ನೋಟು ನಿಷೇಧದ ಹೆಸರಿನಲ್ಲಿ 3 ಲಕ್ಷ ಕೋಟಿ ರೂ. ಕರ್ಮಕಾಂಡ: ಎಚ್ ಕೆ ಪಾಟೀಲ್

ಅಮಿತ್ ಶಾ, ಜಯ್ ಶಾ ವಿರುದ್ಧ ತನಿಖೆಗೆ ಒತ್ತಾಯಿಸಿದ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ

ನೋಟು ನಿಷೇಧದ ನಂತರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಿಂದ ಅವ್ಯಹಾರದ ಆರೋಪ

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಕ್ರಮ ಕೈಗೊಳ್ಳುವಂತೆ ಪತ್ರ ಬರೆದ ಎಚ್ ಕೆ ಪಾಟೀಲ್

ಬೆಂಗಳೂರು: ಗರಿಷ್ಠ ಮುಖಬೆಲೆಯ ನೋಟು ಅಮಾನ್ಯೀಕರಣ ಸ್ವತಂತ್ರ ಭಾರತದ ಅತಿ ದೊಡ್ಡ ಹಗರಣವಾಗಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಚ್ ಕೆ ಪಾಟೀಲ್ ಆರೋಪಿಸಿದರು. 500 ರೂ. ಮತ್ತು 1,000 ರೂ. ಮುಖಬೆಲೆಯ ನೋಟು ನಿಷೇಧದ ಹೆಸರಿನಲ್ಲಿ ದೇಶದ ಅರ್ಥ ವ್ಯವಸ್ಥೆಯನ್ನು ಬುಡಮೇಲು ಮಾಡುವ ಜೊತೆಗೆ ಆರ್ಥಿಕ ಅಪರಾಧೀಕರಣದ ಮೂಲಕ ಬಡವರ ಮೇಲೆ ದಾಳಿ ನಡೆಸಲಾಗಿದೆ. ನೋಟು ನಿಷೇಧವು ಶ್ರೀಮಂತರು ತಮ್ಮ ಬಳಿಯಿದ್ದ ಅಕ್ರಮ ಹಣವನ್ನು ಕಾನೂನುಬದ್ಧವಾಗಿ ಸಕ್ರಮ ಮಾಡಿಕೊಳ್ಳಲು ನೀಡಿದ ಅವಕಾಶವಾಯಿತು ಎಂಬಂತೆ ದುರ್ವ್ಯವಹಾರ ನಡೆದಿದೆ ಎಂದರು.

ನೋಟು ನಿಷೇಧ ಪ್ರಕ್ರಿಯೆ ಉದ್ಯಮಪತಿಗಳ ಬಳಿ ಇದ್ದ ಅಕ್ರಮ ಸಂಪತ್ತನ್ನು ಸಕ್ರಮಗೊಳಿಸುವ ವ್ಯವಸ್ಥಿತ ಪ್ರಕರಣ ಒಂದು ಬೆಳಕಿಗೆ ಬಂದಿದೆ. ಈ ಕುಕೃತ್ಯ ಬಿಜೆಪಿ ಕೇಂದ್ರ ಕಚೇರಿಯಲ್ಲೇ ಸಿದ್ಧಗೊಂಡಿತು ಎನ್ನುವ ಆಘಾತಕಾರಿಯಾದ ಅಂಶ ಈಗ ಬೆಳಕಿಗೆ ಬಂದಿದೆ. ದೇಶದ ಕೆಲವು ಹೆಸರಾಂತ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಉತ್ಸಾಹಿ, ಕ್ರಿಯಾಶೀಲ ತನಿಖಾ ವರದಿಗಾರರು ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ಇಡೀ ಕರ್ಮಕಾಂಡ ಅನಾವರಣಗೊಂಡಿದೆ. ಈ ಕರ್ಮಕಾಂಡದ 18 ವಿಡಿಯೋಗಳು www.tnn.world ನಲ್ಲಿ ಲಭ್ಯವಿವೆ ಎಂದು ಅವರು ವಿಡಿಯೋಗಳನ್ನು ಪ್ರದರ್ಶಿಸಿದರು. ಬೆಂಗಳೂರಿನ ಕ್ಯಾಪಿಟಲ್ ಹೋಟೆಲ್​ನಲ್ಲಿ ನಡೆದ ಮಾಧ್ಯಮ ಗೋಷ್ಠಿಯಲ್ಲಿ ವಿ ಆರ್ ಸುದರ್ಶನ್ ಮತ್ತು ನಂಜಯ್ಯನಮಠ ಕೂಡ ಹಾಜರಿದ್ದರು.

