ಗುಲಾಮಗಿರಿ, ಅಸಮಾನತೆಗಾಗಿ ಹೋರಾಡಿದ್ದನ್ನು ಕಂಡಿಲ್ಲ: ಸಂಸದ ಉದಿತ್ ರಾಜ್

ಚಿತ್ರ ಕೃಪೆ: ANI

ದೆಹಲಿ: ನಾನು ಸಮಾನತೆಗಾಗಿ ಹೋರಾಡುವುದನ್ನು ಕಂಡಿದ್ದೇನೆ. ಗುಲಾಮಗಿರಿ, ಅಸಮಾನತೆಗಾಗ ಹೋರಾಟವನ್ನು ಕಂಡಿಲ್ಲ ಎಂದು ಬಿಜೆಪಿ ಸಂಸದ ಉದಿತ್ ರಾಜ್ ಹೇಳಿಕೆ ನೀಡಿದ್ದಾರೆ. ಈ ಮೂಲಕ ಇದೇ ಮೊಟ್ಟ ಮೊದಲ ಬಾರಿ ಸಂಘ ಪರಿವಾರ ಮತ್ತು ಬಿಜೆಪಿಯಿಂದ ಮಹಿಳೆಯರ ದೇಗುಲ ಪ್ರವೇಶಕ್ಕೆ ಸುಪ್ರೀಂ ನೀಡಿರುವ ಅವಕಾಶವನ್ನು ವಿರೋಧಿಸುತ್ತಿರುವವರ ವಿರುದ್ಧ ಹೇಳಿಕೆ ನೀಡಿದಂತಾಗಿದೆ.

ಒಂದೆಡೆ ದೇಶಾದ್ಯಂತ ಮಹಿಳೆಯರ ಮೇಲೆ ಪುರುಷರಿಂದ ದೌರ್ಜನ್ಯ ನಡೆಯುತ್ತಿವೆ. ಇನ್ನೊಂದೆಡೆ ಮಹಿಳೆಯರು ತಮ್ಮ ಸ್ವಾತಂತ್ರ್ಯ, ಹಕ್ಕುಗಳ ವಿರುದ್ಧವೇ ತಾವೇ ಹೋರಾಡುತ್ತಿದ್ದಾರೆ. ಇಂತಹ ಘಟನೆ ಜಗತ್ತಿನಲ್ಲಿ ಇದೇ ಮೊದಲು ನಡೆದಿದೆ ಎಂದ ಅವರು, ಮಹಿಳೆಯರೇ ಮಹಿಳೆಯರ ಪ್ರವೇಶವನ್ನು ತಡೆಯುತ್ತಿದ್ದಾರೆ. ಪುರುಷರಿಗಿಂತ ತಮ್ಮನ್ನು ಅಸಮಾನತೆಯಿಂದ, ಕೀಳರಿಮೆಯಿಂದ ಕಾಣುತ್ತಿದ್ದಾರೆ. ಇದರಲ್ಲಿ ಯಾವ ಮಹತ್ವದ ಅಂಶಗಳಿವೆ? ಎಂದು ಅವರು ಪ್ರಶ್ನಿಸಿದರು.

ದೇಶದಲ್ಲಿ ಏನಾಗುತ್ತಿದೆ ಎಂದು ನನಗೆ ಅರಿವಾಗುತ್ತಿಲ್ಲ. ಇದು ನನ್ನ ವೈಯಕ್ತಿಕ ಹೇಳಿಕೆ, ರಾಜಕೀಯ ಹೇಳಿಕೆಯಲ್ಲ ಎಂದು ಅವರು ಸ್ಪಷ್ಟೀಕರಣವನ್ನೂ ನೀಡಿದ್ದಾರೆ. ಈ ಮೂಲಕ ಭವಿಷ್ಯದಲ್ಲಿ ತಮ್ಮ ಹೇಳಿಕೆ ಕುರಿತು ಏಳಬಹುದಾದ ಭಿನ್ನಾಭಿಪ್ರಾಯಗಳನ್ನು ಈಗಲೇ ಪರಿಹರಿಸಲು ಮುಂದಾಗಿದ್ದಾರೆ.

ಶಬರಿ ಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ದೇಶದ ಸರ್ವೋಚ್ಛ ನ್ಯಾಯಾಲಯ ತೀರ್ಪು ನೀಡುವ ಮೂಲಕ ಅವಕಾಶ ನೀಡಿದೆ. ಇದು ಸಾಮಾನ್ಯ ಪೀಠದ ಆದೇಶವಲ್ಲ. ಪೂರ್ಣಪೀಠದ ಆದೇಶ ಎಂದು ಕಾಂಗ್ರೆಸ್ ನಾಯಕ ಪ್ರಮೋದ್ ತಿವಾರಿ ಹೇಳಿದ್ದಾರೆ. ಈ ವಿಷಯ ಒಂದು ಹಂತ ತಲುಪಿ, ತೀರ್ಪು ನೀಡಲಾಗಿದೆ. ತೀರ್ಪನ್ನು ದೇಶದ ಬಹುತೇಕ ವರ್ಗ ಸ್ವಾಗತಿಸುತ್ತಿದೆ. ಕೆಲವರು ಈ ಆದೇಶವನ್ನು ವಿರೋಧಿಸುತ್ತಿದ್ದಾರೆ. ಆದರೆ, ಈ ಆದೇಶವನ್ನು ನಿಶ್ಚಯವಾಗಿ ಪಾಲಿಸಲೇಬೇಕು ಎಂದು ಅವರು ಹೇಳಿದರು.

ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿಯ ಇನ್ನೊಬ್ಬ ಸಂಸದ ಸುಬ್ರಮಣಿಯನ್ ಸ್ವಾಮಿ, ಮಹಿಳೆಯರ ಪ್ರವೇಶ ಕುರಿತು ಸುಪ್ರೀಂ ಕೋರ್ಟ್ ನಿರ್ಧಾರ ತೆಗೆದುಕೊಂಡಿದೆ. ಆದರೆ, ಈಗ ಮಹಿಳೆಯರ ಪ್ರವೇಶ ನಿರ್ಬಂಧ ನಮ್ಮ ಸಂಪ್ರದಾಯ ಎನ್ನಲಾಗುತ್ತಿದೆ. ಇದೇ ಮಾದರಿಯಲ್ಲಿ ತ್ರಿವಳಿ ತಲಾಖ್ ಕೂಡ ಪರಂಪರೆ. ಪ್ರತಿಯೊಬ್ಬರೂ ತ್ರಿವಳಿ ತಲಾಖ್ ರದ್ದಾದ ಸಂದರ್ಭದಲ್ಲಿ ಶ್ಲಾಘಿಸಿದ್ದಾರೆ. ಈಗ ಅದೇ ಹಿಂದೂಗಳು ರಸ್ತೆಗೆ ಇಳಿದಿದ್ದಾರೆ ಎಂದು ಅವರು ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

0

Leave a Reply

Your email address will not be published. Required fields are marked *