ಚಾಣಕ್ಯ ನಾಯಕ ಮಹೇಂದ್ರ ಸಿಂಗ್ ಧೋನಿ

ವಿಶ್ವ ಕ್ರಿಕೆಟ್ನಲ್ಲಿ ಧೋನಿ ತನ್ನದೇ ಅದ ಚಾರ್ಮ್ ಅನ್ನು ಬೆಳೆಸಿಕೊಂಡಿದ್ದಾರೆ. ಪಂದ್ಯ ಸೋಲಲಿ.. ಗೆಲ್ಲಲಿ… ತಾಳ್ಮೆಯನ್ನ ಕಳೆದುಕೊಳ್ಳುವುದಿಲ್ಲ. ಇದಕ್ಕಾಗಿಯೇ ಕೂಲ್ ಕ್ಯಾಪ್ಟನ್ ಅಂತಲೂ ಬಿಂಬಿತವಾಗಿದ್ದಾರೆ. ಕಠಿಣ ಸಂದರ್ಭದಲ್ಲಿ ದಿಟ್ಟ ನಿರ್ಧಾರವನ್ನ ತೆಗೆದುಕೊಳ್ಳುವ ಧೋನಿ, ಒತ್ತಡಕ್ಕೆಲ್ಲಾ ಮಣಿಯುವುದಿಲ್ಲ. ಅದ್ರಲ್ಲೂ ಎದುರಾಳಿ ತಂಡದ ವೀಕ್​ನೆಸ್​ಗಳನ್ನು ಬಲು ಬೇಗನೇ ಅರ್ಥಮಾಡಿಕೊಳ್ಳುವ ಮಾಹಿ, ಗ್ಯಾಂಬಲ್ ಮಾಡ್ಕೊಂಡು ಪಂದ್ಯದ ಗತಿಯನ್ನ ಬದಲಾಯಿಸುವ ಚಾಣಕ್ಯ ಕೂಡ ಹೌದು.

ಅದೇನೇ ಇರಲಿ, ಧೋನಿಯ ಮನಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವುದು ಅಸಾಧ್ಯವೇ ಸರಿ. ವಿಕೆಟ್ ಹಿಂದುಗಡೆ ನಿಂತುಕೊಂಡು ಎದುರಾಳಿ ಬ್ಯಾಟ್ಸ್‌ ಮೆನ್‌ಗಳನ್ನು ಮಟ್ಟಹಾಕುವ ಮಾಸ್ಟರ್ ಪ್ಲಾನ್ ಇದೆಯಲ್ಲಾ ಅದು ಎಂಥವರನ್ನು ಬೆರಗುಗೊಳಿಸುತ್ತೆ. ಹಾಗೇ ಒತ್ತಡದಲ್ಲಿ ತಾನೇ ಕ್ರೀಸ್‌ನಲ್ಲಿ ನಿಂತು ತಂಡವನ್ನು ಗೆಲುವಿನ ದಡ ಸೇರಿಸುವ, ಆ ಪರಿಯ ಸೋಬಗು ನೋಡುಗರನ್ನು ರೋಮಾಂಚನಗೊಳಿಸುತ್ತದೆ ಅಷ್ಟೇ ಅಲ್ಲ, ಎದುರಾಳಿ ತಂಡದ ಬೌಲರ್‌ಗಳನ್ನು ಕಾಡಿಸಿ, ಪೀಡಿಸಿ, ಗೆಲುವಿನ ಆಸೆ ಮೂಡಿಸಿ, ಕ್ಷಣ ಮಾತ್ರದಲ್ಲೇ ಗೆಲುವನ್ನು ಕಸಿದುಕೊಳ್ಳುವ ರೀತಿಗೆ ಎಂಥವರು ಕೂಡ ಮನ ಸೋಲಲೇಬೇಕು.
ಧೋನಿ ಬ್ಯಾಟಿಂಗ್‌ನಲ್ಲಿಲ್ಲ ಕ್ರಿಕೆಟ್‌ನ ಅಲಿಖಿತ ಸಂಪ್ರದಾಯ…!

ಕ್ರಿಕೆಟ್‌ನ ಅಲಿಖಿತ ಸಂಪ್ರದಾಯವನ್ನು ಮುರಿದು ಬ್ಯಾಟಿಂಗ್ ಮಾಡುವ ಧೋನಿಗೆ ಧೋನಿಯೇ ಸರಿಸಾಟಿ. ಬೆಂಕಿ ಎಸೆತಗಳೇ ಆಗಿರಲಿ, ಬುಗರಿ ಎಸೆತಗಳೇ ಆಗಿರಲಿ…ಇನ್ಯಾವುದೋ ಎಸೆತಗಳೇ ಆಗಿರಲಿ.. ಎಲ್ಲದಕ್ಕೂ ತಾಂತ್ರಿಕತೆಯಿಂದಲೇ ಆಡಬೇಕು ಅನ್ನೋ ಸಂಪ್ರದಾಯಕ್ಕೆ ಧೋನಿ ಒಗ್ಗಿಕೊಂಡಿಲ್ಲ. ಬೌಲರ್‌ ಎಸೆದ ಚೆಂಡನ್ನು ಕಣ್ಣಳತೆಯಲ್ಲಿ ಅಥೈಸಿಕೊಂಡು, ಮನಬಂದಂತೆ ಬ್ಯಾಟ್‌ ಬೀಸುವುದು ಧೋನಿ ಸ್ಪೆಷಾಲಿಟಿ. ಹಾಗಂತ ಧೋನಿಯ ಇಟ್ಟ ಗುರಿ ತಪ್ಪುವುದು ತೀರಾ ಕಮ್ಮಿ. ಚೆಂಡನ್ನು ರಾಕೆಟ್‌ನಂತೆ ಸೀಮಾರೇಖೆ ದಾಟಿಸಿ ಚೆಂಡನ್ನು ತೀಕ್ಷ್ಣ ದೃಷ್ಟಿಯಿಂದ ದಿಟ್ಟಿಸಿ ನೋಡುವ ಆ ಕ್ಷಣಗಳು ಎಂದಿಗೂ, ಯಾವತ್ತಿಗೂ ಕಣ್ಣಂಚಿನಿಂದ ಮರೆಯಾಗುವುದು ಅಸಾಧ್ಯ.

ತನ್ನ ಬತ್ತಳಿಕೆಯಲ್ಲಿದ್ದ ಯಾವ ಅಸ್ತ್ರವನ್ನು ಯಾವಾಗ ಬಳಕೆ ಮಾಡಬೇಕು ಅನ್ನೋದ್ರಲ್ಲೂ ಧೋನಿ ನಿಪುಣ. ಕೆಲವೊಂದು ಬಾರಿ ಒಂದೇ ಅಸ್ತ್ರವನ್ನು ಸತತವಾಗಿ ಬಳಸಿಕೊಳ್ತಾರೆ. ಇನ್ನು ಕೆಲವು ಸಲ ಮಂತ್ರ ದಂಡ ಪಠಿಸಿ ಬಿಡುವ ಅಸ್ತ್ರದಂತೆ ತನ್ನ ಬತ್ತಳಿಕೆಯಲ್ಲಿದ್ದ ಅಸಹಾಯಕ ಅಸ್ತ್ರವನ್ನು ಪ್ರಯೋಗಿಸಿ ಯಶ ಸಾಧಿಸಿರುವ ನಿದರ್ಶನಗಳು ಸಾಕಷ್ಟಿವೆ. ಇನ್ನು ಕೆಲವು ಬಾರಿ ಯಾರನ್ನು ಲೆಕ್ಕಿಸದೇ, ಯಾರನ್ನು ಕೇಳದೇ ತನ್ನನ್ನು ತಾನೇ ಸಮರ್ಪಿಸಿಕೊಂಡು ಕಣಕ್ಕಿಳಿದು ದಿಗ್ವಿಜಯ ಸಾಧಿಸಿಸುವುದರಲ್ಲೂ ಧೋನಿ ನಿಸ್ಸೀಮ. ಅದಕ್ಕೆ ಅತ್ಯುತ್ತಮ ಸಾಕ್ಷಿಯಾಗಿ ನಿಲುತ್ತವೆ 2011ರ ವಿಶ್ವಕಪ್ ಫೈನಲ್ ಹಾಗೂ 2016ರ ಏಷ್ಯಾಕಪ್ ಫೈನಲ್ ಪಂದ್ಯಗಳು.

ಇನ್ನು ಧೋನಿ ತಂಡವನ್ನ ಮುನ್ನಡೆಸುವ ರೀತಿಯೂ ಡಿಫರೆಂಟ್. ಸಹ ಆಟಗಾರರ ಮೇಲೆ ಧೋನಿ ಅಪಾರ ನಂಬಿಕೆಯನ್ನಿಟ್ಟುಕೊಳ್ಳುತ್ತಾರೆ. ಇದ್ರಿಂದ ಆಟಗಾರರು ಕೂಡ ನಾಯಕನ ನಂಬಿಕೆಯನ್ನ ಹುಸಿಗೊಳಿಸಬಾರದು ಅನ್ನೋ ರೀತಿಯಲ್ಲೇ ಹೋರಾಟ ನಡೆಸ್ತಾರೆ. ವಿಕೆಟ್ ಹಿಂದುಗಡೆ ನಿಂತುಕೊಂಡು ಎದುರಾಳಿ ಬ್ಯಾಟ್ಸ್​ ಮೆನ್​ ವಿಕ್​ನೆಸ್​ಗಳನ್ನು ಅರ್ಥ ಮಾಡಿಕೊಂಡು ರಚಿಸುವ ಗೇಮ್ ಪ್ಲಾನ್ ಇದೆಯಲ್ಲಾ ಅದು ಕೆಲವೊಂದು ಬಾರಿ ಸಹ ಆಟಗಾರರಿಗೂ ಅಚ್ಚರಿಯನ್ನುಂಟು ಮಾಡುತ್ತಿರುತ್ತದೆ. ಆಟಗಾರರ ಮೇಲಿನ ನಂಬಿಕೆ, ಅವ್ರ ಸಾಮರ್ಥ್ಯಗಳನ್ನು ಅರಿತುಕೊಂಡು ಸ್ಪೂರ್ತಿ ನೀಡುವುದೇ ನಾಯಕ ಧೋನಿಯ ಯಶಸ್ಸಿನ ಸೂತ್ರ.

ಇನ್ನು, 2011ರ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯವನ್ನಂತೂ ಮರೆಯೋಕೆ ಸಾಧ್ಯವಿಲ್ಲ. ಬ್ಯಾಟಿಂಗ್ ಕ್ರಮಾಂಕದಲ್ಲಿ ಬಡ್ತಿ ಪಡೆದು ನಾಯಕನ ಆಟವನ್ನಾಡಿದ ಧೋನಿಯ ಬ್ಯಾಟಿಂಗ್ ವೈಖರಿಗೆ ಸಲಾಂ ಅನ್ನಲೇಬೇಕು. ಸೋಲಿನ ಆತಂಕಕ್ಕೆ ಸಿಲುಕಿದ ತಂಡವನ್ನ ಗೆಲುವಿನ ದಡ ಸೇರಿಸಿದ್ರು. ಅಲ್ಲದೆ ಗೆಲುವಿನ ರನ್​ಗಾಗಿ ಸಿಕ್ಸರ್ ಬಾರಿಸಿ ಚೆಂಡನ್ನ ದಿಟ್ಟಿಸಿ ನೋಡುತ್ತಿದ್ದ ಧೋನಿಯ ಆ ಕಣ್ಣುಗಳು… ಬ್ಯಾಟ್ ಅನ್ನು ಗದೆಯಂತೆ ತಿರುಗಿಸಿಕೊಂಡು ಸಂಭ್ರಮಿಸಿದ ರೀತಿ. ಅಬ್ಬಾ…ಎಂಥ ಅದ್ಭುತ ಆಟ… ಎಂಥ ಬ್ಯಾಟಿಂಗ್ ವೈಖರಿ… ನಾಯಕ ಅಂದ್ರೆ ಹಿಂಗಿರಬೇಕು ಅಂತ ಕ್ರಿಕೆಟ್ ಪಂಡಿತರ ಜತೆ ಅಭಿಮಾನಿಗಳು ಉದ್ಗರಿಸಿದ್ರು.

ನಿಜ, ಧೋನಿ ನಾಯಕನಾದ ಮೇಲೆ ತುಂಬಾನೇ ಬದಲಾದ್ರು. ಆಟದಲ್ಲಿ ಮತ್ತು ವ್ಯಕ್ತಿತ್ವದಲ್ಲಿ ಪ್ರಬುದ್ಧತೆ ಸಾಧಿಸಿದ್ರು. ಜತೆಗೆ ಮೈದಾನ ಮತ್ತು ಮೈದಾನದ ಹೊರಗಡೆ ನಾಯಕನ ಘನತೆಯನ್ನ ಕಾಯ್ದುಕೊಂಡ್ರು. ಕಿರಿಯ ಆಟಗಾರರ ಮೇಲಿನ ಪ್ರೀತಿ ಮತ್ತು ಹಿರಿಯ ಆಟಗಾರರಿಗೆ ನೀಡುವ ಗೌರವದಿಂದ ಟೀಮ್ಇಂಡಿಯಾವನ್ನ ಯಶಸ್ಸಿನ ಉತ್ತುಂಗಕ್ಕೇರಿದ್ರು. ಇನ್ನೊಂದೆಡೆ, ತನ್ನ ಬ್ಯಾಟಿಂಗ್ನಲ್ಲಿ ಕಲಾತ್ಮಕತೆ ಇಲ್ಲದಿದ್ರೂ ಅಬ್ಬರದ ಬ್ಯಾಟಿಂಗ್ ಮೂಲಕ ಮಿಂಚು ಹರಿಸಿದ್ರು. ಅದ್ರಲ್ಲೂ ಧೋನಿಯ ಹೆಲಿಕಾಪ್ಟರ್ ಶಾಟ್ ಕ್ರಿಕೆಟ್ ಪ್ರಿಯರ ಮನ ಗೆದ್ದಿತ್ತು. ಈ ನಡುವೆ, ಧೋನಿಯ ನಾಯಕತ್ವದ ಬಗ್ಗೆ ಸಂಶೋಧನೆ ಕೂಡ ನಡೆಯಿತ್ತು. ಮುಖ್ಯವಾಗಿ ಧೋನಿಯ ಬ್ರೈನ್ ಹೇಗೆಲ್ಲಾ ವರ್ಕ್ ಆಗುತ್ತೆ ಎಂಬುದರ ಬಗ್ಗೆ ಸಂಶೋಧಕರು ಸಂಶೋಧನೆ ನಡೆಸಲು ಮುಂದಾಗಿದ್ರು. ಅಷ್ಟರ ಮಟ್ಟಿಗೆ ಧೋನಿಯ ಲೀಡರ್ಶಿಪ್ ಕ್ವಾಲಿಟಿ ಫೇಮಸ್ .

ಆದ್ರೆ ಇದೀಗ ಧೋನಿಗೆ ಏನಾಗಿದೆ. ಮಾಹಿಯ ಮಹಿಮೆ ಯಾಕೆ ಮಂಕಾಗಿದೆ. ಕೂಲ್ ಕ್ಯಾಪ್ಟನ್​ಗೆ ಅದೃಷ್ಟ ಕೈಕೊಟ್ಟಿತ್ತಾ.. ಧೋನಿಯ ಅದೃಷ್ಟದಿಂದಲೇ ಟೀಮ್ ಇಂಡಿಯಾ ಶ್ರೇಷ್ಠ ತಂಡವಾಗಿ ಹೊರಹೊಮ್ಮಿರುವುದಾ… ಈ ಎಲ್ಲಾ ಪ್ರಶ್ನೆಗಳಿಗೆ ನಿಖರವಾದ ಉತ್ತರವಿಲ್ಲ. ಯಾಕಂದ್ರೆ ಕಾಲಚಕ್ರ… ಮೇಲೇರಿದವನು ಕೆಳಗಿಳಿಯಲೇಬೇಕು. ಇದು ಜಗದ ನಿಯಮ ಕೂಡ. ಹಾಗೇ ಧೋನಿಯ ಕ್ರಿಕೆಟ್ ಬದುಕು ಕೂಡ.

ಹೌದು. ಯಶಸ್ಸಿನ ಉತ್ತುಂಗಕ್ಕೇರಿದ ಧೋನಿಗೆ ಹಿನ್ನಡೆಯಾಗಿದೆ. ಹಾಗಂತ ಈಗ ಧೋನಿಯ ನಾಯಕತ್ವವನ್ನೇ ಪ್ರಶ್ನೆ ಮಾಡುವುದು ಸರಿಯಲ್ಲ. ಜಸ್ಟ್ ಬ್ಯಾಡ್ ಟೈಮ್ ಅಷ್ಟೇ. ಏನೇ ಆದ್ರೂ, ಧೋನಿ ದಿ ಗ್ರೇಟ್ ಲೀಡರ್. ಲೀಡರ್ ಯಾವತ್ತೂ ತಲೆಬಾಗಲ್ಲ. ತಲೆಬಾಗುವುದು ಇಲ್ಲ. ತಾನು ನಡೆದದ್ದೇ ದಾರಿ. ಆದ್ರೆ ದಾರಿ ಸರಿ ಇಲ್ಲ ಅಂದಾಗ ಅಡ್ಡ ದಾರಿ ಹಿಡಿಯುವುದಲ್ಲ. . ದಾರಿ ಸರಿಪಡಿಸಿಕೊಂಡು ಮುನ್ನಡೆಯಬೇಕು. ಅದು ಆಗದಿದ್ರೆ ಬೇರೆಯವರಿಗೆ ನಡೆಯಲು ಅವಕಾಶ ಮಾಡಿಕೊಡಬೇಕು. ಇದೀಗ ಮಹೇಂದ್ರ ಸಿಂಗ್ ಧೋನಿ ಅದನ್ನೇ ಮಾಡಿದ್ದಾರೆ. ಆದ್ರೆ ತನ್ನ ಸೂತ್ರವನ್ನು ಮಾತ್ರ ಬಿಟ್ಟುಕೊಟ್ಟಿಲ್ಲ. ಅದು ಮಹಿ ಸ್ಟೈಲ್.

0

Leave a Reply

Your email address will not be published. Required fields are marked *