ಪ್ರಪಂಚದಲ್ಲಿ ಭಾರತ ಮಹಿಳೆಯರಿಗೆ ಅತ್ಯಂತ ಅಪಾಯಕಾರಿ ದೇಶ: ನಂಬರ್ 1 ಸ್ಥಾನ

ದೆಹಲಿ/ವಾಷಿಂಗ್ಟನ್: ಮಹಿಳೆಯರಿಗೆ ಭಾರತ ಪ್ರಪಂಚದಲ್ಲೇ ಅತ್ಯಂತ ಅಪಾಯಕಾರಿ ದೇಶ ಎಂದು ಥಾಮ್ಸನ್ ರಾಯ್ಟರ್ಸ್ ಫೌಂಡೇಷನ್ ಸಮೀಕ್ಷೆ ಹೇಳಿದೆ. ಆಫ್ಘಾನಿಸ್ತಾನ ಮತ್ತು ಸಿರಿಯಾ ಎರಡು ಮತ್ತು ಮೂರನೇ ದೇಶಗಳ ಸಾಲಿನಲ್ಲಿವೆ. ಆದರೆ, ಈ ವರದಿಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ ನಿರಾಕರಿಸಿದೆ. ಮಹಿಳೆಯರ ಮೇಲೆ ಲೈಂಗಿಕ ಹಿಂಸೆ ಮತ್ತು ಸೇವಾ ಗಲುಮಾರಾಗಲು ಒತ್ತಾಯ ಮೊದಲಾದ ವಿಷಯಗಳನ್ನು ಆಧರಿಸಿ 550 ಜಾಗತಿಕ ತಜ್ಞರು ಸಮೀಕ್ಷೆಯನ್ನು ನಡೆಸಿದ್ದಾರೆ. ಯುದ್ಧಪೀಡಿತ ಆಫ್ಘಾನಿಸ್ತಾನ ಮತ್ತು ಸಿರಿಯಾ ದೇಶಗಳು ಭಾರತದ ನಂತರದ ಸ್ಥಾನಗಳನ್ನು ಪಡೆದಿವೆ.

ಮಹಿಳೆಯರಿಗೆ ಬೆದರಿಕೆ ಇರುವ ಟಾಪ್ ಟೆನ್ ದೇಶಗಳ ಪಟ್ಟಿಯಲ್ಲಿ ಅಮೆರಿಕ ಮಾತ್ರ ಸ್ಥಾನ ಪಡೆದಿದ್ದು, ಲೈಂಗಿಕ ಹಿಂಸೆ, ದೌರ್ಜನ್ಯ ಮತ್ತು ಬಲವಂತವಾಗಿ ಲೈಂಗಿಕ ಚಟುವಟಿಕೆ ನಡೆಯುವ ಕುರಿತು ಮಹಿಳೆಯರು ಹೇಳಿಕೊಂಡಿದ್ದಾರೆ. 2011ರ ಸಮೀಕ್ಷೆ ಪುನರಾವರ್ತನೆಯಾಗಿದ್ದು, ಆಫ್ಘಾನಿಸ್ತಾನ, ಕಾಂಗೊ, ಪಾಕಿಸ್ತಾನ, ಭಾರತ ಮತ್ತು ಸೋಮಾಲಿಯ ದೇಶಗಳು ಮಹಿಳೆಯರಿಗೆ ಅತ್ಯಂತ ಅಪಾಯಕಾರಿ ದೇಶಗಳು ಎಂದು ಸಮೀಕ್ಷೆ ಹೇಳಿದೆ. ಮಹಿಳೆಯರ ಭದ್ರತೆಯ ವಿಷಯದಲ್ಲಿ ಭಾರತ ಸೋತಿರುವುದರ ಕುರಿತು ಸಮೀಕ್ಷೆ ಬೆಳಕು ಚೆಲ್ಲಿದೆ. ದೆಹಲಿಯಲ್ಲಿ ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ನಡೆದ 5 ವರ್ಷಗಳ ನಂತರ ಕೂಡ ದೇಶದಲ್ಲಿ ದೌರ್ಜನ್ಯ, ಬೆದರಿಕೆಗಳ ಪ್ರಮಾಣದಲ್ಲಿ ಏರಿಕೆಯಾಗಿದೆ.

ಭಾರತದಲ್ಲಿ ಮಹಿಳೆಯರನ್ನು ಅತ್ಯಂತ ಅಸಡ್ಡೆ ಮತ್ತು ಅಗೌರವದಿಂದ ಕಾಣಲಾಗುತ್ತಿದೆ ಎಂಬ ಆರೋಪ ಹಳೆಯದು. ಅತ್ಯಾಚಾರ, ವಿವಾಹಾನಂತರದ ದೌರ್ಜನ್ಯಗಳು, ಲೈಂಗಿಕ ದೌರ್ಜನ್ಯ ಮತ್ತು ದೌರ್ಜನ್ಯ, ಹೆಣ್ಣು ಶಿಶು ಹತ್ಯೆಗಳ ಪ್ರಮಾಣ ನಿಯಂತ್ರಣವಾಗಿಲ್ಲ ಎಂಬ ಸಂಗತಿ ಸಮೀಕ್ಷೆಯಿಂದ ಬಹಿರಂಗವಾದಂತಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ದೇಶವನ್ನು ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುವ ರಾಷ್ಟ್ರ ಎಂದು ಬಣ್ಣಿಸುತ್ತಾರೆ. ಆದರೆ, ಮಹಿಳೆಯರ ರಕ್ಷಣೆ ವಿಷಯದಲ್ಲಿ ಭಾರತ ಹಿಂದುಳಿದಿರುವುದು ಸಮೀಕ್ಷೆಯಿಂದ ಸಾಬೀತಾಗಿದೆ.

ಸರ್ಕಾರದ ದಾಖಲೆಗಳ ಪ್ರಕಾರ, 2007 – 16 ಅವಧಿಯಲ್ಲಿ ಮಹಿಳೆಯರ ಮೇಲಿನ ಅಪರಾಧಗಳ ಸಂಖ್ಯೆಯಲ್ಲಿ ಶೇ.83ರಷ್ಟು ಏರಿಕೆಯಾಗಿದೆ. ಪ್ರತಿ ಒಂದು ಗಂಟೆಯಲ್ಲಿ 4 ಅತ್ಯಾಚಾರ ಪ್ರಕರಣಗಳು ನಡೆಯುತ್ತಿವೆ. ಸಮೀಕ್ಷೆಯನ್ನ ಆರೋಗ್ಯ, ಆದಾಯದ ಮೂಲ, ಸಾಂಸ್ಕೃತಿಕ ಅಥವಾ ಪರಂಪರಾಗತ ಅಭ್ಯಾಸ, ಲೈಂಗಿಕ ಹಿಂಸೆ ಮತ್ತು ದೌರ್ಜನ್ಯ, ಲೈಂಗಿಕೇತರ ಹಿಂಸೆ ಮತ್ತು ಮಾನವ ಕಳ್ಳ ಸಾಗಣೆಗಳ ಆಧಾರದಲ್ಲಿ ನಡೆಸಲಾಗಿದೆ. ಯುದ್ಧ ಪೀಡಿತ ಆಫ್ಘಾನಿಸ್ತಾನದಲ್ಲಿ ಏಳು ಪ್ರಶ್ನೆಗಳ ಪೈಕಿ 4ಕ್ಕೆ ಅತಿ ಕೆಟ್ಟ ಪರಿಸ್ಥಿತಿ ಇದೆ ಎಂಬ ಉತ್ತರ ಸಿಕ್ಕಿದೆ. ಆರೋಗ್ಯ, ಹಿಂಸೆಗಳು ದೊಡ್ಡ ಪ್ರಮಾಣದಲ್ಲಿವೆ ಎಂದು ಸಮೀಕ್ಷೆ ಹೇಳಿದೆ.

ಮೀಟೂ ಅಭಿಯಾನ ಅಮೆರಿಕವನ್ನು ಅಸುರಕ್ಷಿತ ದೇಶವಾಗಿಸಿತೇ?

ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರು ಅಮೆರಿಕದಲ್ಲಿ ನಡೆಸಿದ ಮೀಟೂ ಮತ್ತು ಟೈಮ್ಸ್ ಅಪ್ ಅಭಿಯಾನ ಅಮೆರಿಕವನ್ನು ಮಹಿಳೆಯರಿಗೆ ಅಂತ್ಯಂತ ಅಪಾಯಕಾರಿ ದೇಶಗಳ ಪಟ್ಟಿಯ ಪೈಕಿ ಟಾಪ್ ಟೆನ್​ನಲ್ಲಿ ಸ್ಥಾನ ನೀಡಿದೆ. ಈ ಎರಡೂ ಅಭಿಯಾನಗಳು ಕೆಲ ತಿಂಗಳ ಕಾಲ ಸುದ್ದಿ ವಾಹಿನಿ ಮತ್ತು ಪತ್ರಿಕೆಗಳಲ್ಲಿ ಇದೇ ವಿಷಯ ಹೆಡ್​ಲೈನ್ಸ್ ಸ್ಥಾನ ಗಿಟ್ಟಿಸಿತ್ತು. ಈ ಹಿನ್ನೆಲೆಯಲ್ಲಿ ಅಮೆರಿಕ ಕೂಡ ಬೆದರಿಕೆ ಇರುವ ದೇಶಗಳ ಸಾಲಿನಲ್ಲಿ ಸ್ಥಾನ ಗಳಿಸಿದೆ.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *