ಆಂಗ್ಲರ ನಾಡಲ್ಲಿ ಹಿಟ್​ಮ್ಯಾನ್ ಬ್ಯಾಟಿಂಗ್​ ಪ್ರತಾಪ

ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧ ಟಿ-20 ಸರಣಿ ಗೆದ್ದಿರುವುದು ಅಭಿಮಾನಿಗಳಿಗೆ ಭಾರಿ ಖುಷಿ ನೀಡಿದೆ. ಅದರಲ್ಲೂ ರೋಹಿತ್​ ಶರ್ಮಾ ಫಾರ್ಮ್​ಗೆ ಮರಳಿರುವುದು ಅವರ ಅಭಿಮಾನಿಗಳಿಗೆ ಡಬಲ್​ ಖುಷಿಯಾಗಿದೆ. ಬಹಳ ದಿನಗಳ ನಂತರ ತಮ್ಮ ನೈಜ ಆಟವಾಡಿದ ರೋಹಿತ್​ ಆಟಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗ್ತಿದೆ.

ಕೊನೆಗೂ ಟೀಮ್​ ಇಂಡಿಯಾ ಅಭಿಮಾನಿಗಳ ನಿರೀಕ್ಷೆಯನ್ನ ಹುಸಿಗೊಳಿಸಲಿಲ್ಲ. ವಿರಾಟ್ ಸೇನೆ ಚುಟುಕು ಕ್ರಿಕೆಟ್​ನಲ್ಲಿ ಆಂಗ್ಲರನ್ನು ಅವರದ್ಧೇ ನೆಲದಲ್ಲಿ ಬಗ್ಗು ಬಡಿಯುವ ಮೂಲಕ ಮಾರ್ಗನ್​ ಪಡೆಗೆ ಭಾರಿ ಆಘಾತ ನೀಡಿದೆ. ಈ ಮೂಲಕ ಆಸೀಸ್​ ವಿರುದ್ದ ಏಕದಿನ ಸರಣಿ ಕ್ಲೀನ್​ ಸ್ವೀಪ್ ಮಾಡಿ ಬೀಗುತ್ತಿದ್ದ ಇಂಗ್ಲೆಂಡ್​ನ ಅಹಂಕಾರವನ್ನು ಮಣ್ಣಾಗಿಸಿದೆ. ಇದರೊಂದಿಗೆ ಎರಡು ತಿಂಗಳ ಇಂಗ್ಲೆಂಡ್​ ಅಭಿಯಾನವನ್ನ ಭರ್ಜರಿಯಾಗಿ ಆರಂಭಿಸಿದೆ.

ಮೂರು ಪಂದ್ಯಗಳ ಸರಣಿಯಲ್ಲಿ ಟೀಮ್ ಇಂಡಿಯಾದ ಬಹುತೇಕ ಆಟಗಾರರು ತಮ್ಮ ಸಾಮರ್ಥ್ಯಕ್ಕೆ ತಕ್ಕ ಆಟವಾಡಿ ತಂಡದ ಯಶಸ್ಸಿಗೆ ಕೊಡುಗೆ ನೀಡಿದ್ರು. ಅದರಲ್ಲೂ ಹಿಟ್​ಮ್ಯಾನ್​ ರೋಹಿತ್​ ಶರ್ಮಾ ತಮ್ಮ ಬ್ಯಾಟಿಂಗ್ ಪ್ರತಾಪ ತೋರಿಸಿ, ತಮ್ಮ ಆಯ್ಕೆ, ಫಿಟ್​ನೆಸ್​ ಬಗ್ಗೆ ಕುಹಕವಾಡಿದ್ದವರಿಗೆ ಮತ್ತೊಮ್ಮೆ ಬ್ಯಾಟ್​ನಿಂದಲೇ ಉತ್ತರಿಸಿದ್ರು.

ದಕ್ಷಿಣ ಆಫ್ರಿಕಾ ಪ್ರವಾಸ ಸೇರಿದಂತೆ ಐಪಿಎಲ್​ನಲ್ಲಿ ಮುಗ್ಗರಿಸಿದ್ದ ರೋಹಿತ್​ ಆಟದ ಬಗ್ಗೆ ಹಲವು ವಿಮರ್ಶೆಗಳು ಕೇಳಿಬಂದಿದ್ವು. ಆದ್ರೆ ರೋಹಿತ್​ ಇಂಗ್ಲೆಂಡ್​​ನ​ ಬೌನ್ಸಿ ಪಿಚ್​ಗಳಲ್ಲಿ ಅಬ್ಬರಿಸಿ ಬೊಬ್ಬಿರಿದ್ರು. ಅಲ್ಲದೇ ಕೊನೆಯ ಟಿ-20 ಪಂದ್ಯದಲ್ಲಿ ಅದ್ಭುತ ಶತಕ ಸಿಡಿಸಿ ಸಿಂಗಲ್​ ಹ್ಯಾಂಡ್​ನಿಂದ ತಂಡಕ್ಕೆ ಗೆಲುವಿನ ಮಾಲೆ ತೊಡಿಸಿದ್ರು. ಅಲ್ಲದೇ ಸರಣಿ ಶ್ರೇಷ್ಠ ಪ್ರಶಸ್ತಿಗೂ ಭಾಜನರಾದ್ರು.

ಆಂಗ್ಲರ ವಿರುದ್ಧದ ಚುಟುಕು ಸರಣಿಯಲ್ಲಿ ರೋಹಿತ್​ ಫಾರ್ಮ್​​ಗೆ ಮರಳುವುದರೊಂದಿಗೆ ಹಲವು ದಾಖಲೆಗಳನ್ನ ನಿರ್ಮಿಸಿದ್ದಾರೆ. ಬ್ರಿಸ್ಟಲ್​ ಅಂಗಳದಲ್ಲಿ ನಡೆದ ಕೊನೆಯ ಪಂದ್ಯದಲ್ಲಿ ರೋಹಿತ್​ ಶತಕ ಸಿಡಿಸಿ ಟಿ-20 ಯಲ್ಲಿ ಮೂರನೇ ಶತಕ ಸಿಡಿಸಿದ ಸಾಧನೆ ಮಾಡಿದ್ರು. ಈ ಮೂಲಕ ನ್ಯೂಜಿಲ್ಯಾಂಡ್ ಆಟಗಾರ ಕಾಲಿನ್​ ಮುನ್ರೋರ ದಾಖಲೆಯನ್ನ ಸರಿಗಟ್ಟಿದ್ರು.

ಜೊತೆಗೆ ಒಟ್ಟಾರೆ ಟಿ-20 ಪಂದ್ಯಗಳಲ್ಲಿ ವಿಂಡೀಸ್ ದೈತ್ಯ ಕ್ರಿಸ್​ಗೇಲ್​ ನಂತರ, ಅತಿ ಹೆಚ್ಚು ಶತಕ ಬಾರಿಸಿದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೂ ರೋಹಿತ್​ ಪಾತ್ರರಾಗಿದ್ದಾರೆ. ಗೇಲ್​ ತಮ್ಮ ಟಿ-20 ಕರಿಯರ್​ 21 ಶತಕಗಳನ್ನ ಸಿಡಿಸಿ ಮೊದಲ ಸ್ಥಾನದಲ್ಲಿದ್ದಾರೆ. ರೋಹಿತ್​ ಈವರೆಗೂ 5 ಶತಕ ಸಿಡಿಸಿ ಎರಡನೇ ಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ.

ಅಷ್ಟೇ ಅಲ್ಲ. ಕ್ರಿಕೆಟ್​ ಮೂರು ಮಾದರಿಗಳಲ್ಲೂ ಮೂರು ಶತಕ ದಾಖಲಿಸಿದ ಏಕೈಕ ಬ್ಯಾಟ್ಸ್​ಮನ್​ ಎಂಬ ಕೀರ್ತಿಗೂ ರೋಹಿತ್​ ಪಾತ್ರರಾಗಿದ್ದಾರೆ. ರೋಹಿತ್ ಇದೇ ಪಂದ್ಯದಲ್ಲಿ 2000 ರನ್​ ಕ್ಲಬ್​ ಸೇರಿದ ಸಾಧನಗೈದ್ರು. ಇದರೊಂದಿಗೆ ಟೀಮ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನಂತರ ಈ ಸಾಧನೆ ಮಾಡಿದ ಭಾರತದ ಎರಡನೇ ಆಟಗಾರ ಎನಿಸಿಕೊಂಡಿದ್ದಾರೆ. ಅದೇನೆ ಇರಲಿ, ರೋಹಿತ್​ ಆಂಗ್ಲರ ವಿರುದ್ಧದ ಏಕದಿನ ಸರಣಿಯಲ್ಲೂ ಇದೇ ಪ್ರದರ್ಶನ ನೀಡಲಿ ಅನ್ನೋದು ಅಭಿಮಾನಿಗಳ ಆಶಯ.

0

Leave a Reply

Your email address will not be published. Required fields are marked *