ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ: ದೋಷಾರೋಪ ಪಟ್ಟಿ ಸಲ್ಲಿಸಿದ ಎಸ್​​ಐಟಿ

ಗೌರಿ ಲಂಕೇಶ್ ಅವರನ್ನು ಸನಾತನ ಸಂಸ್ಥೆಯ ಸದಸ್ಯರು ಹತ್ಯೆಗೈದಿದ್ದಾರೆ. ಇದಕ್ಕಾಗಿ 5 ವರ್ಷಗಳಿಂದ ಯೋಜನೆ ರೂಪಿಸಲಾಗಿತ್ತು ಎಂದು ಎಸ್​ಐಟಿ ತಂಡ 9,325 ಪುಟಗಳ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದೆ. ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣವನ್ನು ಎಸ್​​ಐಟಿ ಕಳೆದ 14 ತಿಂಗಳಿಂದ ತನಿಖೆ ನಡೆಸಿದ್ದು, ಸಿವಿಲ್ ಮತ್ತು ಸೆಷನ್ಸ್​​ ಕೋರ್ಟ್​ಗೆ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದೆ. ದೋಷಾರೋಪ ಪಟ್ಟಿಯಲ್ಲಿ ಯಾವುದೇ ವೈಯಕ್ತಿಕ ಕಾರಣದಿಂದ ಹತ್ಯೆ ನಡೆದಿಲ್ಲ ಎಂದು ಎಸ್​ಐಟಿ ಹೇಳಿದೆ. ಈ ಕುರಿತು ಪ್ರತಿಕ್ರಿಯಿಸಿರುವ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಎಸ್​ ಬಾಲನ್, ಹತ್ಯೆಯಾದ ಗೌರಿಯವರಿಗೂ ಮತ್ತು ಹಂತಕರಿಗೂ ಯಾವುದೇ ರೀತಿಯ ವೈಯಕ್ತಿಕ ವೈರತ್ವ ಇರಲಿಲ್ಲ ಎಂದಿದ್ದಾರೆ.

ಇದುವರೆಗೆ ಪ್ರಕರಣದ ಸಂಬಂಧ 18 ಆರೋಪಿಗಳನ್ನು ಎಸ್​ಐಟಿ ಬಂಧಿಸಿ ವಿಚಾರಣೆ ನಡೆಸಿದೆ. ಶಾರ್ಪ್ ಶೂಟರ್ ಪರಶೂರಾಂ ವಾಘ್ಮೋರೆ, ಮಾಸ್ಟರ್​ಮೈಂಡ್​​ ಅಮೋಲ್ ಕಾಳೆ, ಸುಜಿತ್ ಕುಮಾರ್ ಅಲಿಯಾಸ್ ಪ್ರವೀಣ್, ಅಮಿತ್ ದೇಗ್ವೇಕರ್​​ ಮೊದಲಾದವರನ್ನು ವಿಚಾರಣೆ ನಡೆಸಲಾಗಿದೆ. ಇದೇ ತಂಡ ಮಹಾರಾಷ್ಟ್ರದ ವಿಚಾರವಾದಿಗಳಾದ ನರೇಂದ್ರ ದಾಬೋಲ್ಕರ್, ಗೋವಿಂದ್ ಪನ್ಸಾರೆ ಮತ್ತು ಕರ್ನಾಟಕದ ಸಂಶೋಧಕ ಎಂ ಎಂ ಕಲಬುರ್ಗಿಯವರನ್ನು ಹತ್ಯೆಗೈದ ಶಂಕೆ ವ್ಯಕ್ತವಾಗಿದೆ.

ಹಿಂದುತ್ವದ ಕಟು ಟೀಕಾಕಾರ್ತಿ ಮತ್ತು ಎಡಪಂಥೀಯ ಚಿಂತಕಿಯಾಗಿದ್ದ ಗೌರಿ ಲಂಕೇಶ್ ಅವರನ್ನು ಕಳೆದ ಸೆಪ್ಟಂಬರ್ 5ರಂದು ಅವರ ಮನೆಯ ಬಾಗಿಲಲ್ಲೇ ಗುಂಡು ಹಾರಿಸಿ ಹತ್ಯೆಗೈಯಲಾಗಿತ್ತು. ಹತ್ಯೆಯನ್ನು ಖಂಡಿಸಿ ರಾಜ್ಯ, ದೇಶ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿಭಟನೆಗಳು ನಡೆದಿದ್ದವು.

0

Leave a Reply

Your email address will not be published. Required fields are marked *