ಶುಕ್ರವಾರದಿಂದ 3 ದಿನಗಳ ಕೊಡಗು ಪ್ರವಾಸೀ ಉತ್ಸವ

ಮಡಿಕೇರಿ: ಕೊಡಗು ಜಿಲ್ಲೆ ಪ್ರವಾಸಿಗರಿಗೆ ಸುರಕ್ಷಿತ ಎಂಬ ಸಂದೇಶ ಸಾರುವ ನಿಟ್ಟಿನಲ್ಲಿ ರಾಜ್ಯ ಪ್ರವಾಸೋದ್ಯಮ ಇಲಾಖೆ ಜ.11 ರಿಂದ 13 ರವರೆಗೆ ಮಡಿಕೇರಿಯ ಗಾಂಧಿ ಮೈದಾನದಲ್ಲಿ ಕೊಡಗು ಪ್ರವಾಸೀ ಉತ್ಸವ ಆಯೋಜಿಸಿದೆ. ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೊಡಗು ಪ್ರವಾಸೀ ಉತ್ಸವದ ಪೋಸ್ಟರ್ ಗಳನ್ನು ಬಿಡುಗಡೆಗೊಳಿಸಿದ ಜಿಲ್ಲಾಧಿಕಾರಿ ಶ್ರೀವಿದ್ಯಾ ಉತ್ಸವದ ಕುರಿತು ಮಾಹಿತಿ ನೀಡಿದರು.

ಪ್ರತಿ ವರ್ಷ ಪ್ರಖ್ಯಾತ ರಾಜಾಸೀಟ್ ಉದ್ಯಾನವನದಲ್ಲಿ ಫಲಪುಷ್ಪ ಪ್ರದರ್ಶನ ನಡೆಯುತ್ತಿದ್ದು ಈ ಭಾರಿಯ ಫಲಪುಷ್ಪ ಪ್ರದರ್ಶನದ ಜೊತೆಗೆ ಕೊಡಗು ಪ್ರವಾಸಿ ಉತ್ಸವ -2019ನ್ನು ಮಡಿಕೇರಿ ನಗರದಲ್ಲಿ ಜ. 11 ರಿಂದ 13 ರವರೆಗೆ 3 ದಿನಗಳ ಕಾಲ ಆಯೋಜಿಸಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ವಿವಿಧ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಆಹಾರ ಮೇಳ, ಓಪನ್ ಸ್ಟ್ರೀಟ್ ಫೆಸ್ಟಿವಲ್, ಪ್ರಖ್ಯಾತ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ಛಾಯಾ ಚಿತ್ರ ಪ್ರದರ್ಶನ ,ಶ್ವಾನ ಪ್ರದರ್ಶನ ಇತ್ಯಾದಿ ಕಾರ್ಯಕ್ರಮಗಳನ್ನು ಕೊಡಗು ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ತೋಟಗಾರಿಕಾ ಇಲಾಖೆ, ಪಶು ಸಂಗೋಪನಾ ಇಲಾಖೆ, ಪ್ರವಾಸೋದ್ಯಮ ಕ್ಷೇತ್ರದ ಭಾಗಿದಾರರಾದ ಕೊಡಗು ಜಿಲ್ಲಾ ಹೋಟೆಲ್ ಮತ್ತು ರೆಸಾರ್ಟ್ಸ್ ಅಸೋಸಿಯೇಷನ್, ಕೊಡಗು ಜಿಲ್ಲಾ ಟ್ರಾವೆಲ್ಸ್ ಅಸೋಸಿಯೇಷನ್, ಜಿಲ್ಲಾ ಹೋಂಸ್ಟೇ ಅಸೋಸಿಯೇಷನ್ ಮತ್ತು ಜಿಲ್ಲಾ ಛೇಂಬರ್ ಆಫ್ ಕಾಮಸ್೯ ಸಹಯೋಗದೊಂದಿಗೆ ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶ್ರೀವಿದ್ಯಾ ಮಾಹಿತಿ ನೀಡಿದ್ದಾರೆ.

3 ದಿನಗಳ ಸಾಂಸ್ಕೃತಿಕ ಕಾರ್ಯಕ್ರಮಗಳು:

3 ದಿನಗಳ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸ್ಥಳೀಯ ಕಲಾವಿದರು ಮತ್ತು ರಾಜ್ಯದ ಪ್ರಖ್ಯಾತ ಕಲಾವಿದರು ಪ್ರದರ್ಶನ ನೀಡಲಿದ್ದಾರೆ.
ಜ.11 ರಂದು ಶುಕ್ರವಾರ ಮಡಿಕೇರಿಯ ಗಾಂಧಿ ಮೈದಾನದಲ್ಲಿ ಕೊಡಗು ಸಾಹಿತ್ಯ ಅಕಾಡೆಮಿ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಜೆ 5:30 ರಿಂದ 6.30ರವರೆಗೆ ಆಯೋಜಿಸಲಾಗಿದೆ.

ಹೆಸರಾಂತ ಗಾಯಕಿ ಎಂ.ಡಿ ಪಲ್ಲವಿ ಮತ್ತು ತಂಡದವರಿಂದ ಜುಗಲ್ ಬಂದಿ ಕಾರ್ಯಕ್ರಮ ಸಂಜೆ 6.30 ರಿಂದ 7.30 ರವರೆಗೆ ನಡೆಯಲಿದೆ. ಸಂಜೆ 7.30 ರಿಂದ 10ರವರೆಗೆ ರಿಯಾಲಿಟಿ ಶೋ ಸರಿಗಮಪ ಲಿಟಲ್ ಚಾಂಪ್ಸ್ ಮಕ್ಕಳಿಂದ ಸಂಗೀತ ಸಂಜೆ ಕಾಯ೯ಕ್ರಮದಲ್ಲಿ ಅಭಿನವ್ , ಸುಪ್ರಿಯಾ ಜೋಷಿ, ಆದ್ಯ , ಜ್ಞಾನೇಶ್ , ಕೀರ್ತನಾ , ಪುಟ್ಟರಾಜು ಹೂಗಾರ್ ಪಾಲ್ಗೊಳ್ಳಲಿದ್ದಾರೆ. ‘ಡ್ಯಾನ್ಸ್ ಕನಾ೯ಟಕ ಡ್ಯಾನ್ಸ್’ ಖ್ಯಾತಿಯ ಮಕ್ಕಳಿಂದ ನೃತ್ಯ ವೈಭವ ಕೂಡ ಆ ದಿನದ ಆಕರ್ಷಣೆಯಾಗಲಿದೆ.

ಜ. 12 ರಂದು ಶನಿವಾರ ಸಂಜೆ 5.30 ರಿಂದದ 5.45ರವರೆಗೆ ಭಾರತೀಯ ವಿದ್ಯಾಭವನ ,ಕೊಡಗು ವಿದ್ಯಾಲಯದ ಶಿಕ್ಷಕರಿಂದ ನೃತ್ಯ ಕಾರ್ಯಕ್ರಮ ಜರುಗಲಿದೆ. ಸಂಜೆ 5.45 ರಿಂದ 6.30 ರವರೆಗೆ ಖ್ಯಾತ ಕೊಳಲು ವಾದಕ ಸಹೋದರರಾದ ಹೇರಂಭ- ಹೇಮಂತ್ ಅವರಿಂದ ಕೊಳಲು ವಾದನವಿದೆ. ಅಂದು ಸಂಜೆ 6.30ರಿಂದ 10ರವರೆಗೆ ರಿಯಾಲಿಟಿ ಶೋ ಸರಿಗಮಪ ಖ್ಯಾತಿಯ ಗಾಯಕರಾದ ಸುನೀಲ್, ಚನ್ನಪ್ಪ, ಶ್ರೀಹರ್ಷ, ಇಂಪನ, ಐಶ್ವರ್ಯ, ಸುಹಾನಾ ಸೈಯದ್ ಪಾಲ್ಗೊಳ್ಳಲಿದ್ದಾರೆ. ಅಂದೇ ಸ್ಯಾಂಡಲ್ ವುಡ್ ನೈಟ್ಸ್ ಕಾರ್ಯಕ್ರಮದಲ್ಲಿ ಕನ್ನಡ ಧಾರಾವಾಹಿ ಕಲಾವಿದರಿಂದ ನೃತ್ಯ ವೈಭವ ಆಯೋಜಿತವಾಗಿದ್ದು ನಮ್ರತಾ (ಪುಟ್ಟಗೌರಿ ಮದುವೆ),. ದೀಪಿಕಾ ದಾಸ್ (ನಾಗಿಣಿ), ದೀಪಿಕಾ (ಕುಲವಧು), ಮತ್ತು ಭೂಮಿಕಾ (ಕಿನ್ನರಿ) ಪಾಲ್ಗೊಳ್ಳಲಿದ್ದಾರೆ.

ಜ. 13ರಂದು ಭಾನುವಾರ ಸಂಜೆ ಅರೆಭಾಷೆ ಅಕಾಡೆಮಿ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಜೆ 5.30 ರಿಂದ 6.30ರವರೆಗೆ ನಡೆಯಲಿದೆ. ಸಂಜೆ 6.30 ರಿಂದ ರಾತ್ರಿ 10ರವರೆಗೆ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮತ್ತು ತಂಡದವರಿಂದ ಸಂಗೀತ ರಸಸಂಜೆ ಕಾರ್ಯಕ್ರಮ ನಡೆಯಲಿದೆ. ವ್ಯಾಸರಾಜ್ , ಅನುರಾಧ ಭಟ್, ಇಂದು ನಾಗರಾಜ್ , ಲಕ್ಷ್ಮೀ ನಾಗರಾಜ್, ಸಂಚಿತ್ ಹೆಗ್ಡೆ, ಶ್ರೀನಿವಾಸ್ ಪಾಲ್ಗೊಳ್ಳಲಿದ್ದಾರೆ.

ಕೊಡಗು ಪ್ರವಾಸೀ ಉತ್ಸವದ ಪ್ರಚಾರ ಮಾಹಿತಿ ಬಿಡುಗಡೆ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಲಕ್ಷ್ಮಿ ಪ್ರಿಯ, ಪ್ರವಾಸೋದ್ಯಮ ಇಲಾಖೆಯ ಡೆಪ್ಯೂಟಿ ಡೈರೆಕ್ಟರ್ ಜನಾರ್ಧನ್, ಅಧಿಕಾರಿ ಚೇತನ್, ಜಿಲ್ಲಾ ಹೊಟೇಲ್, ರೆಸಾರ್ಟ್, ರೆಸ್ಟೋರೆಂಟ್ ಅಸೋಸಿಯೇಷನ್ ಅಧ್ಯಕ್ಷ ಬಿ.ಆರ್.ನಾಗೇಂದ್ರಪ್ರಸಾದ್, ಪ್ರಧಾನ ಕಾರ್ಯದರ್ಶಿ ನಾಜೀರ್, ಖಚಾಂಚಿ ಭಾಸ್ಕರ್, ಬಷೀರ್ ಕೊಡಗು ಟ್ರಾವಲ್ಸ್ ಅಸೋಸಿಯೇಷನ್ ಅಧ್ಯಕ್ಷ ಚೆಯ್ಯಂಡ ಸತ್ಯ, ವಸಂತ್, ಹೋಂಸ್ಟೇ ಅಸೋಸಿಯೇಷನ್ ಪದಾಧಿಕಾರಿಗಳಾದ ಕೆ.ಎಂ.ಕರುಂಬಯ್ಯ, ಬಿ.ಜಿ.ಅನಂತಶಯನ, ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಬಿ.ಎನ್.ಪ್ರಕಾಶ್, ತೋಟಗಾರಿಕಾ ಇಲಾಖೆಯ ಅಧಿಕಾರಿ ಪ್ರಮೋದ್ ಹಾಜರಿದ್ದರು.

ರಾಜಾಸೀಟ್ ನಲ್ಲಿ ಫಲಪುಪ್ಪ ಪ್ರದಶ೯ನದ ಆಕಷ೯ಣೆ

ಕೊಡಗು ಜಿಲ್ಲೆಯ ಜನಪ್ರಿಯ ಉದ್ಯಾನವನ ರಾಜಾ ಸೀಟ್ ನಲ್ಲಿ ತೋಟಗಾರಿಕಾ ಇಲಾಖಾ ವತಿಯಿಂದ ಜ.11 ರಿಂದ 13 ರವರೆಗೆ ವಿಶೇಷ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗಿದೆ. ಪ್ರತಿದಿನ ಬೆಳಿಗ್ಗೆ 10 ಗಂಟೆಯಿಂದ ಸಂಜೆ 8:30 ಗಂಟೆಯವರೆಗೆ ಪ್ರದರ್ಶನ ಏರ್ಪಡಿಸಲಾಗಿದೆ. ರಾಜಾಸೀಟ್ ನಲ್ಲಿ 8 ಸಾವಿರದಿಂದ 10 ಸಾವಿರ ಸಂಖ್ಯೆಯ ವಿವಿಧ ಜಾತಿಯ ಹೂಗಳಾದ ಪೇಟೂನಿಯಾ, ಕ್ಯಾನ, ಸಾಲ್ವಿಯ, ಸೇವಂತಿಗೆ, ಚೆಂಡುಹೂ, ಪ್ಲಾಕ್ಸ್. ವಿಂಕಾ, ರೋಸಿಯಾ, ಡೇಲಿಯಾ ಜತೆಗೆ 5-6 ಸಾವಿರ ಹೂಕುಂಡಗಳಲ್ಲಿವಿವಿಧ ಜಾತಿಯಾ ಪುಪ್ಪ ಪ್ರದಶ೯ನ ಜರುಗಲಿದೆ.

ಕೊಡಗಿನ ಕುಲದೇವತೆಯಾದ ಶ್ರೀ ಕಾವೇರಿ ಮಾತೆ ಮತ್ತು ಮಂಟಪದ ತೀಥೋ೯ದ್ವವ ಕುಂಡಿಕೆಯ ಕಲಾಕೖತಿಗಳನ್ನು 12 ಅಡಿ ಎತ್ತರ 15 ಅಡಿ ಉದ್ದದಲ್ಲಿ ವಿವಿಧ ಪುಪ್ಪಗಳಿಂದ ರೂಪಿಸಲಾಗುತ್ತಿದೆ. ತೋಟಗಾರಿಕೆಯಲ್ಲಿ ನೂತನ ತಾಂತ್ರಿಕತೆಯಾದ ಜಲಕೖಷಿ ಮಾದರಿಯಲ್ಲಿ ಹಣ್ಣು, ತರಕಾರಿ ಬೆಳೆಯುವ ಪ್ರಾತಕ್ಷಿಕೆಯನ್ನೂ ಪ್ರದಶಿ೯ಸಲಾಗುತ್ತಿದೆ. ಮಕ್ಕಳಿಗೆ ರಾಜಾಸೀಟ್ ನಲ್ಲಿ ಮನರಂಜನೆ ನೀಡಲು ಸ್ಪೆಡರ್ ಮ್ಯಾನ್, ಮಿಕ್ಕಿ ಮೌಸ್, ಡೋನಾಲ್ಡ್ ಡಕ್, ಡೋಮ೯ನ್ ಮಾದರಿಯನ್ನು ಹೂವು ಮತ್ತು ಎಲೆಗಳಿಂದ ತಯಾರಿಸಲಾಗುತ್ತಿದೆ. ಮಾವು, ಕಿತ್ತಳೆ, ಅನಾನಸ್ ಹಣ್ಣುಗಳು, ದಪ್ಪ ಮೆಣಸಿನ ಕಾಯಿ ತರಕಾರಿಗಳಿಂದ ಆನೆ, ನವಿಲು, ಗಿಟಾರ್, ತಬಲ ಇತ್ಯಾದಿಗಳ ಮಾದರಿ ಕಲಾಕೖತಿಗಳನ್ನೂ ನಿಮಿ೯ಸಲಾಗುತ್ತದೆ. ಜಲಚರ ಮೀನುಗಳಾದ ಸ್ಟಾರ್ ಫಿಶ್, ಅಕ್ಟೋಪಸ್ ಇತ್ಯಾದಿ ಕಲಾಕೖತಿಗಳನ್ನು ಹೂ, ಅಲಂಕಾರಿಕ ಎಲೆಗಳಿಂದ ನಿಮಿ೯ಸಲಾಗುತ್ತದೆ. ತರಕಾರಿ, ಹಣ್ಣುಗಳಲ್ಲಿ ವಿವಿಧ ಆಕೖತಿಗಳಲ್ಲಿ ಕೆತ್ತನೆಯ ಕಲಾಕೖತಿಗಳನ್ನು ಮಾಡಲಾಗುತ್ತದೆ. ವಿವಿಧ ಅಲಂಕಾರಿಕ ಗಿಡಗಳಾದ ಬೋನ್ಸಾಯ್, ಇಕೆಬಾನ ಹೂವಿನ ಜೋಡಣೆ, ಕ್ಯಾಕ್ಟಸ್ ಗಳ ಜೋಡಣೆ ಮತ್ತು ಪ್ರದಶ೯ನವೂ ಫಲಪುಪ್ಪ ಪ್ರದಶ೯ನದ ಆಕಷ೯ಣೆಯಾಗಲಿದೆ.

ಫಲಪುಪ್ಪ ಪ್ರದಶ೯ನವನ್ನು ಜ.11 ರಂದು ಸಂಜೆ 4.30 ಗಂಟೆಗೆ ರಾಜ್ಯ ತೋಟಗಾರಿಕಾ ಇಲಾಖೆ ಸಚಿವ ಎಮ್.ಸಿ.ಮನಗೂಳಿ ಉದ್ಘಾಟಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ , ಜಿಲ್ಲೆಯ ಶಾಸಕರು, ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ.

ಕೊಡಗು ಪ್ರವಾಸೀ ಉತ್ಸವದ ಅಂಗವಾಗಿ ಜ. 12 ರಂದು ಬೆಳಿಗ್ಗೆ 10 ಗಂಟೆಯಿಂದ 2 ಗಂಟೆಯವರೆಗೆ ವಿವಿಧ ತಳಿಗಳ ಶ್ವಾನ ಪ್ರದರ್ಶನವನ್ನು ಮಡಿಕೇರಿಯ ಗಾಂಧಿ ಮೈದಾನದಲ್ಲಿ ಆಯೋಜಿಸಲಾಗಿದೆ.

ವಣ೯ರಂಜಿತ ಓಪನ್ ಸ್ಟ್ರೀಟ್ ಫೆಸ್ಟಿವಲ್ :

ಪ್ರವಾಸೋದ್ಯಮ ವಲಯದ ವಿನೂತನ ಪರಿಕಲ್ಪನೆಯಾದ ಓಪನ್ ಸ್ಟ್ರೀಟ್ ಫೆಸ್ಟಿವಲ್ ಅನ್ನು ಮಡಿಕೇರಿಯ ರಾಜಾ ಸೀಟ್ ರಸ್ತೆಯಲ್ಲಿ ಜ. 13 ರಂದು ಭಾನುವಾರ ಬೆಳಿಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಆಯೋಜಿಸಲಾಗಿದೆ. ಅಂದು ರಾಜಾ ಸೀಟ್ ರಸ್ತೆಯಲ್ಲಿ ಸಂಚಾರ ಬಂದ್ ಮಾಡಲಾಗುವುದು .

ಯೋಗ, ಝುಂಬಾ, ಸಾಂಸ್ಕೃತಿಕ ಕಾರ್ಯಕ್ರಮಗಳು ಬೆಳಿಗ್ಗೆಯಿಂದ ಸಂಜೆಯವರೆಗೂ ಇರಲಿದ್ದು, ವಿನೂತನ ಕಲೆಗಳಾದ ಮರಗಾಲಿನ ಮನುಷ್ಯ, ಸ್ಕೇಟ್ ಬೋಡ್೯ , ಚೈನೀಸ್ ಲಯನ್, ಸ್ಟ್ರೀಟ್ ಆಟ್೯, ಕ್ಯಾರಿಕೇಚರ್ ಮುಂತಾದ ಕಲೆಗಳನ್ನು ಪ್ರದಶಿ೯ಸಲಾಗುವುದು. ಹಾಗೆಯೇ, ಫುಡ್ ಟ್ರಕ್ ಗಳು, ಆಹಾರ ಮಳಿಗೆಗಳು , ಆಟ್೯ ಮತ್ತು ಹ್ಯಾಂಡಿಕ್ರಾಫ್ಟ್ ನ ಒಟ್ಟು 40 ಮಳಿಗೆಗಳು ಇರಲಿವೆ.

ಕೊಡಗು ಪ್ರವಾಸೀ ಉತ್ಸವದ 3 ದಿನಗಳ ಕಾಲ ಗಾಂಧಿ ಮೈದಾನದಲ್ಲಿ ವಸ್ತು ಪ್ರದರ್ಶನ ಏರ್ಪಡಿಸಲಾಗಿದ್ದು, 30 ಮಳಿಗೆಗಳನ್ನು ತೆರೆಯಲಾಗುವುದು. ಜಿಲ್ಲಾ ಪಂಚಾಯತ್,ಕೃಷಿ, ತೋಟಗಾರಿಕೆ, ಕಾಫಿ ಬೋಡ್೯, ಮಹಿಳಾ ಸಂಘಗಳು, ವಿವಿಧ ಸಂಘ-ಸಂಸ್ಥೆಗಳು ಈ ಪ್ರದರ್ಶನದಲ್ಲಿ ಪಾಲ್ಗೊಳ್ಳಲಿವೆ.

ಪೋಲಿಸ್ ಇಲಾಖೆ ವತಿಯಿಂದ ಸೂಕ್ತ ಭದ್ರತೆಯನ್ನು ಕಲ್ಪಿಸಲಾಗುತ್ತಿದ್ದು, 200 ಸಿಬ್ಬಂದಿಗಳನ್ನು ನಿಯೋಜಿಸಲಾಗುತ್ತಿದೆ. ಸುರಕ್ಷತೆ ಹಾಗೂ ಭದ್ರತೆ ದೃಷ್ಟಿಯಿಂದ 70 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು.

ಮಡಿಕೇರಿ – ಮೈಸೂರು ರಸ್ತೆಯ ಎಪಿಎಂಸಿ ಯಾಡ್೯ನಲ್ಲಿ ಉತ್ಸವಕ್ಕೆ ಬರುವವರ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದ್ದು ಅಲ್ಲಿಂದ ಜನರು ಗಾಂಧಿ ಮೈದಾನದವರೆಗೆ ಕಾಲ್ನಡಿಗೆಯಲ್ಲಿ ಬರಬೇಕಾಗಿದೆ.

ಕನಾ೯ಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ದಿ ನಿಗಮವು ಕೊಡಗು ದರ್ಶನ ಎಂಬ ನೂತನ ಪ್ರವಾಸ ಕಾರ್ಯಕ್ರಮ ಪರಿಚಯಿಸುತ್ತಿದ್ದು, ಪ್ರತಿನಿತ್ಯ ಕೆಳಕಂಡ ಮಾರ್ಗಗಳಲ್ಲಿ ವ್ಯವಸ್ಥಿತ ಪ್ರವಾಸ ಆಯೋಜಿಸಲಾಗುತ್ತಿದೆ.

ಮಾರ್ಗ-1:ಭಾಗಮಂಡಲ-ತಲಕಾವೇರಿ-ನಾಲ್ಕನಾಡು ಅರಮನೆ-ಚೇಲವರ ಜಲಪಾತ
ಮಾರ್ಗ-2:ದುಬಾರೆ-ನಿಸರ್ಗಧಾಮ-ಗೋಲ್ಡನ್ ಟೆಂಪಲ್-ಮಲ್ಲಳ್ಳಿ ಜಲಪಾತ
ಮಾರ್ಗ-3:ಅಬ್ಬೆ ಜಲಪಾತ-ಮಾಂದಲಪಟ್ಟಿ-ಗದ್ದಿಗೆ-ರಾಜಾಸೀಟ್

ಪ್ರತಿದಿನ ಬೆಳಿಗ್ಗೆ: 8.30ಕ್ಕೆ ಹೊಟೇಲ್ ಮಯೂರ ವ್ಯಾಲಿ ವ್ಯೂ ನಿಂದ 2 ಮಿನಿ ಬಸ್ ಗಳು, ಕುಶಾಲನಗರದ ಕೆ.ಎಸ್.ಆರ್.ಟಿ.ಸಿ ಬಸ್ ಸ್ಟ್ಯಾಂಡ್ ನಿಂದ 1 ಮಿನಿ ಬಸ್ ಪ್ರವಾಸೀ ದಶ೯ನಕ್ಕಾಗಿ ತೆರಳಲಿವೆ.

ಪ್ರತಿ ವ್ಯಕ್ತಿಗೆ – 450 ರೂ. ಶುಲ್ಕವಿದ್ದು ಕೊಡಗು ಪ್ರವಾಸೀ ದಶ೯ನಕ್ಕಾಗಿ ಆಸನ ಕಾಯ್ದಿರಿಸುವಿಕೆಗಾಗಿ ಸಂಪರ್ಕ ಸಂಖ್ಯೆಗಳು : 08272-228387, 8970650028.

0

Leave a Reply

Your email address will not be published. Required fields are marked *