ಈಸ್ ಇಟ್ ಮೈ ಫಾಲ್ಟ್?

ಅದೊಂದು ಜಗತ್ತನ್ನೇ ನಿಬ್ಬೆರಗಾಗಿಸುವಂತಹ ವಿಶಿಷ್ಟ, ವಿಶೇಷ ವಸ್ತ್ರ ಪ್ರದರ್ಶನ.. ಅಂದ ಹಾಗೆ ಅಲ್ಲಿ ಪ್ರದರ್ಶನಕ್ಕಿಟ್ಟಿದ್ದು ಕೇವಲ 18 ವಸ್ತ್ರಗಳನ್ನು ಮಾತ್ರ.. ಆ ವಸ್ತ್ರ ಪ್ರದರ್ಶನದ ಹಿನ್ನೆಲೆ ಕೇಳಿದ್ರೆ ನಿಮ್ಮಲ್ಲರ ಕಣ್ಣಲ್ಲಿ ಒಂದು ಹನಿ ನೀರು ಜಿನುಗದೆ ಇರದು.

ಈ ವಸ್ತ್ರ ಪ್ರದರ್ಶನ ನಡೆದಿದ್ದು ಬೆಲ್ಜಿಯಂನ ಬ್ರುಸೆಲ್ಸ್ ನಲ್ಲಿ.. ಇಲ್ಲಿ ಪ್ರದರ್ಶನಕ್ಕಿಟ್ಟಿದ್ದ ವಸ್ತ್ರಗಳು ಯಾರೋ ರಾಜ ಮಹಾರಾಜರದ್ದಲ್ಲ. ಅಥವಾ ಆ ಕಾಲ ಘಟ್ಟದ್ದೂ ಅಲ್ಲ.. ಆದ್ರೂ ಆ ವಸ್ತ್ರ ಪ್ರದರ್ಶನ ಜಗತ್ತಿನ ಗಮನ ಸೆಳೆದಿತ್ತು.. ವಿಶ್ವದ ಪ್ರಖ್ಯಾತ ವಾಹಿನಿಗಳು ಆ ವಸ್ತ್ರ ಪ್ರದರ್ಶನವನ್ನು ವಿಶೇಷ ಆಸಕ್ತಿಯಿಂದ ಪ್ರಸಾರ ಮಾಡಿದ್ದವು.. ಆ ವಸ್ತ್ರ ಪ್ರದರ್ಶನದ ಹಿಂದೆ ಒಂದು ಮಾನವೀಯ ಸಂದೇಶವಿತ್ತು..

ಅತ್ಯಾಚಾರ.. ಇಡೀ ಪ್ರಜ್ಞಾವಂತ ಮಾನವ ಸಮಾಜವೇ ತಲೆ ತಗ್ಗಿಸುವಂತ ಹೇಯ ಕೃತ್ಯ.. ನಾವು ಈ ಅತ್ಯಾಚಾರ ಅನ್ನುವ ಕೃತ್ಯವನ್ನು ಅಮಾನವೀಯ, ಪಾಶವಿ, ರಾಕ್ಷಸೀ ಕೃತ್ಯ ಎಂದೇ ಕರೆಯುತ್ತಿವಿ.. ಅತ್ಯಾಚಾರಿಗೆ ಗಲ್ಲು ಶಿಕ್ಷೆ ಸೂಕ್ತ ಅನ್ನುವ ಆಗ್ರಹ ಆಗಾಗ ಕೇಳಿ ಬರುತ್ತದೆ.. ಆದ್ರೆ ನಮ್ಮ ಸಭ್ಯ ನಾಗರೀಕ ಸಮಾಜದಲ್ಲಿ ಅತ್ಯಾಚಾರದಂತಹ ಹೀನಾತಿಹೀನ ಕೃತ್ಯ ಘಟಿಸುವುದು ತಪ್ಪಿಲ್ಲ..

ಅತ್ಯಾಚಾರಿಯನ್ನು ಸಮಾಜ ಅಸಹ್ಯದ ದೃಷ್ಟಿಯಲ್ಲಿ ನೋಡಿದ್ರೆ, ಅತ್ಯಾಚಾರಕ್ಕೊಳಗಾದ ಹೆಣ್ಣು ಜೀವಕ್ಕೆ ಬದುಕಿನ ಕುರಿತೇ ಅಸಹ್ಯ ಹುಟ್ಟಿಬಿಡುತ್ತದೆ.. ಮಕ್ಕಳು, ಯುವತಿಯರು, ನಡುವಯಸ್ಕರು, ವೃದ್ಧರು ಎಂಬ ಬೇಧವಿಲ್ಲದೇ ಕಾಮುಕರು ಇಡೀ ಹೆಣ್ಣು ಕುಲವನ್ನೇ ಭೋಗದ ವಸ್ತು ಎಂಬಂತೆ ನೋಡುತ್ತಾರೆ.. ಸಾಲದೆಂಬಂತೆ ಪ್ರತಿ ದಿನ ದಾಖಲಾಗುವ ಅದೆಷ್ಟೋ ರೇಪ್ ಪ್ರಕರಣಗಳು ಅಸಹ್ಯ, ಭಯ ವಾಕರಿಕೆಯಂತಹ ಎಲ್ಲಾ ಭಾವಗಳನ್ನೂ ಒಟ್ಟಿಗೆ ಸೇರಿಸಿಬಿಡುತ್ತವೆ.. ಅತ್ಯಾಚಾರದ ಕುರಿತು ಇಷ್ಟೆಲ್ಲಾ ಪೀಠಿಕೆ ಹಾಕ್ತಿರೋದಕ್ಕೆ ಕಾರಣ ಇದೆ.. ಮತ್ತೆ ಜಗತ್ತು ಅತ್ಯಾಚಾರದಂತಹ ನೀಚ ಕ್ರಿಯೆಯ ಬಗ್ಗೆ ಆಲೋಚಿಸುವಂತೆ ಮಾಡಿದ್ದು ಆ ವಸ್ತ್ರ ಪ್ರದರ್ಶನ..

ಇನ್ನು ಅತ್ಯಾಚಾರಕ್ಕೆ ಹೆಣ್ಣು ಧರಿಸುವ ದಿರಿಸೇ ಕಾರಣ ಅಂತಾರೆ ಕೆಲವು ಸನಾತನವಾದಿ ದೊಡ್ಡ ಮನುಷ್ಯರು.. ಇದೇ ಮಾತಿಗೆ ಪ್ರತಿ ಸವಾಲು ಎಂಬಂತೆ ಬೆಲ್ಜಿಯಂನ ಏಮ್ಸ್ ಆಶ್ರಯದಲ್ಲಿ ಅತ್ಯಾಚಾರಕ್ಕೊಳಗಾಗಿ ನೊಂದವರ ವಸ್ತ್ರಗಳ ಪ್ರದರ್ಶನ ಏರ್ಪಡಿಸಲಾಗಿತ್ತು.. ಬ್ರುಸೆಲ್ಸ್‌ನ ಸೆಂಟ್ರಲ್ ಕಮ್ಯುನಟೈರ್ ಮ್ಯಾರಿಟೈಮ್ ಇಂತದ್ದೊಂದು ವಿಶಿಷ್ಟ ವಸ್ತ್ರ ಪ್ರದರ್ಶನಕ್ಕೆ ವೇದಿಕೆ ಒದಗಿಸಿಕೊಟ್ಟಿತ್ತು.. ಅಂದ ಹಾಗೆ ಈ ವಸ್ತ್ರ ಪ್ರದರ್ಶನದ ಶೀರ್ಷಿಕೆಯೇ ಈಸ್ ಇಟ್ ಮೈ ಫಾಲ್ಟ್?.. ಹೆಣ್ಣು ಧರಿಸುವ ಬಟ್ಟೆಯೇ ಅತ್ಯಾಚಾರಕ್ಕೆ ಪ್ರೇರಣೆ ಅನ್ನುವ ಮೊಂಡು ನಂಬಿಕೆಯನ್ನು ಹುಸಿ ಮಾಡುವು ಮುಖ್ಯ ಉದ್ದೇಶದಿಂದ ಅಲ್ಲಿ ಅತ್ಯಾಚಾರಕ್ಕೊಳಗಾದ ಹೆಣ್ಣು ಧರಿಸಿದ್ದ ಬಟ್ಟೆಗಳನ್ನು ಪ್ರದರ್ಶಿಸಲಾಗಿತ್ತು..

ಅತ್ಯಾಚಾರದಲ್ಲಿ ಬಟ್ಟೆಗಳ ಪಾತ್ರ ಏನೂ ಇಲ್ಲ ಅಂತ ಸಾರೋದಿಕ್ಕೆ ಪೈಜಾಮಾಗಳು, ಟ್ರ್ಯಾಕ್ ಸೂಟ್‌ಗಳು ಸೇರಿದಂತೆ ಹಲ ಬಗೆಯ ಉಡುಪುಗಳನ್ನು ಇರಿಸಲಾಗಿತ್ತು.. ಹಾಗೆ ನೋಡಿದರೆ ಅಲ್ಲಿ ರಾಶಿ ಗಟ್ಟಲೆ ಉಡುಪುಗಳನ್ನೇನೂ ಗುಡ್ಡೆ ಹಾಕಿರ್ಲಿಲ್ಲ.. ಅಲ್ಲಿದ್ದಿದ್ದು ಕೇವಲ 18 ಉಡುಪುಗಳು ಮಾತ್ರ.. ಆದ್ರೆ ಅಲ್ಲಿದ್ದ ಪ್ರತೀ ಬಟ್ಟೆಗಳೂ ಒಂದೊಂದು ಕರುಣಾಜನಕ, ಹೃದಯ ಕಲಕುವ ಕಥೆ ಹೇಳುತ್ತಿತ್ತು.. ವಿನಾಕಾರಣ ತನ್ನದಲ್ಲದ ತಪ್ಪಿಗೆ ಅತ್ಯಾಚಾರಕ್ಕೊಳಗಾದ ಹೆಣ್ಣು ಜೀವಗಳ ಕಂಬನಿ ಹಾಗೂ ನಿಟ್ಟುಸಿರಿನ ಕಥೆಗಳ ನಿರೂಪಣೆ ಆ ಬಟ್ಟೆಗಳಲ್ಲಿತ್ತು..

ಆ ವಸ್ತ್ರ ಪ್ರದರ್ಶನದಲ್ಲಿ ಹಲವು ವಯೋಮಾನದ ಮಹಿಳೆಯರ ವಸ್ತ್ರಗಳಿದ್ದವು.. ಒನ್ಸ್ ಎಗೈನ್ ಪ್ರತಿಯೊಂದು ವಸ್ತ್ರವೂ ಆಯಾ ಮಹಿಳೆಯರು ರೇಪ್​ಗೆ ಒಳಗಾಗುವಾಗ ಧರಿಸಿದ್ದವಾಗಿದ್ದವು.. ಆದರೆ ಆ ಪ್ರದರ್ಶನ ನೋಡಲು ಬಂದಿದ್ದ ಎಲ್ಲರ ಕಣ್ಣಂಚಿನ ನೀರಿಗೆ ಕಾರಣವಾಗಿದ್ದು ಮಾತ್ರ ಮೂರು ವರ್ಷದ ಮಗುವೊಂದರ ಬಟ್ಟೆ.. ಆ ಮಗುವಿನ ಪ್ರೀತಿಯ ಮೈ ಲಿಟ್ಲ್ ಪೋನಿ ಎಂಬ ಬರಹವಿದ್ದ ಟೀ ಶರ್ಟ್.. ಕಾಮುಕ ರಾಕ್ಷಸನೊಬ್ಬ ಏನೂ ಅರಿಯದ, ಇನ್ನೂ ಜಗತ್ತನ್ನೇ ನೋಡದ ಅಪ್ರಾಪ್ತ ಎಳೆಯ ಬಾಲೆಯ ಮೇಲೆ ಮೃಗೀಯ ದಾಳಿ ನಡೆಸಿದ್ದ ಕುರುಹು ಅಲ್ಲಿತ್ತು.. ಆ ಪುಟ್ಟ ಮಗುವಿನ ಬಟ್ಟೆ ವಸ್ತ್ರ ಪ್ರದರ್ಶನಕ್ಕೆ ಬಂದವರ ಬಳಿ ವಾಟ್ ಈಸ್ ಮೈ ಫಾಲ್ಟ್ ಅಂತ ಕೇಳುವಂತಿತ್ತು..

ಈ ಪ್ರದರ್ಶನದಲ್ಲಿ ಸಂತ್ರಸ್ತರ ನೋವಿನ ಕಥೆಯನ್ನೂ ಬರೆಯಲಾಗಿತ್ತು.. ಶಾಲೆ ಬಿಟ್ಟು ಬಂದೊಡನೆ ನನ್ನ ಮಲತಂದೆ ನನ್ನ ಮೇಲೆ ಅತ್ಯಾಚಾರವೆಸಗಿದ.. ಪೋಲೀಸ್ ಸಮವಸ್ತ್ರದಲ್ಲಿದ್ದ ನನ್ನನ್ನು ಅತ್ಯಾಚಾರಗೈದ ಎಂಬಿತ್ಯಾದಿ ಬರಹಗಳು ನೋಡುಗರ ಮಾನವೀಯ ಅಂತಃಕರಣವನ್ನು ಕಲಕುವಂತಿತ್ತು.. ಅಲ್ಲಿಗೆ ಬಂದಿದ್ದ ಪ್ರತಿಯೊಬ್ಬರೂ ಆ ವಸ್ತ್ರಗಳ ಮೂಲಕ ಅನ್ಯಾಯಕ್ಕೊಳಗಾದ ಹೆಣ್ಣು ಜೀವಗಳ ಆರ್ತನಾದ ಕೇಳಬಹುದಿತ್ತು.. ಪೈಶಾಚಿಕ ಕೃತ್ಯಗಳಿಗೆ ಸಾಕ್ಷಿಯಾಗಿದ್ದ ಬಟ್ಟೆಗಳು ಎಲ್ಲರ ಬಳಿಯೂ ಒಂದೇ ಪ್ರಶ್ನೆ ಕೇಳುತ್ತಿದ್ದವು.. ಆ ಪ್ರಶ್ನೆ ಈಸ್ ಇಟ್ ಮೈ ಫಾಲ್ಟ್..

ಈಸ್ ಇಟ್ ಮೈ ಫಾಲ್ಟ್ ಅಂದರೆ, ನಾನು ಈ ಬಟ್ಟೆಯನ್ನು ತೊಟ್ಟಿದ್ದು ತಪ್ಪಾ? ನಾನು ಸುಂದರವಾಗಿದ್ದು ತಪ್ಪಾ? ನಾನು ಗಂಡಿನ ಕಾಮಕ್ಕೆ ಬಲಿಯಾಗಿದ್ದು ನನ್ನ ತಪ್ಪಾ? ಅಥವಾ ನಾನು ಹೆಣ್ಣಾಗಿ ಹುಟ್ಟಿದ್ದೇ ನನ್ನ ತಪ್ಪಾ? ಈ ರೀತಿಯ ಪ್ರಶ್ನೆಗಳು ಆ ಬಟ್ಟೆಗಳಿಂದ ತೂರಿ ಬರುತ್ತಿದ್ದರೆ, ಪ್ರದರ್ಶನಕ್ಕೆ ಬಂದವರ ಮನಸ್ಸು ಭಾರವಾಗಿ, ಹೃದಯ ಆರ್ದ್ರವಾಗಿ, ಕಣ್ಣುಗಳಲ್ಲಿ ನೀರು ತುಂಬಿಕೊಂಡು, ಗಂಟಲು ಕಟ್ಟಿ ಹೋಗುತ್ತಿತ್ತು.. ಹೀಗಾಗಿಯೇ ಪ್ರದರ್ಶನಕ್ಕೆ ಬಂದ ಪ್ರತಿಯೊಬ್ಬರೂ ಆ ಹಾಲ್​ನಿಂದ ಹೊರಹೋಗುವಾಗ ಒದ್ದೆ ಕಂಗಳಲ್ಲಿ, ಅತ್ಯಾಚಾರ ಅನ್ನುವ ಪಿಡುಗಿನ ವಿರುದ್ಧ ಹೇಸಿಗೆಯ ಭಾವ ಹೊತ್ತು ಹೊರ ನಡೆಯುತ್ತಿದ್ದರು..

ಬೆಲ್ಜಿಯಂ ರಾಷ್ಟ್ರದ ಬ್ರುಸ್ಸೆಲ್ಸ್​ ನಗರದಲ್ಲಿ ಒಂದು ಸಣ್ಣ ಹಾಲ್​ ಒಂದರಲ್ಲಿ ನಡೆಸಲಾದ ಅತ್ಯಾಚಾರ ಸಂತ್ರಸ್ತರ ವಸ್ತ್ರ ಪ್ರದರ್ಶನ, ಪ್ರಜ್ಞಾವಂತ ಸಮಾಜದ ಮನ ಕಲಕಿದ್ದು ಸುಳ್ಳಲ್ಲ.. ಈ ಪ್ರದರ್ಶನ ನೋಡಿ ಬಂದವರು ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಾಚಾರದ ವಿರುದ್ಧ ಮತ್ತೊಮ್ಮೆ ಗುಡುಗಿ ಧಿಕ್ಕಾರ ವ್ಯಕ್ತಪಡಿಸಿದ್ದಾರೆ.. ಬಿಬಿಸಿ, ಸಿಎನ್​ಎನ್​, ಅಲ್​ ಜಜೀರಾದಂತಹ ಪ್ರಖ್ಯಾತ ಸುದ್ದಿ ವಾಹಿನಿಗಳು ಸೇರಿದಂತೆ ಜಗತ್ತಿನ ಎಲ್ಲಾ ಸುದ್ದಿ ಮಾಧ್ಯಮಗಳು ಈ ವಸ್ತ್ರ ಪ್ರದರ್ಶನ ಹಾಗೂ ಇದರ ಹಿಂದಿನ ಸಂದೇಶವನ್ನು ಪ್ರಸಾರ ಮಾಡಿವೆ.. ತನ್ಮೂಲಕ ಅತ್ಯಾಚಾರದಂತಹ ಸಾಮಾಜಿಕ ಪಿಡುಗುಗಳ ವಿರುದ್ಧ ಇಂತಹ ಕ್ರಿಯಾಶೀಲ ಹೋರಾಟಕ್ಕೆ ತಮ್ಮ ಮುಕ್ತ ಬೆಂಬಲ ಇವೆ ಎಂದು ಸಾರಿವೆ..

ಅತ್ಯಾಚಾರ ನಡೆದ ಸಂದರ್ಭಗಳಲ್ಲಿ ಹೆಣ್ಣನ್ನೇ ದೂಷಿಸುವವರ ಸಂಖ್ಯೆಯೇ ಹೆಚ್ಚಿದೆ. ಸಮಾಜ ಎಷ್ಟೇ ಮುಂದುವರಿದಿದೆ ಎಂದುಕೊಂಡರೂ ಹೆಣ್ಣನ್ನು ನೋಡುವ ದೃಷ್ಟಿಕೋನ ಬದಲಾಗಿಲ್ಲ.. ಈ ಹಿಂದೆ ನಮ್ಮ ದೇಶವನ್ನೇ ಬೆಚ್ಚಿ ಬೀಳಿಸಿದ್ದ ನಿರ್ಭಯಾ ಪ್ರಕರಣದಲ್ಲೂ ಅಷ್ಟೇ. ಆ ಪ್ರಕರಣದಲ್ಲಿ ಆಕೆ ಅತ್ಯಾಚಾರದ ವೇಳೆಯಲ್ಲಿ ಅತ್ಯಾಚಾರಿಯನ್ನು ಅಣ್ಣಾ ಎನ್ನಬೇಕಿತ್ತು ಅಂದ ಜನರೂ ನಮ್ಮ ಸಮಾಜದಲ್ಲಿದ್ದಾರೆ.. ಅಣ್ಣಾ ಎಂದೊಡನೆ ಅತ್ಯಾಚಾರ ನಿಲ್ಲುವಂತಿದ್ದರೆ ಇಷ್ಟೊಂದು ಪ್ರಕರಣಗಳು ದಾಖಲಾಗುತ್ತಲೇ ಇರಲಿಲ್ಲ.. ಇನ್ನು ಧರಿಸಿದ ಬಟ್ಟೆಗಳಂತೂ ಅತ್ಯಾಚಾರಕ್ಕೆ ಕಾರಣವಾಗುವುದಿಲ್ಲ. ಅತ್ಯಾಚಾರಿಯ ಮನಸ್ಥಿತಿಯೇ ಅದಾಗಿದ್ದರೆ ಬಟ್ಟೆ, ಹುದ್ದೆ, ವ್ಯಕ್ತಿತ್ವ ಇದಾವುದೂ ಒಂದು ಪ್ರಶ್ನೆಯೇ ಅಲ್ಲ.. ಇಂತಹ ಅನೇಕ ಸತ್ಯಗಳನ್ನು ಹೇಳಿದೆ ಈಸ್ ಇಟ್ ಮೈ ಫಾಲ್ಟ್ ವಸ್ತ್ರ ಪ್ರದರ್ಶನ..

ಈ ಅತ್ಯಾಚಾರ ಅನ್ನುವ ಜ್ವಲಂತ, ಅನಿಷ್ಟ ಪಿಡುಗಿನಿಂದಾಗಿ, ಏನೂ ಅರಿಯದ ಮೂರರ ಹರೆಯದ ಮಗುವೂ ಸಹ ತನ್ನ ಬಾಲ್ಯವನ್ನು ನೆಮ್ಮದಿಯಿಂದ ಅನುಭವಿಸಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ.. ಈ ಪೈಶಾಚಿಕ ಕೃತ್ಯಗಳು ಮಾನವೀಯ ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿದೆ.. ಅತ್ಯಾಚಾರಕ್ಕೊಳಗಾಗುವ ಪ್ರತೀ ಜೀವದ ಅವಮಾನಕರ ಶೋಚನೀಯ ಸ್ಥಿತಿಗೆ ಕನ್ನಡಿ ಹಿಡಿದಂತಿತ್ತು, ಈಸ್ ಇಟ್ ಮೈ ಫಾಲ್ಟ್ ವಸ್ತ್ರ ಪ್ರದರ್ಶನ.. ಇನ್ನಾದರೂ ನಮ್ಮ ಪ್ರಜ್ಞಾವಂತ ಸಮಾಜ ಬದಲಾಗಬೇಕು, ಬದಲಾವಣೆ ನಮ್ಮಿಂದಲೇ ಶುರುವಾಗಬೇಕು ಅನ್ನುವುದನ್ನು ಅರ್ಥ ಮಾಡಿಕೊಳ್ಳಬೇಕಿದೆ..

– ವಿಶ್ವಾಸ್ ಭಾರದ್ವಾಜ್ , ಸುದ್ದಿ ಟಿವಿ

0

Leave a Reply

Your email address will not be published. Required fields are marked *