ಕಲಬುರಗಿ ದಕ್ಷಿಣ ಮತಕ್ಷೇತ್ರದಲ್ಲಿ ಹೆಚ್ಚಿದ ಟಿಕೆಟ್ ಆಕಾಂಕ್ಷಿಗಳು..!

ಕಲಬುರಗಿ: ಹೈದ್ರಾಬಾದ್ ಕರ್ನಾಟಕ ಪ್ರದೇಶದಲ್ಲಿ ಬಿಜೆಪಿಯ ಪರಿವರ್ತನಾ ಯಾತ್ರೆ ಸಂಚರಿಸುತ್ತಿರುವಂತೆ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಜೆಡಿಎಸ್ ಪ್ರಮುಖರು ಮನೆಮನೆಗೆ ಕುಮಾರಣ್ಣ ಕಾರ್ಯಕ್ರಮದಲ್ಲಿ ಬ್ಯುಸಿಯಾಗಿದ್ದರೆ, ಕಾಂಗ್ರೆಸ್‍ನಲ್ಲಿ ಟಿಕೆಟ್‍ಗೆ ಪೈಪೋಟಿ ಮುಂದುವರಿದಿದೆ. ಕಲಬುರಗಿ ದಕ್ಷಿಣ ಮತಕ್ಷೇತ್ರದಲ್ಲಿ ಎಂಎಲ್‍ಎ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತಿದೆ.

ಕೇಸರಿ ಪಕ್ಷದ ಪರಿವರ್ತನಾ ಯಾತ್ರೆ ಹಲವು ಗೊಂದಲಗಳ, ಗಲಾಟೆಗಳ ನಡುವೆ ಹೈದ್ರಾಬಾದ್ ಕರ್ನಾಟಕದಲ್ಲಿ ಸಂಚರಿಸಿಸುತ್ತಿದೆ. ಇದರ ನಡುವೆ ಪ್ರಮುಖ ಜಿಲ್ಲಾ ಕೇಂದ್ರವಾಗಿರುವ ಕಲಬುರಗಿಯಲ್ಲಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಹೆಚ್ಚುತ್ತಲೇ ಹೋಗುತ್ತಿದೆ. ಅದರಲ್ಲಿ ಕಲಬುರಗಿ ದಕ್ಷಿಣ ಮತಕ್ಷೇತ್ರದಲ್ಲಿ ಭಾರಿ ಪೈಪೋಟಿ ಕಂಡುಬರುತ್ತಿದೆ. ಬಿಜೆಪಿಯಿಂದ ಹಾಲಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಮತ್ತೆ ಸ್ಪರ್ಧಿಸುವುದಕ್ಕೆ ತಯಾರಿ ನಡೆಸಿದ್ದಾರೆ. ಇನ್ನೊಬ್ಬ ಪ್ರಮುಖರಾದ ಶ್ರೀಗುರು ವಿದ್ಯಾಪೀಠದ ಸಂಸ್ಥಾಪಕ ಹಾಗೂ ಸಮಾಜ ಸೇವಕ ಬಸವರಾಜ ದಿಗ್ಗಾವಿ ಕೂಡ ಬಿಜೆಪಿ ಸೇರ್ಪಡೆಗೆ ಮುಂದಾಗಿದ್ದಾರೆ. ಡಿಸೆಂಬರ್ 9ರಂದು ಕಲಬುರಗಿಯಲ್ಲಿ ನಡೆಯಲಿರುವ ಪರಿವರ್ತನಾ ಯಾತ್ರೆಯಲ್ಲಿ ಬಸವರಾಜ ದಿಗ್ಗಾವಿ ಬಿಜೆಪಿ ಸೇರ್ಪಡೆಗೆ ಬಿ.ಎಸ್.ಯಡಿಯೂರಪ್ಪ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಆದರೆ ಸೇರ್ಪಡೆಯನ್ನು ಮುಂದೂಡುವಂತೆ ಪಕ್ಷದ ಕೆಲವು ನಾಯಕರೇ ಒತ್ತಡ ಹೇರುತ್ತಿರುವ ವಿಷಯ ಬಹಿರಂಗವಾಗಿದೆ.

ಇನ್ನು ಕಾಂಗ್ರೆಸ್‍ನಲ್ಲಿ ಮಾಜಿ ಎಂಎಲ್‍ಸಿ ಅಲ್ಲಂ ಪ್ರಭು ಪಾಟೀಲ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ನಿತಿನ್ ಗುತ್ತೇದಾರ ಹೆಸರು ಮುಂಚೂಣಿಯಲ್ಲಿದೆ. ಇವರಿಬ್ಬರ ನಡುವೆ ನಾನು ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ರಾಜ್ಯದ ಯಾವ ಮಹಾನಗರಗಳ ಮೇಯರ್‍ಗೆ ಟಿಕೆಟ್ ಸಿಗದಿದ್ದರೂ ನನಗಂತೂ ಟಿಕೆಟ್ ಸಿಕ್ಕೆ ಸಿಗುತ್ತದೆ ಅಂತ ಕಲಬುರಗಿ ಮಹಾನಗರ ಪಾಲಿಕೆ ಮೇಯರ್ ಶರಣು ಮೋದಿ ವಿಶ್ವಾಸದಲ್ಲಿದ್ದಾರೆ. ಕಲಬುರಗಿ ದಕ್ಷಿಣ ಮತಕ್ಷೇತ್ರದ ಹಾಲಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಅವರ ತಾಯಿ ಅರುಣಾ ಪಾಟೀಲ್ ಈ ಹಿಂದೆ ಇದೇ ಮತಕ್ಷೇತ್ರದಲ್ಲಿ ನಡೆದಿದ್ದ ಬೈ ಎಲೆಕ್ಷನ್‍ನಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಹೀಗಾಗಿ ಹೇಗಾದರೂ ಮಾಡಿ ಜೆಡಿಎಸ್ ತೆಕ್ಕೆಗೆ ಕಲಬುರಗಿ ದಕ್ಷಿಣ ಮತಕ್ಷೇತ್ರವನ್ನು ತೆಗೆದುಕೊಳ್ಳಬೇಕು ಅಂತ ಜೆಡಿಎಸ್ ನಾಯಕರು ನಿರ್ಧರಿಸಿದ್ದಾರೆ.

ಜೆಡಿಎಸ್ ನಾಯಕರು, ಕಾರ್ಯಕರ್ತರು ಮನೆ ಮನೆಗೆ ಕುಮಾರಣ್ಣ ಕಾರ್ಯಕ್ರಮ ನಿರಂತರವಾಗಿ ನಡೆಸುತ್ತಿರುವ ಜತೆಗೆ ರಾಜ್ಯದಲ್ಲಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಪ್ರಧಾನಿಯಾಗಿ ಹೆಚ್.ಡಿ.ದೇವೇಗೌಡ ಅವರು ಮಾಡಿದ ಸಾಧನೆಗಳ ಕುರಿತು ಜನರಿಗೆ ಹೇಳುತ್ತಾ ಜೆಡಿಎಸ್ ಪರ ಒಲವು ಮೂಡುವಂತೆ ಮತದಾರರ ಓಲೈಕೆಯಲ್ಲಿ ತೊಡಗಿದ್ದಾರೆ. ಒಟ್ನಲ್ಲಿ ಒಂದೆಡೆ ಕೊರೆಯುವ ಚಳಿ ಕಲಬುರಗಿಯಲ್ಲಿ ಜೋರಾಗುತ್ತಿದ್ದರೆ ಮತ್ತೊಂದೆಡೆ ರಾಜಕೀಯ ಪಕ್ಷಗಳಲ್ಲಿ ಚುನಾವಣೆ ಕಾವು ಏರಿಕೆಯಾಗುತ್ತಿದೆ. ಟಿಕೆಟ್‍ಗಾಗಿ ಹೆಚ್ಚಿದ ಪೈಪೋಟಿಯು ಆಯಾ ಪಕ್ಷಗಳ ನಾಯಕರಿಗಂತೂ ತಲೆನೋವಾಗಿ ಪರಿಣಮಿಸಿದೆ. ಇನ್ನು ಕಾದು ನೋಡುವ ತಂತ್ರಗಾರಿಕೆ ಅನುಸರಿಸುತ್ತಿದ್ದಾರೆ.

ಚಂದ್ರಶೇಖರ್ ಕೌಲಗಾ, ಸುದ್ದಿ ಟಿವಿ, ಕಲಬುರಗಿ.

0

Leave a Reply

Your email address will not be published. Required fields are marked *