ಆವಿಷ್ಕಾರದಿಂದ ಜಗತ್ತಿಗೆ ವೇಗ ಸಿಕ್ಕಿದೆ: ನರೇಂದ್ರ ಮೋದಿ

ಮುಂಬೈ: ಮುಂಬೈ ಐಐಟಿಯಲ್ಲಿ ನಡೆದ ಘಟಿಕೋತ್ಸವದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಿದ್ದರು. ಈ ವೇಳೆ ಐಐಟಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಘಟಿಕೋತ್ಸವ ಭಾಷಣ ಮಾಡಿದ ಅವರು, ಭಾರತ ಐಐಟಿಗಳಿಂದ ಹೆಮ್ಮೆ ಪಡುತ್ತಿದೆ ಎಂದರು. ನಿಮ್ಮ ಕಣ್ಣುಗಳಲ್ಲಿರುವ ಆತ್ಮವಿಶ್ವಾಸ ನಾವು ಸರಿದಾರಿಯಲ್ಲಿರುವುದರ ದ್ಯೋತಕ ಎಂದರು. ಐಐಟಿಗೆ 1,000 ಕೋಟಿ ರೂ. ಅನುದಾನ ನೀಡಲಾಗುತ್ತದೆ. ಇಲ್ಲಿಯ ವಿದ್ಯಾರ್ಥಿಗಳು ಮಾಹಿತಿ ತಂತ್ರಜ್ಞಾನ ಕ್ಷೇತ್ರವನ್ನು ಕಟ್ಟಿದ್ದಾರೆ ಎನ್ನುವ ಮೂಲಕ ಐಐಟಿ ಕೊಡುಗೆಯನ್ನು ಅವರು ಸ್ಮರಿಸಿದರು.

ಆವಿಷ್ಕಾರಗಳು 21ನೇ ಶತಮಾನದಲ್ಲಿ ವಿಶ್ವಕ್ಕೆ ವೇಗವನ್ನು ತಂದಿವೆ. ಆವಿಷ್ಕಾರಗಳಿಲ್ಲದ ಯಾವುದೇ ಸಮಾಜ ಜಡವಾಗುತ್ತದೆ. ಭಾರತ ಸ್ಟಾರ್ಟ್​-ಅಪ್​ಗಳ ದೇಶವಾಗಿ ಆವಿಷ್ಕಾರಗಳಿಂದ ತುಂಬಿದೆ. ನಾವು ಭಾರತವನ್ನು ಆವಿಷ್ಕಾರ ಮತ್ತು ಉದ್ಯಮಗಳಿಗೆ ಅತ್ಯಾಕರ್ಷಕ ಗುರಿಯಾಗಿಸಬೇಕು ಎಂದು ಕರೆ ನೀಡಿದರು.

ನಮ್ಮ ಯುವಕರಿಗೆ ಭಾರತದಲ್ಲಿ ಆವಿಷ್ಕರಿಸಿ ಎಂದು ನಾನು ಮನವಿ ಮಾಡಿಕೊಳ್ಳುತ್ತೇನೆ. ಮಾನವೀಯತೆಗಾಗಿ ಆವಿಷ್ಕರಿಸಿ, ಹವಾಮಾನ ವೈಪರೀತ್ಯವನ್ನು ತಗ್ಗಿಸಲು, ಉತ್ತಮ ಕೃಷಿ ಉತ್ಪನ್ನಗಳ ಉತ್ಪಾದನೆ, ನೀರನ್ನು ಉಳಿಸುವ ಶುದ್ಧ ಇಂಧನ, ಉತ್ತಮ ನಿರ್ವಹಣೆಯ ಮೂಲಕ ಅಪೌಷ್ಟಿಕತೆ ನಿವಾರಣೆ ಕುರಿತು ಆವಿಷ್ಕಾರಗಳನ್ನು ನಡೆಸಿ ಎಂದು ಅವರು ಮನವಿ ಮಾಡಿದರು. ಇದೇ ವೇಳೆ ಮುಂಬೈ ಐಐಟಿಯಲ್ಲಿ ಇಂಧನ ವಿಜ್ಞಾನ ವಿಭಾಗ ಮತ್ತು ಇಂಜಿನಿಯರಿಂಗ್ ವಿಭಾಗ ಮತ್ತು ಪರಿಸರ ವಿಜ್ಞಾನ ಕೇಂದ್ರಗಳ ಕಟ್ಟಡಗಳನ್ನು ನರೇಂದ್ರ ಮೋದಿಯವರು ಲೋಕಾರ್ಪಣೆಗೊಳಿಸಿದರು.

ಐಐಟಿಯ ಕೊಡುಗೆಯನ್ನು ತಮ್ಮ ಭಾಷಣದುದ್ದಕ್ಕೂ ಸ್ಮರಿಸಿದ ಪ್ರಧಾನಿ ನರೇಂದ್ರ ಮೋದಿ, ಐಐಟಿ ಸ್ಥಾಪಿಸಲು ಕಾರಣರಾದ ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರೂ ಅವರನ್ನು ನೆನಪಿಸಿಕೊಳ್ಳಲಿಲ್ಲ. ಈ ಕುರಿತು ತಕರಾರು ತೆರೆದಿರುವ ಕಾಂಗ್ರೆಸ್, ಈ ಸಮಯದಲ್ಲಾದರೂ ಪಂಡಿತ್ ನೆಹರೂ ಅವರನ್ನು ನೆನಪಿಸಿಕೊಳ್ಳಬೇಕಿತ್ತು ಎಂದು ಟ್ವೀಟ್ ಮಾಡಿದೆ. ಇದರೊಂದಿಗೆ ಪ್ರಧಾನಿ ಐಐಟಿಯ ಕೊಡುಗೆಯನ್ನು ಕುರಿತು ಪ್ರಶಂಸೆ ಮಾಡುವ ತುಣುಕನ್ನು ಹಂಚಿಕೊಂಡಿದೆ.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *