ಕೊಡಗಿಗಾಗಿ ರಂಗ ಸಪ್ತಾಹ: ಕುರುಕ್ಷೇತ್ರ ಬೆನಿಫಿಟ್​​​​ ಶೋಗೆ ಮುಂದಾದ ನಿರ್ಮಾಪಕ ಮುನಿರತ್ನ

ಬೆಂಗಳೂರು: “ಕೊಡಗಿನ ಹತ್ತು ಮಕ್ಕಳನ್ನು ನನಗೆ ದತ್ತು ಕೊಡಿ, ಆ ಮಕ್ಕಳನ್ನು ಬೆಂಗಳೂರಿನಲ್ಲಿ ಓದಿಸುವ ಪೂರ್ಣ ಜವಾಬ್ದಾರಿ ನನ್ನದು. ಇದಿಷ್ಟೆ ಅಲ್ಲ, ಒಂದು ಮನೆಯನ್ನು ಕಟ್ಟಿಸಿಕೊಟ್ಟು ಆ ಕುಟುಂಬಗಳಿಗೆ ನೆರವಾಗುತ್ತೇನೆಂದು ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ಘೋಷಿಸಿದರು. ಜೊತೆಗೆ, ಪೀಪಲ್ ಫಾರ್ ಪೀಪಲ್ ತಂಡದ ಶ್ರಮ ಕಾಳಜಿಗೆ ಮೆಚ್ಚಿದ ಅವರು, ಸಭೆಯಲ್ಲಿ ಕೊಡಗಿನ ಜನರಿಗಾಗಿ ತಮ್ಮ ಅದ್ಧೂರಿ ವೆಚ್ಛದ ದರ್ಶನ್ ಸಿನಿಮಾ “ಕುರುಕ್ಷೇತ್ರ”ವನ್ನು ಬಿಡುಗಡೆಗೂ ಒಂದು ದಿನ ಮುಂಚೆಯೇ ಬೆನಿಫಿಟ್ ಶೋ ನೀಡಿ ಅದರ ಸಂಪೂರ್ಣ ಹಣವನ್ನು ಕೊಡಗಿನ ಜನರಿಗಾಗಿ ನೀಡುವುದಾಗಿ ಭರವಸೆ ನೀಡಿದರು.

ಮಲ್ಲತ್ತಹಳ್ಳಿ ಕಲಾಗ್ರಾಮದಲ್ಲಿ ಪೀಪಲ್ ಫಾರ್ ಪೀಪಲ್ ಆಯೋಜನೆ ಮಾಡಿದ ಆರು ದಿನಗಳ ಕಾಲ ನಡೆದ ಕೊಡಗಿಗಾಗಿ ರಂಗಸಪ್ತಾಹ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಮುಂಬರುವ ಅತಿ ದೊಡ್ಡ ಬಜೆಟ್ ಸಿನಿಮಾ ಕುರುಕ್ಷೇತ್ರ ಇಡೀ ಪ್ರಪಂಚದಾದ್ಯಂತ ಬಿಡುಗಡೆಯಾಗುತ್ತಿದೆ. ಆ ಚಿತ್ರದ ಪ್ರಿಮೀಯರ್ ಶೋವನ್ನು ಒಂದು ದಿನ ಮುಂಚಿತವಾಗಿ ಏರ್ಪಡಿಸಿ, ಅದರ ಮುಖಾಂತರ ಬಂದ ಹಣವನ್ನು ಕೂಡ ಕೊಡಗಿನ ಮಕ್ಕಳ ವಿದ್ಯಾಭ್ಯಾಸಕ್ಕೆ ವಿನಿಯೋಗಿಸಿ ಕೊಡಗಿನ ಜನತೆ ನೆರವಾಗುತ್ತೇನೆ ಎಂದರು.

ಒಂದು ಕಾರ್ಯಕ್ರಮವನ್ನು ಆರು ಗಂಟೆಗಳ ಕಾಲ ನಡೆಸುವುದೇ ಕಷ್ಟದ ಕೆಲಸ. ಅಂತಹುದರಲ್ಲಿ ಆರು ದಿನಗಳ ಕಾಲ ಈ ರಂಗ ಸಪ್ತಾಹವನ್ನು ನಡೆಸುವುದು ಅಷ್ಟು ಸುಲಭದ ಮಾತಲ್ಲ. ಆ ಕೆಲಸವನ್ನು ಪೀಪಲ್ ಫಾರ್ ಪೀಪಲ್ ತಂಡ ಮಾಡಿದೆ. ನಾನು ಕೂಡ ಕಷ್ಟ ಅನುಭವಿಸಿದವನು. ಬಡತನ ಅಂದರೆ ಏನು ಎಂಬುದು ನನಗೆ ಅರಿವಿದೆ. ಕಷ್ಟದಲ್ಲಿ ಒಬ್ಬರಿಗೊಬ್ಬರು ಸಹಾಯವಾಗೋಣ. ಆ ಮೂಲಕ ನಾವೆಲ್ಲರೂ ಒಂದು ದಿನದ ವೇತನವನ್ನಾದರೂ ನಾವು ಕೊಡೋಣ ಅಥವಾ ಅವರಿಗೆ ನಮ್ಮಿಂದ ಆದಷ್ಟು ಸಹಾಯ ಮಾಡೋಣ. ಮಾನವೀಯತೆ, ಧರ್ಮ, ನ್ಯಾಯ, ನೀತಿ ಎಂಬುದು ಇದ್ದರೆ ಅದು ಕೆಂಪೇಗೌಡ ಕಟ್ಟಿದ ಬೆಂಗಳೂರಿನಲ್ಲಿದೆ. ಕೊಡಗಿಗೆ ನಾವೆಲ್ಲರೂ ಸಹಾಯ ಮಾಡೋಣ ಎಂದು ಕರೆ ನೀಡಿದರು.

ಪೀಪಲ್ ಫಾರ್ ಪೀಪಲ್ ತಂಡದ ಪರವಾಗಿ ಮಾತನಾಡಿದ ಚಕ್ರವರ್ತಿ ಚಂದ್ರಚೂಡ್, ಕೊಡಗಿನಲ್ಲಿ ಆದ ಹಾನಿಯ ಸಂಪೂರ್ಣ ಚಿತ್ರಣ ನೀಡಿದರು. ಭವಿಷ್ಯದಲ್ಲಿ ಕೊಡಗನ್ನು ಪುನರ್ನಿಮಿಸಲು ಯಾವುದೇ ರಾಜಕೀಯ ಮಾಡದೆ, ಅಗತ್ಯ ಸೌಲಭ್ಯಗಳನ್ನು ಒದಗಿಸಲು ಪೀಪಲ್ಸ್ ಫಾರ್ ಪೀಪಲ್ ತಂಡ ಸಿದ್ಧವಿದೆ. ಇದಕ್ಕೆ ಕೈಜೋಡಿಸಿದ ಎಲ್ಲರಿಗೂ ಧನ್ಯವಾದಗಳು ಎಂದರು. ಇದರೊಂದಿಗೆ ಮುಂಬರುವ ದಿನಗಳಲ್ಲಿ ಹಾಸನದಲ್ಲಿ ಮೂರುದಿನ, ಮೈಸೂರಿನಲ್ಲಿ ಒಂದುದಿನ, ಉಡುಪಿಯಲ್ಲಿ ಎರಡು ದಿನ ಕೊಡಗು ಸಂತ್ರಸ್ತರ ನೆರವಿಗೆ ಸಹಾಯಾರ್ಥ ರಂಗ ಪ್ರದರ್ಶನಗಳನ್ನು ನಡೆಸಲಾಗುವುದು ಎಂದು ಮಾಹಿತಿ ನೀಡಿದರು. ಅಲ್ಲದೇ, ಕೊಡಗಿನ ಕುರಿತ ಸಾಕ್ಷ್ಯಚಿತ್ರ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಆದಷ್ಟು ಶೀಘ್ರದಲ್ಲೇ ಇದನ್ನು ತಂಡ ಪೂರ್ಣಗೊಳಿಸಲಿದೆ. ಇದರಲ್ಲಿ ಪರಿಸರ ತಜ್ಞರಾದ ಯಲ್ಲಪ್ಪ ರೆಡ್ಡಿ, ಹೋರಾಟಗಾರ್ತಿ ಮೇಧಾ ಪಾಟ್ಕರ್​ರಂತಹವರು ಭಾಗವಾಗಲಿದ್ದಾರೆ ಎಂದರು.

ಸಭೆಯಲ್ಲಿ ಕಾಂಗ್ರೆಸ್ ನಾಯಕಿ ಡಾ. ನಾಗಲಕ್ಷ್ಮಿ ಚೌಧರಿ ಮಾತನಾಡಿ, ಕೊಡಗಿನಲ್ಲಿ ಆದ ದುರಂತ ಯಾರೂ ಊಹಿಸಲಾಗದ್ದು. ಯಾವುದೇ ದುರಂತ ಸಂಭವಿಸಿದಾಗ ಹೊರ ರಾಜ್ಯಕ್ಕೆ ನೆರವಾಗುವ ನಾವು ನಮ್ಮ ಪಕ್ಕದ ಜಿಲ್ಲೆ ಕೊಡಗಿನ ಕಷ್ಟಕ್ಕೆ ಮತ್ತಷ್ಟು ಸ್ಪಂದಿಸಬೇಕಿತ್ತು. ಅಲ್ಲಿನ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಬೇಕಾದ ಪುಸ್ತಕ, ಪೆನ್ನು, ಪೆನ್ಸಿಲ್ ಯಾವುದೇ ಇರಬಹುದು ಅದನ್ನೆಲ್ಲವನ್ನೂ ನಮ್ಮಿಂದ ಆಗುವಂತಹ ಸಹಾಯ ನಾವು ಮಾಡೋಣ ಎಂದು ವಿನಂತಿಸಿದರು. ನೆಲಮಂಗಲದ ವನಕಲ್ಲು ಮಲ್ಲೇಶ್ವರ ಮಹಾಸಂಸ್ಥಾನಮಠದ ಶ್ರೀಗಳಾದ ಬಸವ ರಮಾನಂದ ಮಹಾಸ್ವಾಮಿಜಿ ಸಾನ್ನಿಧ್ಯ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಖ್ಯಾತ ಶ್ರೀಮತಿ ತಾರಾ ಅನುರಾಧ, ರಂಗಕರ್ಮಿ ಮಂಡ್ಯ ರಮೇಶ್, ರಂಗ ನಿರ್ದೇಶಕರಾದ ಸಿ.ಬಸವಲಿಂಗಯ್ಯ, ಜಯನಗರ ಶಾಸಕಿ ಸೌಮ್ಯ ರೆಡ್ಡಿ, ಚಿತ್ರನಟಿ ರೂಪಿಕಾ, ಚಿತ್ರ ಸಾಹಿತಿ ಕವಿರಾಜ್, ಜೆಡಿಎಸ್ ಮುಖಂಡರಾದ ಗಂಗಾಧರ್ ಮೂರ್ತಿ ಉಪಸ್ಥಿತರಿದ್ದರು. ಆರು ದಿನಗಳ ಕೊಡಗಿಗಾಗಿ ರಂಗಸಪ್ತಾಹಕ್ಕೆ ವೈಭವದ ಮಂಗಳ ಹಾಡಲಾಯಿತು. ರಂಗಸಪ್ತಾಹದ ಜ್ಯೋತಿಯನ್ನು ಕೊಂಡೊಯ್ದು, ನಾಟಕ ಪ್ರದರ್ಶನವನ್ನು ಮೈಸೂರು, ಕೊಡಗೂ ಸೇರಿದಂತೆ ಹಾಸನ ಹಾಗೂ ಹುಬ್ಬಳ್ಳಿಗಳಲ್ಲಿ ಮುಂದುವರೆಸುವುದಾಗಿ ಪೀಪಲ್ ಫರ್ ಪೀಪಲ್ ತಂಡ ಮಾಹಿತಿ ನೀಡಿತು.

ನಾಟಕ ಆರಂಭಕ್ಕೆ ಮೊದಲು ವೀರಗಾಸೆ ಕುಣಿತ, ಪ್ರಖ್ಯಾತ ಕಾರ್ಟೂನಿಸ್ಟ್‍ಗಳಾದ ರಘುಪತಿ ಶೃಂಗೇರಿ ಹಾಗೂ ಗೌರಿಯವರಿಂದ ಕೊಡಗಿಗಾಗಿ ವ್ಯಂಗ್ಯ ಭಾವಚಿತ್ರ ರಚನೆ, ಬಂಗಾರುಪೇಟೆಯ ಸುಬ್ರಮಣಿಯವರಿಂದ ಉಚಿತ ಚಾಟ್ಸ್ ವಿತರಣೆ, ಜೊತೆಯಲ್ಲಿ ರಾಮಚಂದ್ರ ಹಡಪದ್ ಅವರ ಗಝಲ್ ಗಾಯನ ಹಾಗೂ ರಂಗಪಯಣ ತಂಡದ ಗುಲಾಬಿ ಗ್ಯಾಂಗ್ ನಾಟಕ ಪ್ರದರ್ಶನ ಪ್ರೇಕ್ಷಕರಿಂದ ಮೆಚ್ಚುಗೆಗೆ ಪಾತ್ರವಾಯಿತು. ಜೇಡರ ದಾಸಿಮಯ್ಯನ ವಚನ, ಶಿಶುನಾಳ ಷರೀಫರ ತತ್ವಪದಗಳು ಮತ್ತು ಕನಕದಾಸರ ಕೀರ್ತನೆ, ರಂಗಗೀತೆಗಳ ಜೊತೆಗೆ ಹಿಂದಿ ಹಾಡುಗಳ ಮೂಲಕ ರಾಮಚಂದ್ರ ಹಡಪದ್ ಪ್ರೇಕ್ಷಕರನ್ನು ರಂಜಿಸಿದರು.

0

Leave a Reply

Your email address will not be published. Required fields are marked *