ಮಗನಿಲ್ಲದೆ ಐವಿಎಫ್​ ತಂತ್ರಜ್ಞಾನದಿಂದ ಅವಳಿ ಮೊಮ್ಮಕ್ಕಳನ್ನು ಪಡೆದ ದಂಪತಿ

ಐವಿಎಫ್ ತಂತ್ರಜ್ಞಾನದಿಂದ ಜನಿಸಿದ ಅವಳಿ ಮಕ್ಕಳು
ಮೃತ ವ್ಯಕ್ತಿಯ ವೀರ್ಯದಿಂದ ಸಂತಾನ ಭಾಗ್ಯ
ಮಗನ ವೀರ್ಯದಿಂದ ಮೊಮ್ಮಕ್ಕಳನ್ನು ಪಡೆದ ದಂಪತಿ

ಐವಿಎಫ್ ತಂತ್ರಜ್ಞಾನದ ಕುರಿತು ದೇಶದಲ್ಲಿ ಇತ್ತೀಚೆಗೆ ವರದಿಗಳು ಕೇಳಿಬರ್ತಿವೆ. ಪುಣೆಯಲ್ಲಿ ನಡೆದಿರೋ ಒಂದು ವಿಶಿಷ್ಟ ಪ್ರಕರಣ ಐವಿಎಫ್ ತಂತ್ರಜ್ಞಾನದಿಂದ ಮಕ್ಕಳನ್ನ ಪಡೀಬಹುದೋ ಅಥವಾ ಮೊಮ್ಮಕ್ಕಳನ್ನೂ ಪಡೀಬಹುದೋ ಅನ್ನೋ ಕುತೂಹಲ ಹುಟ್ಟುಹಾಕಿದೆ.

ಹೌದು, ಈ ವ್ಯಕ್ತಿ ಜರ್ಮನಿಯಲ್ಲಿ ವಿದ್ಯಾಭ್ಯಾಸ ಮಾಡ್ತಿದ್ದ ಪ್ರತಿಭಾವಂತ. ಆದ್ರೆ, 27ನೇ ವಯಸ್ಸಿಗೆ ಈತ ಮಾರಣಾಂತಿಕ ರೋಗಕ್ಕೆ ಬಲಿಯಾಗಿಬಿಟ್ಟಿದ್ದ. ಇದ್ದ ಒಬ್ಬನೇ ಮಗನನ್ನು ಕಳೆದುಕೊಂಡ ಪೋಷಕರು ಸಂತಾನಾಭಿವೃದ್ಧಿಯಾಗಲಿಲ್ಲವಲ್ಲ ಅನ್ನೋ ಕೊರಗಲ್ಲಿ ದಿನ ಕಳೀತಿದ್ರು. ಇವರಿಗೆ ಆಶಾಕಿರಣವಾಗಿ ಮೂಡಿಬಂದದ್ದು ಐವಿಎಫ್ ತಂತ್ರಜ್ಞಾನ.

ಪುಣೆಯ ದಂಪತಿಯ ಪುತ್ರ ಪ್ರಥಮೇಶ್ ಪಾಟೀಲ್ ಅವ್ರಿಗೆ 2013ರಲ್ಲಿ ಬ್ರೈನ್ ಟ್ಯೂಮರ್ ರೋಗ ಎರಗಿತ್ತು. ಕಿಮೋಥೆರೆಪಿ ಚಿಕಿತ್ಸೆಯಿಂದಾಗಿ ಆತನಲ್ಲಿ ಸಂತಾನೋತ್ಪತ್ತಿ ಸಾಮರ್ಥ್ಯ ಕುಗ್ಗಬಹುದು ಅನ್ನೋ ಊಹೆ ವೈದ್ಯರಿಂದ ವ್ಯಕ್ತವಾಗಿತ್ತು. ಇದ್ರಿಂದಾಗಿ ವೈದ್ಯರು ಪ್ರಥಮೇಶ್ ಅನುಮತಿ ಪಡೆದು ವೀರ್ಯ ಸಂಗ್ರಹಿಸಿಟ್ಟಿದ್ರು. ಚಿಕಿತ್ಸೆ ಆರಂಭವಾದ ನಂತ್ರ 2016ರರಲ್ಲಿ ಪ್ರಥಮೇಶ್ ಸಾವಿಗೀಡಾಗಿದ್ರು.

ಆದ್ರೆ, ದಂಪತಿ ಮೊಮ್ಮಕ್ಕಳನ್ನು ಪಡೆಯೋಕೆ ಮುಂದಾದ್ರು. ಜರ್ಮನಿಯ ವೀರ್ಯ ಬ್ಯಾಂಕ್​​ನಲ್ಲಿ ಸಂರಕ್ಷಿಸಲಾಗಿದ್ದ ಮಗನ ವೀರ್ಯವನ್ನು ತರಿಸಿಕೊಂಡ್ರು. ಐವಿಎಫ್​ಗಾಗಿ ಪುಣೆಯ ಸಹ್ಯಾದ್ರಿ ಆಸ್ಪತ್ರೆಯನ್ನ ಸಂಪರ್ಕಿಸಿದ್ರು. ಪೋಷಕರ ಅಳಲಿಗೆ ಓಗೊಟ್ಟ ವೈದ್ಯರು, ಮುಂದಿನ ಕ್ರಮಕ್ಕೆ ಮುಂದಾದ್ರು. ಇನ್ನೊಂದು ವಿಚಿತ್ರ ನಿರ್ಧಾರಕ್ಕೆ ಪ್ರಥಮೇಶ್ ತಾಯಿ ಬಂದಿದ್ರು. 49 ವರ್ಷದ ತಾವೇ ಗರ್ಭ ಧರಿಸೋಕೆ ಸಿದ್ಧವಾಗಿದ್ರು. ಆದ್ರೆ, ದೈಹಿಕವಾಗಿ ಸದೃಢತೆಯ ಸಮಸ್ಯೆಯಿಂದಾಗಿ ಈ ಆಸೆಯನ್ನ ಕೈಬಿಟ್ರು. ನಂತ್ರ, ಸೋದರ ಸಂಬಂಧಿಯೊಬ್ರು ಬಾಡಿಗೆ ತಾಯಿಯಾಗೋಕೆ ಒಪ್ಪಿಗೆ ಸೂಚಿಸಿದ್ರು.

ಕಡೆಗೆ ಎಲ್ಲವೂ ಅಂದುಕೊಂಡಂತೆ ನಡೆದು, ಮಗನನ್ನ ಕಳಕೊಂಡ ದಂಪತಿಗೆ ಮತ್ತೊಂದು ಬಂಪರ್ ಆಫರ್ ಸಿಕ್ಕಿದೆ. ಅವರಿಗೆ ಬಾಡಿಗೆ ತಾಯಿಯ ಮೂಲಕ ಅವಳಿ ಮೊಮ್ಮಕ್ಕಳು ಜನಿಸಿವೆ. ನೋಡಲು ಮುದ್ದುಮುದ್ದಾಗಿರೋ ಮೊಮ್ಮಕ್ಕಳನ್ನ ಕಂಡ ದಂಪತಿ ದೂರವಾಗಿರೋ ತಮ್ಮ ಮಗನ ಸಾವಿನ ದುಃಖವನ್ನ ಮರೀತಿದಾರೆ. ಅಂದ್ಹಾಗೆ, ವ್ಯಕ್ತಿಯೊಬ್ಬ ಸಾವಿಗೀಡಾದ ನಂತ್ರ ಕೂಡ ಮಕ್ಕಳನ್ನು ಪಡೀಬಹುದಾ? ಬಾಡಿಗೆ ತಾಯಿಯ ಮೂಲಕ ಮೊಮ್ಮಕ್ಳನ್ನ ಪಡೆದ ದಂಪತಿಗಳಿಂದ ಅವರ ಭವಿಷ್ಯ ನಿರ್ಧಾರವಾಗೋದು ಹೇಗೆ? ತಂದೆ, ತಾಯಿಯರ ಆರೈಕೆ, ಪಾಲನೆ, ಪೋಷಣೆ ಇಲ್ಲದ ಈ ಕುಡಿಗಳ ಕತೆ ಏನು? ಅನ್ನೋ ಹಲವು ಪ್ರಶ್ನೆಗಳನ್ನ ಕೂಡ ಈ ಪ್ರಕರಣ ಸೃಷ್ಟಿಸಿದೆ.

ಐವಿಎಫ್ ತಂತ್ರಜ್ಞಾನ ಅಂದ್ರೇನು?

ಅಂದ್ಹಾಗೆ ಐವಿಎಫ್ ಅಂದ್ರೆ, ಇನ್ ವಿಟ್ರೊ ಫರ್ಟಿಲೈಜೇಶನ್ ಹೆಸರಿನಲ್ಲಿ ಕರೆಯಲಾಗುವ ವೈದ್ಯಕೀಯ ವಿಧಾನ. ಈ ವಿಧಾನದ ಮೂಲಕ ಗಂಡಿನ ವೀರ್ಯದ ಜೊತೆಗೆ ಹೆಣ್ಣಿನ ಅಂಡಾಣುವನ್ನು ಪ್ರಯೋಗಾಲಯದಲ್ಲಿ ಫಲವಂತಿಕೆ ಮಾಡಲಾಗುತ್ತೆ. ನಂತರ ಫಲವಂತ ಅಂಡಾಣುಗಳನ್ನು ಹೆಣ್ಣಿನ ಗರ್ಭಕೋಶಕ್ಕೆ ವರ್ಗಾಯಿಸಲಾಗುತ್ತೆ. ಆ ನಂತ್ರ ಅವುಗಳನ್ನು ಗರ್ಭಾಶಯದ ಗೋಡೆಗಳಿಗೆ ಅಂಟಿಕೊಳ್ಳುವಂತೆ ವೈದ್ಯರು ಪ್ರಯತ್ನಿಸ್ತಾರೆ. ಈ ಮೂಲಕ ಭ್ರೂಣವನ್ನ ಯಶಸ್ವಿಯಾಗಿ ಬೆಳೆಸೋಕೆ ಯತ್ನಿಸಲಾಗುತ್ತೆ. ಮಕ್ಕಳಿಲ್ಲದ ದಂಪತಿಗಳಿಗೆ ಈ ತಂತ್ರಜ್ಞಾನ ವರ ಅಂತ್ಲೇ ಪರಿಗಣಿತವಾಗಿದೆ.

ಮಹತ್ವದ ಸಂಗತಿ ಅಂದ್ರೆ, ಐವಿಎಫ್ ಯಶಸ್ವಿಯಾಗೋಕೆ ಹಲವು ಬಾರಿ ಯತ್ನಿಸಬೇಕಾಗುತ್ತೆ. ಆದ್ರೆ, ಒಂದೇ ಯತ್ನದಲ್ಲಿ ಪುಣೆಯ ದಂಪತಿ ಮೊಮ್ಮಕ್ಕಳನ್ನು ಪಡೆದದ್ದು ವೈದ್ಯ ಲೋಕದಲ್ಲೂ ಅಚ್ಚರಿಗೆ ಕಾರಣವಾಗಿದೆ. ಜೊತೆಗೆ, ಮಕ್ಕಳನ್ನು ಪಡೆಯೋಕೆ ಸಾಧ್ಯವಾಗದವ್ರು ಬಾಡಿಗೆ ತಾಯ್ತನದ ಮೂಲಕ ಮೊಮ್ಮಕ್ಕಳನ್ನೇ ಪಡೆದ ಘಟನೆಗೆ ದೇಶ ಸಾಕ್ಷಿಯಾಗಿದೆ. ಮಗನ ಸಾವಿನ ನಂತರ ಮೊಮ್ಮಕ್ಕಳನ್ನು ಪಡೆದ ಈ ಪ್ರಕರಣ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದೆ.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *