮುಂಬೈ ಮೂಲದ ಡಾ. ಪಂಕಜ್ ಫಡ್ನಿಸ್ ಗಾಂಧಿ ಹತ್ಯೆ ಕುರಿತು ಮರು ತನಿಖೆ ನಡೆಸುವಂತೆ ಅರ್ಜಿ ಸಲ್ಲಿಸಿದ್ದರು.

ಬಿಜೆಪಿಯ ಗೌರವ ಯಾತ್ರೆಯಲ್ಲಿ ಭಾಗವಹಿಸಿದ್ದ ಉಮಾ ಭಾರತಿಯವರು, ಗುಜರಾತ್​​​ನ ಜನರ ಹೆಮ್ಮೆಯನ್ನು ಬಿಜೆಪಿ ದೇಶದಾದ್ಯಂತ ಹೆಚ್ಚಿಸಿದೆ ಎಂದರು. ಅಲ್ಲದೇ, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 160 -165 ಸ್ಥಾನಗಳನ್ನು ಗಳಿಸಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಪ್ರಕಾರ, ಪಕ್ಷ 150 ಕ್ಷೇತ್ರಗಳಲ್ಲಿ ಗೆಲ್ಲಲಿದೆ. ಆದರೆ, ಅದಕ್ಕೂ ಹೆಚ್ಚಿನ ಕ್ಷೇತ್ರಗಳಲ್ಲಿ ಪಕ್ಷ ಜಯಭೇರಿ ಬಾರಿಸಲಿದೆ ಎಂದು ಉಮಾ ಹೇಳಿದರು. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರ ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷಗಳ ವಿರುದ್ಧದ ಆರೋಪಗಳ ಕುರಿತ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ರಾಹುಲ್ ಅವರು ತಮ್ಮ ಪಕ್ಷದಲ್ಲಿ ದೊಡ್ಡ ನಾಯಕರಾಗಿರಬಹುದು. ಆದರೆ ನನಗೆ ಅವರು ದೊಡ್ಡ ನಾಯಕರಲ್ಲ. ಅವರ ಆರೋಪಗಳ ಕುರಿತು ನಾನು ಪ್ರತಿಕ್ರಿಯಿಸುವುದಿಲ್ಲ ಎಂದರು.

ಗುಜರಾತ್ ಮಾದರಿಯ ಕಾರಣದಿಂದಲೇ ನರೇಂದ್ರ ಮೋದಿಯವರು ಭಾರತದ ಪ್ರಧಾನಿಯಾಗಿದ್ದಾರೆ. ವಿಪಕ್ಷಗಳು ಕೂಡ ಗುಜರಾತ್ ರಾಜ್ಯವನ್ನು ನರೇಂದ್ರ ಮೋದಿಯವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಮಾದರಿ ರಾಜ್ಯವಾಗಿಸಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದರು.

4ನೇ ವಿಧಾನಸಭೆ ಚುನಾವಣೆ ಶೀಘ್ರದಲ್ಲೇ ನಡೆಯಲಿದ್ದು, 13ನೇ ವಿಧಾನಸಭೆಯ ಅವಧಿ ಜನವರಿ 22, 2018ರಂದು ಮುಕ್ತಾಯವಾಗಲಿದೆ.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *