ದೇಶ ತೊರೆಯುವ ಮುನ್ನ ಹಣಕಾಸು ಸಚಿವರನ್ನು ಭೇಟಿಯಾಗಿದ್ದೆ: ವಿಜಯ್ ಮಲ್ಯ ಹೊಸ ಬಾಂಬ್

ದೇಶ ತೊರೆಯುವ ಮುನ್ನ ಜೇಟ್ಲಿ ಜೊತೆ ಮಾತನಾಡಿದ್ದೆ
ಸರ್ಕಾರದ ಆರೋಪಗಳಲ್ಲೆ ನಿರಾಧಾರ
ಲಂಡನ್​ನಲ್ಲಿ ಹೊಸ ಬಾಂಬ್ ಸಿಡಿಸಿದ ವಿಜಯ್ ಮಲ್ಯ

ಲಂಡನ್: ಸಾಲ ಮತ್ತು ಬಡ್ಡಿ ಸೇರಿ 9,000 ರೂ. ಬಾಕಿ ಉಳಿಸಿಕೊಂಡಿರುವ ಆರೋಪದಡಿ ಗಡಿಪಾರು ಭೀತಿಯಲ್ಲಿರುವ ವಿಜಯ್ ಮಲ್ಯ ಕೇಂದ್ರ ಸರ್ಕಾರ ಮತ್ತು ಬ್ಯಾಂಕ್​ಗಳ ವಿರುದ್ಧ ಹೊಸ ಬಾಂಬ್ ಸಿಡಿಸಿದ್ದಾರೆ. ದೇಶ ತೊರೆಯುವ ಮುನ್ನ ಅಂತಿಮ ಒಪ್ಪಂದ ಕುರಿತು ಜೇಟ್ಲಿಯವರೊಂದಿಗೆ ಮಾತನಾಡಿದ್ದ, ಆದರೆ, ಅವರು ಒಪ್ಪಿರಲಿಲ್ಲ ಎಂದಿದಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಮತ್ತೆ ಆರೋಪ – ಪ್ರತ್ಯಾರೋಪದ ಪರ್ವ ಆರಂಭವಾಗಿದ್ದು, ಜೇಟ್ಲಿ ಮಲ್ಯ ಭೇಟಿ ವಿಚಾರವನ್ನು ತಿರಸ್ಕರಿಸಿದ್ದಾರೆ.

ಉದ್ಯಮಿ ವಿಜಯ್ ಮಲ್ಯ ಗಡಿಪಾರು ಅರ್ಜಿಯ ವಿಚಾರಣೆಯನ್ನು ಲಂಡನ್​​ನ ವೆಸ್ಟ್​​ಮಿನಿಸ್ಟರ್ ಕೋರ್ಟ್ ನಡೆಸಿತು. ಈ ವೇಳೆ ವಿಜಯ್ ಮಲ್ಯ ಕೂಡ ಹಾಜರಿದ್ದರು. ಭಾರತ ಸಲ್ಲಿಸಿದ್ದ ಮುಂಬೈನ ಸೆರೆಮನೆಯ ವಿಡಿಯೋವನ್ನು ನ್ಯಾಯಮೂರ್ತಿಗಳು ಮೂರು ಬಾರಿ ವೀಕ್ಷಿಸಿದರು. ಆದರೆ, ಸೆರೆಮನೆಯ ಸೌಕರ್ಯದ ಕುರಿತು ವಿಜಯ್ ಮಲ್ಯ ಪರ ವಕೀಲರು ಅಸಮಧಾನ ವ್ಯಕ್ತಪಡಿಸಿದರು. ಜೊತೆಗೆ, ಐಡಿಬಿಐ ಬ್ಯಾಂಕ್ ಅಧಿಕಾರಿಗಳಿಗೆ ಕಿಂಗ್​​ಫಿಷರ್​​ನಿಂದ ಆಗಿರುವ ನಷ್ಟದ ಕುರಿತು ಸಂಪೂರ್ಣ ಮಾಹಿತಿ ಇದೆ ಎಂದು ವಿಜಯ್ ಮಲ್ಯ ಪರ ವಕೀಲರು ವಾದಿಸಿದರು. ಐಡಿಬಿಐ ಅಧಿಕಾರಿಗಳ ಈಮೇಯ್ಲ್ ಪ್ರಕಾರ, ವಿಜಯ್ ಮಲ್ಯ ನಷ್ಟದಲ್ಲಿರುವುದನ್ನು ಮುಚ್ಚಿಟ್ಟಿರುವ ಕುರಿತು ಸರ್ಕಾರದ ಆರೋಪ ಆಧಾರರಹಿತ ಎಂದು ಸಾಬೀತುಪಡಿಸಿದೆ. ವಿಜಯ್ ಮಲ್ಯ ಬ್ಯಾಂಕುಗಳ ದಿಕ್ಕು ತಪ್ಪಿಸಿಲ್ಲ ಎಂದರು.

2016ರಲ್ಲಿ ದೇಶ ತೊರೆದಿದ್ದ ಮಲ್ಯ, ತಾವು ದೇಶ ಬಿಡುವ ಮುನ್ನ ಹಣಕಾಸು ಸಚಿವ ಅರುಣ್ ಜೇಟ್ಲಿಯವರನ್ನು ಭೇಟಿಯಾಗಿ, ಬಾಕಿ ಪಾವತಿ ಕುರಿತು ಮಾತನಾಡಿದ್ದೆ. ಆದರೆ, ಅನಂತರ ನನ್ನ ಒಪ್ಪಂದ ಪ್ರಸ್ತಾವನೆಯನ್ನು ಬ್ಯಾಂಕ್​ಗಳು ನಿರಾಕರಿಸಿದವು ಎಂದರು. ಈ ಮೂಲಕ ಬಾಕಿ ಪಾವತಿಯಲ್ಲಿ ತಮ್ಮದು ಯಾವುದೇ ರೀತಿಯಲ್ಲೂ ತಪ್ಪಿಲ್ಲ ಎಂದು ಅವರು ವಾದಿಸಿದರು. ಅಲ್ಲದೇ, ನಾನು ಈಗಾಗಲೇ ನನ್ನ ಬಾಕಿಯನ್ನು ಪಾವತಿಸಿದ್ದೇನೆ ಎಂದ ಅವರು, ಸರ್ಕಾರದ ಆರೋಪಗಳನ್ನು ನಿಶ್ಚಿತವಾಗಿ ತಿರಸ್ಕರಿಸುತ್ತೇನೆ. ಈ ಕುರಿತು ಕೋರ್ಟ್ ನಿರ್ಧರಿಸಲಿ ಎಂದರು. ಆದರೆ, ಮಲ್ಯ ಅವರನ್ನು ಭೇಟಿಯಾಗಿರುವ ಸಂಗತಿಯನ್ನು ಹಣಕಾಸು ಸಚಿವ ಅರುಣ್ ಜೇಟ್ಲಿ ನಿರಾಕರಿಸಿದ್ದು, ಅವರು ವಾಸ್ತವವಾಗಿ ಸುಳ್ಳು ಹೇಳುತ್ತಿದ್ದಾರೆ ಎಂದು ಪ್ರತ್ಯಾರೋಪ ಮಾಡಿದ್ದಾರೆ.

ಇನ್ನು ಗಡಿಪಾರು ಕುರಿತು ಪ್ರತಿಕ್ರಿಯಿಸಿದ ವಿಜಯ್ ಮಲ್ಯ, ಕರ್ನಾಟಕ ಹೈಕೋರ್ಟ್​​ನಲ್ಲಿ ಬಾಕಿ ಪಾವತಿಗೆ ಸಿದ್ಧ ಎಂದು ಈಗಾಗಲೇ ತಿಳಿಸಿದ್ದೇನೆ. ಗೌರವಾನ್ವಿತ ನ್ಯಾಯಮೂರ್ತಿಗಳು ಪರಿಗಣಿಸುತ್ತಾರೆ ಎಂದರು. ನಿಸ್ಸಂಶಯವಾಗಿ ತಾವು ಉಳಿಸಿಕೊಂಡಿರುವ ಬಾಕಿ ಪಾವತಿಸಲು ಸಿದ್ಧ ಎಂದು ಪುನರುಚ್ಚರಿಸಿದರು. ನನಗೆ ಯಾವುದೇ ರಾಜಕೀಯ ಸ್ನೇಹಿತರಿಲ್ಲ. ನನ್ನನ್ನು ರಾಜಕೀಯ ಫುಟ್ ಬಾಲ್ ಆಗಿಸಲಾಗಿದೆ ಎಂದು ಅವರು ಆರೋಪಿಸಿದರು.

ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್, ಮಲ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿಯನ್ನು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದೆ. ಒಟ್ಟಿನಲ್ಲಿ ಯುಪಿಎ ಅವಧಿಯಲ್ಲಿ ಸಾಲ ನೀಡಲಾಗಿತ್ತು ಎಂದು ಗೂಬೆ ಕೂರಿಸುತ್ತಿದ್ದ ಎನ್​ಡಿಎ ಸರ್ಕಾರಕ್ಕೆ ಮಲ್ಯ ಹೇಳಿಕೆಯಿಂದ ತೀವ್ರ ಮುಜುಗರ ಉಂಟಾಗಿದೆ.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *