ಐಎಸ್​​ಎಸ್​ಎಫ್ ಕಿರಿಯರ ವಿಶ್ವಕಪ್ ಸಂಭಾವ್ಯರ ಪಟ್ಟಿ ಸೇರಿದ ಪ್ರಿಯಾ: ನೆರವಿಗೆ ಪ್ರಧಾನಿ ಮೋದಿಗೆ ಮೊರೆ

ಮುಖ್ಯಾಂಶಗಳು

ಐಎಸ್​​ಎಸ್​ಎಫ್ ಕಿರಿಯರ ವಿಶ್ವಕಪ್
ವಿಶ್ವಕಪ್​ನಲ್ಲಿ ಭಾಗವಹಿಸಲು 3-4 ಲಕ್ಷ ರೂ. ಅಗತ್ಯವಿದೆ
ನನ್ನ ತಂದೆ ಕೂಲಿ ಕಾರ್ಮಿಕ ಎಂದ ಪ್ರಿಯಾ ಸಿಂಗ್
ನಾನು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದೇನೆ
ಕ್ರೀಡಾ ಸಚಿವರ ಭೇಟಿಗೆ 2 ಬಾರಿ ಯತ್ನಿಸಿದ್ದೇನೆ
ಶಾಸಕ, ಸಿಎಂ, ಕ್ರೀಡಾ ಸಚಿವರು, ಪ್ರಧಾನಿಗೂ ಮನವಿ ಮಾಡಿದ್ದೇನೆ
ಪ್ರಿಯಾ ಸಿಂಗ್ ತಂದೆ ಬ್ರಿಜ್​ಪಾಲ್ ಸಿಂಗ್ ಪ್ರತಿಕ್ರಿಯೆ
ಸರ್ಕಾರ ನೆರವು ನೀಡದಿದ್ದರೂ ಮಗಳನ್ನು ಜರ್ಮನಿಗೆ ಕಳಿಸುತ್ತೇನೆ – ಬ್ರಿಜ್​ಪಾಲ್ ಸಿಂಗ್

ಮೀರತ್: ಐಎಸ್​​ಎಸ್​ಎಫ್ ಕಿರಿಯರ ವಿಶ್ವಕಪ್​ನಲ್ಲಿ ಭಾಗವಹಿಸಲು 3-4 ಲಕ್ಷ ರೂ. ಅಗತ್ಯವಿದೆ. ಆದರೆ, ನನ್ನ ತಂದೆ ಕೂಲಿ ಕಾರ್ಮಿಕ ಎಂದು ಇಂಟರ್ನ್ಯಾಷನಲ್ ಶೂಟಿಂಗ್ ಸ್ಪೋರ್ಟ್ ಫೆಡರೇಶನ್ ಜರ್ಮನಿಯಲ್ಲಿ ನಡೆಸುತ್ತಿರುವ ಕಿರಿಯರ ವಿಶ್ವಕಪ್​ ಸಂಭಾವ್ಯ ಪಟ್ಟಿಯಲ್ಲಿ ಆಯ್ಕೆಯಾಗಿರುವ ಪ್ರಿಯಾ ಸಿಂಗ್ ಹೇಳಿದ್ದಾರೆ. ಹಣ ಹೊಂದಿಸಲು ನನ್ನ ತಂದೆ ಶ್ರಮಿಸುತ್ತಿದ್ದಾರೆ. ಆದರೆ, ಹಣ ಹೊಂದಿಸಲು ಸಾಧ್ಯವಾಗುತ್ತಿಲ್ಲ. ನಾನು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದೇನೆ. ಕ್ರೀಡಾ ಸಚಿವರ ಭೇಟಿಗೆ 2 ಬಾರಿ ಯತ್ನಿಸಿದ್ದೇನೆ. ಆದರೆ, ಅವರು ಭೇಟಿಗೆ ಸಿಕ್ಕಿಲ್ಲ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.

ಉತ್ತರ ಪ್ರದೇಶದ ಮೀರತ್​​ನ 19 ವರ್ಷದ ಪ್ರಿಯಾ ಸಿಂಗ್ ಜರ್ಮನಿಯಲ್ಲಿ ನಡೆಯಲಿರುವ ಐಎಸ್​​ಎಸ್​ಎಫ್ ಕಿರಿಯರ ವಿಶ್ವಕಪ್ ಸಂಭಾವ್ಯ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. 50 ಮೀಟರ್ ರೈಫಲ್​ನಲ್ಲಿ ತಮ್ಮ ಪ್ರತಿಭೆಯನ್ನು ತೋರಿಸಲು ಇವರಿಗೆ ಇನ್ನೊಂದೇ ಹೆಜ್ಜೆಯ ಅವಕಾಶ ಸಿಗಬೇಕಿದೆ. ಇಂಟರ್ನ್ಯಾಷನಲ್ ಶೂಟಿಂಗ್ ಸ್ಪೋರ್ಟ್ ಫೆಡರೇಶನ್ ಜರ್ಮನಿಯಲ್ಲಿ ನಡೆಸುತ್ತಿರುವ ಕಿರಿಯರ ವಿಶ್ವಕಪ್ ಜೂನ್ 22ರಂದು ಸುಹ್ಲ್​​ನಲ್ಲಿ ನಡೆಯಲಿದೆ. ಆದರೆ, ಜರ್ಮನಿಯಲಲ್ಲಿ ಭಾಗವಹಿಸಲು ಪ್ರಿಯಾ ಸಿಂಗ್ ಅವರಿಗೆ ಹಣದ ಕೊರತೆ ಎದುರಾಗಿದೆ.

ವಿಶ್ವಕಪ್​ನಲ್ಲಿ ಭಾಗವಹಿಸಲು 3-4 ಲಕ್ಷ ರೂ. ಅಗತ್ಯ ವಿಚಾರದ ಕುರಿತು ಪ್ರತಿಕ್ರಿಯಿಸಿರುವ ಪ್ರಿಯಾ ಸಿಂಗ್ ತಂದೆ ಬ್ರಿಜ್​ಪಾಲ್ ಸಿಂಗ್, ಶಾಸಕ, ಸಿಎಂ, ಕ್ರೀಡಾ ಸಚಿವರು, ಪ್ರಧಾನಿ ಮೋದಿಯವರಿಗೂ ಹಣದ ನೆರವು ನೀಡಿ ಎಂದು ಮನವಿ ಮಾಡಿದ್ದೇನೆ. ಆದರೆ, ಯಾರಿಂದಲೂ ಪ್ರತಿಕ್ರಿಯೆ ಬಂದಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ. ನಾನು ನನ್ನ ಎಮ್ಮೆಗಳನ್ನು ಮಾರಿ ಹಣ ಹೊಂದಿಸುತ್ತಿದ್ದೇನೆ. ಮಗಳನ್ನು ಜರ್ಮನಿಗೆ ಕಳುಹಿಸಲು ಸ್ನೇಹಿತರ ಬಳಿ ಹಣ ಕೇಳಿದ್ದೇನೆ. ಸರ್ಕಾರ ನೆರವು ನೀಡದಿದ್ದರೂ ಮಗಳನ್ನು ಜರ್ಮನಿಗೆ ಕಳಿಸುತ್ತೇನೆ ಎಂದು ಅವರು ಹೇಳಿದ್ದಾರೆ.

ಬೇಟಿ ಬಚಾವೋ ಬೇಟಿ ಪಡಾವೋ ಆಂದೋಲನಕ್ಕೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದರು. ಇದಕ್ಕಾಗಿ ಹೊಸ ಯೋಜನೆಯನ್ನೂ ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಆದರೆ, ಬಿಜೆಪಿ ಅಧಿಕಾರದಲ್ಲಿರುವ ಉತ್ತರಪ್ರದೇಶದ ಶಾಸಕ, ಕ್ರೀಡ ಸಚಿವ, ಸಿಎಂ ಆದಿತ್ಯನಾಥ್ ಮತ್ತು ಸ್ವತಃ ಪ್ರಧಾನಿ ನರೇಂದ್ರ ಮೋದಿಯವರು ಕೂಡ ಪ್ರಿಯಾ ಸಿಂಗ್ ನೆರವಿಗೆ ಬರದಿರುವ ಸಂಗತಿ ಈ ಮೂಲಕ ಬಹಿರಂಗವಾದಂತಾಗಿದೆ. ಈ ಮೂಲಕ ಯೋಜನೆಗಳ ಘೋಷಣೆಗೆ ತೋರುವ ಆತುರವನ್ನು ಜಾರಿಗೆ ತರುವಲ್ಲಿ ಬಿಜೆಪಿ ಇಚ್ಛಾಶಕ್ತಿ ಪ್ರದರ್ಶಿಸುವುದಿಲ್ಲವೇ? ಎಂಬ ಪ್ರಶ್ನೆ ಎದುರಾಗಿದೆ.

ಆದರೆ, ಮಾಧ್ಯಮಗಳಲ್ಲಿ ಈ ವಿಷಯ ವರದಿಯಾದ ನಂತರ ತಡವಾಗಿ ಎಚ್ಚೆತ್ತ ಭಾರತೀಯ ಕ್ರೀಡಾ ಪ್ರಾಧಿಕಾರದ ನಿರ್ದೇಶಕ ನೀಲಂ ಕಪೂರ್ ಈ ಕುರಿತು ಪ್ರತಿಕ್ರಿಯಿಸಿದ್ದು, ಪ್ರಿಯಾ ಅವರಿಗೆ ಸರ್ಕಾರ ರಾಷ್ಟ್ರೀಯ ತರಬೇತಿ ಶಿಬಿರಗಳಲ್ಲಿ ಹಣದ ನೆರವು ನೀಡಿದೆ. ಪ್ರಿಯಾ ಅವರಿಗಿಂಥ ಕಿರಿಯರಾದ ಮೂರು ಅಭ್ಯರ್ಥಿಗಳು, ಈ ತಂಡದಲ್ಲೇ ಹೆಚ್ಚಿನ ಅಂಕ ಗಳಿಸಿದ್ದಾರೆ. ಅವರ ಅಂಕವನ್ನು ಹೆಚ್ಚಿಸಿಕೊಳ್ಳಲು ಮತ್ತು ಭಾರತೀಯ ತಂಡಕ್ಕೆ ಸೇರಲು ಅಗತ್ಯ ನೆರವು ನೀಡಲಾಗುವುದು ಎಂದು ಸ್ಪಷ್ಟೀಕರಣ ನೀಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಉತ್ತರಪ್ರದೇಶ ಸಿಎಂ ಆದಿತ್ಯನಾಥ್, ನನಗೆ ಈ ವಿಷಯ ತಿಳಿದ ತಕ್ಷಣ, ರಾಜ್ಯ ಸರ್ಕಾರದಿಂದ 4.5 ಲಕ್ಷ ರೂ.ಗಳನ್ನು ಬಿಡುಗಡೆಗೆ ಆದೇಶಿಸಿದ್ದೇನೆ. ಮೀರತ್ ಜಿಲ್ಲಾಧಿಕಾರಿಗೆ ಸಂಚಾರ ಭತ್ಯೆಯನ್ನು ಒದಗಿಸಲು ಆದೇಶ ನೀಡಲಾಗಿದೆ ಎಂದಿದ್ದಾರೆ. ಈ ಮೂಲಕ ಭಾರತೀಯ ಕ್ರೀಡಾ ಪ್ರಾಧಿಕಾರದ ನಿರ್ದೇಶಕರ ಹೇಳಿಕೆಗೂ ಮತ್ತು ಆದಿತ್ಯನಾಥ್ ಹೇಳಿಕೆ ನಡುವೆ ವ್ಯತ್ಯಾಸ ಇರುವುದು ಕಂಡು ಬಂದಿದೆ.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *