ಸ್ವಿಸ್​ ಬ್ಯಾಂಕ್​ನಲ್ಲಿ ಭಾರತೀಯರ ಮೊತ್ತ ಶೇ. 50ರಷ್ಟು ಹೆಚ್ಚಳ: ಸ್ವಿಸ್ ಬ್ಯಾಂಕ್ ಮಾಹಿತಿ

ಜ್ಯೂರಿಚ್/ದೆಹಲಿ: ಗರಿಷ್ಠ ಮುಖಬೆಲೆಯ ನೋಟುಗಳ ನಿಷೇಧದ ನಂತರ 2017ರಲ್ಲಿ ಸ್ವಿಸ್ ಬ್ಯಾಂಕ್​​ನಲ್ಲಿ ಭಾರತೀಯರ ಹಣ ಶೇ.50ರಷ್ಟು (ಸುಮಾರು 7 ಸಾವಿರ ಕೋಟಿ ರೂ.) ಏರಿಕೆಯಾಗಿದೆ. ಈ ಕುರಿತು ಸ್ವಿಸ್ ನ್ಯಾಷನಲ್ ಬ್ಯಾಂಕ್ (ಎಸ್​​​ಎನ್​​ಬಿ) ಬಿಡುಗಡೆ ಮಾಡಿರುವ ವಾರ್ಷಿಕ ದತ್ತಾಂಶಗಳಿಂದ ಈ ಅಂಶ ಬೆಳಕಿಗೆ ಬಂದಿದೆ.

2017ರ ಅವಧಿಯಲ್ಲಿ ಸ್ವಿಸ್ ಬ್ಯಾಂಕ್​​ನಲ್ಲಿ ವಿಶ್ವದ ಒಟ್ಟು ವಿದೇಶಿ ಗ್ರಾಹಕರ ಹಣದಲ್ಲಿ ಶೇ.3ರಷ್ಟು (ಸುಮಾರು 100 ಲಕ್ಷ ಕೋಟಿ ರೂ.) ಏರಿಕೆಯಾಗಿದೆ. ಇದರ ಪೈಕಿ ಭಾರತೀಯ ನಾಗರಿಕರ ಹಣದ ಪ್ರಮಾಣದಲ್ಲಿ ಶೇ.50ರಷ್ಟು ಏರಿಕೆಯಾಗಿದೆ ಬ್ಯಾಂಕ್ ಹೇಳಿದೆ. ಸ್ವಿಸ್ ಬ್ಯಾಂಕ್​​​ನಲ್ಲಿರುವ ಭಾರತೀಯರ ಹಣವನ್ನು ಭಾರತಕ್ಕೆ ಮರಳಿ ತರುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಆದರೆ, ಅವರು 2014ರ ಲೋಕಸಭೆ ಚುನಾವಣೆಯಲ್ಲಿ ನೀಡಿದ್ದ ಭರವಸೆಗೆ ವ್ಯತಿರಿಕ್ತ ಘಟನೆ ನಡೆದಿದೆ.

ಕಳೆದ ಲೋಕಸಭೆ ಚುನಾವಣೆ ವೇಳೆ ವಿದೇಶದಲ್ಲಿರುವ ಕಪ್ಪುಹಣವನ್ನು ಭಾರತಕ್ಕೆ ಮರಳಿ ತಂದಲ್ಲಿ ಪ್ರತಿಯೊಬ್ಬ ಭಾರತೀಯ ನಾಗರಿಕರ ಖಾತೆಗೆ ಬರೋಬ್ಬರಿ 15 ಲಕ್ಷ ರೂ. ಹಾಕಬಹುದು ಎಂದು ಅವರು ಹೇಳಿದ್ದರು. ಆದರೆ, ಅದರ ಬದಲಾಗಿ ಅದೇ ಸ್ವಿಸ್ ಬ್ಯಾಂಕ್​ನಲ್ಲಿ ಭಾರತೀಯ ನಾಗರಿಕರ ಹಣ ಜಮಾ ಪ್ರಮಾಣ ಏರಿಕೆಯಾಗಿದೆ.

2016ರ ಅವಧಿಯಲ್ಲಿ ಸ್ವಿಸ್ ಬ್ಯಾಂಕ್​​ನಲ್ಲಿ ಇದ್ದ ಭಾರತೀಯ ನಾಗರಿಕರ ಹಣ ಶೇ.45ರಷ್ಟು (ಸುಮಾರು 4,500 ಕೋಟಿ ರೂ.) ಆಗಿತ್ತು. ಆದರೆ, 2016ರ ನವೆಂಬರ್ 8ರಂದು ಗರಿಷ್ಠ ಮುಖಬೆಲೆಯ 500 ಮತ್ತು 1,000 ರೂ. ನೋಟುಗಳ ನಿಷೇಧದ ನಂತರ, 2017ನೇ ಸಾಲಿನಲ್ಲಿ ಭಾರತೀಯರ ಹಣ 6,891 ಕೋಟಿ ರೂ.ಗೆ ಏರಿಕೆಯಾಗಿದೆ. ಈ ಕುರಿತು ಬ್ಯಾಂಕ್ ಮಾಹಿತಿ ನೀಡಿದೆ.

ಈ ಕುರಿತು ಟ್ವೀಟರ್ ಖಾತೆಯಲ್ಲಿ ತಕರಾರು ತೆಗೆದಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, 2014ರಲ್ಲಿ ಮೋದಿ ಹೇಳಿದರು, ನಾವು ಸ್ವಿಸ್ ಬ್ಯಾಂಕ್​ನಲ್ಲಿರುವ ಎಲ್ಲ ಕಪ್ಪು ಹಣವನ್ನು ವಾಪಸ್ ತರುತ್ತೇವೆ ಮತ್ತು ಪ್ರತಿಯೊಬ್ಬ ಭಾರತೀಯರ ಖಾತೆಗೆ 15 ಲಕ್ಷ ಹಾಕುತ್ತೇನೆ ಎಂದರು. 2016ರಲ್ಲಿ ಗರಿಷ್ಠ ಮುಖಬೆಲೆಯ ನೋಟುಗಳ ನಿಷೇಧ ಕಪ್ಪು ಹಣಕ್ಕೆ ಮದ್ದು ಎಂದರು. 2018ರಲ್ಲಿ ಸ್ವಿಸ್ ಬ್ಯಾಂಕ್​ನಲ್ಲಿ ಜಮಾ ಆಗಿರುವ ಶೇ. 50ರಷ್ಟು ಹಣ ವೈಟ್ ಮನಿ ಎನ್ನುತ್ತಾರೆ. ಸ್ವಿಸ್ ಬ್ಯಾಂಕ್​​ನಲ್ಲಿ ಕಪ್ಪು ಹಣ ಇಲ್ಲ ಎಂದು ಟ್ವೀಟ್ ಮಾಡುವ ಮೂಲಕ ಪ್ರಧಾನಿ ಮೋದಿಯವರ ವಿರುದ್ಧ ಕಿಡಿಕಾರಿದ್ದಾರೆ.

ಸ್ವಿಸ್ ಬ್ಯಾಂಕ್​ನಲ್ಲಿ ಭಾರತೀಯ ನಾಗರಿಕರ ಹಣದ ಪ್ರಮಾಣ ಏರಿಕೆ ಕುರಿತು ಟ್ವೀಟ್ ಮಾಡಿರುವ ಮಾಜಿ ಸಂಸದೆ ರಮ್ಯಾ, ಸ್ವಿಸ್ ಬ್ಯಾಂಕ್​ನಲ್ಲಿ ಭಾರತೀಯರ ಹಣದ ಪ್ರಮಾಣದಲ್ಲಿ ಶೇ. 50ರಷ್ಟು ಏರಿಕೆಯಾಗಿದೆ ಎಂದು ಟ್ವೀಟ್ ಮಾಡಿದ್ದು, #WahModijiWah ಹ್ಯಾಷ್​ಟ್ಯಾಗ್​ನಡಿ ಟ್ವೀಟ್ ಮಾಡುವ ಮೂಲಕ ಪ್ರಧಾನಿ ಮೋದಿಯವರ ಕಾಲೆಳೆದಿದ್ದಾರೆ. ಸಿಎಚ್​​ಎಫ್​ ದತ್ತಾಂಶದ ಪ್ರಕಾರ 7,000 ಕೋಟಿ ರೂ. ಏರಿಕೆಯಾಗಿದೆ ಎಂದಿದ್ದಾರೆ. ಈ ಟ್ವೀಟ್ ವ್ಯಾಪಕವಾಗಿ ಲೈಕ್ ಪಡೆದಿದ್ದು, 1,500ಕ್ಕೂ ಹೆಚ್ಚು ಜನ ರಿಟ್ವೀಟ್ ಮಾಡಿದ್ದಾರೆ.

ನೋಟು ನಿಷೇಧದ ನಂತರ್ ಸ್ವಿಸ್​ ಬ್ಯಾಂಕ್​ನಲ್ಲಿ ಭಾರತೀಯರ ಠೇವಣಿ ಪ್ರಮಾಣದಲ್ಲಿ ಏರಿಕೆಯಾಗಿದೆ. ನೋಟು ನಿಷೇಧದ ಉದ್ದೇಶ ಈಡೇರಿಲ್ಲ ಎಂದು ಮಾಜಿ ಹಣಕಾಸು ಸಚಿವ ಯಶವಂತ್ ಸಿನ್ಹಾ ಹೇಳಿದ್ದಾರೆ. 2017ರಲ್ಲಿ ಸ್ವಿಸ್ ಬ್ಯಾಂಕ್​ನಲ್ಲಿ ಠೇವಣಿ ಏರಿಕೆ ವಿರೋಧಿಸಿರುವ ಅವರು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದರೊಂದಿಗೆ ನಿರ್ದಿಷ್ಟ ದಾಳಿ ಕುರಿತ ವಿಡಿಯೋ ಬಿಡುಗಡೆ ಮಾಡಿರುವುದನ್ನೂ ಖಂಡಿಸಿದ್ದಾರೆ.

ಕಳೆದ ಒಂದು ದಶಕದಿಂದ ಸ್ವಿಸ್ ಬ್ಯಾಂಕ್​​​ನಲ್ಲಿ ಭಾರತೀಯ ನಾಗರಿಕರ ಹಣದ ಪ್ರಮಾಣದಲ್ಲಿ ಮೂರನೇ ಬಾರಿ ಏರಿಕೆಯಾಗಿದೆ. ಇದಕ್ಕೂ ಮುನ್ನ 2011ರಲ್ಲಿ ಶೇ.12ರಷ್ಟು, 2013ರಲ್ಲಿ ಶೇ.43ರಷ್ಟು ಮತ್ತು ಇದಕ್ಕೂ ಹಿಂದೆ, 2004ರಲ್ಲಿ ಹಣ ಜಮಾ ಪ್ರಮಾಣದಲ್ಲಿ ಶೇ. 56ರಷ್ಟು ಏರಿಕೆಯಾಗಿತ್ತು. ಆದರೆ, ಈ ಉದಾಹರಣೆಗಳಿಗೆ ವ್ಯತಿರಿಕ್ತವಾಗಿ 2012ರಲ್ಲಿ ಸ್ವಿಸ್ ಬ್ಯಾಂಕ್​ನಲ್ಲಿರುವ ಭಾರತೀಯರ ಕಪ್ಪು ಹಣದ ಮೊತ್ತ ಮೂರನೇ ಒಂದು ಭಾಗದಷ್ಟು ಇಳಿದಿತ್ತು.

ಇದಾದ ಎರಡು ವರ್ಷಗಳ ನಂತರ ಲೋಕಸಭೆಗೆ ನಡೆದ ಚುನಾವಣೆಯಲ್ಲಿ ನರೇಂದ್ರ ಮೋದಿ ಪ್ರಧಾನಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಇದೇ ವೇಳೆ ಅವರು ವಿದೇಶದಲ್ಲಿರುವ ಪ್ರತಿಯೊಂದು ಪೈಸೆ ಹಣವನ್ನು ಕೂಡ ಅಧಿಕಾರಕ್ಕೆ ಬಂದ ಕೇವಲ ಐದೇ ದಿನದಲ್ಲಿ ವಾಪಸ್ ತರುವ ಭರವಸೆ ನೀಡಿದ್ದರು.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *