ಯಾರಾಗ್ತಾರೆ ಧೋನಿ ಉತ್ತರಾಧಿಕಾರಿ…

ಈ ಬಾರಿ ಐಪಿಎಲ್​ ಹಲವು ಕಾರಣಗಳಿಗೆ ಪ್ರಮುಖವಾಗಿದೆ. ಮುಂದಿನ ವಿಶ್ವಕಪ್​​ ಗಮನದಲ್ಲಿಟ್ಟುಕೊಂಡು ತಂಡ ಕಟ್ಟಲು, ಲೀಗ್​​ ಸಹಾಯಕವಾಗಿದೆ. ಅಲ್ಲದೆ ಯುವ ಪ್ರತಿಭೆಗಳ ಅನ್ವೆಷಣೆಗೆ ವೇದಿಕೆ ಕಲ್ಪಿಸಿದೆ. ಈ ಟೂರ್ನಿಯಲ್ಲಿ ಯುವ ವಿಕೆಟ್​ ಕೀಪರ್​​ಗಳು ಸಹ ಕಮಾಲ್​ ಆಟ ಆಡುತ್ತಿದ್ದಾರೆ. ಅಲ್ಲದೆ ಧೋನಿ ನಿವೃತ್ತಿಯ ಬಳಿಕ ತೆರವಾಗುವ ಸ್ಥಾನದ ಮೇಲೆ ಯಂಗ್​ ಪ್ಲೇಯರ್ಸ್​ ಕಣ್ಣು ನೆಟ್ಟಿದ್ದಾರೆ.ಈ ಬಾರಿಯ ಐಪಿಎಲ್​ ಹರಾಜಿನಲ್ಲಿ ಕೋಟಿ ಕೋಟಿ ಜೇಬಿಗಿಳಿಸಿದ ಸ್ಟಾರ್ಸ್​​ ಹಲವರು. ಆದ್ರೆ ಕೊಟ್ಟ ದುಡ್ಡಿಗೆ ನ್ಯಾಯ ಒದಗಿಸುತ್ತಿರುವವರು ಮಾತ್ರ ಕೆಲವೇ ಕೆಲವರು. ಈ ಆಟಗಾರರು ತಮ್ಮ ತಂಡದ ಪರ ಅಬ್ಬರದ ಆಟವಾಡುತ್ತಿದ್ದಾರೆ. ಕೊನೆಯವರೆಗೂ ಕ್ರೀಸ್​​ನಲ್ಲಿ ನಿಂತು ತಂಡಕ್ಕೆ ವಿಜಯದ ಮಾಲೆ ತೊಡಿಸುತ್ತಿದ್ದಾರೆ. ಅಂತಹ ಆಟಗಾರರಲ್ಲಿ ಮಹೇಂದ್ರ ಸಿಂಗ್​ ಧೋನಿಯು ಸ್ಥಾನ ಸಂಪಾದಿಸಿದ್ದಾರೆ. ಐಪಿಎಲ್​ ಮುನ್ನಾ ಟೀಮ್​ ಇಂಡಿಯಾ ಆಡಿದ ಕೆಲ ಸರಣಿಗಳಲ್ಲಿ ಮಂಕಾಗಿದ್ದ ಧೋನಿ ಬ್ಯಾಟ್​ ಐಪಿಎಲ್​ ಭರ್ಜರಿ ಸದ್ದು ಮಾಡ್ತಿದೆ.ರನ್​ ಬೇಟೆಯಾಡುವುದರ ಜೊತಗೆ ವಿಕೆಟ್​ ಹಿಂದೆಯೇ ಧೋನಿ ಕಮಾಲ್ ಮಾಡುತ್ತಿದ್ದಾರೆ.

ಐಪಿಎಲ್​ನಲ್ಲಿ ಧೋನಿ ತಮ್ಮ ಹಳೆ ಆಟಕ್ಕೆ ಮರಳಿದ್ದಾರೆ. ಅಲ್ಲದೆ ತಮ್ಮ ಆಟದ ಬಗ್ಗೆ ಟೀಕಿಸುತ್ತಿದ್ದವರಿಗೆ ಬ್ಯಾಟ್​ ಮೂಲಕವೇ ತಕ್ಕ ಉತ್ತರ ನೀಡುತ್ತಿದ್ದಾರೆ. ಈ ಬಾರಿಯ ಟೂರ್ನಿ ಆರಂಭವಾದಗಿನಿಂದ ಧೋನಿ ತನ್ನ ನೈಜ ಆಟದ ಮೂಲಕ ಅಬ್ಬರಿಸುತ್ತಿದ್ದಾರೆ. ಗ್ರೇಟ್ ಫಿನಿಶರ್​ ಆಗಿರುವ ಧೋನಿ, ಕೊನೆಯವರೆಗೂ ಕ್ರೀಸ್​ನಲ್ಲಿ ನಿಂತು ತಂಡಕ್ಕೆ ವಿಜಯದ ಮಾಲೆ ತೊಡಿಸುತ್ತಿದ್ದಾರೆ. ಮತ್ತೊಂದೆಡೆ ಆಡಿರುವ 11 ಪಂದ್ಯಗಳಿಂದ 393 ರನ್​ಕಲೆಹಾಕಿ, ಅತಿಹೆಚ್ಚು ರನ್​ಗಳಿಸಿದರವರ ಪಟ್ಟಿಯಲ್ಲಿ 8 ಸ್ಥಾನದಲ್ಲಿದ್ದಾರೆ. ಧೋನಿ 36 ವರ್ಷ ವಯಸ್ಸಿನಲ್ಲೂ ಯುವ ಬ್ಯಾಟ್ಸ್​ಮನ್​ಗಳು ನಾಚಿಸುವಂತೆ ಬ್ಯಾಟಿಂಗ್ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಟೀಮ್ ಇಂಡಿಯಾ ಪರವೂ ಧೋನಿ ಇದೇ ಆಟ ಮುಂದುವರೆಸಿದಲ್ಲಿ, ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯಬೇಕೆಂದು ಕನಸು ಕಾಣುತ್ತಿರುವ ಯುವ ಆಟಗಾರರು ಇನ್ನೂ ಕೆಲ ಕಾಲ ಕಾಯಬೇಕಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಮುಂದಿನ ವರ್ಷ ಇಂಗ್ಲೆಂಡ್​ನಲ್ಲಿ ನಡೆಯಲಿರುವ ವಿಶ್ವಕಪ್​ ಅಥವಾ ಅದಾದ ಮೇಲೆ ಕೆಲವು ಸರಣಿಗಳ ನಂತರ ಧೋನಿ, ಕ್ರಿಕೆಟ್​ಗೆ ವಿದಾಯ ಹೇಳಬಹುದು.

ಧೋನಿ ನಂತರ ಟೀಮ್ ಇಂಡಿಯಾದಲ್ಲಿ ವಿಕೆಟ್ ಕೀಪರ್​ ಕಮ್​ ಬ್ಯಾಟ್ಸ್​ಮನ್​​ ಸ್ಥಾನವನ್ನು ಯಾರು ತುಂಬಲಿದ್ದಾರೆ ಅನ್ನೋ ಪ್ರಶ್ನೆ ಮೂಡಿದೆ. ಆದ್ರೆ ಈ ಪ್ರಶ್ನೆಗೆ ಉತ್ತರವಾಗಿ ಮೂವರು ಆಟಗಾರರು ಬಿಸಿಸಿಐನ ಗಮನ ಸೆಳೆಯುತ್ತಿದ್ದಾರೆ. ರಿಷಬ್​ ಪಂತ್​, ಟೀಮ್ ಇಂಡಿಯಾದ ಪ್ಯೂಚರ್ ಸ್ಟಾರ್ ಅಂದ್ರು ತಪ್ಪಿಲ್ಲ. ಪ್ರಸಕ್ತ ಐಪಿಎಲ್ ನಲ್ಲಿ ಡೆಲ್ಲಿ ಡೇರ್​ಡೆವಿಲ್ಸ್​ ಪರ ಆಡುತ್ತಿರುವ ರಿಷಬ್​ ರನ್ ಹೊಳೆಯನ್ನೇ ಹರಿಸುತ್ತಿದ್ದು, ಬೌಲರ್​ಗಳ ಹೆಡೆಮುರಿ ಕಟ್ಟುತ್ತಿದ್ದಾರೆ. ಎಲ್ಲಾ ವಿಧದ ಬೌಲಿಂಗ್ ದಾಳಿಯನ್ನ ಸಮರ್ಥವಾಗಿ ಎದುರಿಸುತ್ತಿರುವ ಈ ಡೆಲ್ಲಿ ಡ್ಯಾಶರ್​ ಚೆಂಡನ್ನು ಸುಲಭವಾಗಿ ಬೌಂಡರಿ ಗೆರೆ ದಾಟಿಸುತ್ತಿದ್ದಾರೆ.ಪ್ರಸಕ್ತ ಐಪಿಎಲ್​ನಲ್ಲಿ ಬಲಿಷ್ಠ ಬೌಲಿಂಗ್ ದಾಳಿ ಹೊಂದಿರುವ ಸನ್​ರೈಸರ್ಸ್ ವಿರುದ್ಧ ಪಂತ್​ ಅಜೇಯ 128 ರನ್​ಗಳಿಸಿದ್ದರು. ಈ ಮೂಲಕ ತನ್ನ ಸಾಮರ್ಥ್ಯವನ್ನು ಸಾಬೀತಪಡಿಸಿದ್ದರು. ಅಲ್ಲದೇ ಇದೆ ಪಂದ್ಯದಲ್ಲಿ, ಡೆಥ್​ ಓವರ್​ ಸ್ಪೆಷಲಿಸ್ಟ್​ ಭುವನೇಶ್ವರ್ ಕುಮಾರ್​ಗು ಬೆವರಿಳಿಸಿದ್ದು ಪಂತ್​ ಪ್ರತಿಭೆಗೆ ಹಿಡಿದ ಕೈ ಗನ್ನಡಿ.

ರಿಷಬ್​ ಈ ಮೊದಲೆ ಭಾರತ ತಂಡಕ್ಕೆ ಆಯ್ಕೆಯಾಗಿದ್ರು, ತಮ್ಮ ಪ್ರತಿಭೆಗೆ ತಕ್ಕ ಆಟವಾಡುವಲ್ಲಿ ಸೋತಿದ್ರು. ಆದ್ರೆ ಈ ಬಾರಿಯ ಐಪಿಎಲ್​ನಲ್ಲಿ ಪಂತ್​ ಬ್ಯಾಟಿಂಗ್ ವಿಶ್ವರೂಪ ತೋರುತ್ತಿದ್ದಾರೆ. 20 ವರ್ಷ ವಯಸ್ಸಿನ ರಿಷಬ್​ ಟೂರ್ನಿಯಲ್ಲಿ ಈವರೆಗೂ 12 ಪಂದ್ಯಗಳನ್ನಾಡಿದ್ದು, 52.90 ರಸರಾಸರಿಯಲ್ಲಿ 582 ರನ್​ ದಾಖಲಿಸಿ ಅರೇಂಜ್ ಕ್ಯಾಪ್​ ಮುಡಿಗೇರಿಸಿಕೊಂಡಿದ್ದಾರೆ. ಅಲ್ಲದೆ, ಟೀಮ್ ಇಂಡಿಯಾಕ್ಕೆ ನನ್ನನ್ನು ಪರಿಗಣಿಸುವಂತೆ ಆಯ್ಕೆದಾರರಿಗೆ ಸಂದೇಶ ರವಾನಿಸಿದ್ದಾರೆ. ಇನ್ನೂ ಮುಂಬೈ ಇಂಡಿಯನ್ಸ್ ಪರ ಆಡುತ್ತಿರುವ ವಿಕೆಟ್​ ಕೀಪರ್​ ಬ್ಯಾಟ್ಸ್​ಮನ್ ಇಶಾನ್ ಕಿಶಾನ್​ ಕೂಡ ಧೋನಿ ಉತ್ತರಾಧಿಕಾರಿಯಾಗುವ ಕನಸು ಕಾಣುತ್ತಿದ್ದಾರೆ. ರೋಹಿತ್​ ಪಡೆ ಸೋಲಿನ ಸುಳಿಯಿಂದ ಹೊರ ಬಂದು ಫ್ಲೇ ಆಫ್​ ರೇಸ್​ನಲ್ಲಿದೆ ಅಂದ್ರೆ ಅದ್ರಲ್ಲಿ ಇಶಾನ್ ಆಟವು ಕಾರಣ ಅಂದ್ರೆ ತಪ್ಪಿಲ್ಲ. 11 ಪಂದ್ಯಗಳಿಂದ 238 ರನ್ ಬಾರಿಸಿರುವ 19ರ ಪೋರ, 9 ಕ್ಯಾಚ್​ಗಳನ್ನು ಹಿಡಿದಿದ್ದಾರೆ. ಇಶಾನ್​ ಮುಂದಿನ ಪಂದ್ಯಗಳಲ್ಲು ಇದೇ ಆಟ ಆಡಿದಲ್ಲಿ, ಖಂಡಿತವಾಗಿಯೂ ಆಯ್ಕೆದಾರರ ಗಮನ ಸಳೆಯಬಹುದು.

ಧೋನಿ ಸ್ಥಾನವನ್ನು ತುಂಬುವ ಆಟಗಾರರ ಪೈಕಿ ಕೇಳಿಬರುತ್ತಿರುವ ಮತ್ತೊಂದು ಹೆಸರು ಕೇರಳದ ಸಂಜು ಸ್ಯಾಮ್ಸನ್​. 23 ವರದ ಯುವ ಆಟಗಾರ, ರಾಜಸ್ಥಾನ ರಾಯಲ್ಸ್​ ಪರ ಆಡುತ್ತಿರುವ ಸ್ಯಾಮ್ಸನ್​ 10 ಪಂದ್ಯಗಳಲ್ಲಿ 141ರ ಸ್ಟ್ರೈಕ್​ರೇಟ್​ನೊಂದಿಗೆ 332 ರನ್ ಗಳಿಸಿದ್ದಾರೆ. ಇಂಗ್ಲೆಂಡ್​ನ ಜೋಸ್ ಬಟ್ಲರ್ ವಿಕೆಟ್ ಕೀಪಿಂಗ್ ಮಾಡುತ್ತಿರೋದ್ರಿಂದ ಸ್ಯಾಮ್ಸನ್​ ವಿಕೆಟ್​ ಕೀಪಿಂಗ್ ನಿಂದ ದೂರವಿದ್ದಾರೆ. ಹೀಗಾಗಿ ವಿಕೆಟ್​ ಕೀಪಿಂಗ್ ವಿಷಯದಲ್ಲಿ ಮಾತ್ರ, ಸ್ಯಾಮ್ಸನ್​ರನ್ನ ಎರಡನೇ ಆಯ್ಕೆಯಾಗಿ ಪರಿಗಣಿಸಬಹುದು.ಅದೇನೆ ಇರಲಿ ಸದ್ಯಕಂತೂ ಧೋನಿ ಕ್ರಿಕೆಟ್​ನಿಂದ ದೂರವಾಗಲ್ಲ. ಅದೇನಿದ್ರು 2019ರ ವಿಶ್ವಕಪ್​ ನಂತರ ಮಾತ್ರ. ಅಲ್ಲಿಯವರೆಗೂ ಯಾರು ಸ್ಥಿರ ಪ್ರದರ್ಶನ ನೀಡುತ್ತಾರೊ ಅವರು ಟೀಮ್ ಇಂಡಿಯಾ ಕದ ತಟ್ಟೋದು ಪಕ್ಕಾ.

ಮಹೇಶ್​ ಗುರಣ್ಣನವರ್​ ಸ್ಪೋರ್ಟ್ಸ್​ ಬ್ಯೂರೊ ಸುದ್ದಿ ಟಿವಿ

0

Leave a Reply

Your email address will not be published. Required fields are marked *