ಕಾಶ್ಮೀರದಲ್ಲಿ ಬಡ ರೈತರಿಗೆ ನೀರಾವರಿ ಸೌಲಭ್ಯ ಒದಗಿಸಿದ ಅಧಿಕಾರಿಗಳು

ರೈತರ ಬಾಳಿನಲ್ಲಿ ಮೂಡಿದೆ ಆಶಾ ಕಿರಣ
ನೀರಾವರಿ ವ್ಯವಸ್ಥೆಯಿಂದಾಗಿ ಲಾಭಾಕಾಂಕ್ಷೆಯಲ್ಲಿ ರೈತರು
ಸರ್ಕಾರಿ ಅಧಿಕಾರಿಗಳ ಕ್ರಮಕ್ಕೆ ಶ್ಲಾಘನೆ

ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಬಡ ರೈತರ ಬೆಳಕಿನಲ್ಲಿ ಆಶಾ ಕಿರಣ ಮೂಡಿದೆ. ಇಷ್ಟಕ್ಕೂ ರೈತರ ಮೊಗದಲ್ಲಿ ನಗು ಮೂಡಿಸಲು ನೆರವಾದವರು ಯಾರು? ಅವರು ಕೈಗೊಂಡ ಕ್ರಮ ಏನು ಅಂಥಾ ನೀವೇ ಓದಿ.

ಜಮ್ಮು ಕಾಶ್ಮೀರದ ಗ್ರಾಮೀಣ ಪ್ರದೇಶಗಳಲ್ಲಿ ಇಷ್ಟು ದಿವಸ ನೀರಿಲ್ಲದೇ ಪರದಾಡೋ ಪರಿಸ್ಥಿತಿ ಇತ್ತು. ಮಳೆ ಆಶ್ರಿತ ಭೂಮಿಯಲ್ಲಿ ವರ್ಷಕ್ಕೆ ಒಂದು ಬೆಳೆ ಬೆಳೆದು, ರೈತರು ತಮ್ಮ ತುತ್ತಿನ ಚೀಲ ತುಂಬಿಸಿಕೊಳ್ಳುತ್ತಿದ್ದರು. ಇವರ ಈ ಪರಿಸ್ಥಿತಿಯನ್ನು ಸುಧಾರಿಸೋಕೆ ಸರ್ಕಾರೀ ಇಲಾಖೆ ಮಹತ್ವದ ಯೋಜನೆಯೊಂದನ್ನ ರೂಪಿಸಿದೆ.

ಜಮ್ಮು – ಕಾಶ್ಮೀರ ನೀರಾವರಿ ಮತ್ತು ನೆರೆ ನಿರ್ವಹಣಾ ಇಲಾಖೆ ಬಡ ರೈತರ ಬಾಳಿನಲ್ಲಿ ಬೆಳ್ಳಿ ರೇಖೆ ಮೂಡಿಸಿದೆ. ರಾಜೌರಿ ಜಿಲ್ಲೆಯಲ್ಲಿ ವೇಗವರ್ಧಕ ನೀರಾವರಿ ಲಾಭ ಯೋಜನೆಯನ್ನು ಇಲಾಖೆ ಜಾರಿಗೆ ತಂದಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಈ ಯೋಜನೆಯನ್ನ ಪೂರೈಸಿದ್ದು, ರಾಜ್ಯದ ಗ್ರಾಮೀಣ ಪ್ರದೇಶದ ಅನ್ನದಾತರ ಮೊಗದಲ್ಲಿ ಮಂದಹಾಸ ಮೂಡಲು ಕಾರಣವಾಗಿದೆ.

ಯೋಜನೆ ಜಾರಿಗೆ ಬಿಡುಗಡೆಯಾದ ಹಣವನ್ನು ಸಮರ್ಥವಾಗಿ ವಿನಿಯೋಗಿಸೋದ್ರ ಮೂಲಕ ಕಾಂಕ್ರೀಟ್​​​ನ ಸಣ್ಣ ಕಾಲುವೆಗಳನ್ನ ಕೂಡ ನಿರ್ಮಿಸಿದೆ. ಈ ಕಾಲುವೆಗಳ ಮೂಲಕ ಗ್ರಾಮೀಣ ಪ್ರದೇಶದಲ್ಲಿ ನೀರಾವರಿ ಸೌಲಭ್ಯವನ್ನು ವಿಸ್ತರಿಸಿದೆ. ರಾಜೌರಿ, ಥಾಣಾಮಂಡಿ ಪ್ರದೇಶ ಮತ್ತು ಧರ್ಹಾಲ್ ಪ್ರದೇಶಗಳಲ್ಲಿ ರೈತರು ಈ ಯೋಜನೆಯ ಲಾಭ ಪಡೀತಿದಾರೆ.

ಇಷ್ಟು ದಿನ ನೀರಿಲ್ಲದೇ ಒಂದು ಬೆಳೆ ಬೆಳೆದು ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ತಿದ್ದ ರೈತರು, ಇದೀಗ ವರ್ಷಕ್ಕೆ ಎರಡು ಬೆಳೆ ಬೆಳೆಯತೊಡಗಿದ್ದಾರೆ. ಬಹುತೇಕ ಒಣ ಭೂಮಿಯಾಗಿದ್ದ ಪ್ರದೇಶವೆಲ್ಲ ಈಗ ಹಚ್ಚ ಹಸುರಿನಿಂದ ಕಂಗೊಳಿಸುತ್ತಿದೆ. ಹೊಲ, ಗದ್ದೆಗಳಲ್ಲಿ ಬೆವರು ಹರಿಸಿ ದುಡಿಯುತ್ತಿರುವ ಯುವಕರ ಕಣ್ಣಿನಲ್ಲಿ ಕೂಡ ಸಾರ್ಥಕತೆಯ ಭಾವ ಮೂಡಿದೆ. ಇಂಥ ಯೋಜನೆಗಳು ದೇಶಾದ್ಯಂತ ವಿಸ್ತರಿಸಲಿ ಅನ್ನೋದು ಸುದ್ದಿ ಟಿವಿಯ ಆಶಯ.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *