ಜಿಡಿಪಿ ದರ ಶೇ. 6.3ಕ್ಕೆ ಏರಿಕೆ: 2017 – 18ರ ವಿತ್ತೀಯ ಕೊರತೆ ಶೇ. 96ಕ್ಕೆ ಏರಿಕೆ

ನವದೆಹಲಿ: 2017-18ರ ತ್ರೈಮಾಸಿಕ ಜಿಡಿಪಿ ದರ ಪ್ರಕಟವಾಗಿದ್ದು, ಅಭಿವೃದ್ಧಿ ದರ ಕಳೆದ ತ್ರೈಮಾಸಿಕ ಅವಧಿಯಲ್ಲಿದ್ದ ಶೇ. 5.4ರಿಂದ ಶೇ. 6.3ಕ್ಕೆ ಏರಿಕೆಯಾಗಿದೆ ಎಂದು ಭಾರತೀಯ ಸಾಂಖ್ಯಿಕ ಸಂಸ್ಥೆಯ ಮುಖ್ಯಸ್ಥ ಟಿ ಸಿ ಎ ಅನಂತ್ ಅಭಿಪ್ರಾಯಪಟ್ಟಿದ್ದಾರೆ. ಕಟ್ಟಡ ನಿರ್ಮಾಣ, ಕಬ್ಬಿಣ, ಸಿಮೆಂಟ್ ಸಂಬಂಧಿತ ಕ್ಷೇತ್ರಗಳಲ್ಲಿ ಕುಸಿತವಾಗಿದೆ ಎಂದಿರುವ ಅವರು, ಉತ್ಪಾದನಾ ವಲಯದಲ್ಲಿ ಶೇ. 7ರಷ್ಟು, ವಿದ್ಯುತ್, ಗ್ಯಾಸ್, ನೀರು ಸರಬರಾಜಿನಲ್ಲಿ ಶೇ. 7.6ರಷ್ಟು ಮತ್ತು ಸಾರಿಗೆ, ಸಂವಹನ ಕ್ಷೇತ್ರದಲ್ಲಿ ಶೇ. 9.9ರಷ್ಟು ಪ್ರಗತಿಯಾಗಿದೆ ಎಂದು ಅವರು ತಿಳಿಸಿದರು.

ಜಿಡಿಪಿಯಲ್ಲಿ ಶೇ. 6.3 ಪ್ರಗತಿ ಕುರಿತು ಪ್ರತಿಕ್ರಿಯಿಸಿದ ಹಣಕಾಸು ಸಚಿವ ಅರುಣ್ ಜೇಟ್ಲಿ, ಗರಿಷ್ಠ ಮುಖಬೆಲೆ ನೋಟು ನಿಷೇಧ ಮತ್ತು ಸರಕು ಮತ್ತು ಸೇವಾ ತೆರಿಗೆಯಿಂದಾಗಿ ಜಿಡಿಪಿ ದರದಲ್ಲಿ ಪ್ರಗತಿಯಾಗಿದೆ ಎಂದರು. ಅಲ್ಲದೇ, ಮುಂದಿನ ತ್ರೈಮಾಸಿಕದಲ್ಲಿ ಜಿಡಿಪಿ ದರ ಇನ್ನಷ್ಟು ಏರುವ ವಿಶ್ವಾಸವನ್ನು ವ್ಯಕ್ತಪಡಿಸಿದರು. ಅಲ್ಲದೇ, ಭಾರತದ ಆರ್ಥಿಕತೆ ಉತ್ತಮ ಹಾದಿಯಲ್ಲಿರುವುದಾಗಿ ಅಭಿಪ್ರಾಯಪಟ್ಟರು.

ಜಿಡಿಪಿ ಏರಿಕೆ ಕುರಿತು ಪ್ರತಿಕ್ರಿಯಿಸಿದ ಮಾಜಿ ಹಣಕಾಸು ಸಚಿವ ಪಿ ಚಿದಂಬರಂ, ನೈಜ ಜಿಡಿಪಿ ದರ ಕುರಿತ ಖಚಿತ ಅಂಕಿ – ಅಂಶಕ್ಕೆ ಇನ್ನೂ 3 – 4 ತಿಂಗಳ ಅವಧಿ ಬೇಕು ಎಂದರು. ಈ ಮೂಲಕ ಸರ್ಕಾರ ನೀಡಿರುವ ಅಂಕಿ – ಅಂಶಗಳ ಕುರಿತು ಕಾಂಗ್ರೆಸ್ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದೆ. ಜುಲೈ ಒಂದರಂದು ಜಿಎಸ್​​ಟಿ ಜಾರಿ ನಂತರ ಪ್ರಕಟವಾದ ಮೊದಲ ಜಿಡಿಪಿ ದರ ಆಗಿರುವುದರಿಂದ ಈ ತ್ರೈಮಾಸಿಕ ಅವಧಿಯ ಕುರಿತು ದೇಶದಾದ್ಯಂತ ಮತ್ತು ಆರ್ಥಿಕ ವಲಯದಲ್ಲಿ ತೀವ್ರ ಕುತೂಹಲ ಮೂಡಿತ್ತು.

ಆದರೆ, 2017 – 18ರ ವಿತ್ತೀಯ ಕೊರತೆ ಶೇ. 96ಕ್ಕೆ ಏರಿಕೆಯಾಗಿದೆ ಎಂದು ಕೂಡ ವರದಿಯಾಗಿದೆ. ಅಕ್ಟೋಬರ್​ಗೆ ಕೊನೆಗೊಂಡ ಹಣಕಾಸು ವರ್ಷದ ಸರಾಸರಿ ಲೆಕ್ಕಾಚಾರದ ಪ್ರಕಾರ, ದೇಶದ ವಿತ್ತೀಯ ಕೊರತೆಯಲ್ಲಿ ಏರಿಕೆಯಾಗಿದೆ. ಕಳೆದ ಏಪ್ರಿಲ್ – ಅಕ್ಟೋಬರ್ ಅವಧಿಯ ಹಣಕಾಸು ವರ್ಷದಲ್ಲಿ 5.25 ಟ್ರಿಲಿಯನ್ ಕೊರತೆ ಇತ್ತು. ಇನ್ನು ಕಳೆದ ವರ್ಷದ ವಿತ್ತೀಯ ಕೊರತೆಯ ದರ ಶೇ. 79.3 ಆಗಿತ್ತು. ಈ ಬಾರಿ ಮತ್ತಷ್ಟು ಕೊರತೆಯನ್ನು ಭಾರತ ಎದುರಿಸಲಿದೆ ಎಂದು ವರದಿಯಾಗಿದೆ.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *