ಇಂದು ಶ್ರೀಲಂಕಾ-ಭಾರತ ಸೆಣಸಾಟ..

ಈಗಾಗಲೇ ಒಂದೊಂದು ಪಂದ್ಯ ಸೋತು, ಒಂದರಲ್ಲಿ ಗೆದ್ದಿರುವ ಶ್ರೀಲಂಕಾ ಹಾಗೂ ಭಾರತ ತಂಡಗಳು ಇಂದು ಮತ್ತೊಮ್ಮೆ ಅಖಾಡ ಪ್ರವೇಶಿಸಿಲಿವೆ. ಈ ಪಂದ್ಯದಲ್ಲಿ ಗೆಲುವು ಸಾಧಿಸಿದ ತಂಡ, ಫೈನಲ್​ಗೆ ಹತ್ತಿರವಾಗುತ್ತದೆ. ದ್ವೀಪರಾಷ್ಟ್ರದಲ್ಲಿ ನಡೆಯುತ್ತಿರುವ ನಿದಹಾಸ್​ ಕಪ್​ ತ್ರಿಕೋನ ಟಿ-20 ಸರಣಿಯಲ್ಲಿ ಇಂದು ಭಾರತ-ಶ್ರೀಲಂಕಾ ತಂಡಗಳು ಕಾದಾಟವನ್ನು ನಡೆಸಲಿವೆ. ಈಗಾಗಲೇ ಭಾರತ ಶ್ರೀಲಂಕಾ ವಿರುದ್ಧ ಆಡಿದ ಮೊದಲ ಪಂದ್ಯ ಸೋತು ಒತ್ತಡದಲ್ಲಿದೆ. ಇನ್ನು ಶ್ರೀಲಂಕಾ ಸಹ ಬಾಂಗ್ಲಾ ವಿರುದ್ಧ ನಿರಾಸೆ ಅನುಭವಿಸಿದೆ. ಉಭಯ ತಂಡಗಳಿಗೆ ಈ ಪಂದ್ಯದಲ್ಲಿ ಗೆಲುವು ಅನಿವಾರ್ಯ. ಅಂದಾಗ ಮಾತ್ರ ಸರಣಿಯ ಫೈನಲ್​​ಗೆ ಏರುವ ಕನಸು ಕಾಣಬಹುದು.

ಅಂಕಿ ಅಂಶಗಳ ಲೆಕ್ಕಾಚಾರಾದಲ್ಲಿ ಟೀಮ್​ ಇಂಡಿಯಾ ಬಲಿಷ್ಠವಾಗಿದೆ. ಆದ್ರೆ ತವರಿನಲ್ಲಿ ಶ್ರೀಲಂಕಾ, ಆಡುತ್ತಿದ್ದರಿಂದ ತವರಿನ ಅಭಿಮಾನಿಗಳ ಬೆಂಬಲ ತಂಡಕ್ಕಿದೆ. ಸ್ಪರ್ಧಾತ್ಮಕ ಪಿಚ್​​​ ನಿರ್ಮಾಣವಾಗಿದ್ದರಿಂದ ರೋಚಕತೆ ಹೆಚ್ಚಿದೆ.ಶ್ರೀಲಂಕಾ ಪ್ರವಾಸದಲ್ಲಿರುವ ಟೀಮ್​ ಇಂಡಿಯಾದಲ್ಲಿ ಯುವ ಆಟಗಾರರೇ ಹೆಚ್ಚಾಗಿದ್ದಾರೆ. ಅನುಭವಿಗಳ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸುತ್ತಿರುವ ರೋಹಿತ್​​ ಶರ್ಮಾ ರನ್​ ಕಲೆ ಹಾಕಲು ಹಿಂದೆ ಬಿದ್ದಿರುವುದು ತಂಡದ ಚಿಂತೆಯನ್ನು ಹೆಚ್ಚಿಸಿದೆ. ಇನ್ನು ಇನ್ನೋರ್ವ ಆರಂಭಿಕ ಆಟಗಾರ ಶಿಖರ್​ ಧವನ್​ ಆಡಿದ ಎರಡೂ ಪಂದ್ಯಗಳಲ್ಲಿ ರನ್​ ಕಲೆ ಹಾಕಿದ್ದು, ಸಮಾಧಾನ ತಂದಿದೆ. ಉಳಿದಂತೆ ರಿಶಬ್​ ಪಂತ್​​, ಸುರೇಶ್​​ ರೈನಾ, ಕರ್ನಾಟಕದ ಮನೀಶ್​ ಪಾಂಡೆ, ವಿಕೆಟ್​ ಕೀಪರ್​ ದಿನೇಶ್​ ಕಾರ್ತಿಕ್​ ರನ್​​ಗಳನ್ನು ಕಲೆ ಹಾಕಿದ್ರೆ ದೊಡ್ಡ ಮೊತ್ತ ಫಿಕ್ಸ್​​..ಇನ್ನು ಸಿಕ್ಕ ಅವಕಾಶದಲ್ಲಿ ಮನಮೋಹಕ ಬೌಲಿಂಗ್​ ಪ್ರದರ್ಶನ ನೀಡಿರುವ ಜಯದೇವ್​ ಉನಾದ್ಕಟ್​​ ಭರವಸೆ ಮೂಡಿಸಿದ್ದಾರೆ. ಇನ್ನು ಶರ್ದಾಲ ಠಾಕೂರ್​​, ವಾಶಿಂಗ್ಟನ್​ ಸುಂದರ್​​, ವಿಜಯ ಶಂಕರ್​​ ಬಿಗುವಿನ ದಾಳಿ ನಡೆಸಿದ್ರೆ ಒಳ್ಳೆಯದು. ಕಳೆದ ಒಂದು ವರ್ಷದಲ್ಲಿ ಶ್ರೇಷ್ಠ ಪ್ರದರ್ಶನ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾದ ಯಜುವೇಂದ್ರ ಚಹಾಲ್​​ ಮೋಡಿ ಮಾಡಬೇಕಿದೆ.

ಬಾಂಗ್ಲಾದೇಶದ ವಿರುದ್ಧ ಅನುಭವಿಸಿದ ಸೋಲು ಶ್ರೀಲಂಕಾ ತಂಡಕ್ಕೆ ಪೆಟ್ಟು ನೀಡಿದೆ. ಕಳೆದ ಪಂದ್ಯದಲ್ಲಿ ಮಾಡಿದ ತಪ್ಪಿನಿಂದ ಪಾಠ ಕಲಿತು ಆಡುವ ಅನಿವಾರ್ಯತೆ ಸಿಂಹಳಿಯರದ್ದು. ಇನ್ನು ಕುಸಾಲ್​ ಮೆಂಡಿಸ್​ ಹಾಗೂ ಕುಸಾಲ್​ ಪೆರೆರಾ ಬಾಂಗ್ಲಾ ವಿರುದ್ಧ ಆಡಿದ ಆಟ ಮುಂದುವರೆಸುವ ಲೆಕ್ಕಾಚಾರದಲ್ಲಿದ್ದಾರೆ. ಉಳಿದಂತೆ ಮಧ್ಯಮ ಕ್ರಮಾಂಕದ ಆಟಗಾರರು ತಮ್ಮ ಜವಾಬ್ದಾರಿಯನ್ನು ಅರಿತು ಆಡಿದ್ರೆ, ಗೆಲುವು ಸನಿಹ ವಾಗುತ್ತದೆ. ಭಾರತ ವಿರುದ್ಧ ಶ್ರೀಲಂಕಾ ತಂಡದ ಅನುಭವಿ ಬೌಲರ್​​ಗಳು ಶಿಸ್ತು ಬದ್ಧ ದಾಳಿಯನ್ನು ನಡೆಸಬೇಕಿದೆ. ಅಂದಾಗ ಮಾತ್ರ ಗೆಲುವು ಸಾಧ್ಯ.ಯಾರ ಕೊರಳಿಗೆ ಗೆಲುವಿನ ಮಾಲೆ ಬೀಳುತ್ತದೆ ಎಂಬ ಕುತೂಹಲ ಮನೆ ಮಾಡಿದೆ. ಉಭಯ ತಂಡಗಳು ಫೈನಲ್​​ ಕನಸಿನಲ್ಲಿದ್ದು, ಯಾವ ತಂಡ ಪ್ರಶಸ್ತಿ ಸುತ್ತಿಗೆ ಅರ್ಹತೆ ಪಡೆಯುತ್ತದೆ ಎಂಬ ಲೆಕ್ಕಾಚಾರ ಆರಂಭವಾಗಿದೆ.

ಸ್ಪೋರ್ಟ್ಸ್​ ಬ್ಯೂರೋ, ಸುದ್ದಿಟಿವಿ

0

Leave a Reply

Your email address will not be published. Required fields are marked *