www.tnn.world ಬಿಡುಗಡೆ ಮಾಡಿರುವ ಮೊದಲ ವಿಡಿಯೋದಲ್ಲಿ ವಿವರಿಸಿರುವಂತೆ, ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಉಸ್ತುವಾರಿಯಲ್ಲೇ, ಜಯ್ ಶಾ ಪಾಲ್ಗೊಳ್ಳುವಿಕೆಯ ಮೂಲಕ ವಹಿವಾಟು ನಡೆದಿರುವುದು ಸ್ಪಷ್ಟವಾಗಿದೆ. ಇದಕ್ಕಾಗಿ ಕೇಂದ್ರ ಗುಪ್ತಚರ ಸಂಸ್ಥೆ (RAW) ಮೊದಲಾದ ಇಲಾಖೆಗಳನ್ನು ವ್ಯವಸ್ಥಿತವಾಗಿ ದುರ್ಬಳಕೆ ಮಾಡಲಾಯಿತು. ರಾ ಅಧಿಕಾರಿ ರಾಹುಲ್ ರಥೇರ್ಕರ್ ಜೊತೆ ಟಿ ಎನ್ ಎನ್ ವರ್ಲ್ಡ್ ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ಮೂರು ಲಕ್ಷ ಕೋಟಿ ರೂಪಾಯಿ ನೋಟು ವಿನಿಮಯದ ಕರಾಳ ಚಿತ್ರಣ ಹೊರಬಿದ್ದಿದೆ. ಈ ಸಂಗತಿ ವಿಡಿಯೋದಲ್ಲಿ ದಾಖಲಾಗಿದೆ.

1 ಲಕ್ಷ ಕೋಟಿ ರೂಪಾಯಿಗಳ ಮೂರು ಸರಣಿ ನೋಟುಗಳನ್ನು ವಿದೇಶದಲ್ಲಿ ಮುದ್ರಣ ಮಾಡಲಾಯಿತು. ವಿದೇಶದಲ್ಲಿ ಮುದ್ರಣಗೊಂಡ ಮೂರು ಲಕ್ಷ ಕೋಟಿ ರೂಪಾಯಿಗಳನ್ನು ಮೂರು ಕಂತುಗಳಲ್ಲಿ ವಾಯುಪಡೆಗೆ ಸೇರಿದ ಸರಕು – ಸಾಗಣೆ ವಿಮಾನಗಳ ಮೂಲಕ ದೆಹಲಿಯ ಹಿಂಡನ್ ವಾಯುನೆಲೆಗೆ ತರಲಾಯಿತು ಎಂಬ ಸಂಗತಿ ವಿಡಿಯೋದಲ್ಲಿ ಸ್ಪಷ್ಟವಾಗಿದೆ ಎಂದು ಎಚ್ ಕೆ ಪಾಟೀಲ್ ಹೇಳಿದರು.

ನೋಟುಗಳ ಸಾಗಾಣಿಕೆ ಮತ್ತು ವಿನಿಮಯ ಪ್ರಕ್ರಿಯೆ ಅಮಿತ್ ಶಾ ಉಸ್ತುವಾರಿಯಲ್ಲೇ ನಡೆಯುತ್ತದೆ. ಇದಕ್ಕಾಗಿ ವಿನಿಮಯ ವ್ಯವಹಾರದ ಕಮೀಷನ್ ಶೇ. 15ರಿಂದ ಶೇ. 40ಕ್ಕೆ ಹೆಚ್ಚಳವಾಯಿತು ಎಂದು ವಿಡಿಯೊದಲ್ಲಿನ ವ್ಯಕ್ತಿ ವಿವರಿಸುತ್ತಾರೆ. ಜೊತೆಗೆ ಈ ಎಲ್ಲ ಅವ್ಯವಹಾರಕ್ಕಾಗಿ ಪ್ರಧಾನಿ ಕಾರ್ಯಾಲಯದಲ್ಲಿ ನಿಪುಣ್ ಶರಣ್ ಎಂಬ ಹೆಸರಿನ (ಕೋಡ್ ನೇಮ್) ವ್ಯಕ್ತಿಯ ನೇತೃತ್ವದಲ್ಲಿ ಒಂದು ಪ್ರತ್ಯೇಕ ವಿಭಾಗ ರಚನೆ ಮಾಡಲಾಯಿತು. ಪ್ರಧಾನಿ ಸಚಿವಾಲಯದ ಈ ವಿಭಾಗ ರಿಸರ್ವ್ ಬ್ಯಾಂಕ್ ಜೊತೆ ಸಂಪರ್ಕ ಸಾಧಿಸಿ, ಉಸ್ತುವಾರಿ ನೋಡಿಕೊಳ್ಳಲು ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ 26 ಜನರನ್ನು ನೇಮಕ ಮಾಡುತ್ತದೆ. ಈ 26 ಜನ ತಮ್ಮ ದೈನಂದಿನ ಚಟುವಟಿಕೆಗಳ ಕುರಿತು ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಜಯ್ ಶಾ ಮತ್ತು ಪ್ರಧಾನಿ ಸಚಿವಾಲಯದ ನಿಪುಣ್ ಶರಣ್ ಗೆ ವರದಿ ಮಾಡುಕೊಳ್ಳುತ್ತಿದ್ದರು ಎಂಬುದನ್ನು ರಾ ಅಧಿಕಾರಿ ರಾಹುಲ್ ರರ್ಥೇಕರ್ ಹೇಳಿರುವ ಅಂಶವನ್ನು ವಿಡಿಯೋದಲ್ಲಿ ನೋಡಬಹುದು ಎಂದರು.

ವಿದೇಶದಲ್ಲಿ ಮುದ್ರಿಸಲ್ಪಟ್ಟ ಹಣವನ್ನು ವಾಯುಪಡೆ ವಿಮಾನಗಳ ಮೂಲಕ ಹಿಂಡೇನ್ ವಾಯುನೆಲೆಗೆ ತರಲಾಗುತ್ತದೆ. ಅಲ್ಲಿಂದ ವಿವಿಧ ಇಲಾಖೆಗಳ ಅಧಿಕಾರಿಗಳ ಮೂಲಕ ಮಹಾರಾಷ್ಟ್ರದ ಗೋದಾಮಿಗೆ ಸಾಗಿಸಲಾಗುತ್ತದೆ. ಅಲ್ಲಿಂದ ವಿವಿಧ ಬ್ಯಾಂಕ್​ಗಳಿಗೆ ಹಣ ವರ್ಗಾವಣೆಯಾಗುತ್ತದೆ ಎಂಬ ಸಂಗತಿ ವಿಡಿಯೋದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ ಎಂದ ಅವರು, ಸ್ವತಂತ್ರ ಭಾರತದ ಇತಿಹಾಸದಲ್ಲೇ ಇದನ್ನು ಅತ್ಯಂತ ದೊಡ್ಡ ಹಗರಣವೆಂದೇ ಕರೆಯಬೇಕಾಗುತ್ತದೆ. ಆಡಳಿತ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಕೃಪಾಶೀರ್ವಾದದಿಂದಲೇ ಈ ದುರ್ವ್ಯವಹಾರ ನಡೆದಿರುವುದು ವಿಡಿಯೋದ ಮಾಹಿತಿಯಲ್ಲಿ ಸ್ಪಷ್ಟವಾಗಿದೆ. ಇಂತಹ ದುಷ್ಕೃತ್ಯದ ಮೂಲಕ ದೇಶದ ಅರ್ಥವ್ಯವಸ್ಥೆಯ ಮೇಲೆ ಗದಾಪ್ರಹಾರ ಮಾಡಲಾಗಿದೆ ಎಂದರು.

ಕುಟುಕು ಕಾರ್ಯಾಚರಣೆಯ ದೃಶ್ಯಗಳು, ಹಣಕಾಸಿನ ದುರ್ವ್ಯವಹಾರದ ವಿವರಗಳನ್ನು ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿಗಳ ಅವಗಾಹನೆಗೆ ಕಳುಹಿಸಿದ್ದೇವೆ. ಜೊತೆಗೆ, ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿಗಳ ಸಹೋದ್ಯೋಗಿ ನ್ಯಾಯಮೂರ್ತಿಗಳಿಗೂ ಕಳುಹಿಸಿದ್ದೇವೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಪೂರ್ಣಪ್ರಮಾಣದ, ಅತ್ಯಂತ ಉನ್ನತಮಟ್ಟದ ತನಿಖೆ ನಡೆಸಿ, ಸತ್ಯವನ್ನು ಕಂಡುಹಿಡಿದು, ಸೂಕ್ತ ಕ್ರಮ ಜರುಗಿಸಬೇಕೆಂದು ಕೋರಿದ್ದೇವೆ. ಸುಪ್ರೀಂ ಕೋರ್ಟ್ ನ ಮುಖ್ಯನಾಯಮೂರ್ತಿಗಳು ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಸೂಕ್ತವೆನಿಸುವ ಕ್ರಮಕ್ಕೆ ಆದೇಶಿಸಬೇಕು. ಈ ಹಗರಣವನ್ನು ರಾಷ್ಟ್ರದ ಹಿತಾಸಕ್ತಿಯ ವಿಶೇಷ ಪ್ರಕರಣವೆಂದು ಪರಿಗಣಿಸಿ, ಅಗತ್ಯ ಕ್ರಮವನ್ನು ಕೈಗೊಳ್ಳಬೇಕೆಂದು ಮನವಿ ಮಾಡಿದ್ದೇವೆ ಎಂದು ಮಾಹಿತಿ ನೀಡಿದರು.

ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಹಲವು ಆತಂಕಗಳು ನಮ್ಮನ್ನು ಕಾಡುತ್ತಿವೆ ಎಂದ ಅವರು, ನ್ಯಾಯಮೂರ್ತಿ ಲೋಯಾ ಪ್ರಕರಣದಲ್ಲಿ ಸಂಭವಿಸಿದ ಸಾವು ಮತ್ತು ಮಧ್ಯಪ್ರದೇಶದ ವ್ಯಾಪಂ ಹಗರಣದ ಸಾಕ್ಷಿಗಳಿಗೆ ಬಂದೊದಗಿದ ಗತಿಯೇ ಈ ಕುಟುಕು ಕಾರ್ಯಾಚರಣೆಯಲ್ಲಿರುವ ವ್ಯಕ್ತಿಗಳಿಗೆ ಬರಬಹುದೆಂಬ ಭಯ ಉಂಟಾಗಿದೆ. ಆದ್ದರಿಂದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಹಗರಣದ ಯಾವುದೇ ದಾಖಲೆ ನಾಶವಾಗದಂತೆ ನ್ಯಾಯಾಲಯದ ನಿಗಾದಲ್ಲಿ ಅತ್ಯುನ್ನತ ಮಟ್ಟದ ತನಿಖೆಗಾಗಿ ಆದೇಶಿಸುವಂತೆ ಪ್ರಾರ್ಥಿಸಿದ್ದೇನೆ. ಕಾರ್ಯಾಚರಣೆಯಲ್ಲಿ ಕಾಣಿಸಿಕೊಂಡಿರುವ ವ್ಯಕ್ತಿಗಳಿಗೆ ಯಾವುದೇ ಹಾನಿಯಾಗದಂತೆ ಅತ್ಯುನ್ನತ ಭದ್ರತೆ ಒದಸಗಿಸಲು ಆದೇಶ ನೀಡಬೇಕು. ಈ ಹಗರಣದ ಬಗ್ಗೆ ಸರ್ವೋಚ್ಛ ನ್ಯಾಯಾಲಯದ ಮೇಲುಸ್ತುವಾರಿಯಲ್ಲಿ ಕಾನೂನು ಪ್ರಕ್ರಿಯೆಯ ಮೂಲಕ ತ್ವರಿತ ಹಾಗೂ ಉನ್ನತಮಟ್ಟದ ಪಾರದರ್ಶಕ ತನಿಖೆಗೆ ಆದೇಶಿಸಬೇಕು ಎಂದು ಪ್ರಾರ್ಥಿಸಿದ್ದೇನೆ ಎಂದರು.

1+

Leave a Reply

Your email address will not be published. Required fields are marked *