ಬಾಕ್ಸ್ ಆಫೀಸ್​ನಲ್ಲಿ ಕಿರಿಕ್ ಚಮಕ್

2016ರ ಕೊನೇ ಚಿತ್ರವಾಗಿ ತೆರೆಕಂಡಿದ್ದ ರಕ್ಷಿತ್ ಶೆಟ್ಟಿ ಅಭಿನಯದ ‘ಕಿರಿಕ್ ಪಾರ್ಟಿ’, ಸ್ಯಾಂಡಲ್​ವುಡ್​ಗೆ ಹೊಸ ವರ್ಷಕ್ಕೆ ಹೊಸ ಉತ್ಸಾಹವನ್ನೇ ತಂದಿದೆ. ಡಿ. 30ರಂದು ರಿಲೀಸ್ ಆಗಿದ್ದ ‘ಕಿರಿಕ್ ಪಾರ್ಟಿ’ ಮೊದಲ ಮೂರು ದಿನಕ್ಕೆ ಬರೋಬ್ಬರಿ 6 ಕೋಟಿ ರೂ. ಗಳಿಸಿದೆ. ಇದೇ ಪ್ರಮಾಣದ ಕಲೆಕ್ಷನ್ ಮುಂದುವರಿದರೆ, ಮೊದಲ ವಾರಕ್ಕೆ ಏನಿಲ್ಲವೆಂದರೂ 12 ಕೋಟಿ ರೂ. ಗ್ಯಾರಂಟಿ ಎಂಬುದು ಗಾಂಧಿನಗರದ ಲೆಕ್ಕಾಚಾರ.

ಮೊದಲ ದಿನವೇ ಅತಿ ಹೆಚ್ಚು ಸ್ಕ್ರೀನ್​ಗಳಲ್ಲಿ ಸಿನಿಮಾ ರಿಲೀಸ್ ಮಾಡಬೇಕೆನ್ನುವುದು ಗಾಂಧಿನಗರದ ಸದ್ಯದ ಸಂಪ್ರದಾಯ. ಆದರೆ ಸಾಕಷ್ಟು ನಿರೀಕ್ಷೆಗಳ ನಡುವೆಯೂ ‘ಕಿರಿಕ್ ಪಾರ್ಟಿ’ ತೆರೆಕಂಡಿದ್ದು ಬರೀ 120 ಸ್ಕ್ರೀನ್​ಗಳಲ್ಲಿ ಮಾತ್ರ. ಅದರಲ್ಲಿ 40 ಮಲ್ಟಿಪ್ಲೆಕ್ಸ್ ಪರದೆಗಳು ಸೇರಿವೆ. ಮೊದಲ ಮೂರು ದಿನ ಎಲ್ಲ ಕಡೆಯೂ ಹೌಸ್​ಫುಲ್ ಪ್ರದರ್ಶನ ಕಂಡಿರುವುದು ಚಿತ್ರದ ಹೆಚ್ಚುಗಾರಿಕೆ. ಅಲ್ಲದೆ, ಬಿಡುಗಡೆಗೂ ಮೊದಲೇ ‘ಕಿರಿಕ್ ಪಾರ್ಟಿ’ಯ 27 ಸಾವಿರ ಟಿಕೆಟ್ ಸೋಲ್ಡ್​ಔಟ್ ಆಗಿದ್ದು ಕೂಡ ಸ್ಯಾಂಡಲ್​ವುಡ್ ಮಟ್ಟಿಗೆ ಹೊಸ ದಾಖಲೆ. ಪರಭಾಷಾ ಸಿನಿಮಾಗಳಿಗೆ ಮಾತ್ರ ಮಲ್ಟಿಪ್ಲೆಕ್ಸ್​ನಲ್ಲಿ ಹೆಚ್ಚು ಸ್ಕ್ರೀನ್ ಸಿಗುವುದು ವಾಡಿಕೆಯಾಗಿತ್ತು. ಆದರೆ ‘ಕಿರಿಕ್ ಪಾರ್ಟಿ’ ಚಿತ್ರಕ್ಕೆ ಕೆಲ ಮಲ್ಟಿಪ್ಲೆಕ್ಸ್​ಗಳಲ್ಲಿ ದಿನವೊಂದಕ್ಕೆ ಹತ್ತಕ್ಕೂ ಅಧಿಕ ಶೋ ಸಿಕ್ಕಿದೆ. ಸಾಮಾನ್ಯವಾಗಿ ಸ್ಟಾರ್ ನಟರ ಸಿನಿಮಾಗಳು ಮಾತ್ರ ಮೊದಲ ವಾರ ಈ ಪ್ರಮಾಣದ ಕಲೆಕ್ಷನ್ ಮಾಡುವುದು ಚಾಲ್ತಿಯಲ್ಲಿತ್ತು. ಆದರೆ ‘ಕಿರಿಕ್ ಪಾರ್ಟಿ’ಯಲ್ಲಿ ರಕ್ಷಿತ್ ಶೆಟ್ಟಿ ಮತ್ತು ಅಚ್ಯುತ್​ಕುಮಾರ್ ಹೊರತಾಗಿ ಮಿಕ್ಕ ಕಲಾವಿದರೆಲ್ಲ ಹೊಸಬರು ಅನ್ನೋದು ವಿಶೇಷ. ಅಲ್ಲಿಗೆ, ಕನ್ನಡ ಪ್ರೇಕ್ಷಕನಿಗೆ ಸಿನಿಮಾದಲ್ಲಿ ಬರೀ ಮನರಂಜನೆ ಮಾತ್ರ ಮುಖ್ಯವಾಗುತ್ತದೆಯೇ ಹೊರತು ತಾರಾಗಣವಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಈ ಚಿತ್ರಕ್ಕೆ ರಕ್ಷಿತ್ ಶೆಟ್ಟಿ ಕಥೆ ಬರೆಯುವುದರ ಜತೆಗೆ ನಿರ್ವಣದಲ್ಲೂ ಪಾಲುದಾರರಾಗಿದ್ದಾರೆ. ‘ಕಿರಿಕ್ ಪಾರ್ಟಿ’ಯಲ್ಲಿನ ಅವರ ಎರಡು ಶೇಡ್​ನ ಪಾತ್ರ ಪ್ರೇಕ್ಷಕರಿಗೆ ಇಷ್ಟವಾಗಿದ್ದು, ನಾಯಕಿಯರಾಗಿ ಕಾಣಿಸಿರುವ ರಶ್ಮಿಕಾ ಮಂದಣ್ಣ ಮತ್ತು ಸಂಯುಕ್ತಾ ಹೆಗಡೆ ಅವರ ಅಭಿನಯಕ್ಕೂ ಪ್ರಶಂಸೆಗಳು ಸಿಗುತ್ತಿವೆ. ‘ರಿಕ್ಕಿ’ ಖ್ಯಾತಿಯ ನಿರ್ದೇಶಕ ರಿಷಬ್ ಶೆಟ್ಟಿ ಈ ಚಿತ್ರಕ್ಕೆ ಆಕ್ಷನ್-ಕಟ್ ಹೇಳಿದ್ದು, ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ ಮೋಡಿ ಮಾಡಿದೆ.

0

Leave a Reply

Your email address will not be published. Required fields are marked *