ಭಗವಂತನಿಗೆ ಬೇಕಾದಾಗ ಮಂದಿರ ನಿರ್ಮಾಣವಾಗುತ್ತದೆ: ಕಪಿಲ್ ಸಿಬಲ್

ನವದೆಹಲಿ: ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ತನಿಖೆಯನ್ನು 2019ರ ಲೋಕಸಭೆ ಚುನಾವಣೆ ನಂತರ ನಡೆಸಬೇಕು ಎಂದು ಬಿಜೆಪಿ ಮತ್ತು ಸಂಘ ಪರಿವಾರದ ಕೆಂಗಣ್ಣಿಗೆ ಗುರಿಯಾಗಿದ್ದ ಕಪಿಲ್ ಸಿಬಲ್ ಇಂದು ಬಿಜೆಪಿ, ನರೇಂದ್ರ ಮೋದಿಯವರ ವಿರುದ್ಧ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ಭಗವಂತನಿಗೆ ಯಾವಾಗ ಬೇಕೋ ಆಗಲೇ ರಾಮ ಮಂದಿರ ನಿರ್ಮಾಣವಾಗುತ್ತದೆ ಎಂದು ಹಿರಿಯ ವಕೀಲ ಮತ್ತು ಕಾಂಗ್ರೆಸ್ ಸಂಸದ ಕಪಿಲ್ ಸಿಬಲ್ ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೇ, ಪ್ರಧಾನಿ ನರೇಂದ್ರ ಮೋದಿಯವರು ಹೇಳುವುದಿರಂದ ಮಂದಿರ ನಿರ್ಮಾಣವಾಗುವುದಿಲ್ಲ. ಈ ವಿಷಯ ಕೋರ್ಟ್​​ನಲ್ಲಿ ವಿಚಾರಣೆ ಹಂತದಲ್ಲಿದೆ ಎಂದು ಅವರು ಹೇಳಿದ್ದಾರೆ.

ಬಾಬ್ರಿ ಮಸೀದಿ ಕುರಿತು ಕೇವಲ ಹೇಳಿಕೆ ನೀಡುವುದರಿಂದ ವಿವಾದ ಸೃಷ್ಟಿಯಾಗುತ್ತದೆ ಎಂದಿರುವ ಅವರು, ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಾನು ಸುನ್ನಿ ವಕ್ಫ್ ಮಂಡಳಿ ಪರ ವಾದಿಸುವ ವಿಷಯದ ಕುರಿತು ಚರ್ಚೆ ನಡೆಸುವುದು ಏಕೆ? ಹೀಗೆ ಚರ್ಚಿಸುವುದರಿಂದ ಗಂಭೀರ ವಿಷಯ ಪರಿಹಾರವಾಗುವುದೇ? ಎಂದು ಅವರು ಪ್ರಧಾನಿ ನಡೆಯನ್ನು ಪ್ರಶ್ನಿಸಿದ್ದಾರೆ.

ವಾಸ್ತವವಾಗಿ ಪ್ರಧಾನಿಯವರಿಗೆ ನೈಜ ಅಂಶಗಳ ಕುರಿತು ಅರಿವಿಲ್ಲ. ಸುಪ್ರೀಂ ಕೋರ್ಟ್​​ನಲ್ಲಿ ನಾನು ಸುನ್ನಿ ವಕ್ಫ್ ಮಂಡಳಿಯನ್ನು ಪ್ರತಿನಿಧಿಸಿಲ್ಲ. ಮತ್ತು ನಾನು ಸುನ್ನಿ ವಕ್ಫ್ ಮಂಡಳಿಯನ್ನು ಪ್ರತಿನಿಧಿಸಿದ್ದೇನೆ ಎಂದಿರುವುದಕ್ಕೆ ಅವರಿಗೆ ಧನ್ಯವಾದಗಳು ಎಂದ ಅವರು, ತಮ್ಮ ವಿರುದ್ಧ ಹೇಳಿಕೆ ನೀಡುವ ಮುನ್ನ ಎಚ್ಚರ ವಹಿಸಬೇಕು ಎಂದು ಸಲಹೆ ನೀಡಿದ್ದಾರೆ.

ಇದರೊಂದಿಗೆ, ನಾವು ಭಗವಂತನಲ್ಲಿ ನಂಬಿಕೆ ಇಟ್ಟಿದ್ದೇವೆ. ನಾವು ಮೋದಿಯವರನ್ನು ನಂಬುವುದಿಲ್ಲ ಎಂದ ಅವರು, ನೀವು ಮಸೀದಿಯನ್ನು ಕಟ್ಟುವುದಿಲ್ಲ ಎಂದು ಭವಿಷ್ಯವನ್ನೂ ನುಡಿದಿದ್ದಾರೆ. ಅಲ್ಲದೇ, ದೇವರಿಗೆ ಬೇಕಾದಾಗ ಮಂದಿರ ನಿರ್ಮಾಣವಾಗುತ್ತದೆ ಎಂದ ಅವರು, ಕೋರ್ಟ್ ಈ ವಿಷಯವನ್ನು ನಿರ್ಧರಿಸುತ್ತದೆ ಎಂದು ಕೂಡ ಅಭಿಪ್ರಾಯಪಟ್ಟಿದ್ದಾರೆ.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *