ಬಿಜೆಪಿಗೆ ತಿರುಗುಬಾಣವಾಗುತ್ತಾ ಕರ್ನಾಟಕ ಮಾದರಿ?

ಹೆಚ್ಚಾಗಿದೆ ಸಿಂಗಲ್ ಲಾರ್ಜೆಸ್ಟ್ ಪಾರ್ಟಿ ಕೂಗು
ತಮಗೇ ಅವಕಾಶ ಕೊಡಿ ಎಂದ ಕಾಂಗ್ರೆಸ್, ಆರ್​ಜೆಡಿ

ಗೋವಾ/ಬೆಂಗಳೂರು/ಪಾಟ್ನಾ: ಕರ್ನಾಟಕದಲ್ಲಿ ಅಧಿಕಾರ ಹಿಡಿಯಲು ತೀವ್ರ ಕಸರತ್ತು ನಡೆಸಿ, ಯಶಸ್ವಿಯಾಗಿದ್ದ ಬಿಜೆಪಿಗೆ ಇಂದು ದೇಶದ ಅನೇಕ ರಾಜ್ಯಗಳಲ್ಲಿ ಇದೇ ಕಾರಣಕ್ಕೆ ತೀವ್ರ ಮುಜುಗರ ಎದುರಾಗಿದೆ. ಅತ್ಯಂತ ದೊಡ್ಡ ಪಕ್ಷಗಳಾಗಿ ಹೊರಹೊಮ್ಮಿದ್ದ ಪಕ್ಷಗಳ ಬದಲಿಗೆ, ಬಿಜೆಪಿಗೆ ಅವಕಾಶ ನೀಡಿದ್ದ ರಾಜ್ಯಪಾಲರ ನಡೆಯ ವಿರುದ್ಧ ಅನೇಕ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದು, ಅಸ್ತಿತ್ವದಲ್ಲಿರುವ ಸರ್ಕಾರಗಳನ್ನು ವಜಾಗೊಳಿಸಿ, ತಮಗೆ ಸರ್ಕಾರ ರಚಿಸಲು ಅವಕಾಶ ನೀಡಿ ಎಂದು ಒತ್ತಾಯಿಸಿವೆ.

ಕರ್ನಾಟಕದಲ್ಲಿ ಏನಕೇನ ಪ್ರಕಾರೇಣ ಅಧಿಕಾರ ಹಿಡಿಯಬೇಕು ಎಂಬ ಬಿಜೆಪಿಯ ಆಸೆ, ಬಿಎಸ್​ವೈ ಪದಗ್ರಹಣ ಸಮಾರಂಭದ ನಂತರ ಈಡೇರಿತ್ತು. ಆದರೆ, ಇದರ ಬೆನ್ನಲ್ಲೇ ಬಿಜೆಪಿಗೆ ತೀವ್ರ ಮುಜುಗರ ಸೃಷ್ಟಿಯಾಗಿದೆ. ಕರ್ನಾಟಕ ಮಾದರಿಗೆ ವಿವಿಧ ರಾಜ್ಯಗಳಲ್ಲಿ ಒತ್ತಾಯ ಕೇಳಿಬಂದಿದ್ದು, ಇದೇ ಮಾದರಿಯಲ್ಲಿ ತಮಗೂ ಅಧಿಕಾರ ಕೊಡಿ ಎಂದು ಮನವಿ ಮಾಡಿವೆ. ಗೋವಾದಲ್ಲಿ 2017ರಲ್ಲಿ ಕಾಂಗ್ರೆಸ್ 17, ಬಿಜೆಪಿ 13 ಕ್ಷೇತ್ರಗಳಲ್ಲಿ ಗೆದ್ದಿತ್ತು ಎಂದಿರುವ ಗೋವಾ ಕಾಂಗ್ರೆಸ್ ನಾಯಕ ಯತೀಶ್ ನಾಯಕ್, ರಾಜ್ಯಪಾಲರು ಕಾಂಗ್ರೆಸ್ ಬದಲು ಬಿಜೆಪಿಗೆ ಅವಕಾಶ ನೀಡಿದರು. ಈಗ ಕರ್ನಾಟಕ ಮಾದರಿಯಲ್ಲಿ ರಾಜ್ಯಪಾಲರು ನಮಗೆ ಸರ್ಕಾರ ರಚಿಸಲು ಆಹ್ವಾನಿಸಬೇಕು ಎಂದು ಒತ್ತಾಯಿಸಿದ್ದಾರೆ.

ಇನ್ನು ಕರ್ನಾಟಕದ ಮಾದರಿಗೆ ಆರ್​ಜೆಡಿ ನಾಯಕ ತೇಜಸ್ವಿ ಯಾದವ್ ಒತ್ತಾಯಿಸಿದ್ದು, ನಾನು ರಾಜ್ಯಪಾಲರ ಮುಂದೆ ಶಾಸಕರೊಂದಿಗೆ ಪೆರೇಡ್​ ನಡೆಸುತ್ತೇನೆ ಎಂದಿದ್ದಾರೆ. ಅಲ್ಲದೇ, ಈಗ ಅಸ್ತಿತ್ವದಲ್ಲಿರುವ ಎನ್​​ಡಿಎ ಮೈತ್ರಿಕೂಟ ಸರ್ಕಾರವನ್ನು ವಜಾಗೊಳಿಸಿ ತಮಗೆ ಸರ್ಕಾರ ರಚಿಸಲು ಅವಕಾಶ ನೀಡಿ ಎಂದಿರುವ ಅವರು, ರಾಜ್ಯಪಾಲರ ಬಳಿ ತೆರಳುವುದಾಗಿ ಟ್ವೀಟ್ ಮೂಲಕ ಹೇಳಿಕೆ ನೀಡಿದ್ದಾರೆ. ಜೊತೆಗೆ ಬಿಹಾರದಲ್ಲಿ ನಮ್ಮದು ಅತ್ಯಂತ ದೊಡ್ಡ ಪಕ್ಷ ಎನ್ನುವ ಮೂಲಕ ಕರ್ನಾಟಕ ಮಾದರಿಗೆ ಒತ್ತಾಯಿಸಿದ್ದಾರೆ. ಕರ್ನಾಟಕದಲ್ಲಿ ಬಿಎಸ್​ವೈ ಪ್ರಮಾಣ ವಚನ ಸ್ವೀಕರಿಸಿರುವ ಕುರಿತು ಪ್ರತಿಕ್ರಿಯಿಸಿರುವ ಅವರು, ಕರ್ನಾಟಕದಲ್ಲಿ ಪ್ರಜಾಪ್ರಭುತ್ವದ ಕೊಲೆಯಾಗಿದೆ ಎಂದಿದ್ದಾರೆ.

ಸಂಜೆ ಪತ್ರಿಕಾ ಗೋಷ್ಠಿ ನಡೆಸಿದ ತೇಜಸ್ವಿ ಯಾದವ್, ಪ್ರಜಾಪ್ರಭುತ್ವದಲ್ಲಿ ಇಂದು ಕರಾಳ ದಿನ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಎಸ್​ವೈ ಪ್ರಮಾಣ ವಚನ ಸ್ವೀಕಾರವನ್ನು ವಿರೋಧಿಸಿದ ಅವರು, ಬಿಹಾರದಲ್ಲಿ ನಮ್ಮದು ಅತ್ಯಂತ ದೊಡ್ಡ ಪಕ್ಷ. ರಾಜ್ಯಪಾಲರು ಸರ್ಕಾರ ರಚಿಸಲು ನಮಗೆ ಯಾಕೆ ಅವಕಾಶ ನೀಡಿಲ್ಲ ಎಂದು ಪ್ರಶ್ನಿಸಿದ್ದಾರೆ. ಕರ್ನಾಟಕ ಮಾದರಿಯಲ್ಲಿ ನಮಗೂ ಅವಕಾಶ ನೀಡಿ ಎಂದಿರುವ ಅವರು, ಬಿಜೆಪಿ ವಿರುದ್ಧ ಎಲ್ಲ ಪಕ್ಷಗಳೂ ಒಗ್ಗೂಡಬೇಕು ಎಂದು ಕರೆ ನೀಡಿದರು.

ಅಲ್ಲದೇ, ಕರ್ನಾಟಕ ಮಾದರಿಯಲ್ಲಿ ಸರ್ಕಾರ ರಚನೆ ಕಸರತ್ತು ಆರಂಭಿಸಿರುವ ಅವರು, ನಾಳೆ ಒಂದು ಗಂಟೆಗೆ ರಾಜ್ಯಪಾಲರನ್ನು ಭೇಟಿಯಾಗುತ್ತೇನೆ. ಕರ್ನಾಟಕದಲ್ಲಿ ಬಿಜೆಪಿಗೆ ಅವಕಾಶ ನೀಡಿದಂತೆ ನಮಗೆ ನೀಡಲು ಒತ್ತಾಯಿಸುತ್ತೇನೆ ಎಂದರು. ಜೊತೆಗೆ, ಸದ್ಯದ ಸರ್ಕಾರವನ್ನು ವಜಾಗೊಳಿಸಿ ಎಂದ ಯಾದವ್, ಸರ್ಕಾರ ರಚಿಸಲು ನಮ್ಮನ್ನು ಆಹ್ವಾನಿಸಲು ಮನವಿ ಮಾಡುತ್ತೇನೆ ಎಂದರು.

ಇನ್ನು ಮೇಘಾಲಯದಲ್ಲಿ ಕೂಡ 2018ರಲ್ಲಿ ನಡೆದಿದ್ದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ, ಕಾಂಗ್ರೆಸ್​​ಗೆ ಸರ್ಕಾರ ರಚಿಸುವ ಅವಕಾಶ ನೀಡುವುದರ ಬದಲು, ಬಿಜೆಪಿ ಮೈತ್ರಿಕೂಟಕ್ಕೆ ಅವಕಾಶ ನೀಡಲಾಗಿತ್ತು. ಇದೀಗ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಿದ್ದು, ಬಹುಮತ ಸಾಬೀತಿಗೆ ಕಸರತ್ತು ನಡೆಯುತ್ತಿದೆ. ಇದನ್ನೇ ಆಧಾರವಾಗಿಟ್ಟುಕೊಂಡು ಕಾಂಗ್ರೆಸ್ ಮತ್ತು ಆರ್​ಜೆಡಿ ತಮಗೆ ಸರ್ಕಾರ ರಚಿಸಲು ಅವಕಾಶ ನೀಡಿ ಎಂದಿವೆ.

ಈ ನಡುವೆ ಮಣಿಪುರ ಮಾಜಿ ಸಿಎಂಗಳಾದ ಇಬೋಬಿ ಸಿಂಗ್, ಮುಕುಲ್ ಸಂಗ್ಮಾ ರಾಜ್ಯಪಾಲರ ಭೇಟಿಗೆ ನಿರ್ಧರಿಸಿದ್ದಾರೆ. ನಾಳೆ ತಮ್ಮನ್ನು ಭೇಟಿಯಾಗಲು ಸಮಯ ನೀಡಿ ಎಂದು ಮಣಿಪುರ ರಾಜ್ಯಪಾಲರಿಗೆ ಇಬ್ಬರೂ ಕಾಂಗ್ರೆಸ್ ನಾಯಕರು ಮನವಿ ಮಾಡಿಕೊಂಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಇಬೋಬಿ ಸಿಂಗ್, ನಾಳೆ ರಾಜ್ಯಪಾಲರ ಭೇಟಿಗೆ ಸಮಯ ಕೋರಿದ್ದೇನೆ ಎಂದಿದ್ದಾರೆ. ಅಲ್ಲದೇ, ಕಾಂಗ್ರೆಸ್ ರಾಜ್ಯದಲ್ಲಿ ಅತಿ ದೊಡ್ಡ ಪಕ್ಷ. ಫಲಿತಾಂಶ ಘೋಷಣೆಯ ನಂತರ ಸರ್ಕಾರ ರಚಿಸಲು ಅವಕಾಶ ಕೊಡಿ ಎಂದು ನಾವು ಮನವಿ ಮಾಡಿಕೊಂಡಿದ್ದೆವು. ಆದರೆ, ನಮ್ಮ ಮನವಿಯನ್ನು ತಿರಸ್ಕರಿಸಲಾಗಿತ್ತು ಎಂದಿರುವ ಅವರು, ಕರ್ನಾಟಕದಂತೆ ನಮಗೂ ಅವಕಾಶ ಕೊಡಿ ಎಂದಿದ್ದಾರೆ. ಜೊತೆಗೆ, ಕರ್ನಾಟಕದಲ್ಲಿ ಅವಕಾಶ ಇದೆ, ನಮಗೆ ಯಾಕೆ ಇಲ್ಲ? ಎಂದು ರಾಜ್ಯಪಾಲರ ನಡೆಯನ್ನು ಪ್ರಶ್ನಿಸಿದ್ದಾರೆ.

ಒಟ್ಟಿನಲ್ಲಿ ಈ ಎಲ್ಲ ಬೆಳವಣಿಗೆಗಳಿಂದ ಬಿಜೆಪಿಗೆ ರಾಷ್ಟ್ರ ಮಟ್ಟದಲ್ಲಿ ತೀವ್ರ ಮುಖಭಂಗವಾದಂತಾಗಿದೆ. ಕರ್ನಾಟಕದಲ್ಲಿ ಅಧಿಕಾರ ಹಿಡಿದ ನಂತರ ಗೋವಾ, ಮೇಘಾಲಯ, ಬಿಹಾರದಲ್ಲಿ ರಾಜಕೀಯ ಚಟುವಟಿಕೆಗಳು ತೀವ್ರವಾಗುವ ಸ್ಪಷ್ಟ ಸೂಚನೆಗಳು ಸಿಕ್ಕಿದ್ದು, ಹೊಸ ಸರ್ಕಾರ ರಚನೆಗೆ ಒತ್ತಡ ಕೇಳಿ ಬಂದಿದೆ.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *