ಮಹದೇವ ಪ್ರಸಾದ್ ಮೈಸೂರು ನಿವಾಸದಲ್ಲಿ ಮಡುಗಟ್ಟಿದ ಶೋಕ

ಮೈಸೂರು, ಜನವರಿ 3 : ರಾಜ್ಯದ ಸಕ್ಕರೆ ಹಾಗೂ ಸಹಕಾರ ಮತ್ತು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಎಸ್.ಮಹದೇವಪ್ರಸಾದ್ (58) ಮಂಗಳವಾರ ಬೆಳಿಗ್ಗೆ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದು, ಅವರ ಮೈಸೂರಿನ ಕುವೆಂಪುನಗರ ನಿವಾಸದಲ್ಲಿ ಶೋಕ ಮಡುಗಟ್ಟಿದೆ.
ಚಿಕ್ಕಮಗಳೂರಿನಲ್ಲಿ ನಡೆಯಲಿರುವ ಸಹಕಾರಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳಿದ್ದ ಮಹದೇವಪ್ರಸಾದ್ ಮಂಗಳವಾರ ಬೆಳಿಗ್ಗೆ 5.30ರಿಂದ 6 ಗಂಟೆಯ ವೇಳೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಎನ್ನಲಾಗುತ್ತಿದೆ. ಬೆಳಿಗ್ಗೆ 9.45 ಆದರೂ ಕಾರ್ಯಕ್ರಮಕ್ಕೆ ಆಗಮಿಸದ ಹಿನ್ನೆಲೆಯಲ್ಲಿ ಸ್ಥಳಕ್ಕೆ ತೆರಳಿ ಹೋಗಿ ನೋಡಲಾಗಿ ಅವರು ಪ್ರಜ್ಞೆ ಇಲ್ಲದೇ ಮಲಗಿದ್ದರು. ಕೂಡಲೇ ವೈದ್ಯರು ಪರಿಶೀಲಿಸಿದ್ದು ವಿಧಿವಶರಾಗಿರುವುದನ್ನು ದೃಢಪಡಿಸಿದರು.
 
ಸಚಿವರು ಪತ್ನಿ ಡಾ.ಗೀತಾ, ಮಗ ಗಣೇಶ್ ಪ್ರಸಾದ್ ಮತ್ತು ಮಗಳು ಹಾಗೂ ಅಳಿಯನನ್ನು ಅಗಲಿದ್ದಾರೆ. ಅಪಾರ ಅಭಿಮಾನಿಗಳನ್ನು, ಬೆಂಬಲಿಗರನ್ನು ಅಗಲಿದ್ದಾರೆ. ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಂಬನಿ ಮಿಡಿದಿದ್ದಾರೆ.
ಸಚಿವರ ಕುವೆಂಪುನಗರದ ನಿವಾಸದಲ್ಲಿ ಪತ್ನಿ, ಹಾಗೂ ಮಕ್ಕಳ ಆಕ್ರಂದನ ಮುಗಿಲು ಮುಟ್ಟಿದೆ. ಅವರ ಅಪಾರ ಅಭಿಮಾನಿಗಳು, ಬೆಂಬಲಿಗರು ಮನೆ ಮುಂದೆ ಜಮಾಯಿಸಿದ್ದಾರೆ. ಎಲ್ಲೆಲ್ಲೂ ಶೋಕ ಮಡುಗಟ್ಟಿದೆ. ಸೂತಕ ಛಾಯೆ ಆವರಿಸಿದೆ. ಕುವೆಂಪು ನಗರದ ಅವರ ನಿವಾಸಕ್ಕೆ ಇದೀಗ ಅವರ ಪಾರ್ಥಿವ ಶರೀರವನ್ನು ತರಲಾಗುತ್ತಿದ್ದು, ಸಾರ್ವಜನಿಕರ ದರ್ಶನಕ್ಕೆ ಇಡಲಾಗುತ್ತದೆ. ಬಳಿಕ ಗುಂಡ್ಲುಪೇಟೆಗೆ ಕೊಂಡೊಯ್ದು ಅಲ್ಲಿ ಅಂತಿಮ ಸಂಸ್ಕಾರ ನೆರವೇರಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ನಿವಾಸಕ್ಕೆ ಮೈಸೂರು ಜಿಲ್ಲಾಧಿಕಾರಿ ಡಿ.ರಂದೀಪ್ ಭೇಟಿ ನೀಡಿ ಮನೆಯವರಿಗೆ ಸಾಂತ್ವನ ಹೇಳಿದರು.
ಈ ಸಂದರ್ಭ ಕುವೆಂಪುನಗರ ಠಾಣೆಯ ಇನ್ಸಪೆಕ್ಟರ್ ಜಗದೀಶ್ ಅವರಿಗೆ ಸೂಕ್ತಭದ್ರತೆ ಕೈಗೊಳ್ಳುವಂತೆ ಸೂಚನೆ ನೀಡಿದರು. ಸ್ಥಳದಲ್ಲಿ ಹುಣಸೂರು, ಪಿರಿಯಾಪಟ್ಟಣ ಶಾಸಕರು ಆಗಮಿಸಿದ್ದಾರೆ. ಪಾಲಿಕೆಯ ಸದಸ್ಯರು ಸಹ ಆಗಮಿಸಿದ್ದಾರೆ. ಗುಂಡ್ಲುಪೇಟೆಯ ಶಾಸಕರಾಗಿದ್ದ ಮಹದೇವಪ್ರಸಾದ್ ಹಾಲಹಳ್ಳಿ ಶ್ರೀಕಾಂತ ಶೆಟ್ಟಿ ಮಹದೇವಪ್ರಸಾದ್ 1958ರ ಅಗಸ್ಟ್ 8ರಂದು ಗುಂಡ್ಲುಪೇಟೆಯಲ್ಲಿ ಜನಿಸಿದ್ದರು. ರಾಜಕೀಯದಲ್ಲಿ ಗುರುತಿಸಿಕೊಂಡಿದ್ದರು. ಸಂಗಮ ಪ್ರತಿಷ್ಠಾನದ ಅಧ್ಯಕ್ಷರಾಗಿದ್ದ ಇವರು ಸಾಮೂಹಿಕ ವಿವಾಹ, ಆರೋಗ್ಯ ಶಿಬಿರ, ಉದ್ಯೋಗಮೇಳಗಳನ್ನು ಆಯೋಜಿಸಿ ಗುರುತಿಸಿಕೊಂಡಿದ್ದರು.

0

Leave a Reply

Your email address will not be published. Required fields are marked *