ಬಿ ಎಸ್ ಯಡಿಯೂರಪ್ಪ ಪ್ರಮಾಣ ವಚನಕ್ಕೆ ಸಿದ್ಧತೆ: ಒಳ ಹೊರಗುಗಳ ಅನಾವರಣ

ಗೋವಾ, ಮೇಘಾಲಯದಲ್ಲಿ ಅನ್ವಯವಾಗದ ನಿಯಮ ಮತ್ತು ಕೇಳಬೇಕಾಗಿದ್ದ ಪ್ರಶ್ನೆಗಳು

ಗೋವಾದಲ್ಲಿ ಫೆಬ್ರವರಿ 4, 2017ರಂದು ರಾಜ್ಯ ವಿಧಾನಸಭೆ ಚುನಾವಣೆ ನಡೆದಿತ್ತು. ಆಗ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಪಕ್ಷ ಕಾಂಗ್ರೆಸ್. ಆದರೆ, ರಾಜ್ಯದಲ್ಲಿ ಸರ್ಕಾರ ರಚಿಸಲು ಅವಕಾಶವನ್ನು ಬಿಜೆಪಿಗೆ ನೀಡಲಾಗಿತ್ತು. ಗೋವಾದ ರಾಜ್ಯಪಾಲೆ ಮೃದುಲಾ ಸಿನ್ಹಾ, ಅತಿದೊಡ್ಡ ಪಕ್ಷ ಕಾಂಗ್ರೆಸ್​​​ಗೆ ಸದನದಲ್ಲಿ ಬಹುಮತ ಸಾಬೀತುಪಡಿಸಲು ಅವಕಾಶ ನೀಡುವ ಬದಲು, ಬಿಜೆಪಿಗೆ ಆಹ್ವಾನ ನೀಡಿದ್ದರು.

ಗೋವಾ ವಿಧಾನಸಭೆ ಚುನಾವಣೆ ಫಲಿತಾಂಶದ ವಿವರ

ಬಿಜೆಪಿ+ 13
ಕಾಂಗ್ರೆಸ್ 16
ಎಎಪಿ 00
ಎನ್​​ಸಿಪಿ 01
ಇತರೆ 09

ಇನ್ನೊಂದು ಮಹತ್ವದ ಸಂಗತಿ ಎಂದರೆ, ಮತಗಟ್ಟೆ ಸಮೀಕ್ಷೆಗಳ ಪ್ರಕಾರ, ಗೋವಾದಲ್ಲಿ ಆಡಳಿತಾರೂಢ ಬಿಜೆಪಿ ಮತ್ತೆ ಅಧಿಕಾರ ಉಳಿಸಿಕೊಳ್ಳಬೇಕಿತ್ತು. ಬಿಜೆಪಿ 25, ಕಾಂಗ್ರೆಸ್ 16, ಎಎಪಿ 3 ಸ್ಥಾನಗಳನ್ನು ಪಡೆಯಲಿದೆ ಎಂದು ಸಮೀಕ್ಷೆಗಳು ಹೇಳಿದ್ದವು. 40 ವಿಧಾನಸಭಾ ಕ್ಷೇತ್ರಗಳಿರುವ ಗೋವಾ ರಾಜ್ಯದಲ್ಲಿ ಬಹುಮತ ಸಾಬೀತುಪಡಿಸಲು 21 ಸ್ಥಾನಗಳ ಅಗತ್ಯವಿತ್ತು. ಕಾಂಗ್ರೆಸ್ ಸ್ಥಾನಗಳನ್ನು ಹೊರತುಪಡಿಸಿದರೆ ಸಮೀಕ್ಷೆಗಳು ಸುಳ್ಳಾಗಿದ್ದವು.

ಈ ನಡುವೆ ಗೋವಾಗೆ ಆಗಮಿಸಿದ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಮತ್ತು ಬಿಜೆಪಿ ನಾಯಕ ನಿತಿನ್ ಗಡ್ಕರಿ ರಣತಂತ್ರಗಳನ್ನು ಹೆಣೆದಿದ್ದರು. ರಾಜ್ಯಪಾಲರ ಬಳಿ ಹೋಗಿ ಬಿಜೆಪಿ ನಾಯಕರು ಸರ್ಕಾರ ರಚನೆಯ ಹಕ್ಕು ಮಂಡಿಸಿದರು. ತಕ್ಷಣ ಬಿಜೆಪಿಯ ನಾಯಕರ ಮನವಿಯನ್ನ ಅಂಗೀಕರಿಸಿದ ರಾಜ್ಯಪಾಲೆ ಮೃದುಲಾ ಸಿನ್ಹಾ, ಪ್ರಮಾಣ ವಚನವನ್ನು ಬೋಧಿಸಿದರು. ಈ ವೇಳೆ ರಕ್ಷಣಾ ಸಚಿವರಾಗಿದ್ದ ಮನೋಹರ್ ಪರಿಕ್ಕರ್ ಒಂದು ಚಿಕ್ಕ ರಾಜ್ಯವನ್ನು ಉಳಿಸಿಕೊಳ್ಳುವ ಸಲುವಾಗಿ ತಮ್ಮ ಹುದ್ದೆ ತೊರೆದು, ಮತ್ತೆ ಸಿಎಂ ಆದರು.

ಇದು ಬಿಜೆಪಿಯ ಕಾಂಗ್ರೆಸ್ ಮುಕ್ತ ಭಾರತಕ್ಕಾಗಿ ಹಿಡಿದಿರುವ ಬಿಗಿಪಟ್ಟಿಗೆ ಸಾಕ್ಷಿಯಾಗಿತ್ತು. ಯಾವುದೇ ರೀತಿಯಿಂದ ನೋಡಿದರೂ ಚಿಕ್ಕ ರಾಜ್ಯವಾಗಿರುವ ಗೋವಾದಲ್ಲಿ ಅಧಿಕಾರ ಹಿಡಿಯಲು ಬಿಜೆಪಿ ಮಾಡಿದ ಕಸರತ್ತು, ಸಂವಿಧಾನದ ಉಲ್ಲಂಘನೆಗಳು ನಿಜಕ್ಕೂ ಪ್ರಜಾಪ್ರಭುತ್ವ ಮತ್ತು ಸಂವಿಧಾನಗಳಿಗೆ ಮಾಡಿದ ಅವಮಾನ ಎಂದೇ ಅಂದು ಬಹುತೇಕರು ವ್ಯಾಖ್ಯಾನಿಸಿದ್ದರು. ಆದರೆ, ಬಿಜೆಪಿಗೆ ಏನಕೇನ ಪ್ರಕಾರೇಣ ಅಧಿಕಾರ ಹಿಡಿಯುವುದೊಂದೇ ಗುರಿಯಾಗಿತ್ತು. ಇದನ್ನು ಬಿಜೆಪಿ ಸಾಧಿಸಿಯೂ ಬಿಟ್ಟಿತ್ತು.

ಆಡಳಿತ ವಿರೋಧಿ ಅಲೆಯಿಂದಾಗಿ ಎನ್​ಡಿಎ ಮೈತ್ರಿಕೂಟ ತೊರೆದಿದ್ದ ಗೋವಾ ಗೋಮಾಂತಕ ಪಕ್ಷ ಮತ್ತು ಇತರ ಪಕ್ಷಗಳ ನಾಯಕರು ಮತ್ತು ಒಬ್ಬ ಕಾಂಗ್ರೆಸ್ ಶಾಸಕನನ್ನೂ ತನ್ನತ್ತ ಸೆಳೆಯುವ ಮೂಲಕ ಅನೈತಿಕ ರಾಜಕಾರಣ ನಡೆಸಿದ ಬಿಜೆಪಿ, ಹಿಂಬಾಗಿಲಿನಿಂದ ಗೋವಾದಲ್ಲಿ ಅಧಿಕಾರ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು.

ಇನ್ನು ಮೇಘಾಲಯದಲ್ಲಿ ಕೂಡ ಫೆಬ್ರವರಿ 27, 2018ರಂದು ವಿಧಾನಸಭೆಗೆ ಚುನಾವಣೆ ನಡೆದಿತ್ತು. ಫಲಿತಾಂಶ ಘೋಷಣೆಯಾದ ಸಂದರ್ಭದಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗಿತ್ತು. ಆದರೆ, ಕಾಂಗ್ರೆಸ್ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಇಲ್ಲಿ ಮುಕುಲ್ ಸಂಗ್ಮಾ ನೇತೃತ್ವದ ಕಾಂಗ್ರೆಸ್ 16 ಕ್ಷೇತ್ರಗಳಲ್ಲಿ ಗೆದ್ದಿದ್ದರೆ, ಬಿಜೆಪಿ ಕೇವಲ 2 ಕ್ಷೇತ್ರಗಳಲ್ಲಿ ಗೆದ್ದಿತ್ತು. ಕಾಂಗ್ರೆಸ್ ಬಹುಮತಕ್ಕೆ ಅಗತ್ಯ ಸದಸ್ಯರ ಕೊರತೆ ಎದುರಿಸುತ್ತಿದ್ದ ಸಮಯದಲ್ಲಿ ಫೀಲ್ಡಿಗಿಳಿದಿದ್ದ ಬಿಜೆಪಿ ಗೋವಾದಲ್ಲಿ ನಡೆದದ್ದನ್ನೇ ಮೇಘಾಲಯದಲ್ಲಿ ಕೂಡ ಪುನರಾವರ್ತಿಸಿತ್ತು. ಒಟ್ಟು 59 ವಿಧಾನಸಭೆ ಕ್ಷೇತ್ರಗಳ ಈ ರಾಜ್ಯದಲ್ಲಿ ಮತ್ತದೇ ಹಳೆ ತಂತ್ರ ಅನುಸರಿಸಿ ಅಧಿಕಾರ ಹಿಡಿದಿತ್ತು.

ಮೇಘಾಲಯ ವಿಧಾನಸಭೆ ಚುನಾವಣೆ ಫಲಿತಾಂಶ

ಕಾಂಗ್ರೆಸ್ ​- 23
ಎನ್​ಪಿಪಿ – 19
ಬಿಜೆಪಿ – 02
ಇತರೆ – 16

ಕೇವಲ 2 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದ ಬಿಜೆಪಿ, ಇತರ ಪಕ್ಷಗಳನ್ನು ಒಗ್ಗೂಡಿಸಿ ಅಧಿಕಾರ ಹಿಡಿದಿತ್ತು. ಆಗ ರಾಜ್ಯಪಾಲ ಗಂಗಾ ಪ್ರಸಾದ್ ಬಿಜೆಪಿ ನೇತೃತ್ವದ ಮೈತ್ರಿ ಕೂಟಕ್ಕೆ ಸರ್ಕಾರ ರಚಿಸಲು ಅವಕಾಶ ನೀಡಿದರು. ಬಿಜೆಪಿ ಸದನದಲ್ಲಿ ಬಹುಮತ ಸಾಬೀತುಪಡಿಸುವಲ್ಲಿ ಕೂಡ ಯಶಸ್ವಿಯಾಗಿತ್ತು. ಇವೆಲ್ಲ ದೃಶ್ಯಗಳು ನೆನಪಾಗಲು ಕಾರಣವಾಗಿರುವುದು ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶ.

ನಿನ್ನೆ ಪ್ರಕಟವಾದ ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಅತಂತ್ರ ಪರಿಸ್ಥಿತಿ ಸೃಷ್ಟಿಯಾಗಿದ್ದು, ಯಾವುದೇ ಪಕ್ಷಕ್ಕೂ ಸ್ಪಷ್ಟ ಜನಾದೇಶ ಸಿಕ್ಕಿಲ್ಲ. ಆಡಳಿತಾರೂಢ ಕಾಂಗ್ರೆಸ್ 77, ಪ್ರಮುಖ ವಿಪಕ್ಷವಾಗಿದ್ದ ಬಿಜೆಪಿ 104, ಜೆಡಿಎಸ್ 37, ತಲಾ ಒಬ್ಬ ಬಿಎಸ್​​ಪಿ, ಕೆಪಿಜೆಪಿ, ಪಕ್ಷೇತರ ಅಭ್ಯರ್ಥಿ ಆಯ್ಕೆಯಾಗಿದ್ದರು. ಬಿಜೆಪಿ ಅಭ್ಯರ್ಥಿ ವಿಜಯ್​​ಕುಮಾರ್ ಸಾವಿನಿಂದಾಗಿ ಜಯನಗರ ಮತ್ತು ಅಕ್ರಮ ಚುನಾವಣಾ ಗುರುತು ಪತ್ರಗಳ ಪತ್ತೆ ಹಿನ್ನೆಲೆಯಲ್ಲಿ ರಾಜರಾಜೇಶ್ವರಿ ನಗರದ ಚುನಾವಣೆ ಮುಂದೂಡಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಬಹುಮತಕ್ಕೆ ಅಗತ್ಯ ಸಂಖ್ಯೆ 111 ಆಗಿದೆ.

ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ

ಬಿಜೆಪಿ – 104
ಕಾಂಗ್ರೆಸ್ – 77
ಜೆಡಿಎಸ್ – 37
ಬಿಎಸ್​ಪಿ – 01
ಕೆಪಿಜೆಪಿ – 01
ಪಕ್ಷೇತರ- 01

ಆದರೆ, ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿಗೆ ಮ್ಯಾಜಿಕ್ ಸಂಖ್ಯೆ ಪಡೆಯಲು ಸಾಧ್ಯವಾಗಿಲ್ಲ. ಆದರೆ, ಇದರ ನಡುವೆ ಮಹತ್ವದ ಬೆಳವಣಿಗೆಗಳು ನಡೆದಿದ್ದು, ಮೂರನೇ ಸ್ಥಾನದಲ್ಲಿದ್ದ ಜೆಡಿಎಸ್​​ಗೆ ಕಾಂಗ್ರೆಸ್ ಬೇಷರತ್ ಬೆಂಬಲ ಘೋಷಿಸಿತು. ಇದರ ಬೆನ್ನಲ್ಲೇ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ರಾಜ್ಯಪಾಲರನ್ನು ಭೇಟಿಯಾಗಿ, ಸರ್ಕಾರ ರಚಿಸುವ ಹಕ್ಕು ಮಂಡಿಸಿದರು. ಇದಕ್ಕೂ ಮುನ್ನ ಸಿಎಂ ಸಿದ್ದರಾಮಯ್ಯ ರಾಜ್ಯಪಾಲರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸಿದ್ದರು. ನಂತರ ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರು ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚಿಸುವ ಹಕ್ಕು ಮಂಡಿಸಿದರು.

ನಿನ್ನೆ ಕೆಲವು ರಾಷ್ಟ್ರೀಯ ಮಾಧ್ಯಮಗಳು ಕಾಂಗ್ರೆಸ್ ಜೆಡಿಎಸ್​​ಗೆ ಖಾಲಿ ಚೆಕ್ ನೀಡಿದೆ ಎಂದರೆ, ಇನ್ನು ಕೆಲವು ಸುದ್ದಿ ಮಾಧ್ಯಮಗಳು ಪ್ರಜಾಪ್ರಭುತ್ವದ ಮೇಲೆ ಹಲ್ಲೆ, ಕಗ್ಗೊಲೆ, ಅನೈತಿಕ ರಾಜಕಾರಣ ಎಂದವು. ಈ ಮೂಲಕ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಯನ್ನು ಸಾರಾ ಸಗಟಾಗಿ ತಿರಸ್ಕರಿಸಬೇಕು ಎಂದು ಕರೆ ನೀಡಿದವು. ಇಷ್ಟೇ ಅಲ್ಲದೇ, ಬಿಜೆಪಿ ಸರ್ಕಾರ ರಚಿಸಲು ಯಾವೆಲ್ಲ ಕಾರ್ಯತಂತ್ರಗಳನ್ನು ಅನುಸರಿಸಬೇಕು ಎಂದು ಕೂಡ ಕೆಲವು ಮಾಧ್ಯಮಗಳು ಪರೋಕ್ಷವಾಗಿ ಹೇಳಿಕೊಟ್ಟವು.

ಇವೆಲ್ಲಕ್ಕಿಂಥ ಕೆಟ್ಟ ಸಂಗತಿ ಎಂದರೆ, ಕೆಲ ಕಾಂಗ್ರೆಸ್​​​ನ ಪ್ರಭಾವಿ ಮುಖಂಡು ಬಿಜೆಪಿ ನಾಯಕರೊಂದಿಗೆ ರಹಸ್ಯ ಸಭೆ ನಡೆಸುತ್ತಿದ್ದಾರೆ ಎಂದು ಸುಳ್ಳು ಸುದ್ದಿಗಳನ್ನು ಬಿತ್ತರಿಸಿದವು. ಈ ಮೂಲಕ ಮೂರೂ ಪಕ್ಷದ ನಾಯಕರು ಹಾಗೂ ರಾಜ್ಯ, ದೇಶದ ನಾಗರಿಕರನ್ನು ಏಕಕಾಲಕ್ಕೆ ದಿಕ್ಕು ತಪ್ಪಿಸುವ ಕೆಲಸವನ್ನು ಮಾಡುವಲ್ಲಿ ಯಶಸ್ವಿಯೂ ಆದವು.

ನೈಜ ಸಂಗತಿ ಎಂದರೆ, ಯಾವೆಲ್ಲ ಪ್ರಭಾವೀ ಕಾಂಗ್ರೆಸ್ ಮುಖಂಡರ ಹೆಸರುಗಳನ್ನು ಉಲ್ಲೇಖಿಸಿ ರೆಸಾರ್ಟ್, ಖಾಸಗಿ ಹೊಟೆಲ್​​ನಲ್ಲಿದ್ದಾರೆ ಎಂದ ಮಾಧ್ಯಮಗಳೇ, ಕಾಂಗ್ರೆಸ್ ಮುಖಂಡರೊಂದಿಗೆ ಅದೇ ನಾಯಕರು ಇರುವ ದೃಶ್ಯಗಳನ್ನು ಮತ್ತು ಮೈತ್ರಿ ಕುರಿತ ಅವರ ಹೇಳಿಕೆಗಳನ್ನು ಪ್ರಸಾರ ಮಾಡಿದವು. ಆದರೆ, ಇಲ್ಲಿ ಎಲ್ಲವನ್ನೂ ನೋಡುತ್ತಿದ್ದ ಪ್ರೇಕ್ಷಕ ಮಾತ್ರ ಸುದ್ದಿ ಮಾಧ್ಯಮಗಳ ರಾಜಕಾರಣವನ್ನು ಅರಿಯುವಲ್ಲಿ ಸೋಲಲು ಸಾಧ್ಯವಿರಲಿಲ್ಲ.

ಸದ್ಯಕ್ಕೆ ರಾಜ್ಯ ರಾಜಕಾರಣ ರೆಸಾರ್ಟ್​​ಗೆ ವರ್ಗಾವಣೆಯಾಗುವ ಎಲ್ಲ ಸ್ಪಷ್ಟ ಸೂಚನೆಗಳೂ ಕಂಡು ಬಂದಿವೆ. ಆದರೆ, ಗೋವಾ ಮತ್ತು ಮೇಘಾಲಯದಲ್ಲಿ ಅನ್ವಯವಾಗದ ನಿಯಮವನ್ನು ರಾಜ್ಯಕ್ಕೆ ಅನ್ವಯಿಸಲೇಬೇಕು ಎಂದು ಬಿಜೆಪಿ ಒತ್ತಾಯಿಸುತ್ತಿರುವುದು ಮತ್ತು ಇದನ್ನು ರಾಷ್ಟ್ರೀಯ ದುರಂತ ಎಂಬಂಥೆ ಚಿತ್ರಿಸುತ್ತಿರುವ ಕೆಲವು ಮಾಧ್ಯಮಗಳ ಕುರಿತು ಪ್ರಶ್ನೆ ಎದ್ದಿದೆ. ಈ ಹಿಂದೆ ಅನ್ವಯವಾಗದ ನಿಯಮ ರಾಜ್ಯಕ್ಕೆ ಏಕೆ ಅನ್ವಯವಾಗಬೇಕು? ಎಂಬುದರ ಕುರಿತು ಬಿಜೆಪಿ ನಾಯಕರಾಗಲಿ, ಸುದ್ದಿ ಮಾಧ್ಯಮಗಳಾಗಲಿ ಹೇಳುತ್ತಿಲ್ಲ. ಅಲ್ಲದೇ, ಗೋವಾ ಮತ್ತು ಮೇಘಾಲಯ ರಾಜ್ಯಗಳಲ್ಲಿ ಅತಿ ದೊಡ್ಡ ಪಕ್ಷಕ್ಕೆ ಸರ್ಕಾರ ರಚಿಸುವ ಹಕ್ಕು ನೀಡಿ ಎಂದು ಕೂಡ ಸುದ್ದಿ ಮಾಧ್ಯಮಗಳು ವರದಿಗಳನ್ನು ಬಿತ್ತರಿಸುವುದನ್ನಾಗಲಿ ಅಥವಾ ಒತ್ತಾಯಿಸಿದ ಉದಾಹರಣೆಯಾಗಲಿ ಕಂಡಿರಲಿಲ್ಲ. ಇನ್ನು ಜಮ್ಮು ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿಯಾದ ಪಿಡಿಪಿ ಮತ್ತು ಬಿಜೆಪಿ ಮೈತ್ರಿ ಸರ್ಕಾರ ರಚನೆಯಾದ ಸಂದರ್ಭದಲ್ಲಿ ಕೂಡ ಇದೇ ಮಾಧ್ಯಮಗಳು ಮೌನವ್ರತಕ್ಕೆ ಜಾರಿದ್ದವು.

ಕರ್ನಾಟಕಕ್ಕೆ ಮಾತ್ರ ಸಿಂಗಲ್ ಲಾರ್ಜೆಸ್ಟ್ ಪಾರ್ಟಿಗೆ ಸರ್ಕಾರ ರಚಿಸುವ ಹಕ್ಕು ಸಿಗಬೇಕು ಎಂದು ಮಾಧ್ಯಮಗಳು ಒತ್ತಾಯಿಸುತ್ತಿವೆ. ಇನ್ನೇನು ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲು ವೇದಿಕೆ ಸಿದ್ಧವಾಗುತ್ತಿದೆ. ಗೋವಾ ಮತ್ತು ಮೇಘಾಲಯದಲ್ಲಿ ನಡೆದಂತೆ ರಾಜ್ಯದಲ್ಲಿ ಕೂಡ ಬಿಜೆಪಿ ಬಹುಮತವನ್ನು ಸಾಬೀತಪಡಿಸಿದರೂ ಅಚ್ಚರಿ ಪಡಬೇಕಿಲ್ಲ. ಆದರೆ, ಗೋವಾ, ಮೇಘಾಲಯಗಳಿಗೆ ಅನ್ವಯವಾಗದ ನಿಯಮರಾಜ್ಯದಲ್ಲೇಕೆ ಜಾಗತಿಕ ಸಮಸ್ಯೆಯಂಥೆ ಕಾಣುತ್ತಿದೆ? ಎಂಬ ಪ್ರಶ್ನೆಗೆ ಬಿಜೆಪಿ ಮತ್ತು ಅವುಗಳನ್ನು ಬೆಂಬಲಿಸುತ್ತಿರುವ ಸುದ್ದಿ ಮಾಧ್ಯಮಗಳು ಉತ್ತರ ನೀಡಬೇಕಿದೆ. ಇನ್ನು ಬಿಜೆಪಿ ಬಹುಮತ ಸಾಬೀತು ಪಡಿಸಲು ನಡೆಸುತ್ತಿರುವ ಕಸರತ್ತು, ರಾಜೀನಾಮೆ ರಾಜಕಾರಣ, ಆಪರೇಷನ್ ಇತ್ಯಾದಿಗಳು ತಿಳಿಯಾಗಲು ಇನ್ನಷ್ಟು ದಿನಗಳು ಬೇಕು. ಮತ್ತು ಇವುಗಳು ಇತಿಹಾಸದಲ್ಲಿ ಕಪ್ಪು ಚುಕ್ಕಿಯಾಗಿ ದಾಖಲಾವುದಂಥೂ ಸತ್ಯ.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

1+

Leave a Reply

Your email address will not be published. Required fields are marked *