ಸ್ವಾಮಿ ನಿತ್ಯಾನಂದ ಬಂಧನಕ್ಕೆ ಆದೇಶಿಸಿದ ಮದ್ರಾಸ್ ಹೈಕೋರ್ಟ್

ಚೆನ್ನೈ: ಬಿಡದಿಯಲ್ಲಿ ಆಶ್ರಮ ಸ್ಥಾಪಿಸಿಕೊಂಡಿದ್ದ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದರನ್ನು ಬಂಧಿಸಿ ಬುಧವಾರದ ಒಳಗೆ ಕೋರ್ಟ್ ಮುಂದೆ ಹಾಜರುಪಡಿಸಿ ಎಂದು ಮದ್ರಾಸ್ ಹೈಕೋರ್ಟ್ ಪೊಲೀಸರಿಗೆ ಆದೇಶಿಸಿದೆ. ಈ ಮೂಲಕ ಲೈಂಗಿಕ ಹಗರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ನಿತ್ಯಾನಂದ ಸ್ವಾಮಿಗೆ ಮತ್ತೊಮ್ಮೆ ಸಂಕಷ್ಟ ಎದುರಾಗಿದೆ.

ಸುಳ್ಳು ಹೇಳಿಕೆಗಳನ್ನು ನೀಡುವ ಮೂಲಕ ನ್ಯಾಯಾಲಯವನ್ನು ತಪ್ಪುದಾರಿಗೆ ಎಳೆಯಲು, ನಿತ್ಯಾನಂದ ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿರುವ ನ್ಯಾ. ಆರ್.ಮಾಧವನ್, ನಿತ್ಯಾನಂದ ಬಂಧನಕ್ಕೆ ಆದೇಶ ಜಾರಿ ಮಾಡಿದ್ದಾರೆ ಎಂದು ವರದಿಯಾಗಿದೆ. ಆಧ್ಯಾತ್ಮ ಗುರುಗಳು ಕಾನೂನಿಗಿಂತ ದೊಡ್ಡವರಲ್ಲ. ಆದ್ದರಿಂದ ನಿತ್ಯಾನಂದನನ್ನು ಬಂಧಿಸಿ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ.

ಪ್ರಕರಣದ ವಿಚಾರಣೆ ನಡೆಯುತ್ತಿರುವ ಸಂದರ್ಭದಲ್ಲೇ ನಿತ್ಯಾನಂದನ ಶಿಷ್ಯನೊಬ್ಬ ನಿಬಂಧನೆಗಳಿಗೆ ವಿರುದ್ಧವಾಗಿ ಕೋರ್ಟ್ ಕೋಣೆಯಲ್ಲೇ ಮೊಬೈಲ್ ತಂದಿದ್ದರ ಜೊತೆಗೆ, ಎಸ್ಎಂಎಸ್ ಮಾಡುತ್ತಿದ್ದ ಘಟನೆ ನಡೆದಿದೆ. ಇದರಿಂದ ಸಿಟ್ಟಿಗೆದ್ದ ನ್ಯಾಯಮೂರ್ತಿಗಳು, ಶಿಷ್ಯನಿಂದ ಮೊಬೈಲ್ ವಶಪಡಿಸಿಕೊಳ್ಳಲು ಆದೇಶಿಸಿದರು.

ಮಧುರೈ ಪೀಠದ ಕೋರ್ಟ್ ಕಲಾಪದಲ್ಲಿ ಸ್ವಾಮಿ ನಿತ್ಯಾನಂದ ಹಸ್ತಕ್ಷೇಪ ಮಾಡದಂತೆ ಆದೇಶ ನೀಡಬೇಕು ಎಂದು ವ್ಯಕ್ತಿಯೊಬ್ಬರು ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಪ್ರಕರಣ ಸಂಬಂಧ ನಿತ್ಯಾನಂದ ತಪ್ಪು ಮಾಹಿತಿಯನ್ನು ಒಳಗೊಂಡ ಪ್ರಮಾಣ ಪತ್ರವನ್ನು ಸಲ್ಲಿಸಿರುವುದನ್ನು ಗಮನಿಸಿದ ನ್ಯಾಯಮೂರ್ತಿಗಳು ಸತ್ಯಾಂಶದ ಮಾಹಿತಿ ಒಳಗೊಂಡ ವಿವರಗಳ ಪ್ರಮಾಣ ಪತ್ರ ಸಲ್ಲಿಸಿ ಎಂದು ನಿತ್ಯಾನಂದರ ವಕೀಲಿರಿಗೆ ನಿರ್ದೇಶಿಸಿದರು.

0

Leave a Reply

Your email address will not be published. Required fields are marked *