ಭೀಮಾತೀರದಲ್ಲಿ ಮತ್ತೆ ಮೊಳಗಿದ ಗುಂಡಿನ ಸದ್ದು

ಭೀಮಾತೀರದಲ್ಲಿ ಮತ್ತೆ ಗುಂಡಿನ ಸದ್ದು ಮೊಳಗಿದೆ. ಕೊಲೆ ಪ್ರಕರಣದಲ್ಲಿ ಪರಾರಿಯಾಗಿದ್ದ ಆರೋಪಿ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. ಕೊಲೆ ಆರೋಪಿಯ ಬಂಧನಕ್ಕೆ ತೆರಳಿದ್ದಾಗ ಆರೋಪಿ ಪೊಲೀಸರಿಗೆ ಚಾಕುವಿನಿಂದ ಇರಿದು ಪರಾರಿಯಾಗಲು ಯತ್ನಿಸಿದ್ದಾನೆ.. ಈ ವೇಳೆ ಪೊಲೀಸರು ಆತ್ಮರಕ್ಷಣೆಗಾಗಿ ಆರೋಪಿ ಕಾಲಿಗೆ ಫೈರಿಂಗ್ ಮಾಡಿದ್ದಾರೆ.

2016 ಮೇ 29ರಂದು ನಡೆದಿದ್ದ ಕೊಲೆ ಕೇಸ್ ನಲ್ಲಿ ಬೇಕಾಗಿದ್ದ ಆರೋಪಿ ಯುನೂಸ್ ಪಟೇಲ್(25) ನವಭಾಗದಲ್ಲಿದ್ದಾನೆ ಎಂಬ ಖಚಿತ ಮಾಹಿತಿ ಮೇರೆಗೆ ಗಾಂಧಿಚೌಕ ಠಾಣೆ ಪೊಲೀಸರು ದಾಳಿ ನಡೆಸಿದ್ದಾರೆ. ಬೆಳಗಿನ ಜಾವ ನಾಲ್ಕು ಗಂಟೆ ವೇಳೆಗೆ ಮನೆಯಲ್ಲಿದ್ದ ಆರೋಪಿ ಯುನೂಸ್ ಪಟೇಲ್ ಗಾಂಧಿಚೌಕ ಪಿ ಎಸ್ ಐ ಆರೀಫ್ ಮುಶಾಪುರೆ ಹಾಗೂ ಪೇದೆ ಮಾದನಶೆಟ್ಟಿ ಮೇಲೆ ಚಾಕು ಇರಿದು ಪರಾರಿಯಾಗಲು ಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿದ ಪಿ ಎಸ್ ಐ ಆರೀಫ್ ಮುಶಾಪುರೆ ತಪ್ಪಿಸಿಕೊಳ್ಳದಂತೆ ಎಚ್ಚರಿಕೆ ನೀಡಿದ್ದಾರೆ. ಆದ್ರೆ ಆರೋಪಿ ಮತ್ತೆ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದಾಗ ಆತ್ಮರಕ್ಷಣೆಗಾಗಿ ಪಿ ಎಸ್ ಐ ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ. ಇದೀಗ ಪಿ ಎಸ್ ಐ ಆರೀಫ್ ಮುಶಾಪುರೆ ಅವರ ಎಡಗೈಗೆ ಗಾಯವಾಗಿದೆ, ಪೇದೆ ಮಾದನಶೆಟ್ಟಿಗೆ ಕೈಗೆ ಗಾಯ ಹಾಗೂ ಆರೋಪಿ ಯುನೂಸ್ ಪಟೇಲ್ ಎಡಗಾಲಿಗೆ ಗುಂಡು ತಗುಲಿದ್ದು ಈ ಮೂವರನ್ನೂ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಆರೋಪಿ 2016 ಮೇ 29ರಂದು ಗಾಂಜಾ ಮತ್ತಿನಲ್ಲಿ ರಸ್ತೆ ಬದಿಯಲ್ಲಿ ಮಲಗಿದ್ದ ಇಟ್ಟಂಗಿಹಾಳ ಗ್ರಾಮದ ನಿವಾಸಿ ಶ್ರೀಶೈಲ್ ಹಟ್ಟಿ ಎಂಬಾತನ ಕೊಲೆ ಮಾಡಿದ್ದ ವಿಡಿಯೋ ಸಹ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈತನ ಮೇಲೆ ಒಟ್ಟು ನಾಲ್ಕು ಪ್ರಕರಣಗಳು ಗಾಂಧಿಚೌಕ ಠಾಣೆಯಲ್ಲಿ ಇವೆ ಎಂದು ವಿಜಯಪುರ ಎಸ್ ಪಿ ಕುಲದೀಪ್ ಜೈನ್ ತಿಳಿಸಿದ್ದಾರೆ.

0

Leave a Reply

Your email address will not be published. Required fields are marked *