ದೇಶಾದ್ಯಂತ ಇಂಧನ ಬೆಲೆಯಲ್ಲಿ ಸಾರ್ವಕಾಲಿಕ ಏರಿಕೆ: ಬೆಲೆ ಇಳಿಕೆ ಮರೀಚಿಕೆ

ದೆಹಲಿಯಲ್ಲಿ ಪೆಟ್ರೋಲ್ ದರ 82.66 ರೂಪಾಯಿ
ಪೆಟ್ರೋಲ್ ದರದಲ್ಲಿ 18 ಪೈಸೆ ಏರಿಕೆ
ಡೀಸೆಲ್ ದರ 75.19 ರೂಪಾಯಿ, 29 ಪೈಸೆ ಏರಿಕೆ
ಮುಂಬೈನಲ್ಲಿ ಪೆಟ್ರೋಲ್ ದರ 88.12 ರೂಪಾಯಿ
ಪೆಟ್ರೋಲ್ ದರ 18 ಪೈಸೆ ಏರಿಕೆ
ಡೀಸೆಲ್ ದರ 78.82, 31 ಪೈಸೆ ಏರಿಕೆ

ದೆಹಲಿ/ಮುಂಬೈ: 

ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಇಳಿಕೆಯಾಗಿದೆ. ಆದರೆ, ಭಾರತದಲ್ಲಿ ಮಾತ್ರ ಇಂಧನ ಬೆಲೆ ಗಗನಕ್ಕೇರುವುದು ಮುಂದುವರೆದಿದೆ. ಪೆಟ್ರೋಲ್ ದರವನ್ನು 50 ರೂಪಾಯಿಗೆ ಇಳಿಸಿ ಎಂದು ನಾಗರಿಕರು ಕೇಂದ್ರವನ್ನು ಒತ್ತಾಯಿಸಿದ್ದಾರೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಳಿದ ಕಚ್ಚಾ ತೈಲ ಬೆಲೆ
ದೇಶೀ ಮಾರುಕಟ್ಟೆಯಲ್ಲಿ ಸಾರ್ವಕಾಲಿಕ ಏರಿಕೆ ಕಂಡ ತೈಲ
ದರ ಇಳಿಸಿ ಎಂದು ಮೋದಿ ಬಳಿ ಗೋಗರೆಯುತ್ತಿರುವ ಜನ

ದೇಶಾದ್ಯಂತ ಇಂಧನ ಬೆಲೆ ರಾಕೆಟ್ ವೇಗದಲ್ಲಿ ಮುಗಿಲು ಮುಟ್ಟುತ್ತಿದ್ದು, ಇಂದು ಕೂಡ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಏರಿಕೆಯಾಗಿದೆ. ದೆಹಲಿಯಲ್ಲಿ ಪೆಟ್ರೋಲ್ ದರ 82.66 ರೂಪಾಯಿಯಾಗಿದ್ದು, ಇಂದು 18 ಪೈಸೆ ಏರಿಕೆ ಕಂಡಿದೆ. ಡೀಸೆಲ್ ದರ 75.19 ರೂಪಾಯಿಯಾಗುವ ಮೂಲಕ 29 ಪೈಸೆ ಏರಿಕೆಯಾಗಿದೆ. ಮುಂಬೈನಲ್ಲಿ ಪೆಟ್ರೋಲ್ ದರ 88.12 ರೂಪಾಯಿಗೆ ಏರಿಕೆಯಾಗಿದ್ದು, 18 ಪೈಸೆ ಏರಿಕೆ ಕಂಡಿದೆ. ಡೀಸೆಲ್ ದರ 78.82 ರೂಪಾಯಿಯಾಗಿದ್ದು, 31 ಪೈಸೆ ಏರಿಕೆಯಾಗಿದೆ. ಈ ಮೂಲಕ ದೇಶದಲ್ಲಿ ಇಂಧನ ದರ ಸಾರ್ವಕಾಲಿಕೆ ಏರಿಕೆ ಕಂಡಿದೆ.

ಕಳೆದ 4 ತಿಂಗಳಿಂದ ಪೆಟ್ರೋಲ್ ಬೆಲೆಯಲ್ಲಿ ಪ್ರತಿ ದಿನ ಸರಾಸರಿ 15 ಪೈಸೆ ಮತ್ತು ಡೀಸೆಲ್ ದರದಲ್ಲಿ ಸರಾಸರಿ 22 ಪೈಸೆ ಏರಿಕೆಯಾಗುತ್ತಿದೆ. ವಿಪಕ್ಷಗಳು ಇಂಧನ ಬೆಲೆ ಇಳಿಸಲು ಮುಂದಾಗದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಇಂಧನವನ್ನು ಜಿಎಸ್​​ಟಿ ವ್ಯಾಪ್ತಿಗೆ ತನ್ನಿ ಎಂದು ಒತ್ತಾಯಿಸುತ್ತಿವೆ. ಆದರೆ, ಕೇಂದ್ರ ಸರ್ಕಾರ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಏರಿಕೆಯ ಕಾರಣದಿಂದಾಗಿ ತೈಲ ಬೆಲೆಯಲ್ಲಿ ಏರಿಕೆಯಾಗುತ್ತಿದೆ ಎನ್ನುತ್ತಿದೆ. ಆದರೆ, ವಾಸ್ತವದಲ್ಲಿ ಕಳೆದ 4 ದಿನಗಳಿಂದ ಕಚ್ಚಾ ತೈಲ ಬೆಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಳಿಕೆಯಾಗಿದೆ. ಅಕ್ಟೋಬರ್ 10ರಂದು ಪ್ರತಿ ಬ್ಯಾರಲ್​ಗೆ 85.16 ಡಾಲರ್ ಇದ್ದ ಬೆಲೆ, ಇಂದು 81 ಡಾಲರ್​ಗೆ ಇಳಿದಿದೆ. ಈ ಮೂಲಕ 5.16 ಡಾಲರ್​​​ ಇಳಿಕೆಯಾಗಿದೆ.

ದೇಶದಲ್ಲಿ ಹೆಚ್ಚಾಗಿರುವ ಪೆಟ್ರೋಲ್ ದರ ಕುರಿತು ಜನ ಆಕ್ರೋಶ ವ್ಯಕ್ತಪಡಿಸಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂಧನ ದರವನ್ನು ಕೇಂದ್ರ ಸರ್ಕಾರ ಏರಿಸಿದೆ. ಇದರೊಂದಿಗೆ ಇತರ ತೈಲ ಉತ್ಪನ್ನಗಳ ದರ ಕೂಡ ಏರಿಕೆಯಾಗಿದೆ ಎಂದಿದ್ದಾರೆ. ಜೊತೆಗೆ, ಮೋದಿ ಸರ್ಕಾರ ಮೂಲ ಸೌಕರ್ಯಗಳಿಗಾಗಿ ನಾವು ಹೆಚ್ಚಿನ ತೆರಿಗೆ ಸಂಗ್ರಹಿಸುತ್ತಿದ್ದೇವೆ ಎನ್ನುತ್ತದೆ. ಆದರೆ, ಇದರಿಂದ ನಮಗೆ ತುಂಬಾ ತೊಂದರೆಯಾಗಿದೆ. ಚುನಾವಣೆಯ ನಂತರ ಇಂಧನ ಬೆಲೆಯಲ್ಲಿ ಇಳಿಕೆಯಾಗಬಹುದು ಎಂದು ಕೆಲವರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಇಂಧನ ಬೆಲೆ ಏರಿಕೆಯಾಗಿದೆ. ಆದರೆ, ನಮ್ಮ ಆದಾಯದಲ್ಲಿ ಏರಿಕೆಯಾಗುತ್ತಿಲ್ಲ ಎಂದಿರುವ ಇನ್ನೊಬ್ಬ ನಾಗರಿಕ, ನಿರಂತರವಾಗಿ ಇಂಧನ ಬೆಲೆಯಲ್ಲಿ ಏರಿಕೆಯಾಗುತ್ತಿದೆ. ನಾವು ಏನನ್ನು ಮಾಡುವುದು? ಬಡವರು ದುಡಿಯುವುದು ಹೇಗೆ? ಊಟ ಮಾಡುವುದು ಹೇಗೆ? ಇದಕ್ಕೆ ಮಾಡುವುದನ್ನಾದರೂ ಏನನ್ನು? ಈ ರೀತಿ ಇಂಧನ ದರವನ್ನು ಏರಿಸಿದರೆ ನಾವು ಹೋಗುವುದಾದರೂ ಎಲ್ಲಿಗೆ ಎಂದು ಪ್ರಶ್ನಿಸಿದರೆ, ಇನ್ನೊಬ್ಬ ನಾಗರಿಕ ಸರ್ಕಾರ ಪೆಟ್ರೋಲ್ ದರವನ್ನು 50 ರೂಪಾಯಿಗೆ ಇಳಿಸಬೇಕು ಎಂದು ಆಗ್ರಹಿಸಿದ್ದಾರೆ.

ಅಕ್ಟೋಬರ್ 4ರಂದು ಕೇಂದ್ರ ಸರ್ಕಾರ ಇಂಧನದ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಿತ್ತು. ಇದರಿಂದಾಗಿ ಇಂಧನ ಬೆಲೆಯಲ್ಲಿ 2.5 ರೂಪಾಯಿ ಕಡಿತವಾಗಿತ್ತು. ಆದರೆ, ಕೇಂದ್ರ ಘೋಷಿಸಿದ ಕಡಿತದ ಪ್ರಮಾಣವನ್ನು ಮೀರಿ ಇಂಧನ ಬೆಲೆ ನಿರಂತರವಾಗಿ ಏರಿಕೆಯಾಗಿದೆ. ಈ ಮೂಲಕ ದಿನನಿತ್ಯದ ವಸ್ತುಗಳ ಬೆಲೆಯಲ್ಲಿ ಕೂಡ ಏರಿಕೆಯಾಗಿದ್ದು, ದೇಶದ ನಾಗರಿಕರು ಇದೇನಾ ಅಚ್ಚೇದಿನ್ ಎಂದು ಕೇಳತೊಡಗಿದ್ದಾರೆ.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *