ಇಸ್ಮತ್ ಚುಘ್​ತಾಯಿಗೆ ಗೂಗಲ್ ಡೂಡಲ್ ಗೌರವ

ಭಾರತೀಯ ಸ್ತ್ರೀ ಸಂವೇದನೆಯ ಆರಂಭದ ಲೇಖಕಿ ಇಸ್ಮತ್ ಚುಘ್​ತಾಯಿಯವರ 107ನೇ ಜನ್ಮ ದಿನಾಚರಣೆ ಪ್ರಯುಕ್ತ, ಜಗತ್ತಿನ ಅತ್ಯಂತ ದೊಡ್ಡ ಸರ್ಚ್ ಇಂಜಿನ್ ಗೂಗಲ್ ಡೂಡಲ್ ಗೌರವ ಸಲ್ಲಿಸಿದೆ. ಸಾದತ್ ಹಸನ್ ಮಂಟೋ, ರಾಜಿಂದರ್ ಸಿಂಗ್ ಬೇಡಿ ಮೊದಲಾದವರ ಕಾಲಘಟ್ಟದಲ್ಲಿ ಸ್ತ್ರೀವಾದಿ ಹಿನ್ನೆಲೆಯಲ್ಲಿ ವರ್ಗ ಸಂಘರ್ಷ ಮತ್ತು ಮಧ್ಯಮ ವರ್ಗದ ನೈತಿಕತೆ ಕುರಿತ ಚಿಂತನೆಗಳನ್ನು ಇವರು ತಮ್ಮ ಕೃತಿಗಳ ಒಡಮೂಡಿಸಿದ್ದಾರೆ.

ಉರ್ದು ಕಥಾ ಸಾಹಿತ್ಯದಲ್ಲೇ ಇವರಿಗೆ ಅತ್ಯುತ್ತಮ ಸ್ಥಾನವಿದೆ. ಆಗಸ್ಟ್ 21, 1915ರಂದು, ಉತ್ತರಪ್ರದೇಶದ ಬದೌನ್​ನಲ್ಲಿ ಇವರು ಜನಿಸಿದ್ದರು. ಲಿಹಾಫ್ (ಗಾದಿ) ಹೆಸರಿನ ಅವರ ಮೊದಲ ಕತೆ ಲಾಹೋರ್​​ ಮೂಲದ ಪತ್ರಿಕೆ ಅದಬ್ – ಇ – ಲತೀಫ್​ನಲ್ಲಿ ಪ್ರಕಟವಾಯಿತು. ಕತೆಯಲ್ಲಿ ಯುವತಿಯೊಬ್ಬಳ ದೃಷ್ಟಿಕೋನದಿಂದ ಕತೆಯನ್ನು ಹೆಣೆಯಲಾಗಿದ್ದು, ಸಲಿಂಗಕಾಮದ ವಸ್ತುವನ್ನು ನಿರ್ವಹಿಸಸಲಾಗಿದೆ. ಇವರ ಕೆಲವು ಕತೆಗಳನ್ನು ಸಾಂಪ್ರದಾಯಿಕ ಸಮಾಜ ಸ್ವೀಕರಿಸಲು ನಿರಾಕರಿಸಿದ ಪರಿಣಾಮದಿಂದಾಗಿ ವಿವಾದ ಏರ್ಪಟ್ಟಿತ್ತು.

ಕಲ್ಯಾಣ್, ಏಕ್​ ಬಾತ್, ಚೋಟೇಂ ಮೊದಲಾದ ಕತೆಗಳು ಸಾಕಷ್ಟು ಚರ್ಚೆಗೆ ಒಳಗಾಗಿವೆ. ಸಾಂಪ್ರದಾಯಿಕ ಗಡಿಗಳನ್ನು ಮೀರಿ ಆಲೋಚಿಸುತ್ತಿದ್ದ ಇಸ್ಮತ್, ನಿರಂತರವಾಗಿ ತಮಗೆ ಅನಿಸಿದ್ದನ್ನು ಬರೆದರು. ಅವರ ತೇದಿ ಲಕೀರ್ (ವಕ್ರ ಗೆರೆ) ಉರ್ದು ಸಾಹಿತ್ಯದಲ್ಲಿ ಸಾಕಷ್ಟು ಜನಜನಿತವಾಗಿದೆ. ಅಕ್ಟೋಬರ್ 24, 1991ರಲ್ಲಿ ಕಾಲವಶರಾದ ಇವರ ಕೃತಿಗಳನ್ನು ಚರ್ಚಿಸದೆ ಭಾರತೀಯ ಸ್ತ್ರೀ ಸಂವೇದನಾ ಸಾಹಿತ್ಯದ ಕುರಿತು ಚರ್ಚಿಸಲು ಸಾಧ್ಯವೇ ಇಲ್ಲವೆನ್ನುವಷ್ಟರ ಮಟ್ಟಿಗೆ ಅವರ ಕೃತಿಗಳು ಛಾಪು ಮೂಡಿಸಿವೆ.

ಬಡಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಅವರ ತಂದೆ ಸರ್ಕಾರಿ ಸೇವೆಯಲ್ಲಿದ್ದರು. ಬಾಲ್ಯವಿವಾಹಕ್ಕೆ ಪೋಷಕರು ಒತ್ತಡ ತಂದ ಸಂದರ್ಭದಲ್ಲಿ 15ನೇ ವರ್ಷದಲ್ಲಿ ತಮ್ಮ ಓದುವ ಅದಮ್ಯ ಆಸೆಯನ್ನು ಪೂರೈಸಿಕೊಂಡರು. ಪದವಿಯನ್ನು ಇಸಾಬೆಲ್ಲ ಥೋಬರ್ನ್ ಕಾಲೇಜಿನಿಂದ ಪಡೆದರು.

ನಂತರ ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ನಡೆಸಿದರು. ಈ ಮೂಲಕ ಪದವಿ ಮತ್ತು ಶೈಕ್ಷಣಿಕ ಪದವಿ ಪಡೆದ ಮೊದಲ ಮುಸ್ಲಿಂ ಮಹಿಳೆ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಅವರ ಸಾಹಿತ್ಯ ಕೃಷಿಯನ್ನು ಮನ್ನಿಸಿ 1976ರಲ್ಲಿ ಅವರಿಗೆ ಭಾರತ ಸರ್ಕಾರ ಪದ್ಮಶ್ರೀ ಪುರಸ್ಕಾರವನ್ನು ನೀಡಿ ಗೌರವಿಸಿದೆ.

0

Leave a Reply

Your email address will not be published. Required fields are marked *