ಬಿಡುಗಡೆಯಾಯ್ತು ಐಸಿಸಿ ಟೆಸ್ಟ್ ಚಾಂಪಿಯನ್​ಷಿಪ್​ ವೇಳಾಪಟ್ಟಿ

ಟೆಸ್ಟ್​ ಚಾಂಪಿಯನ್​ಷಿಪ್​, ಐಸಿಸಿಯ ಕನಸಿನ ಕೂಸು. ಅನೇಕ ವರ್ಷಗಳ ಈ ಕನಸಿಗೆ ಐಸಿಸಿ ಕೊನೆಗೂ ರೂಪುರೇಷೆ ಸಿದ್ಧಪಡಿಸಿದೆ. ನಿನ್ನೆ ಐಸಿಸಿ ಟೆಸ್ಟ್​ ಚಾಂಪಿಯನ್​ಷಿಪ್​ನ ವೇಳಾಪಟ್ಟಿಯನ್ನ ಬಿಡುಗಡೆ ಮಾಡಿದೆ. ಈ ಮಹತ್ವದ ಟೂರ್ನಿಯ ಪಂದ್ಯಗಳು ಯಾವಾಗ ಪ್ರಾರಂಭವಾಗಲಿವೆ. ಯಾವ ತಂಡ ಎಷ್ಟೆಷ್ಟು ಸರಣಿ ಆಡಲಿವೆ. ಭಾರತದ ಯಾವ ತಂಡದ ವಿರುದ್ಧ ಮೊದಲ ಪಂದ್ಯ ಆಡಲಿದೆ ಕಂಪ್ಲೀಟ್ ಡಿಟೇಲ್ಸ್​ ಇಲ್ಲಿದೆ ನೋಡಿ.

ಅಂತರಾಷ್ಟ್ರೀಯ ಕ್ರಿಕೆಟ್​ ಮಂಡಳಿ ಕ್ರಿಕೆಟ್​ ಅಭಿವೃದ್ದಿಗೆ ಹಲವು ಯೋಜನೆಗಳನ್ನು ಕಾರ್ಯರೂಪಕ್ಕೆ ತರುತ್ತಿದೆ. ಅಲ್ಲದೆ ಕ್ರಿಕೆಟ್​ನ ಘನತೆ ಎತ್ತಿಹಿಡಿಯಲು ಈಗಾಗಲೇ ಅನೇಕ ನೀತಿನಿಯಮಗಳನ್ನೂ ಜಾರಿಗೆ ತಂದಿದೆ. ಪಂದ್ಯದ ಸಮಯದಲ್ಲಿ ಶಿಸ್ತು ಕಾಪಾಡಲು ಐಸಿಸಿ ಸಾಕಷ್ಟು ಕಠಿಣ ಕ್ರಮಗಳನ್ನು ಕೈಗೊಂಡಿದೆ. ಆಟಗಾರರು ಮೈದಾನದಲ್ಲಿ ದುರ್ವರ್ತನೆ ತೋರಿದ್ರೆ, ಅಥವಾ ಐಸಿಸಿ ನಿಯಮಗಳನ್ನ ಉಲ್ಲಂಘಿಸಿದ್ರೆ ಅಂತಹ ಆಟಗಾರರಿಗೆ ಭಾರಿ ಪ್ರಮಾಣದಲ್ಲಿ ದಂಡ ವಿಧಿಸುವುದರ ಜೊತೆಗೆ ಕೆಲ ಪಂದ್ಯಗಳಿಂದ ನಿಷೇಧವನ್ನು ವಿಧಿಸುತ್ತಿದೆ. ಅಷ್ಟೇ ಅಲ್ಲ ಕ್ರಿಕೆಟ್ ಖ್ಯಾತಿಯನ್ನು ಹೆಚ್ಚಿಸಲು ಹಲವು ಟೂರ್ನಿಗಳ ಆಯೋಜನೆಗೆ ಸೂತ್ರ ಹೆಣೆದುಕೊಂಡಿದೆ.

ಕ್ರಿಕೆಟ್ ವಲಯದಲ್ಲಿ ಅನೇಕ ವರ್ಷಗಳಿಂದ ಟೆಸ್ಟ್ ಚಾಂಪಿಯನ್​ಷಿಪ್​ ಟೂರ್ನಿ ಬಗ್ಗೆ ಮಾತುಗಳು ಕೇಳಿ ಬರುತ್ತಿತ್ತಾದ್ರೂ, ಈವರೆಗೂ ಐಸಿಸಿ ಇದಕ್ಕೆ ಸಂಬಂಧಿಸಿದಂತೆ ವೇಳಾಪಟ್ಟಿ ಬಿಡುಗಡೆ ಮಾಡಿರಲಿಲ್ಲ. ಆದ್ರೆ ನಿನ್ನೆ ಐಸಿಸಿ ತನ್ನ ಕನಸಿನ ಕೂಸು ಟೆಸ್ಟ್​ ಚಾಂಪಿಯನ್​ಷಿಪ್​ ನ ವೇಳಾಪಟ್ಟಿಯನ್ನ ಬಿಡುಗಡೆ ಮಾಡಿದೆ.

ಮುಂದಿನ ವರ್ಷ ಜುಲೈ 15 ರಿಂದ ಪ್ರಾರಂಭವಾಗುವ ಈ ಮಹತ್ವದ ಟೂರ್ನಿಯ ಪಂದ್ಯಗಳು 2021ರ ಏಪ್ರಿಲ್​ 30ರ ವರೆಗೆ ನಡೆಯಲಿವೆ. ಐಸಿಸಿ ಟೆಸ್ಟ್​ ರ್ಯಾಂಕಿಂಗ್​​​ನೆ ಎಲ್ಲಾ 9 ತಂಡಗಳು ಟೆಸ್ಟ್​ ಚಾಂಪಿಯನ್​ಷಿಪ್​ನಲ್ಲಿ ಭಾಗವಹಿಸಲಿವೆ. ಪ್ರತಿ ತಂಡ ಒಟ್ಟು ಆರು ಟೆಸ್ಟ್ ಸರಣಿಗಳಲ್ಲಿ ಸೆಣಸಾಡಲಿವೆ. ಇದರಲ್ಲಿ ಮೂರು ಸರಣಿಗಳನ್ನ ತವರಿನಲ್ಲಿ ಆಡಿದ್ರೆ, ಇನ್ನುಳಿದ ಸರಣಿಗಳನ್ನು ವಿದೇಶಿ ನೆಲದಲ್ಲಿ ಆಡಲಿವೆ. ಅಗ್ರ ಎರಡು ಸ್ಥಾನದಲ್ಲಿ ನಿಲ್ಲುವ ತಂಡಗಳು ಕ್ರಿಕೆಟ್​​ ಕಾಶಿ ಲಾರ್ಡ್ಸ್​ನಲ್ಲಿ ನಡೆಯುವ ಫೈನಲ್​ ಪಂದ್ಯದಲ್ಲಿ ಚಾಂಪಿಯನ್ ಪಟ್ಟಕ್ಕಾಗಿ ಕಾದಾಡಲಿವೆ.

ಟೀಮ್​ ಇಂಡಿಯಾ ಕ್ರಿಕೆಟ್​ನ ಅಸಲಿ ಮಾದರಿಯ ಐತಿಹಾಸಿಕ ಸರಣಿಯಲ್ಲಿ ವೆಸ್ಟ್​ ಇಂಡೀಸ್​​ ವಿರುದ್ಧ ಮೊದಲ ಕಾದಾಟ ನಡೆಸಲಿದೆ.ಕೆರೆಬಿಯನ್​ ನಾಡಿನಲ್ಲಿ ಭಾರತ ವೆಸ್ಟ್​ ಇಂಡೀಸ್ ತಂಡಗಳ ಟೆಸ್ಟ್​ ಸರಣಿ ಆಯೋಜನೆ ಮಾಡಲಾಗಿದೆ. ವಿಶ್ವ ಏಕದಿನ ಲೀಗ್​ಗೂ ಐಸಿಸಿ ಪ್ಲಾನ್​ ಮಾಡಿಕೊಂಡಿದ್ದು, ಈ ಲೀಗ್​ನ ಶೆಡ್ಯೂಲ್​ ಕೂಡ ಬಿಡುಗೆಯಾಗಿದೆ. ನೆದರ್​ಲ್ಯಾಂಡ್​ ಸೇರಿದಂತೆ ಟೆಸ್ಟ್​ ಮಾನ್ಯತೆ ಪಡೆದ 12 ತಂಡಗಳು ಇದರಲ್ಲಿ ಪಾಲ್ಗೊಳ್ಳಲಿವೆ. 2020 ರ ಮೇ ಒಂದರಿಂದ ಈ ಲೀಗ್ ಪ್ರಾರಂಭವಾಗಲಿದ್ದು, 2022ರ ಮಾರ್ಚ್​ 31 ರ ವರೆಗೆ ನಡೆಯಲಿದೆ. ಪ್ರತಿ ತಂಡ 8 ಸರಣಿ ಆಡಲಿದೆ. ಸ್ವದೇಶ ಹಾಗೂ ವಿದೇಶಗಳಲ್ಲಿ ಸರಣಿಗಳನ್ನು ಆಯೋಜಿಸಲಾಗಿದೆ. ಟೀಮ್​ ಇಂಡಿಯಾ ಶ್ರೀಲಂಕಾ ವಿರುದ್ಧ ಅವರದೇ ನೆಲದಲ್ಲಿ ಸರಣಿ ಆಡುವ ಮೂಲಕ ಏಕದಿನ ಲೀಗ್​ನ ಅಭಿಯಾನ ಆರಂಭಿಸಲಿದೆ. ಈ ಲೀಗ್​ನ ಟಾಪ್​​ 7 ತಂಡಗಳು 2023ರಲ್ಲಿ ಭಾರತ ವೇದಿಕೆಯಾಗಿ ನಡೆಯುವ ವಿಶ್ವಕಪ್ ಟೂರ್ನಿಗೆ ನೇರ ಅರ್ಹತೆ ಪಡೆಯಲಿವೆ.

ಅದೇನೆ ಇರಲಿ, ಐಸಿಸಿ ಕ್ರಿಕೆಟ್​ ಜನಪ್ರಿಯತೆಯನ್ನು ವಿಶ್ವದಾದ್ಯಂತ ಪ್ರಸರಿಸಲು ಈ ಎರಡೂ ಟೂರ್ನಿಗಳನ್ನು ನಡೆಸಲು ತೀರ್ಮಾನಿಸಿದೆ. ಆದ್ರೆ ಇದಕ್ಕೆ ಕ್ರಿಕೆಟ್ ಅಭಿಮಾನನಿಗಳಿಂದ ಯಾವ ರೀತಿಯ ಸ್ಪಂದನೆ ದೊರೆಯಲಿದೆ ಅನ್ನೋದನ್ನ ಕಾದು ನೋಡಬೇಕಿದೆ.

0

Leave a Reply

Your email address will not be published. Required fields are marked *